Monday 3 May 2021

ವಿದ್ಯಾರ್ಥಿಗಳ ಮನೋ ವೈಫಲ್ಯಕ್ಕೆ ಕಾರಣಗಳು ಹಾಗೂ ಪರಿಹಾರ


ವಿದ್ಯಾರ್ಥಿಗಳ ಮನೋ ವೈಫಲ್ಯಕ್ಕೆ ಕಾರಣಗಳು ಹಾಗೂ ಪರಿಹಾರ
- ಗವಿಸಿದ್ದಪ್ಪ .ಎಸ್.

 ಆಧುನಿಕ ಯುವಜನಾಂಗ ಅಶಾಂತಿ, ಅಂಧಕಾರಕ್ಕೆ ಒಳಗಾಗಿದ್ದು, ಪ್ರಯತ್ನಿಸದೇ ಫಲ ಬಯಸುವ ಮತ್ತು ಬಯಸಿದ್ದೆಲ್ಲಾ ತನಗೇ ಸಿಗಬೇಕೆನ್ನುವ ಪ್ರವೃತ್ತಿಯವರಾಗಿದ್ದಾರೆ. ಸತತ ಪ್ರಯತ್ನವೇ ಯಶಸ್ಸಿನ ಕೀಲಿಕೈ ಎನ್ನುವ ಮನೋಭಾವ ಬೆಳೆಸಿಕೊಳ್ಳುವುದು ಅತಿ ಅವಶ್ಯಕವಾಗಿದೆ. ಈ ದೃಷ್ಟಿಯಲ್ಲಿ ಯುವಕರು ಯೋಚಿಸಿ, ನಿರ್ಧರಿಸುವುದು ಸೂಕ್ತ.

ಏಪ್ರಿಲ್- ಮೇ ಬಂತೆಂದರೆ ಪರೀಕ್ಷೆ ಫಲಿತಾಂಶಗಳ ಮಹಾಪೂರ: ಅಂತೆಯೇ ಸಾವಿನ ಸರಮಾಲೆಗಳ ಸುದ್ದಿ ಕೂಡ ವರ್ಷವೆಲ್ಲ ಶ್ರಮವಹಿಸಿ ಅಭ್ಯಸಿಸಿದರೆ ಪಾಸಾಗುವುದು ಯಾವ ಮಹಾ? ಏನೇನೂ ಶ್ರಮಪಡದೇ ಫೇಲಾಗಿ ಆತ್ಮಹತ್ಯೆ ಮಾಡಿಕೊಳ್ಳುವುದು ಯಾವ ನ್ಯಾಯ? ಅಷ್ಟಕ್ಕೂ ಪರೀಕ್ಷೆಯಲ್ಲಿ ಪಾಸಾಗುವುದೇ ಜೀವನವೇ?

