ಪರಿಸರದ ಅರ್ಥ ವಿಶಾಲವಾಗಿದ್ದು ಆಕಾಶ ಭೂಮಿ ಕೂಡ ಪರಿಸರ. ಈ ವಿಶಾಲ ಪರಿಸರದಲ್ಲಿ ಬರುವ ಮಾನವ, ಪ್ರಾಣಿ, ಪಕ್ಷಿ, ವಾಯು, ಜಲ ಪ್ರಕೃತಿ ಎಲ್ಲವನ್ನೂ ಪರಿಸರ ಎಂದು ಕರೆಯುತ್ತಾರೆ.
ಮಾನವನ ಅಗತ್ಯಗಳನ್ನು ಪೂರೈಸುವುದರಲ್ಲಿ ಪ್ರಕೃತಿ ಮಾತೆ ಸದಾಕಾಲ ತಯಾರಾಗಿರುತ್ತಾಳೆ. ಗಿಡ-ಮರಗಳು ಬೆಳೆಯುವ ಮಣ್ಣು, ಹರಿಯುವ ನೀರು, ವಾಸಿಸುವ ಭೂಮಿ, ಸಸ್ಯರಾಶಿ, ಪ್ರಾಣಿಸಂಕುಲ ಎಲ್ಲವನ್ನೂ ಮಾನವರು ತಮ್ಮ ಅಗತ್ಯಗಳ ಪೂರೈಕೆಗಾಗಿ ಬಳಸಿಕೊಳ್ಳುತ್ತಿದ್ದಾರೆ. ಇದರ ಸಮರ್ಪಕ ವ್ಯವಸ್ಥಿತ ಬಳಕೆಯಿಂದ ಮಾತ್ರ ಮಾನವನ ಕಲ್ಯಾಣ.
ಇದು ಅತಿಯಾದರೆ ಮಾನವನ ಅವನತಿ ಖಂಡಿತ. ಇದರಿಂದ ಪರಿಸರದ ಸಮತೋಲನ ಏರುಪೇರಾಗುತ್ತದೆ. ಬದುಕು ಅಸಹನೀಯವಾಗುತ್ತದೆ. ಇದಕ್ಕೆ ಪರಿಸರ ಮಾಲಿನ್ಯ ಉಂಟಾಗುವುದು. ಪರಿಸರದ ಭೌತಿಕ ಅಂಶಗಳ ಮಾಲಿನ್ಯವನ್ನು ಪರಿಸರ ಮಾಲಿನ್ಯ ಎನ್ನುವರು. ಭೂಮಿ ಜಲ, ವಾಯು ಇತ್ಯಾದಿ ಮಾಲಿನ್ಯಗಳು ಜಗತ್ತನ್ನೇ ವಿನಾಶದ ಅಂಚಿಗೆ ತಂದು ನಿಲ್ಲಿಸುತ್ತಿವೆ. ಪ್ರಪಂಚದ ಅನೇಕ ಪ್ರಸಿದ್ಧ ಪರ್ವತಗಳು, ನದಿಗಳು, ನಮ್ಮ ದೇಶದಲ್ಲಿವೆ. ಆದರೆ ಅಲ್ಲಿನ ಜಲಸಂಪನ್ಮೂಲಗಳು ಶೇ 70 ರಷ್ಟು ಭಾಗ ಮಲಿನತೆಯಿಂದ ಕೂಡಿವೆ. ಹಳ್ಳಿಗಳಲ್ಲಿ ವಾಸಿಸುವ ಅಸಂಖ್ಯಾತ ಜನರಿಗೆ ಶೌಚಾಲಯಗಳಿಲ್ಲ, ಶುದ್ಧವಾದ ಕುಡಿಯುವ ನೀರಿಲ್ಲ. ಒಂದು ಕೊಡ ನೀರಿಗೂ ಪರದಾಡುವ ಶೋಚನೀಯ ಸ್ಥಿತಿ ಇದೆ. ಮಿತಿ ಮೀರಿ ಬೆಳೆಯುತ್ತಿರುವ ಜನಸಂಖ್ಯೆ ತನ್ನ ಅಗತ್ಯಗಳ ಸಲುವಾಗಿ ಅರಣ್ಯ, ವಾಯು, ಜಲ ಮುಂತಾದ ಘಟಕಗಳಿಗೆ ತೀವ್ರ ಹಾನಿ ಮಾಡುತ್ತಿದ್ದಾನೆ. ಇದರಿಂದ ಪ್ರಮುಖವಾಗಿ ಜಲಮಾಲಿನ್ಯ ಉಂಟಾಗುತ್ತಿದೆ.
