Tuesday, 20 April 2021

ಮಕ್ಕಳ ಕಲಿಕೆಗೆ ಹೊಸ ಚೇತನವಾದ ರಚನಾವಾದ

ಮಕ್ಕಳ ಕಲಿಕೆಗೆ ಹೊಸ ಚೇತನವಾದ ರಚನಾವಾದ
- ಪರಮೇಶ್ವರಯ್ಯ ಸೊಪ್ಪಿಮಠ,

ಮಕ್ಕಳ ಶಿಕ್ಷಣ ಹಕ್ಕು ಜಾರಿಯಾಗಿದೆ. ಶಿಕ್ಷಣ ಇಲಾಖೆಯಲ್ಲಿ ದಿನಮಾನಕ್ಕೆ ತಕ್ಕಂತೆ ಬದಲಾವಣೆಯ ಅಲೆ ಜೋರಾಗಿ ಬೀಸುತ್ತಿದೆ. ಅನೇಕ ನವೀನ ಯೋಜನೆಗಳು ರೂಪಗೊಂಡು ಅನುಷ್ಠಾನಗೊಳ್ಳುತ್ತಿವೆ. ವಿದ್ಯಾರ್ಥಿಯು ಶಾಲೆಯಲ್ಲಿ ಕಲಿಯುವ ಕಲಿಕೆ ಬದುಕಿನುದ್ದಕ್ಕೂ ಆನಂದದ ನೆನಪಾಗಿ ಉಳಿಯಬೇಕು, ಶಿಕ್ಷಣ ಮತ್ತು ಕಲಿಕೆಗಳು ಅಖಂಡ ಪ್ರಕ್ರಿಯೆಗಳಾಗಬೇಕು. ಮಕ್ಕಳ ಮನಸ್ಸು ಬಲವಂತದಿಂದ ಅರಳಬಾರದು, ಅದು ಸಹಜವಾಗಿ ಅರಳಲು ಅವಕಾಶ ಕೊಡಬೇಕು, ಕಲಿಕೆ ಎನ್ನುವುದು ಅವರಿಗೆ ಆನಂದದಾಯಕ ಚಟುವಟಿಕೆಯಾಗಬೇಕು ಎನ್ನುವುದೇ ಆಧುನಿಕ ಶಿಕ್ಷಣದ ಮುಖ್ಯ ಗುರಿಶಿಕ್ಷಣದ ಗುಣಮಟ್ಟಕ್ಕೆ ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು-2005 ಹಾಗೂ ಶಿಕ್ಷಣ ಹಕ್ಕು-2009 ಹೆಚ್ಚು ಆದ್ಯತೆ ನೀಡಿವೆ. ಶಾಲಾ ವಯಸ್ಸಿನ ಎಲ್ಲಾ ಮಕ್ಕಳೂ ಶಾಲೆಗೆ ಬರುವಂತಾಗಿ ಆ ಹಂತದ ಕಲಿಕೆಯನ್ನು ಯಶಸ್ವಿಗೊಳಿಸಬೇಕು. ಅದರಿಂದ ಕಲಿಕೆಯನ್ನು ಬಲಗೊಳಿಸಲು ಮಹತ್ವದ ಬದಲಾವಣೆಗಳನ್ನು ಕಲಿಕಾ ಪರಿಸರದಲ್ಲಿ ಕಾಣುತ್ತಿದ್ದೇವೆ. ಇಂತಹ ಮಹತ್ವಗಳಲ್ಲಿ ರಚನಾತ್ಮಕ ಕಲಿಕೆ ಇಂದು ಹೆಚ್ಚು ಮೌಲ್ಯ ಪಡೆಯುತ್ತಿದೆ. ರಾಷ್ಟ್ರೀಯ ಪಠ್ಯಕ್ರಮ ಚೌಕಟ್ಟು ಸಂರಚನಾತ್ಮಕ ಕಲಿಕಾ ವಿಧಾನವನ್ನು ಬಳಸುವುದಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದೆ.