ಪ್ರಖ್ಯಾತ ಕಾದಂಬರಿಕಾರ 'ಮಾಲ್ಗುಡಿ ಡೇಸ್' ನ ಕರ್ತೃ ಆರ್.ಕೆ. ನಾರಾಯಣ ಆಗಿನ ಇಂಟರ್ ಮೀಡಿಯೆಟ್ನಲ್ಲಿ ಇಂಗ್ಲಿಷ್ನಲ್ಲಿ ಫೇಲಾಗಿದ್ದರಂತೆ. ಮುಂದೆ ಅವರು ಕಾದಂಬರಿಗಳನ್ನು ಬರದಿದ್ದು ಮಾಲ್ಗುಡಿ ಡೇಸ್ನಂತಹ ಅದ್ಭುತ ಕೃತಿ ರಚಿಸಿದ್ದು ಎಲ್ಲವೂ ಇಂಗ್ಲೀಷ್ನಲ್ಲಿಯೇ ಎಂಬುದು ಅಚ್ಚರಿಯ ಸಂಗತಿ. ಪರೀಕ್ಷೆಯಲ್ಲಿ ಫೇಲಾದರೂ ಕೂಡ ಬದುಕು ಎಂಬ ಪರೀಕ್ಷೆಯಲ್ಲಿ ರ್ಯಾಂಕ್ಗಳಿಸುತ್ತಾರೆಂಬುದಕ್ಕೆ ಇದ್ದಕಿಂತ ಉತ್ತಮ ಉದಾಹರಣೆ ಬೇಕೆ? "ಜೀವನವನ್ನು ಕೈಯಾರೆ ನಾಶ ಮಾಡಿಕೊಳ್ಳಬೇಡಿ. ಸಾವು ಯಾವ ಸಮಸ್ಯೆಗೂ ಪರಿಹಾರವಲ್ಲ ಸರಿಯಾದ ಮಾರ್ಗವೂ ಅಲ್ಲ. ಆತ್ಮಹತ್ಯೆಯ ಯೋಚಿನೆಯಿಂದ ಹೊರಬನ್ನಿ: ಸುಂದರ ಬದುಕು ನಿಮ್ಮದಾಗಿಸಿಕೊಳ್ಳಿ" ಎಂಬ ತಿಳಿವಳಿಕೆಯನ್ನು ವಿದ್ಯಾರ್ಥಿಗಳಲ್ಲಿ ಮೂಡಿಸಲೇಬೇಕು. ಆದರೆ ಯುವ ಜನಾಂಗದ ಉದ್ವೇಗ, ಮನೋವೈಫಲ್ಯ, ಘರ್ಷಣೆಗೆ ಮುಖ್ಯ ಕಾರಣಗಳನ್ನು ಹುಡುಕುವುದು ತೀರಾ ಅವಶ್ಯಕವಾಗಿದೆ,

ಉದ್ವೇಗ, ಮನೋವೈಫಲ್ಯ, ಘರ್ಷಣೆ ಎಂಬುದು ಜೈವಿಕ ಹಾಗೂ ಮಾನಸಿಕ ಸಿದ್ಧತೆಯ ಒಂದು ಸ್ಥಿತಿ ವಾಸ್ತವಿಕ ಅಥವಾ ಕಾಲ್ಪನಿಕ ಸನ್ನಿವೇಶವೊಂದನ್ನು ಎದುರಿಸಲು, ಶಕ್ತಿಯನ್ನು ಕ್ರೋಡೀಕರಿಸಿಕೊಳ್ಳುವಾಗಿನ ವ್ಯಕ್ತಿಯ ಮಾನಸಿಕ ಸ್ಥಿತ್ಯಂತರಗಳಲ್ಲಿ ಅವನ ಮಾಂಸಖಂಡಗಳು ಹೆಚ್ಚಿನ ಸ್ವಂದನಾಶಕ್ತಿಯ ಪರಾವರ್ತಿತ ಪ್ರತಿಕ್ರಿಯೆಗೆ ಒಳಪಟ್ಟು ಊಧ್ರ್ವಮುಖವಾದ ಉದ್ರೇಕವನ್ನು ತಾಳಿರುತ್ತದೆ. ಹೆಚ್ಚಿನ ತೀವ್ರತೆಯ ಉದ್ವೇಗ ವ್ಯಕ್ತಿಯಲ್ಲಿ ಕಳವಳ ಪ್ರವೃತ್ತಿ ಬೆಳೆಸಿ, ನರದೌರ್ಬಲ್ಯಕ್ಕೆ ಎಡೆಮಾಡಿಕೊಡುತ್ತದೆ.

