Saturday, 1 May 2021

ಮಕ್ಕಳಿಗೆ ಧನಾತ್ಮಕ ಹಿಮ್ಮಾಹಿತಿ ನೀಡುವ ಬಗೆ...

ಮಕ್ಕಳಿಗೆ ಧನಾತ್ಮಕ ಹಿಮ್ಮಾಹಿತಿ ನೀಡುವ ಬಗೆ...
- ಡಾ.ಎಚ್.ಬಿ.ಚಂದ್ರಶೇಖರ್,  

ಅದೊಂದು ಏಳನೇ ತರಗತಿ. ಶಿಕ್ಷಕರು ಮೊದಲೇ ನೀಡಲ್ಪಟ್ಟ ವಿಷಯದ ಮೇಲೆ  ವಿದ್ಯಾರ್ಥಿಗಳು  ತಾವು  ತಯಾರಿಸಿದ  ಪ್ರಬಂಧವನ್ನು  ಇಡೀ ತರಗತಿಗೆ  ಮಂಡಿಸುತ್ತಿದ್ದರು.  ಆ  ವೇಳೆ  ಸಂಜಯನು  ಮಂಡಿಸಿದ ಹವಾಮಾನ ಮತ್ತು ವಾತಾವರಣ ವಿಷಯವು ಶಿಕ್ಷಕರಿಗೆ ಇಷ್ಟವಾಗದೇ, ಅವನು ತಯಾರಿಸಿದ ಪ್ರಬಂಧವನ್ನು ಹರಿದು ಹಾಕಿ, ನಿನ್ನ ಪ್ರಬಂಧ ಕೆಟ್ಟದಾಗಿದೆ.  ನೀನು  ಉಪಯೋಗಕ್ಕೆ  ಬಾರದವನು  ಎಂದೆಲ್ಲಾ  ಇಡೀ ತರಗತಿಯ  ಎಲ್ಲ  ವಿದ್ಯಾರ್ಥಿಗಳೆದುರು  ಬೈಯ್ದರು.  ಇಲ್ಲಿ  ಶಿಕ್ಷಕರ ಉದ್ದೇಶ  ಸಂಜಯನನ್ನು  ತಿದ್ದುವುದೇ  ಆಗಿದ್ದರೂ,  ಅವರು  ನೀಡಿದ ಹಿಮ್ಮಾಹಿತಿಯ ವಿಧಾನ ಮಾತ್ರ ಸಂಜಯನ ಮನಸ್ಸನ್ನು ಘಾಸಿಗೊಳಿಸಿ, ಅವನ ಆತ್ಮವಿಶ್ವಾಸವನ್ನು ಪಾತಾಳಕ್ಕೆ ತಳ್ಳಿದ್ದು ಸುಳ್ಳಲ್ಲ. ಆ ಘಟನೆಯನ್ನು ಸಂಜಯ ತನ್ನ ಇಡೀ ಜೀವನದಲ್ಲಿಯೇ ಮರೆಯದೇ, ಆ ಸನ್ನಿವೇಶ ನೆನಪಿಗೆ ಬಂದಾಗಲೆಲ್ಲಾ ಅವನ ಮನಸ್ಸು ಮುದುಡುತ್ತದೆ.