ರಚನಾತ್ಮಕ ವಾದದಲ್ಲಿ ಕಲಿಕೆಯನ್ನು "ಜ್ಞಾನ ಕಟ್ಟಿಕೊಳ್ಳುವ" ಪ್ರಕ್ರಿಯೆ ಎಂದು ಅರ್ಥೈಸಿಕೊಳ್ಳಬಹುದು. ಈ ಪ್ರಕ್ರಿಯೆಯಲ್ಲಿ ಮಗು ಎಷ್ಟು ಕಲಿಯಿತು? ಎನ್ನುವುದಕ್ಕಿಂತಲೂ ಮಗು ಹೇಗೆ ಕಲಿಯಿತು? ಎನ್ನುವುದು ಮುಖ್ಯವಾಗುತ್ತದೆ. ನಮ್ಮ ವಿದ್ಯಾರ್ಥಿಗಳು ಮಾಹಿತಿಯನ್ನು ಕಲಿಯಬೇಕು. ಅವನ್ನು ತಮ್ಮದಾದ ಜ್ಞಾನವನ್ನಾಗಿಸಿಕೊಳ್ಳಬೇಕು. ಆ ಜ್ಞಾನಕ್ಕೆ ಒಂದು ಸಾರ್ವತ್ರಿಕ ಪ್ರಸ್ತುತತೆ ಇರಬೇಕು. ಅಂತಹ ಜ್ಞಾನದ ಗಳಿಕೆಯೇ ನಿಜವಾದ ಕಲಿಕೆ. ಅಂತಹ ಜ್ಞಾನ ಗಳಿಕೆಯನ್ನು ಅನುಕೂಲಿಸುವುದೇ ತರಗತಿ ಶಿಕ್ಷಣದ ಮೂಲ ಆಶಯ.

ರಚನಾವಾದಿ ತತ್ವದಲ್ಲಿ ವ್ಯಕ್ತಿ ಸ್ವಾತಂತ್ರ್ಯವನ್ನು ಗೌರವಿಸುವ ಅಭಿವ್ಯಕ್ತಿ ಇದೆ. ಮಕ್ಕಳು ತಮ್ಮ ತಮ್ಮ ಜ್ಞಾನವನ್ನು ತಮ್ಮ ತಮ್ಮದೇ ರೀತಿಗಳಲ್ಲಿ ಕಟ್ಟಿಕೊಳ್ಳುತ್ತಾರೆ. ಅಂತಹ ಕಲಿಕೆಗೆ ಅವಕಾಶ ಮಾಡಿಕೊಟ್ಟಾಗ ಆ ಕಲಿಕೆ ವ್ಯಕ್ತಿತ್ವದ ಒಂದು ಭಾಗವೇ ಆಗಿ ಬಿಡುತ್ತದೆ. ಅದಕ್ಕಾಗಿ ಕಲಿಕಾ ಅನುಭವಗಳನ್ನು ತರಗತಿಯಲ್ಲಿ ಹೇಗೆ ನೀಡಲಾಗುತ್ತಿದೆ ಎನ್ನುವುದು ಇಲ್ಲಿ ಮುಖ್ಯವಾಗುತ್ತಿದೆ. ಈ ಹಿನ್ನೆಲೆಯಲ್ಲಿ ನಮ್ಮ ಶಿಕ್ಷಕರಿಗೆ ತರಗತಿಯಲ್ಲಿ ರಚನಾತ್ಮಕ ಕಲಿಕೆ ಹೇಗೆ ನಡೆಸಬೇಕು ಎಂಬುದರ ಕುರಿತಾಗಿ ಕಳೆದ ಕೆಲ ವರ್ಷಗಳಿಂದ ತರಬೇತಿಯನ್ನು ನೀಡಲಾಗುತ್ತಿದೆ.

ರಚನಾತ್ಮಕ ಕಲಿಕೆ ಎಂದರೆ ಕನ್ನಡ ಅನುವಾದ. ಇದರ ಅರ್ಥ ಜೋಡಿಸು. ಹಂತಹಂತವಾಗಿ ಹೊಂದಿಸು ಎಂದಾಗುತ್ತದೆ. ಜ್ಞಾನವನ್ನು ಹಂತಹಂತವಾಗಿ ಅಥವಾ ಕ್ರಮವಾಗಿ ಜೋಡಿಸುವ ಪರಿಕಲ್ಪನೆಯೇ ರಚನಾವಾದದ ತಿರುಳು. ತನಗೆ ತಿಳಿದಿರುವ ಜ್ಞಾನ ಅಥವಾ ಅನುಭವಗಳನ್ನು ಹೊಸ ಕಲಿಕೆ ಅಥವಾ ಪರಿಕಲ್ಪನೆಗೆ ಹೊಂದಿಸಿ ಅರಿಯುವ/ಕಲಿಯುವ ವಿಧಾನವೇ ರಚನಾತ್ಮಕ ಕಲಿಕಾ ವಿಧಾನ.