ಮಗುವಿನ ವ್ಯಕ್ತಿತ್ವದಲ್ಲಿ ಉದ್ವೇಗವುಂಟಾಗಲು ಹಲವಾರು ಕಾರಣಗಳಿವೆ ಸಾಮಾಜಿಕ ಹಾಗೂ ಆರ್ಥಿಕ ಭದ್ರತೆಯಿಲ್ಲದಿರುವುದು. ಪ್ರೀತಿ ವಾತ್ಸಲ್ಯಗಳ ಕೊರತೆ, ಸ್ವಚ್ಛಂದ ವಾತಾವರಣದ ಕೊರತೆ, ಸಾಧನೆ ಮಾಡುವ ಮಹದಾಸೆಯಿದ್ದು ಆಸೆ ಈಡೇರದಿರುವುದು, ಅತ್ಮವಿಶ್ವಾಸದ ಕೊರತೆ,  ಸಮಸ್ಯೆಯ ಬಗ್ಗೆ ತಪ್ಪು ನಿಧರ್ಾರ ಕೈಗೊಳ್ಳುವುದು ಉದ್ವೇಗದ ಅತಿರೇಕದಿಂದಾಗಿ ನರಮಂಡಲಕ್ಕೆ ಧಕ್ಕೆಯಾಗುವುದರಿಂದ ಮಗು ಮಾನಸಿಕ ಆರೋಗ್ಯ ಕಳೆದುಕೊಂಡ ತನ್ನ ಪರಿಸ್ಥಿತಿಗೆ ಹೊಂದಿಕೊಳ್ಳದೇ ಹೋಗಬಹುದು ತೀರಾ ಉದ್ವೇಗವು ಮಗುವನ್ನು ಹುಚ್ಚನನ್ನಾಗಿಸಬಹುದು ಅಥವಾ ಆತ್ಮಹತ್ಯೆಗೂ ಪ್ರೇರೇಪಿಸಬಹುದು. ವ್ಯಕ್ತಿಯು ಮನಸ್ಸಿನ ಶಾಂತಿ ಕಳೆದುಕೊಂಡು ಸಣ್ಣಪುಟ್ಟ ವಿಷಯಗಳಿಗೂ ಉದ್ವೇಗಗೊಳ್ಳುವ ಸ್ಥಿತಿಗೆ ಕಾರಣ ಅವನ ಜೈವಿಕ ಮನೋವೈಜ್ಞಾನಿಕ ಬೇಡಿಕೆಗಳು ಈಡೇರದಿರುವುದಾಗಿದೆ. ವ್ಯಕ್ತಿಯಲ್ಲಿರುವ ತಪ್ಪು ಕಲ್ಪನೆಗಳು, ಭಿನ್ನಾಭಿಪ್ರಾಯಗಳು, ದ್ವೇಷ, ಅಸೂಯೆ ಭಾವನೆಗಳು, ಅಸಹನೆ, ಅತೃಪ್ತಿ, ಇಂದ್ರಿಯನಿಗ್ರಹ ಶಕ್ತಿಯಿಲ್ಲದಿರುವುದು, ವಿಶ್ವಾಸದ ಕೊರತೆ, ಮಾನಸಿಕ ಉದ್ವೇಗಕ್ಕೆ ಕಾರಣವಾಗುತ್ತವೆ. ಜೀವನದಲ್ಲಿ ಮಹತ್ವಾಕಾಂಕ್ಷೆಯು ವ್ಯಕ್ತಿಯ ಸ್ವಾಭಾವಿಕ ಗುಣ, ಅನೇಕ ಮಹದಾಸೆಗಳನ್ನು ಈಡೇರಿಸಿಕೊಳ್ಳುವ ಪ್ರಯತ್ನ ಮಾಡುವುದು ಅವನ (ಳ) ಸಹಜ ಸ್ವಭಾವ. ಇದಕ್ಕಾಗಿ ವ್ಯಕ್ತಿಯು ಯೋಜಿಸಿ ಪ್ರಯತ್ನ ನಡೆಸುತ್ತಾನೆ ಅನೇಕ ಸಲ ಯಶಸ್ವಿಯಾಗದೇ ಗೊಂದಲಕ್ಕೊಳಗಾಗಿ ಅವನು ಹೊರಟಿರುವ ದಾರಿಗಳು ಮುಚ್ಚಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಾನೆ.