ಹೌದು!  ಮಕ್ಕಳ  ವರ್ತನೆಗಳನ್ನು  ತಿದ್ದುವ  ವೇಳೆ  ಮಕ್ಕಳ  ಕುರಿತಾಗಿ ನಾವು  ಎಷ್ಟೋ  ಬಾರಿ  ತೀರ್ಮಾನಗಳನ್ನೇ  ಕೈಗೊಂಡು  ಅವರ ವ್ಯಕ್ತಿತ್ವವನ್ನೇ  ನಿರ್ಧರಿಸಿ,  ಇವರು  ಹೀಗೆಯೇ  ಎಂದು  ಅವರ ಹಣೆಬರಹವನ್ನೇ ಬರೆದುಬಿಡುತ್ತೇವೆ. ಇದರಿಂದ ಅವರನ್ನು ತಿದ್ದುವಲ್ಲಿ ಅಥವಾ ವ್ಯಕ್ತಿತ್ವ ರೂಪಿಸುವಲ್ಲಿ ಉಪಯೋಗಕ್ಕಿಂತ ಹಾನಿಯೇ ಹೆಚ್ಚು. ಈ ರೀತಿ ಮಾಡುವುದರಿಂದ ಮಕ್ಕಳು ತಮ್ಮ ಸಹಜ ಸಾಮಥ್ರ್ಯಗಳನ್ನು ಪೂರ್ಣ  ರೀತಿಯಲ್ಲಿ  ಅಭಿವೃದ್ಧಿಪಡಿಸಿಕೊಳ್ಳಲು  ಸಾಧ್ಯವಾಗದೇ ನಾವು  ಅವರಿಗೆ  ನೀಡಲ್ಪಟ್ಟ  ವ್ಯಕ್ತಿತ್ವದ  ಕವಚಗಳನ್ನು  ಅವರು  ಕಿತ್ತು ಹೊರಬರಲಾರದೆ ಕೀಳರಿಮೆಯ ಮನೋಭಾವಗಳಲ್ಲಿಯೇ ಉಳಿದು, ಮುಂದುವರೆಯುತ್ತಾರೆ.

ಸಾಮಾನ್ಯವಾಗಿ ಮಕ್ಕಳ ಸಾಮಥ್ರ್ಯಗಳಿಗೆ ಹಾಗೂ ಅವರ ಮಿತಿಗಳಿಗೆ ನಾವು  ಹೇಗೆ  ಪ್ರತಿಕ್ರಿಯೆ  ತೋರುತ್ತೇವೆಂಬುದನ್ನು  ಗಮನಿಸೋಣ. ನನ್ನ  ಪರಿಚಿತರಿಗೆ  ಅವರ  ಮಕ್ಕಳ  ದೋಷಪೂರಿತ  ವರ್ತನೆಗಳಿಗೆ ಧನಾತ್ಮಕವಾಗಿ  ಹಿಮ್ಮಾಹಿತಿ  ನೀಡುವ  ಕುರಿತಂತೆ  ಪ್ರಸ್ತಾಪಿಸಿದಾಗ, ಅವರೂ    ಸಹಮತ  ವ್ಯಕ್ತಪಡಿಸಿ,    2-3  ದಿನ  ತಮ್ಮ  ಮಕ್ಕಳ  ತಪ್ಪು ವರ್ತನೆಗಳಿಗೆ ತಕ್ಷಣದ ಆತುರದ ಪ್ರತಿಕ್ರಿಯೆ ತೋರದೆ ಶಾಂತಿಯಿಂದ ವರ್ತಿಸಿ, ನಾಲ್ಕನೇ ದಿನ ಮಕ್ಕಳ ಅಶಿಸ್ತಿನ ವರ್ತನೆಗೆ ಯಥಾ ಪ್ರಕಾರ ಸಿಡಿಮಿಡಿಗೊಳ್ಳುತ್ತಾ, ಇದೆಲ್ಲಾ ಆಗದ ಕೆಲಸ, ಬಯ್ಯದಿದ್ದರೆ ಇವರೆಲ್ಲಿ ಕಲಿಯುತ್ತಾರೆ ಎಂದು ಅಸಹನೆ ತೋರಿದ್ದನ್ನು  ಅವರೇ ನನ್ನೊಂದಿಗೆ ಹಂಚಿಕೊಂಡಿದ್ದರು. ಅವರಂತೆಯೇ ಹೆಚ್ಚಿನವರು ಮಕ್ಕಳು ತೋರುವ ಮಿತಿಗಳಿಗೆ  ತಕ್ಷಣವೇ  ಪ್ರತಿಕ್ರಿಯಿಸುತ್ತಾರೆ.  ಇನ್ನು  ಕೆಲವು  ಶಿಕ್ಷಕರಂತೂ  ಮಕ್ಕಳಿಗೆ  ಚಿಕ್ಕ  ವಯಸ್ಸಿನಲ್ಲಿ  ಬೈಯ್ದು,  ಶಿಕ್ಷಿಸಿ,  ತಿದ್ದದಿದ್ದರೆ  ಅವರು ಹಾಳಾಗುತ್ತಾರೆ,  ಅವಕ್ಕೇನು  (ಮಕ್ಕಳಿಗೆ)  ತಿಳಿಯುತ್ತದೆ,  ಬೈದರೂ, ಹೋಗಳಿದರೂ  ಅವರಿಗೇನು  ಅನ್ನಿಸಲ್ಲ  ಎಂದು  ತಮ್ಮ  ಅಸಹನೆ ತೋರಿದ್ದೂ ಇದೆ.