ರಚನಾತ್ಮಕ ಕಲಿಕಾ ವಿಧಾನದ ಸಾಮಾನ್ಯ ಗುಣಲಕ್ಷಣಗಳು
* ಕಲಿಕೆ ಸುಮ್ಮನೆ ಗ್ರಹಿಸುವ ನಿರಾಸಕ್ತ ಪ್ರಕ್ರಿಯೆಯಾಗಿರದೇ ಅದು ಆಸಕ್ತಿಯೊಂದಿಗೆ ಅರ್ಥವತ್ತಾದ ಸಮಸ್ಯೆಯನ್ನು ಪರಿಹರಿಸುವುದಕ್ಕೆ ಅವಶ್ಯವಾದ ಅರ್ಥಪೂರ್ಣವಾಗಿಸುವ ಪ್ರಕ್ರಿಯೆ.
* ಹೊಸ ಕಲಿಕೆಯು ಕಲಿಯುವವನ ಪೂರ್ವಜ್ಞಾನವನ್ನೇ ಅವಲಂಬಿಸಿದೆ. ಈ ಪೂರ್ವ ಜ್ಞಾನವು/ಅನುಭವವು ಕೆಲವೊಮ್ಮೆ ಹೊಸ ಸಂಗತಿಯನ್ನು ಅರ್ಥಮಾಡಿಕೊಳ್ಳಲು ಅಡ್ಡಿಯಾಗಬಾರದು.
* ಕಲಿಕೆಯು ಸಮಾಜದ ಜೊತೆ, ವಿದ್ಯಾರ್ಥಿಗಳ ಜೊತೆ ನಡೆಯುವ ಸಂವಹನ ಕಲಿಕಾ ಪ್ರಕ್ರಿಯೆಯನ್ನು ಅವಲಂಬಿಸಿದೆ.
* ಕಲಿಕೆಯಲ್ಲಿ ಅರ್ಥಪೂರ್ಣ ಕಲಿಕೆಯು ಕಲಿಯುವವರ ಆಸಕ್ತಿಯ ಮೇಲೆ ಅವಲಂಬಿಸಿದೆ.
* ರಚನಾತ್ಮಕ ಕಲಿಕಾ ವಿಧಾನದಲ್ಲಿ, ಜ್ಞಾನರಚನೆ ಮತ್ತು ಬಹು ಆಯಾಮದ ಕಲಿಕೆಯು ಕಲಿಕಾ ಪರಿಸರದ ಮೇಲೆ ಅವಲಂಬಿತವಾಗಿದೆ. ಕಲಿಕಾರ್ಥಿಯು ಪರಿಕಲ್ಪನೆಯ ಪರಿಪಕ್ವತೆಗೆ ಬೇರೆ ಬೇರೆ ಹಾದಿ/ ಆಯಾಮದಲ್ಲಿ ವಿಚಾರಶೀಲರಾಗಿರಬೇಕು. ಈ ನಿಟ್ಟಿನಲ್ಲಿ ನೀಡುವ ವಿವರಣೆಗಳಿಗೆ ಶಿಕ್ಷಕರು ಅಂದರೆ ಅನುಕೂಲಿಸುವವರು ನಮ್ಯವಾಗಿ ಸ್ಪಂದನೆ ನೀಡುತ್ತಾ ಸರಿಯಾದ ದಿಕ್ಕಿನಲ್ಲಿ ಕಲಿಕೆಯನ್ನು ಮುಂದುವರೆಸುವಂತೆ ಪ್ರೇರೇಪಿಸಬೇಕು.

