Tuesday, 13 April 2021

ಸರ್ಕಾರಿ ನೌಕರರ ಹೆಸರು ಬದಲಾವಣೆಗೆ ಇರುವ ನಿಯಮಗಳು


 ಸರ್ಕಾರಿ ನೌಕರರ ಹೆಸರು ಬದಲಾವಣೆಗೆ ಇರುವ ನಿಯಮಗಳು
- ಕೆ.ಎಸ್.ರವಿಶಂಕರ

ಸರ್ಕಾರಿ ನೌಕರರು ಸೇವೆಗೆ ಸೇರಿದ ನಂತರ ವಿವಿಧ ಕಾರಣಗಳಿಗಾಗಿ ಹೆಸರನ್ನು ಬದಲಾವಣೆ ಮಾಡಿಕೊಳ್ಳುವುದಕ್ಕೆ ಸರ್ಕಾರವು ಅವಕಾಶ ಕಲ್ಪಿಸಿದೆ. ಸರ್ಕಾರದ ಅಧಿಕೃತ ಜ್ಞಾಪನ ಸಂಖ್ಯೆ:ಜಿಎಡಿ 62 ಪಿಎಲ್ಎಕ್ಸ್ 60 ದಿನಾಂಕ: 09.12.1960 ರಲ್ಲಿ ಮಾರ್ಗಸೂಚಿಗಳನ್ನು ನೀಡಲಾಗಿತ್ತು. ಇದಾದ ನಂತರ ಕರ್ನಾಟಕ ಸರ್ಕಾರಿ ನೌಕರರ (ಹೆಸರು ಬದಲಾವಣೆ  ವಿಧಾನ) ನಿಯಮಗಳು 1967 ಆದೇಶ ಸಂಖ್ಯೆ:ಜಿಎಡಿ 1 ಡಿಸಿಎನ್ 66 ದಿನಾಂಕ:08.03.1967 ರ(ದಿನಾಂಕ:06.04.1967ರಂದು ಗೆಜೆಟ್ನಲ್ಲಿ ಪ್ರಕಟವಾಗಿದೆ) ಮೂಲಕ ದಿನಾಂಕ:01.04.1967 ರಿಂದ ಅನ್ವಯವಾಗುವಂತೆ ಜಾರಿಗೊಳಿಸಲಾಗಿದೆ. ಈ ಆದೇಶದಲ್ಲಿ ದಿನಾಂಕ:09.12.1960 ರ ಆದೇಶವನ್ನು ನಿರಸನಗೊಳಿಸಲಾಗಿದೆ. ಈ ನಿಯಮಗಳ ಪ್ರಕಾರ ಕರ್ನಾಟಕ ನಾಗರಿಕ ಸೇವಾ (ವರ್ಗಿಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು 1957 ರ ಪ್ರಕಾರ ಯಾವ ಪ್ರಾಧಿಕಾರವು ನೇಮಕಾತಿ ಪ್ರಾಧಿಕಾರವಾಗಿರುವುದೋ ಅಂತಹ ನೇಮಕಾತಿ ಪ್ರಾಧಿಕಾರಿಗೆ ಸರ್ಕಾರಿ ನೌಕರರು ಹೆಸರು ಬದಲಾವಣೆಗೆ ಅನುಮತಿ ಕೋರಿ ತ್ರಿಪ್ರತಿಯಲ್ಲಿ ಅರ್ಜಿ ಸಲ್ಲಿಸಬೇಕು. ಮನವಿಯಲ್ಲಿ ಹೆಸರು ಬದಲಾವಣೆಗೆ ಸ್ಪಷ್ಟವಾದ ಕಾರಣಗಳನ್ನು ನಮೂದಿಸಬೇಕು. ಅರ್ಜಿದಾರರ ಹೆಸರು ದಪ್ಪಬಿಡಿ ಅಕ್ಷರಗಳಲ್ಲಿದ್ದು, ಹಾಲಿ ಇರುವ ಹೆಸರು ಬದಲಾವಣೆ ಮಾಡಿಕೊಳ್ಳಲು ಉದ್ದೇಶಿಸಿರುವ ಹೆಸರು ಸರ್ಕಾರಿ ನೌಕರನು ಹುಟ್ಟಿದ ಸ್ಥಳ, ವ್ಯಾಸಂಗ ಮಾಡಿದ ಸ್ಥಳ, ವಾಸವಾಗಿದ್ದ ಸ್ಥಳಗಳು, ಸ್ಥಿರಾಸ್ತಿ ಹೊಂದಿರುವ ವಿಳಾಸ ಹಾಗೂ ವಿವರಗಳು ಇವುಗಳನ್ನು ನಮೂದಿಸಿರತಕ್ಕದ್ದು. ಅರ್ಜಿಯೊಂದಿಗೆ ಆಯವ್ಯಯ ಲೆಕ್ಕ ಶೀರ್ಷಿಕೆ ರೂ.15/-ಗಳನ್ನು ಜಮಾ ಮಾಡಿರುವ ಚಲನ್ ಪ್ರತಿಯನ್ನು ಲಗತ್ತಿಸಬೇಕು.