ನೀರು ಮಾನವನ ಜೀವನಾಧಾರ. ಇದು ಪರಿಸರದ ಮುಖ್ಯ ಘಟಕ ಹಾಗೂ ಅಮೂಲ್ಯ ಸಂಪನ್ಮೂಲ. ಕೃಷಿ ಕೈಗಾರಿಕೆ, ಶಕ್ತಿ ಉತ್ಪಾದನೆ ಸಾರಿಗೆ ಮತ್ತು ಕುಡಿಯಲು ನೀರು ಅತ್ಯಗತ್ಯ. ನೀರಿಲ್ಲದೆ ಎಲ್ಲವೂ ಶೂನ್ಯ.
ಗಂಗಾಸ್ನಾನ-ತುಂಗಾಪಾನ ನೀವೆಲ್ಲ ಕೇಳಿರಬಹುದು. ನಮ್ಮ ದೇಶದ ಅತ್ಯಂತ ಪವಿತ್ರ ನದಿ ಗಂಗಾ. ಈಗ ಇದು ಅತ್ಯಂತ ಕಲುಷಿತವಾದ ನದಿ. ನಮ್ಮ ದೇಶದ ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಗಂಗೆಯನ್ನು ಶುದ್ಧೀಕರಣಗೊಳಿಸಲು ಪಣತೊಟ್ಟ್ಟು ಬೃಹತ್ ಕಾರ್ಯಕ್ರಮವನ್ನು ರೂಪಿಸಿದ್ದಾರೆ! ಈ ನದಿ ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಬಿಹಾರಗಳ ಮೂಲಕ ಹರಿಯುವಾಗ ಈ ಪ್ರದೇಶಗಳ ಮಲ-ಮೂತ್ರಗಳು ನದಿಯನ್ನು ಸೇರುತ್ತವೆ. ಚರ್ಮ ಸಂಸ್ಕರಣೆ, ರಸಗೊಬ್ಬರ, ಪೆಟ್ರೋಲಿಯಂ ಉತ್ಪನ್ನ ಮುಂತಾದ ಕಾರ್ಖಾನೆಗಳು ವ್ಯರ್ಥ ವಿಷ ವಸ್ತುಗಳನ್ನು ನೀರಿಗೆ ಬಿಡುತ್ತವೆ. ಇದರಿಂದ ಜಲಚರಗಳ ಜೀವಕ್ಕೂ ಕುತ್ತು. ಮಾನವನ ಆರೋಗ್ಯಕ್ಕೂ ಆಪತ್ತು. ಈ ರೀತಿಯ ಮಲಿನತೆಯ ಭಯ ಹುಟ್ಟಿಸುವಂತಹ ಜಲಮಾಲಿನ್ಯ ಆವರಿಸಿದೆ.
ಕಾರ್ಖಾನೆಗಳಿಂದ ಹೊರಬರುವ ಆಮ್ಲಗಳು, ಲೋಹಗಳು, ವಿಷಯುಕ್ತ ರಾಸಾಯನಿಕ ವಸ್ತುಗಳು ನೀರಿನಲ್ಲಿ ಸೇರುತ್ತಿವೆ. ಅವುಗಳೊಂದಿಗೆ ಮಹಾನಗರ ಸಭೆಗಳು, ನಗರ ಸಭೆಗಳು, ಪುರಸಭೆಗಳು ಆಯಾ ಪಟ್ಟಣಗಳಲ್ಲಿಯ ಚರಂಡಿ ನೀರನ್ನು ಶುದ್ಧಗೊಳಿಸದೆ ನೇರವಾಗಿ ನದಿ ಸರೋವರಗಳಿಗೆ ಬಿಡುತ್ತಿವೆ. ಕೈಗಾರಿಕೆಯ ಕೊಳೆ, ನದಿ, ಸರೋವರಗಳನ್ನು ಸೇರಿದಾಗ ಅದರಲ್ಲಿರುವ ಮ್ಯಾಂಗನೀಸ್, ಕ್ಯಾಲ್ಸಿಯಂ ಅಂಶ ಅಧಿಕವಾಗಿ ನೀರು ಗಡುಸಾಗುತ್ತದೆ. ಇಂತಹ ನೀರನ್ನು ಬಳಸಬಾರದು. ಕುಡಿಯಲೂ ಉಪಯೋಗಿಸಬಾರದು. ನಮ್ಮ ರಾಜ್ಯದ ಅನೇಕ ಕಾರ್ಖಾನೆಗಳು ಕೃಷ್ಣ, ಕಾವೇರಿ, ತುಂಗಭದ್ರಾ ಮೊದಲಾದ ನದಿಗಳನ್ನು ಕಲುಷಿತಗೊಳಿಸುತ್ತಿವೆ.