ಕಲಿಕೆಯು ರಚನಾತ್ಮಕ ವಿಧಾನದಲ್ಲಿ ಆಗಬೇಕಾದರೆ ಬಹಳ ಮುಖ್ಯವಾಗಿ ಗಮನಿಸಬೇಕಾದ ಅಥವಾ ಸದಾ ನೆನಪಿನಲ್ಲಿಟ್ಟುಕೊಳ್ಳಬೇಕಾದ ಅಂಶಗಳೆಂದರೆ, ಕಲಿಕೆಯು ವಿಶ್ವಾಸಾರ್ಹವಾದ ಹಾಗೂ ನಿಜ ಜೀವನದ ವಾಸ್ತವಕ್ಕೆ ಸಂಬಂಧಿಸಿದ ಪರಿಸರಕ್ಕೆ ಹೊಂದಿಕೊಂಡಿರಬೇಕು. ಕಲಿಕೆಯು ಸಾಮಾಜಿಕ ಮತ್ತು ನೈತಿಕತೆಯ ತಳಹದಿಯಲ್ಲಿ ಒಳಗೊಂಡಿರಬೇಕು. ಕಲಿಕಾಂಶವು ಹಾಗೂ ಕೌಶಲವು ಕಲಿಕಾರ್ಥಿಯ ಹಿಂದಿನ ಜ್ಞಾನದ ಚೌಕಟ್ಟಿನಲ್ಲಿರಬೇಕು. ವಿದ್ಯಾರ್ಥಿಗಳ ಮೌಲ್ಯಮಾಪನವನ್ನು ರೂಪಣಾತ್ಮಕವಾಗಿ ಮುಂದಿನ ಕಲಿಕೆಗೆ ಅನುಕೂಲವಾಗುವಂತೆ ಮಾಡಬೇಕು. ವಿದ್ಯಾರ್ಥಿಗಳು ಸ್ವ-ನಿಯಂತ್ರಣ, ಸ್ವ-ಕಲಿಕೆ, ಸ್ವ-ಅವಲೋಕನ ಮಾಡುವುದನ್ನು ಉತ್ತೇಜಿಸಬೇಕು. ಶಿಕ್ಷಕರು ವಿದ್ಯಾರ್ಥಿಗಳ ಕಲಿಕೆಗೆ ಸಹಾಯ ಮಾಡಬೇಕೇ ಹೊರತು ಕಲಿಕಾಂಶವನ್ನು ನೇರವಾಗಿ ಪಾಠ ಮಾಡುವಂತಿಲ್ಲ.

ಐದು 'ಇ'ಗಳ ಮಾದರಿ: ರಚನಾತ್ಮಕ ಕಲಿಕೆಯ ಮಾದರಿಗಳು ಸಾಕಷ್ಟಿದ್ದು ಅವುಗಳ ಸಹಾಯದಿಂದ ಕಲಿಕಾ ವಿಧಾನದ ಬಗ್ಗೆ ತಿಳಿದುಕೊಳ್ಳಬಹುದು. ಅವುಗಳಲ್ಲಿ ಐದು 'ಇ' ಗಳ ಮಾದರಿಯೂ ಒಂದು.

* ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು.
* ಆವಿಷ್ಕರಿಸುವಿಕೆ/ಪತ್ತೆ ಹಚ್ಚುವಿಕೆ.
* ಅಭಿವ್ಯಕ್ತಿಸುವುದು ಅಥವಾ ವಿವರಿಸುವುದು
* ವಿಸ್ತರಿಸುವುದು ಹಾಗೂ ದೃಢೀಕರಣ
* ಮೌಲ್ಯಮಾಪನ.

ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು: ವಿದ್ಯಾರ್ಥಿಗಳು ಕಲಿಕೆಯಲ್ಲಿ ತೊಡಗಬೇಕಾದರೆ ಅವರು ಆ ಕಲಿಕೆಯಲ್ಲಿ ಆಸಕ್ತಿಯನ್ನು ಹೊಂದುವಂತೆ ಮಾಡಬೇಕು. ಹೀಗೆ ಮಾಡಬೇಕಾದರೆ ನಿಜಜೀವನದ ಸಮಸ್ಯಾತ್ಮಕ ಸಂದರ್ಭ ನೀಡುತ್ತಾ, ಅವರನ್ನು ಆ ಮುಖಾಂತರ ಚಟುವಟಿಕೆಯಲ್ಲಿ ತೊಡಗಿಸಬೇಕು. ಅಲ್ಲಿ ಅರ್ಥಪೂರ್ಣ ಚರ್ಚೆಗೆ ಆಸ್ಪದ ಮಾಡಿಕೊಡುವ ಪ್ರಶ್ನೆಯನ್ನು ಕೇಳುವುದರ ಮೂಲಕ ಅವರನ್ನು ಉತ್ತೇಜಿಸಬೇಕು. ಈ ರೀತಿ ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ತೊಡಗಿಸಿಕೊಳ್ಳುವುದು ಮೊದಲನೆ ಹಂತವಾಗಿದೆ.