ಮನೋವೈಫಲ್ಯಕ್ಕೆ  ಕಾರಣಗಳು:
ವ್ಯಕ್ತಿಯ ಬಾಹ್ಯ ಹಾಗೂ ಅಂತರಿಕ ಅಂಶಗಳು ಅವನ ಮನೋವೈಫಲ್ಯಕ್ಕೆ ಕಾರಣವಾಗಿವೆ.

ಬಾಹ್ಯಾಂಶಗಳು
* ಸ್ವಾಭಾವಿಕ ದುರ್ಘಟನೆಗಳು, ಪರಿಸರದಿಂದಾದ ಅಡ್ಡಿ ಆತಂಕಗಳು
* ಸಾಂಪ್ರದಾಯಿಕ ವಿಚಾರಗಳು, ನಂಬಿಕೆಗಳು,
* ಸಾಮಾಜಿಕ ನಿಯಮಗಳು ಹಲವೊಮ್ಮೆ ವ್ಯಕ್ತಿಯ ವೈಯಕ್ತಿಕ ವಿಚಾರಕ್ಕೆ ಅಡ್ಡಿಯಾಗಿ ಮನೋವೈಫಲ್ಯಕ್ಕೆ ಕಾರಣವಾಗುತ್ತವೆ.
* ಆರ್ಥಿಕ ಹಾಗೂ ಹಣಕಾಸಿನ ಪರಿಸ್ಥಿತಿ ಬಹುಪಾಲು ಹತಾಶೆಗೆ ಮುಖ್ಯ ಕಾರಣವಾಗಿದೆ.

 ಆಂತರಿಕಾಂಶಗಳು :
* ಅಸಾಮಾನ್ಯ ಬೆಳವಣಿಗೆ, ಕುರೂಪ, ಆಕಾರ, ಅಂಗವೈಕಲ್ಯ, ಮಾನಸಿಕ ಹಿಂದುಳಿದಿರುವಿಕೆಗಳು ವ್ಯಕ್ತಿಯ ಮನೋವೈಫಲ್ಯಕ್ಕೆ ಕಾರಣವಾಗುತ್ತವೆ.
* ಪರಸ್ಪರ ಘರ್ಷಣೆಗೊಳಗಾದ ಆಸೆಗಳು ಅಥವಾ ಗುರಿಗಳು
* ಅತಿಯಾದ ಆದರ್ಶ ವಿಚಾರಗಳು
* ನೈತಿಕತೆ ಹೊಂದಿರುವ ವ್ಯಕ್ತಿ ತನ್ನ ಯಾವುದೇ ಪ್ರಯತ್ನದಲ್ಲಿ ಸೋತಾಗ
* ಅತಿಯಾದ ಮಹತ್ವಾಕಾಂಕ್ಷೆ ಈಡೇರದಾದಾಗ
* ಸ್ವಯಂಶಿಸ್ತಿನ ಕೊರತೆ
* ಮಹದಾಸೆ ಹಾಗೂ ಸಾಮಥ್ರ್ಯದ ನಡುವಿನ ತೀವ್ರ ಅಂತರ
 * ಪ್ರಾಮಾಣಿಕತೆಗೆ ಬೆಲೆ ಸಿಗದಾದಾಗ ವ್ಯಕ್ತಿ ನಿರಾಸೆಗೊಳ್ಳುವನು.
ಶೈಕ್ಷಣಿಕ ಕ್ಷೇತ್ರದಲ್ಲಿ ಸಹ ಮಕ್ಕಳ ಕಲಿಕೆಯಲ್ಲಿ ವಿಷಯದ ಕಠಿಣತೆ. ಶಿಕ್ಷಕರ ಕಳಪೆ ಬೋಧನೆ, ಗ್ರಹಣ ಶಕ್ತಿ ಹಾಗೂ ನೆನಪಿನ ಶಕ್ತಿ ಕೊರತೆಗಳು ಅನೇಕ ಬಾರಿ ಮಕ್ಕಳ ಮನೋವೈಫಲ್ಯಕ್ಕೆ ಕಾರಣವಾಗುತ್ತವೆ.