ಸರ್ಕಾರಿ ನೌಕರರು ಸಲ್ಲಿಸುವ ಇಂತಹ ಮನವಿಯನ್ನು ನೇಮಕಾತಿ ಪ್ರಾಧಿಕಾರಿಯು, ಹೆಸರು ಬದಲಾವಣೆ ಉದ್ದೇಶವು ದುರುದ್ದೇಶದಿಂದ ಕೂಡಿದೆಯೇ, ಸರ್ಕಾರಕ್ಕೆ ಯಾವುದೇ ನಷ್ಟವುಂಟು ಮಾಡುವ ಉದ್ದೇಶದಿಂದ ಕೂಡಿದೆಯೇ ಎಂಬ ಬಗ್ಗೆ ಕೂಲಂಕಷವಾಗಿ ಪರಿಶೀಲನೆ ಮಾಡಿ ಅನುಮತಿ ನೀಡಬೇಕಾಗುತ್ತದೆ. ನೇಮಕಾತಿ ಪ್ರಾಧಿಕಾರಿಯು ಅಗತ್ಯವಿದ್ದಲ್ಲಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಥವಾ ಇನ್ನಿತರ ಪ್ರಾಧಿಕಾರಿಗಳಿಂದ ಅಜರ್ಿದಾರರು ಸಲ್ಲಿಸಿರುವ ವಿವರಗಳ ನೈಜತೆಯನ್ನು ಖಚಿತಪಡಿಸಿಕೊಳ್ಳಬಹುದಾಗಿದೆ. ಒಂದು ವೇಳೆ ಹೆಸರು ಬದಲಾವಣೆಗೆ ಅನುಮತಿ ನಿರಾಕರಿಸುವುದಾದಲ್ಲಿ  ನೇಮಕಾತಿ ಪ್ರಾಧಿಕಾರಿಯು ನಿರಾಕರಣೆಗೆ ಸ್ಪಷ್ಟ ಕಾರಣಗಳನ್ನು ನಮೂದಿಸಿ ನಿರಾಕರಣೆ ಆದೇಶ ಹೊರಡಿಸಬೇಕು. ನೇಮಕಾತಿ ಪ್ರಾಧಿಕಾರದ ಇಂತಹ ಆದೇಶದ ವಿರುದ್ಧ ಮೇಲ್ಮನವಿ ಸಲ್ಲಿಕೆಗೆ ಅವಕಾಶವಿರುವುದಿಲ್ಲ.