ಆವಿಷ್ಕರಿವಿಕೆ/ಪತ್ತೆ ಹಚ್ಚುವಿಕೆ : ಈ ಹಂತದಲ್ಲಿ ಮಗುವು ಕಲಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡು ಪರಿಕಲ್ಪನೆಯನ್ನು ಆವಿಷ್ಕರಿಸುವ ಮೂಲಕ ಹೆಚ್ಚಿನ ಜ್ಞಾನ ಪಡೆಯಲು ಹಾಗೂ ತನ್ನ ಜ್ಞಾನವನ್ನು ಸಂರಚಿಸಿಕೊಳ್ಳುತ್ತದೆ. ಅದಕ್ಕಾಗಿ ಕೆಲವು ಚಟುವಟಿಕೆಗಳನ್ನು ಶಿಕ್ಷಕರು ರೂಪಿಸಬೇಕಾಗುತ್ತದೆ. ಮಕ್ಕಳಿಗೆ ಸಂರಚಿಸಿದ ಚಟುವಟಿಕೆಗಳನ್ನು ನೀಡುತ್ತಾ, ಗುಂಪಿನಲ್ಲಿ ಕಲಿಯುವಂತೆ ಪ್ರೇರೇಪಿಸಲಾಗುತ್ತದೆ. ಕಲಿಕಾ ಸಾಮಗ್ರಿಗಳ ಬಳಕೆಗೆ ಅವಕಾಶ ನೀಡುವುದರ ಜೊತೆಗೆ ಅವರ ಅನ್ವೇಷಣೆ/ವಿಚಾರಗಳನ್ನು ಕಲಿಕಾ ಭಾಗವಾಗಿ ಮನವರಿಕೆ ಮಾಡಲು ಪ್ರೇರೇಪಿಸಲಾಗುತ್ತದೆ. ಸಮಸ್ಯೆಗಳಿಗೆ ಪರಿಹಾರದ ಹಂತಗಳನ್ನು ಗುರುತಿಸುವುದು ಈ ಹಂತದ ಪ್ರಮುಖ ಉದ್ದೇಶವಾಗಿದೆ.

ಅಭಿವ್ಯಕ್ತಿಸುವುದು ಅಥವಾ ವಿವರಿಸುವುದು: ಕಲಿಕಾರ್ಥಿಯು ಹಿಂದಿನ ಹಂತದಲ್ಲಿ ಸಂರಚಿಸಿಕೊಂಡ ಜ್ಞಾನದ ವಿವರಣೆಯನ್ನು ಮಾತನಾಡುವ ಭಾಷೆಯಲ್ಲಿ ಸ್ಪಷ್ಟಪಡಿಸುತ್ತಾನೆ. ಕಲಿಕಾರ್ಥಿಯು ನೀಡುವ ವಿವರಣೆಯಲ್ಲಿನ ಪರಿಕಲ್ಪನೆಯ ಪರಿಪಕ್ವತೆಗೆ ಶಿಕ್ಷಕರು/ಅನುಕೂಲಿಸುವವರು ನಮ್ಯವಾದ ಸ್ಪಂದನೆ ನೀಡುತ್ತಾ ಸರಿಯಾದ ದಿಕ್ಕಿನಲ್ಲಿ ಕಲಿಕೆ ಮುಂದುವರೆಸುವಂತೆ ಪ್ರೋತ್ಸಾಹಿಸುತ್ತಾರೆ. ಉದಾಹರಣೆಗೆ ಸಂರಚನೆ ಮಾಡಿಕೊಂಡ ಜ್ಞಾನದ ವಿವರಣೆ ನೀಡುವುದು, ಮಾದರಿಯನ್ನು ರಚಿಸಿ-ವಿವರಣೆ ನೀಡುವುದು. ಸಮಸ್ಯೆಗೆ ನೀಡಿದ ಪರಿಹಾರವನ್ನು ಮತ್ತೆ ಮತ್ತೆ ಪರಿಶೀಲಿಸಿ ವಿಶ್ಲೇಷಿಸುವ ಕ್ರಿಯೆ ನಡೆಯುತ್ತದೆ. ವಿಚಾರಗಳನ್ನು ಚಿತ್ರ ಹಾಗೂ ನಕ್ಷೆಗಳಲ್ಲಿ ತೋರಿಸುವುದು. ಸಾಂಕೇತರಿಕವಾಗಿ ತಿಳಿಸಬೇಕಾದ ವಿಷಯಗಳನ್ನು ಸೂಚಿಸುವುದು, ಮೌಖಿಕ ಹಾಗೂ ಬರಹ ರೂಪದ ವರದಿ ನೀಡುವುದು.