ಹೇಸಿಗೆ ನೀರಿನಲ್ಲಿ ಕೊಳೆತ ಹಣ್ಣುಗಳು, ತರಕಾರಿ ಸಿಪ್ಪೆ, ಎಲೆ ಸೊಪ್ಪು ಮುಂತಾದವು ಇರುತ್ತವೆ. ರೋಗ ಹರಡುವ ಬ್ಯಾಕೀ
್ಟರಿಯಾಗಳು ಇವುಗಳಲ್ಲಿ ಸೇರಿರುತ್ತವೆ. ಇಂತಹ ನೀರಿನ ಸೇವನೆಯಿಂದ ನಾನಾ ರೀತಿಯ ಕಾಯಿಲೆಗಳು ಬರುತ್ತವೆ. ನದಿಯ ನೀರಿಗೆ ಕೊಳೆಯ ಪ್ರಮಾಣ ಹೆಚ್ಚಾದಂತೆ ಅದನ್ನು ಜೀಣರ್ಿಸಲು ಬೇಕಾದ ಆಮ್ಲಜನಕದ ಪ್ರಮಾಣ ಕೂಡ ಹೆಚ್ಚುತ್ತದೆ. ಆದರೆ ನೀರಿನಲ್ಲಿ ಕರಗಿಸುವ ಆಮ್ಲಜನಕದ ಪ್ರಮಾಣಕ್ಕೆ ಮಿತಿ ಇದೆ. ಆಮ್ಲಜನಕ ಪೂರ್ತಿಯಾಗಿ ಮುಗಿದು ಹೋದಾಗ ಅದರಲ್ಲಿರುವ ಜಲಚರಗಳೂ ಸಾಯುತ್ತವೆ. ನೀರು ಬಗ್ಗಡವಾಗಿ ಜಲಜನಕದ ಸಲ್ಪೈಡ್ ಬಿಡುಗಡೆಯಾಗಿ ಕೆಟ್ಟವಾಸನೆ ಬರುತ್ತದೆ. ಇಂತಹ ನೀರು ಬಳಸಿದರೆ ಚರ್ಮರೋಗ, ಕರುಳುಬೇನೆ ಕಾಮಾಲೆ ಮುಂತಾದ ರೋಗಕ್ಕೆ ಬಲಿಯಾಗಬೇಕಾಗುತ್ತದೆ ಕಾಲರಾ ಆಮಶಂಕೆ ಕೂಡಾ ಬರುತ್ತದೆ.
ರೈತರು ಆಧುನಿಕ ವ್ಯವಸಾಯಕ್ಕಾಗಿ ಬಳಸುವ ರಾಸಾಯನಿಕ ವಸ್ತುಗಳು ಕೂಡಾ ನೀರನ್ನು ಮಲಿನಗೊಳಿಸುತ್ತವೆ. ಶಿಲೀಂದ್ರನಾಶಕ, ಕೀಟನಾಶಕ, ಕಳೆನಾಶಕ ಇತ್ಯಾದಿ ಮಳೆನೀರಿನಲ್ಲಿ ಹರಿದು ನೀರಿನ ಮೂಲಗಳಿಗೆ ಬಂದು ಸೇರುತ್ತವೆೆ. ತೈಲಸಂಸ್ಕರಣ ಕೇಂದ್ರಗಳು, ವಿದ್ಯುತ್ ಸ್ಥಾವರ, ಪರಮಾಣು ವಿದ್ಯುದಾಗಾರ, ಇತ್ಯಾದಿ ಹೆಚ್ಚಿನ ತಾಪಮಾನದಲ್ಲಿರುವ ವರ್ಜಿತಗಳನ್ನು ಸಮೀಪದ ನೀರಿನ ಆಸರೆಗೆ ಬಿಡುತ್ತವೆ. ತಾಪದ ನೀರಿನಲ್ಲಿ ಜಲಚರಗಳು ಜೀವಿಸಲಾರದೆ ಸಾಯುತ್ತವೆ. ದೊಡ್ಡ ದೊಡ್ಡ ತೈಲ ಟ್ಯಾಂಕರ್ಗಳಿಂದ ಸಾಗರ-ಸರೋವರದ ನೀರಿಗೆ ತೈಲ ಸೇರುತ್ತದೆ. ನೀರಿನ ಮೇಲೆ ತೆಳು ಪದರವಾಗಿ ಸೇರುವ ಇಂತಹ ಎಣ್ಣೆಯಿಂದ ಕೂಡ ತೀವ್ರತರವಾದ ಹಾನಿಯಿದೆ.