ನೇಮಕಾತಿ ಪ್ರಾಧಿಕಾರಿಯು ಹೆಸರು ಬದಲಾವಣೆಗೆ ಅನುಮತಿ ನೀಡಿದ ಸಂದರ್ಭದಲ್ಲಿ ಅನುಮತಿ ನೀಡಿದ ಆದೇಶವನ್ನು ಫಾರಂ ನಂ.1 ರೊಂದಿಗೆ ಲಗತ್ತಿಸಿ ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿ ಪ್ರಕಟಣಾ ಇಲಾಖೆ, ಇವರಿಗೆ ರಾಜ್ಯ ಪತ್ರದಲ್ಲಿ ಪ್ರಕಟಿಸುವ ಸಲುವಾಗಿ ಕಳುಹಿಸಿಕೊಡಬೇಕು. ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿ ಪ್ರಕಟಣಾ ಇಲಾಖೆ, ಇವರು ಹೆಸರು ಬದಲಾವಣೆಯನ್ನು ಪ್ರಕಟಿಸಿದ ರಾಜ್ಯ ಪತ್ರದ 10 ಪ್ರತಿಗಳನ್ನು ನೇಮಕಾತಿ ಪ್ರಾಧಿಕಾರಕ್ಕೆ ಕಳುಹಿಸಿಕೊಡಬೇಕು. ನೇಮಕಾತಿ ಪ್ರಾಧಿಕಾರಿಯು 05 ಪ್ರತಿಗಳನ್ನು ಸರ್ಕಾರಿ ನೌಕರನಿಗೆ ನೀಡಬೇಕು.

ಹೆಸರು ಬದಲಾವಣೆ ಮಾಡಿಕೊಂಡಿರುವ ಸರ್ಕಾರಿ ನೌಕರನು ತನ್ನ ಸ್ವಂತ ವೆಚ್ಚದಲ್ಲಿ ಇಂಡಿಯನ್ ರಿಜಿಸ್ಟ್ರೇಷನ್ ಆಕ್ಟ್ನ ಉಪಬಂಧಗಳ ಅನುಸಾರವಾಗಿ ನೋಂದಣಿ ಮಾಡಿಸಿ, ನಮೂನೆ  ರಲ್ಲಿ ಸರ್ಕಾರಿ ನೌಕರನು ಪ್ರಮಾಣೀಕರಿಸಿದ ಪ್ರತಿಯನ್ನು ನಿರ್ದೇಶಕರು, ಮುದ್ರಣ ಮತ್ತು ಲೇಖನ ಸಾಮಗ್ರಿ, ಬೆಂಗಳೂರು ಇವರಿಗೆ ನಮೂನೆ ರಲ್ಲಿ ಕಳುಹಿಸಬೇಕು. ಇದಾದ ನಂತರ ನಮೂನೆ ಗಿ ರಲ್ಲಿ ರಾಜ್ಯ ಪತ್ರದಲ್ಲಿ ಪ್ರಕಟಣೆಯನ್ನು ನೀಡಲಾಗುತ್ತದೆ. ನೌಕರರು ಅಗತ್ಯವೆಂದು ಭಾವಿಸಿದಲ್ಲಿ ಸ್ವಂತ ಖರ್ಚಿನಲ್ಲಿ ದಿನಪತ್ರಿಕೆಗಳಲ್ಲಿ ಸಹ ಪ್ರಕಟಣೆ ನೀಡಬಹುದು.ಈ ಮೇಲಿನ ಎಲ್ಲಾ ಪ್ರಕ್ರಿಯೆ ಪೂರ್ಣಗೊಂಡ ನಂತರ ಸಂಬಂಧಿಸಿದ ಅಧಿಕಾರಿಗಳು ನೌಕರರ ಸೇವಾವಹಿಯಲ್ಲಿ ಹೆಸರು ತಿದ್ದುಪಡಿ ಆದೇಶವನ್ನು ಲಗತ್ತಿಸಿ/ಅಂಟಿಸಿ ದೃಢೀಕರಿಸಬಹುದು ಹಾಗೂ ಮುಂದಿನ ಎಲ್ಲಾ ವ್ಯವಹರಣೆಗಳಲ್ಲಿ ಬಳಸಬಹುದು.