 ವಿಸ್ತರಣೆ ಹಾಗೂ ದೃಢೀಕರ: ಈ ಹಂತದಲ್ಲಿ ಸಂರಚಿಸಿದ ಜ್ಞಾನವನ್ನು ಹೆಚ್ಚಿಸುವ ಕಾರ್ಯವಾಗುತ್ತದೆ. ಸಂರಚಿತವಾದ ಜ್ಞಾನವನ್ನು ಇತರ ಜ್ಞಾನ/ಕಲಿಕಾ ಅನುಭವಗಳ ಜೊತೆಗೆ ಸಂಯೋಜಿಸಲಾಗುತ್ತದೆ. ಜ್ಞಾನದ ತಿಳುವಳಿಕೆಯನ್ನು ನಿತ್ಯ ಜೀವನದ ಸಂದರ್ಭದಲ್ಲಿ ಅನ್ವಯಿಸಿ ಸಮಸ್ಯೆಗೆ ಪರಿಹಾರವನ್ನು ಕಂಡುಕೊಳ್ಳುತ್ತಾರೆ. ಕಲಿಕಾರ್ಥಿಯು ಜ್ಞಾನ ಮತ್ತು ಕೌಶಲವನ್ನು ಅನ್ವಯಿಸುತ್ತಾ, ಅಗತ್ಯಕ್ಕೆ ತಕ್ಕಂತೆ ಬದಲಾಯಿಸುತ್ತಾರೆ. ಸಂದೇಶ/ವಿಷಯಗಳನ್ನು ಮತ್ತು ಅಭಿಪ್ರಾಯ/ಯೋಚನೆಗಳನ್ನು ಹಂಚಿಕೊಳ್ಳುವುದರ ಜೊತೆಗೆ ಪೂರಕವಾದ ಹೊಸ ಹೊಸ ಪ್ರಶ್ನೆಗಳನ್ನು ಕೇಳುವ ಮನೋಭಾವ ವೃದ್ಧಿಸುವುದಾಗಿದೆ.

ಮೌಲ್ಯಮಾಪನ: ಕಲಿಕೆಯ ಪ್ರತಿ ಹಂತದಲ್ಲಿಯೂ ಕಲಿಕಾರ್ಥಿಯು ಜ್ಞಾನ ಸಂಯೋಜನೆಯು ಯಾವ ಮಟ್ಟದಲ್ಲಿ ಆಗಿದೆ ಎಂಬುದರ ಮೌಲ್ಯಮಾಪನ ಮಾಡುವುದು ಈ ಹಂತದ ಕೆಲಸ. ಅದಕ್ಕಾಗಿ ನೂತನವಾಗಿ ಜಾರಿಗೆ ಬಂದಿರುವ ಸಿಸಿಇ ಯನ್ನು ಅಳವಡಿಸುವುದು. ಅದರಲ್ಲಿ ಮಗು ಹೇಗೆ ಕಲಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದೆ ಎಂಬುದನ್ನು ಚೆಕ್ ಲಿಸ್ಟ್ ಮುಖಾಂತರ ಗಮನಿಸುತ್ತಾ, ಸಮಸ್ಯೆ ಹಾಗೂ ಯೋಜನೆ ಒಳಗೊಂಡ ಕಲಿಕಾ ವಸ್ತುಗಳನ್ನು ನೀಡಲಾಗುತ್ತದೆ. ಕಲಿಕಾರ್ಥಿ ಸಂದರ್ಶನ ನಡೆಸುವುದು. ವಿವಿಧ ಸಾಧನ ತಂತ್ರಗಳನ್ನು ಬಳಸುವುದು. ಮುಂದಿನ ಕಲಿಕೆಗೆ ನೆರವಾಗುವಂತಹ ಮುಕ್ತ ಕಲಿಕಾ ಪ್ರಶ್ನೆಗಳನ್ನು ನೀಡುವುದು ಇಂತಹ ಇತರೆ ಚಟುವಟಿಕೆಗಳಿಂದ ಮಕ್ಕಳ ಕಲಿಕೆಯನ್ನು ಖಚಿತವಾಗಿ ಗುರುತಿಸಲಾಗುವುದು.