ಮಲಪ್ರಭಾ ನದಿಗೆ ಸವದತ್ತಿ ಹತ್ತಿರದ ನವಿಲುತೀರ್ಥದಲ್ಲಿ ಆಣೆಕಟ್ಟು ನಿಮರ್ಿಸಲಾಗಿದೆ. ಈ ಆಣೆಕಟ್ಟೆಯ ಕೆಳಗೆ ಇರುವಂತಹ ಪ್ರದೇಶಗಳಿಗೆ ಮಳೆಗಾಲದಲ್ಲಿ ಮಳೆಯಾದರೆ ಮಾತ್ರ ನೀರು ಹರಿಯುತ್ತದೆ. ಇಲ್ಲದೆ ಹೋದರೆ ನೀರೇ ಹರಿಯುವುದಿಲ್ಲ. ಎರಡೂ ದಂಡೆಗುಂಟ ರೈತರು ನದಿಯ ಒಡಲನ್ನು ಆಕ್ರಮಿಸಿ ಹೊಲ ಮಾಡಿಕೊಂಡಿದ್ದಾರೆ. ಹೀಗಾಗಿ ಮಳೆಗಾಲದಲ್ಲಿ ಮಹಾಪೂರ ಬರುವ ಸಾಧ್ಯತೆ ಹೆಚ್ಚಾಗಿದೆ. ಮುನವಳ್ಳಿಯ ಸೇತುವೆ ಪಕ್ಕ ಆಪು ಬೆಳೆದು ನಿಂತಿದೆ. ಅದರಲ್ಲಿ ಕಾರ್ಖಾನೆಯ ತ್ಯಾಜ್ಯ ಹಾಗೂ ಗ್ರಾಮಗಳಲ್ಲಿಯ ಬಚ್ಚಲು ಹಾಗೂ ಚರಂಡಿ ನೀರು ಸೇರಿಕೊಂಡು ನೀರಿಗೆ ಕರಿಬಣ್ಣ ಬಂದು ನೋಡಲು ಭಯವಾಗುತ್ತ್ತದೆ. ಗಣೇಶ ಚತುರ್ಥಿ ಮಳೆಗಾಲದಲ್ಲಿ ಬರುವ ಹಬ್ಬ. ಆದರೂ ರಾಮದುರ್ಗದಲ್ಲಿ ಒಮ್ಮೆ ಗಣೇಶನ ವಿಸರ್ಜನೆಗೆೆ ನದಿಯಲ್ಲಿ ನೀರು ಇರಲಿಲ್ಲ. ನಗರಸಭೆಯವರು ನದಿಯಲ್ಲಿಯೇ ಸೇತುವೆ ಪಕ್ಕ ಜೆ.ಸಿ.ಬಿ. ಯಂತ್ರದಿಂದ ಗುಂಡಿ ತೋಡಿಸಿ ನಗರದ ಚರಂಡಿಯ ನೀರನ್ನು ಸಂಗ್ರಹಿಸಿ ಗಣೇಶನನ್ನು ವಿಸರ್ಜಿಸಲಾಯಿತು. ಇಂತಹ ನೀರನ್ನು ಜಾನುವಾರುಗಳು ಕುಡಿದು ವಿಚಿತ್ರವಾದ ರೋಗಗಳಿಗೆ ತುತ್ತಾಗುತ್ತವೆ.