ಮಕ್ಕಳ  ವರ್ತನೆ,  ಸಾಮಥ್ರ್ಯ,  ಮಿತಿಗಳಿಗೆ  ಹಣೆಪಟ್ಟಿ  ಹಚ್ಚದೇ ಮನೋವೈಜ್ಞಾನಿಕವಾಗಿ  ಯಾವ  ರೀತಿ  ಧನಾತ್ಮಕವಾಗಿ  ಹಿಮ್ಮಾಹಿತಿ ನೀಡಿದರೆ ಪರಿಣಾಮಕಾರಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯ. ಮಕ್ಕಳು ತೋರುವ ಸಮಂಜಸ ಅಥವಾ ಅಸಮರ್ಪಕವೆನಿಸುವ ವರ್ತನೆಗಳಿಗೆ ನಾವು ನೀಡುವ ಹೊಗಳಿಕೆ ಅಥವಾ ಟೀಕೆಗಳು ಮಕ್ಕಳ ಬೆಳವಣಿಗೆಯ ದೃಷ್ಟಿಯಿಂದ ಅತಿ ಅಗತ್ಯ ಮತ್ತು ಉಪಯುಕ್ತ. ಆದರೆ ಯಾವ  ರೀತಿಯಲ್ಲಿ  ಹೊಗಳಬೇಕು  ಮತ್ತು  ಟೀಕಿಸಿ,  ಹಿಮ್ಮಾಹಿತಿ ನೀಡಬೇಕು  ಎಂಬುದನ್ನು  ತಿಳಿಯುವ  ಅಗತ್ಯವಿದೆ.  ಉತ್ತಮ  ಸಾಧನೆ ತೋರುವ  ಮಕ್ಕಳಿಗೆ  ನಾವು  ಸ್ಮಾಟರ್್  ಎಂದು  ಪ್ರತಿಕ್ರಿಯಿಸುತ್ತೇವೆ. ಆದರೆ  ಮಕ್ಕಳ  ಸಾಮಥ್ರ್ಯವನ್ನು  ಹೊಗಳುವುದು  ತಜ್ಞರ  ಪ್ರಕಾರ ಉಪಯುಕ್ತವಾಗದು. ಈ ರೀತಿ ಸಾಮಾನ್ಯವಾಗಿ ಪ್ರತಿಕ್ರಿಯಿಸುವುದಕ್ಕಿಂತ ಮಕ್ಕಳ  ವರ್ತನೆಯ  ಯಾವ  ಅಂಶ  ಸ್ಮಾಟರ್್  ಅಥವಾ  ಉತ್ತಮ ಎಂದು  ಹಿಮ್ಮಾಹಿತಿ  ನೀಡುವುದು  ಪ್ರಯೋಜನಕಾರಿಯೆಂದು  ತಜ್ಞರು ಅಭಿಪ್ರಾಯಪಡುತ್ತಾರೆ.  ನಾವು  ಮಕ್ಕಳ  ಸಾಮಥ್ರ್ಯವನ್ನು  ಸ್ಮಾರ್ಟ್ ಅಥವಾ ಉತ್ತಮ ಎಂದು ಹೊಗಳಿದಲ್ಲಿ, ಭವಿಷ್ಯದಲ್ಲಿ ಬರುವ ಪ್ರಬಲ ಸವಾಲನ್ನು  ಮಕ್ಕಳು  ಎದುರಿಸಲು  ಕೆಲವೊಮ್ಮೆ  ವಿಫಲವಾದಲ್ಲಿ  ಆ ಮಕ್ಕಳಿಗೆ ತಮ್ಮ ಸಾಮಥ್ರ್ಯದ ಮೇಲೆ ಅಪನಂಬಿಕೆ ಉಂಟಾಗಿ ಅವರ ಆತ್ಮವಿಶ್ವಾಸದ  ಕುಸಿತಕ್ಕೂ  ಕಾರಣವಾಗಬಹುದು.  