ಮನೋವೈಫಲ್ಯ ನಿವಾರಣೆಗೆ ಕ್ರಮಗಳು :
ಮಕ್ಕಳು ಮನೋವೈಫಲ್ಯಕ್ಕೆ ಒಳಗಾಗದಂತೆ ಅವರ ಮಾನಸಿಕ ಆರೋಗ್ಯ ಕಾಪಾಡುವುದು ಶಿಕ್ಷಕರ ಜವಾಬ್ದಾರಿಯುತ ಕರ್ತವ್ಯವಾಗಬೇಕು. ಕೇವಲ ವಿಷಯ ಬೋಧನೆಯಷ್ಟೇ ಇವರ ಕಾರ್ಯವಲ್ಲ. ಮಕ್ಕಳ ಮಾನಸಿಕ ಆರೋಗ್ಯ ಕಾಪಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಶಿಕ್ಷಕರು, ಪಾಲಕರು ಮತ್ತು ಮಕ್ಕಳಲ್ಲಿ ಆತ್ಮವಿಶ್ವಾಸ, ಸ್ವಯಂಶಿಸ್ತು, ಸ್ವಯಂಭಾವರೂಪ, ಧೈರ್ಯ, ಆಶಾವಾದಿತ್ವ, ಮುಂತಾದ ಗುಣಗಳನ್ನು ಬೆಳೆಸಲು ಪ್ರಯತ್ನಿಸಿ ಮಾನಸಿಕ ಸದೃಢತೆಗೆ ಕಾರಣರಾಗಬೇಕು.
* ಪೋಷಕರು, ಶಿಕ್ಷಕರು ಅಮೂಲ್ಯ ಮಾರ್ಗದರ್ಶನ ಸಲಹೆ -ಸೂಚನೆ ನೀಡುತ್ತಾ, ಮಕ್ಕಳ ಚಲನವಲನಗಳನ್ನು ಬೇಕು ಬೇಡಗಳನ್ನು ಇತಿಮಿತಿಗಳನ್ನು ಅರಿತು ಮನೋವಿಜ್ಞಾನಿಗಳಂತೆ ಅವರ ಮನಸ್ಸನ್ನು ಅರ್ಥಮಾಡಿಕೊಂಡು, ಮಾನಸಿಕ ಸ್ವಾಸ್ಥ್ಯವನ್ನು ಸಂರಕ್ಷಿಸಬೇಕು.
* ಶಿಕ್ಷಕರು ಪಠ್ಯ/ಸಹಪಠ್ಯ ಚಟುವಟಕೆ, ಸುವ್ಯವಸ್ಥಿತ ಸಂಘಟನೆ, ನೈತಿಕ ಶಿಕ್ಷಣದಲ್ಲಿ ತೊಡಗಿ ಮಕ್ಕಳ ಸ್ನೇಹಿತ, ತತ್ವಜ್ಞಾನಿ ಮಾರ್ಗದರ್ಶಕರಂತೆ ಕಾರ್ಯನಿರ್ವಹಿಸಬೇಕು.
* ಮಾನಸಿಕ ದೌರ್ಬಲ್ಯಗಳ ನಿವಾರಣೆಗಾಗಿ ಭಯ, ಉದ್ವೇಗ, ಆತಂಕ ನಿವಾರಿಸುವಂತಹ ಸಾಧಕರ ಜೀವನ ಕಥೆಗಳನ್ನು ವಿವರಿಸಿ.
*  ಸೋಲಿಗೆ, ಕಡಿಮೆ ಅಂಕ ಪಡೆದಿರುವುದಕ್ಕೆ ಮನಗುಂದದೆ ಪುನಃ ಪ್ರಯತ್ನಿಸುವ, ತನ್ನ ಆಸಕ್ತ ಕ್ಷೇತ್ರದಲ್ಲಿ ಮುಂದುವರಿದು ಜೀವನವನ್ನು ಯಶಸ್ವಿಯಾಗಿ ರೂಪಿಸಿಕೊಳ್ಳಲು ಪ್ರೇರೇಪಿಸಿ.