ಕದಡಿದ ನೀರು ತಿಳಿಯಾಗುತ್ತದೆ. ಕಲುಷಿತ ಹರಿಯುವ ನೀರು ಸ್ವಲ್ಪ ಸಮಯದ ನಂತರ ತಂತಾನೇ ಶುದ್ಧವಾಗುತ್ತದೆ ಎಂದು ಹೇಳುತ್ತಾರೆ. ಇದು ನಿಜವೇ? ಹರಿಯುವ ನೀರಿನಲ್ಲಿ ಮಲಿನತೆಗೆ ಕಾರಣವಾದ ಪದಾರ್ಥಗಳು ಬೆರೆತು, ಅವು ಸ್ವಲ್ಪ ದೂರ ಸಾಗಿದ ಮೇಲೆ ಅದರ ಸಾರ ಕಡಿಮೆಯಾಗುತ್ತದೆ. ಆದರೆ ಬೇಸಿಗೆಯಲ್ಲಿ ಹರಿಯುವ ನೀರಿನ ಪ್ರಮಾಣ ಕಡಿಮೆಯಾಗುವುದರಿಂದ ಮಲಿನತೆ ಹೆಚ್ಚಾಗುತ್ತದೆ. ಗಟಾರಗಳಿಂದ ಹರಿದು ಬರುವ ನೀರಿನಲ್ಲಿ ಸಾಂಕ್ರಾಮಿಕ ರೋಗಗಳನ್ನು ಉಂಟುಮಾಡುವ ರೋಗಾಣುಗಳು ನೀರಿನ ಉದ್ದಗಲಕ್ಕೂ ಹರಿದು ರೋಗಗಳನ್ನು ಹರಡುತ್ತವೆ. ನದಿಯ ನೀರು ತಂತಾನೆ ಶುದ್ಧವಾಗುತ್ತದೆ ಎಂಬುದು ಶುದ್ಧ ಸುಳ್ಳು .
ಜಲಮಾಲಿನ್ಯ ತಡೆಗಟ್ಟಲು ಹಾಗೂ ಅದನ್ನು ನಿಯಂತ್ರಿಸಲು ಕರ್ನಾಟಕ ಜಲಮಾಲಿನ್ಯ ನಿಯಂತ್ರಣ ಮಂಡಳಿ ಕಾರ್ಯಪ್ರವೃತ್ತವಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಪ್ರಾದೇಶಿಕ ಕಛೇರಿಗಳು ಕಾರ್ಯ ನಿರ್ವಹಿಸುತ್ತಿವೆ. ವ್ಯರ್ಥವಾದ ನೀರನ್ನು ಶುದ್ಧೀಕರಿಸಿ ನದಿಗೆ ಬಿಡುವುದು ಶುದ್ಧೀಕರಣಕ್ಕೆ ಬೇಕಾದ ಯಂತ್ರಗಳನ್ನು ಕಾರ್ಖಾನೆಗಳಲ್ಲಿ ಅಳವಡಿಸುವುದು. ಮಂಡಳಿ ನಿರೂಪಿಸಿದ ಆದೇಶಗಳನ್ನು ಪಾಲಿಸದೇ ಇದ್ದರೆ ಅಂತಹ ಕಾರ್ಖಾನೆಗಳನ್ನು ಮುಚ್ಚುವ ಕಾನೂನಿನ ಕ್ರಮ ಕೂಡ ಜಾರಿಗೆ ಬಂದಿದೆ.
ಸರಕಾರ ಅಥವಾ ಇಲಾಖೆಯತ್ತಲೇ ನೋಡುತ್ತಾ ಕೂಡುವುದಕ್ಕಿಂತ ಜನಸಾಮಾನ್ಯರಲ್ಲಿ ಜಾಗೃತಿ ಮೂಡಿಸುವುದು ಅತ್ಯಾವಶ್ಯಕ. ಹರಿಯುವ ನೀರಿನ ಬಣ್ಣ ಬದಲಾದರೆ, ವಾಸನೆ ಬರಲಾರಂಭಿಸಿದಾಗ ಕನರ್ಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಗೆ ತಿಳಿಸಬೇಕು. ಕುಡಿಯುವ ನೀರಿನ ಬಾವಿ, ಬೋರ್ವೆಲ್ ಹತ್ತಿರ ಕೊಳಚೆ ನೀರಿನ ಮೋರಿ ಹಾಗೂ ತಿಪ್ಪೆ ಗುಂಡಿಗಳು ಇರದಂತೆ ಎಚ್ಚರ ವಹಿಸಬೇಕು. ಕೆರೆಯ ನೀರನ್ನು ನದಿಯ ನೀರನ್ನು ಅತೀ ಜಾಗರೂಕತೆಯಿಂದ ಬಳಸಬೇಕು. ನೀರು ಅಮೂಲ್ಯ. ಅಪವ್ಯಯವಾಗದಂತೆ ಹಾಗೂ ಮಲಿನವಾಗದಂತೆ ಎಚ್ಚರಿಕೆಯಿಂದ ಬಳಸಿರಿ. ಮುಂದಿನ ಪೀಳಿಗೆಯನ್ನು ಉಳಿಸಿರಿ ರಕ್ಷಿಸಿರಿ