ಯಾವುದೇ ತರಗತಿಯಲ್ಲಾಗಲಿ ಮಗುವಿಗೆ ಬೋಧನೆ ಮಾಡುವಾಗ ಒಂದು ವಿಷಯವನ್ನು ಮರೆಯುವಂತಿಲ್ಲ. ಮಗುವಿನಲ್ಲಿ ಸೂಕ್ತ ಸಿದ್ಧತೆ ಇದ್ದರೆ ಮಾತ್ರ, ಅದು ಅಗತ್ಯ ವಿನ್ಯಾಸ ಹೊಂದಿದ್ದರೆ ಮಾತ್ರ ಬೋಧನೆ ಸಾಧ್ಯ. ಇಲ್ಲವಾದರೆ ನಾವು ಹೇಳಿಕೊಡಲು ಇಚ್ಛಿಸುವ ವಿಷಯವನ್ನು ಅದು ಅರ್ಥ ಮಾಡಿಕೊಳ್ಳಲಾರದು. ನಾವು ಬೋಧನೆಯ ಮೂಲಕ ಮಗುವಿನ ಮನಸ್ಸಿನಲ್ಲಿ ವಿನ್ಯಾಸಗಳನ್ನು ಹುಟ್ಟುಹಾಕಲು ಸಾಧ್ಯವಿಲ್ಲ. ವಿನ್ಯಾಸಗಳನ್ನು ಬದಲಾಯಿಸುವ ಪ್ರಯತ್ನವೂ ಫಲಕೊಡದಿರಬಹುದು. ಮಕ್ಕಳು ಈಗಾಗಲೇ ಸಿದ್ಧತೆ ಮಾಡಿಕೊಂಡಿರದ ವಿಷಯಗಳನ್ನು ಬಲವಂತವಾಗಿ ಕಲಿಸಿಕೊಡುವುದರ ಪರಿಣಾಮವನ್ನು ಇದು ಎತ್ತಿ ತೋರಿಸುತ್ತದೆ. ಮಕ್ಕಳು ಸುಮ್ಮನೆ ಹೊಂದಿಸಿಕೊಂಡು ಮಾದರಿಗಳನ್ನು ಅನುಕರಿಸುತ್ತಾ ಹೋಗಬಹುದು. ಆದರೆ ಈ ಪ್ರಕ್ರಿಯೆಗಳು ಮಕ್ಕಳು ಇತರರ ಭಾವನೆಗಳನ್ನು ಗ್ರಹಿಸುವ ಬೆಳವಣಿಗೆಯನ್ನು ಪೋಷಿಸುವುದಿಲ್ಲ. ಮಗುವಿನ ಸಹಜ ಬೆಳವಣಿಗೆಗೆ ಅಡ್ಡಿಯುಂಟುಮಾಡುತ್ತದೆ. ಇದಕ್ಕೆಲ್ಲಾ ಸೂಕ್ತವಾದ ಪರಹಾರವೇ ರಚನಾವಾದದ ಮೂಲಕ ಕಲಿಯುವುದು. ಈ ನಿಟ್ಟಿನಲ್ಲಿ ಎಲ್ಲಾ ಶಿಕ್ಷಕರು, ಶಿಕ್ಷಣಾಸಕ್ತರು ಇದನ್ನು ಸರಿಯಾಗಿ ಅರ್ಥ ಮಾಡಿಕೊಂಡು ಬಳಸಬೇಕಾಗಿದೆ.