ಸರ್ಕಾರದ ಆದೇಶ ಸಂಖ್ಯೆ: ಡಿಪಿಎಆರ್ 3 ಡಿಸಿಎನ್ 80 ದಿನಾಂಕ:07.05.1980 ರಲ್ಲಿ ಮಹಿಳಾ ನೌಕರರು ವಿವಾಹವಾದ ನಂತರ ಹೆಸರು ಬದಲಾವಣೆ ಮಾಡಿಕೊಳ್ಳುವ ಬಗ್ಗೆ ತಿಳಿಸಲಾಗಿದ್ದು, ದಿನಾಂಕ:08.03.1967 ರ ಸರ್ಕಾರದ ಆದೇಶದಲ್ಲಿನ ವಿಧಿವಿಧಾನಗಳನ್ನು ಅಳವಡಿಸುವ ಅಗತ್ಯವಿಲ್ಲವೆಂದು ತಿಳಿಸಲಾಗಿದೆ. ವಿವಾಹವಾದ ನಂತರ ಮಹಿಳಾ ನೌಕರರು ಅವರ ಹೆಸರಿನ ಕೊನೆಯಲ್ಲಿ ಪತಿಯ ಅಥವಾ ಪತಿಯ ವಂಶದ(ಸರ್ ನೇಮ್) ಹೆಸರನ್ನು ಸೇರಿಸಿ ಬಳಸಿಕೊಳ್ಳಲು ಇಲಾಖಾ ಮುಖ್ಯಸ್ಥರು ಅಥವಾ ನೇಮಕಾತಿ ಪ್ರಾಧಿಕಾರಿ ಅನುಮತಿ ನೀಡಬಹುದಾಗಿದೆ. ಅನುಮತಿ ನೀಡಿದ ಆದೇಶದ ಪ್ರತಿಯನ್ನು ನೌಕರರ ಸೇವಾವಹಿಯಲ್ಲಿ ಲಗತ್ತಿಸಬೇಕು/ಅಂಟಿಸಬೇಕು. ಈ ರೀತಿ ಅನುಮತಿ ನೀಡುವ ಪೂರ್ವದಲ್ಲಿ ಗಮನಿಸಬೇಕಾದ ಅಂಶವೆಂದರೆ ಪೂರ್ಣ ಪ್ರಮಾಣದಲ್ಲಿ ಹೆಸರನ್ನು ಬದಲಾವಣೆ ಮಾಡಲಾಗುತ್ತಿಲ್ಲ ಹಾಗೂ ಬದಲಾವಣೆಯ ಉದ್ದೇಶವನ್ನು ಖಚಿತಪಡಿಸಿಕೊಂಡ ನಂತರ ಮಾತ್ರ ಅನುಮತಿ ನೀಡಬೇಕಾಗಿರುತ್ತದೆ. ಮಹಿಳಾ ನೌಕರರು ಸಹ ಪೂರ್ಣ ಪ್ರಮಾಣದಲ್ಲಿ ಹೆಸರನ್ನು ಬದಲಾವಣೆ ಮಾಡಬೇಕಾಗಿದ್ದಲ್ಲಿ ದಿನಾಂಕ: 08.03.1967 ರ ಸರ್ಕಾರದ ಆದೇಶದಲ್ಲಿನ ವಿಧಿವಿಧಾನಗಳನ್ನು ಅಳವಡಿಸಬೇಕಾಗಿರುತ್ತದೆ (ಈ ಬಗೆಗಿನ ಆದೇಶಗಳನ್ನು ಇಲಾಖೆಯ ವೆಬ್ಸೈಟ್ನಲ್ಲಿ ನೋಡಬಹುದಾಗಿದೆ)

2 komentar

ಸರ್ನೇಮ್ (ಅಡ್ಡಹೆಸರು) ಬದಲಾವಣೆಗೂ ಅನ್ವಯ ಆಗುತ್ತಲ್ವಾ ಸರ್? ಇದಕ್ಕೆ ಸಂಬಂಧಿಸಿದಂತೆ ಸರಕಾರದ ನೋಟಿಫಿಕೇಶನ್(ಆದೇಶ ಪ್ರತಿ) ಇದ್ರೆ ಹಾಕಿ.

ಸರಕಾರಿ ನೌಕರರ ಹೆಸರು ಬದಲಾವಣೆ ಮಾಡುವುದು ಹೇಗೆ