ಇದಕ್ಕೆ  ಬದಲಾಗಿ  ನಿಮ್ಮ  ಪ್ರಕಾರ  ಸ್ಮಾರ್ಟ್  ಎನಿಸಿಕೊಳ್ಳಲು  ಕಾರಣವಾದ  ಮಕ್ಕಳ ವರ್ತನೆಯನ್ನು  ನೀವು  ಗುರುತಿಸಿ,  ಆ  ವರ್ತನೆಯನ್ನೇ  ಸ್ಮಾರ್ಟ್ ಎನ್ನುವುದು  ಉಪಯುಕ್ತವಾಗುತ್ತದೆ.  ಭವಿಷ್ಯದಲ್ಲಿ  ಸವಾಲುಗಳನ್ನು ಎದುರಿಸುವ  ವೇಳೆಯಲ್ಲಿ  ನೀವು  ಗುರುತಿಸಿ,  ಹೊಗಳಿದ  ವರ್ತನೆಯ ಅಂಶದ ಎಳೆಯು ನೆನಪಿಗೆ ಬಂದು ಆ ಸವಾಲನ್ನು ಮಕ್ಕಳು ತಾವೇ ಪರಿಹರಿಸಿಕೊಳ್ಳಲು  ಅನುಕೂಲ  ಕಲ್ಪಿಸುತ್ತದೆ.  ಇದರಿಂದಾಗುವ ಇನ್ನೊಂದು  ಲಾಭವೆಂದರೆ  ಇತರೆ  ಮಕ್ಕಳಿಗೂ  ಸಹ  ಸ್ಮಾರ್ಟ್ ಎನಿಸಿಕೊಳ್ಳಲು  ಬೇಕಾದ  ವರ್ತನೆಯ  ಕುರಿತು  ಗಮನಹರಿಸಲು ಪರೋಕ್ಷವಾಗಿ ತಿಳಿಸಿದಂತಾಗುತ್ತದೆ.

ಅನೇಕ  ವೇಳೆ  ಮಕ್ಕಳ  ಅನೇಕ  ವರ್ತನೆಗಳಿಗೆ  ಸಮಂಜಸವಾಗಿ ಪ್ರತಿಕ್ರಿಯಿಸಲು ನಾವು ವಿಫಲರಾಗುತ್ತೇವೆ. ಇಂತಹ ವೇಳೆಯಲ್ಲಿ ಮಕ್ಕಳ ಕುರಿತಾಗಿ  ನಾವು  ಆಡುವ  ಮಾತುಗಳು  ಅಗತ್ಯವಾದಷ್ಟು  ಪರಿಣಾಮ ಬೀರುವುದಿಲ್ಲ.  ಈ  ಹಿನ್ನೆಲೆಯಲ್ಲಿ  ಮಕ್ಕಳ  ಮಿತಿಗಳನ್ನು  ತಿಳಿಸಲು  ನಾವು ಎಂತಹ ಹೇಳಿಕೆಗಳನ್ನು ಆಯ್ಕೆ ಮಾಡಿಕೊಳ್ಳುತ್ತೇವೆ ಎಂಬುದು ಮುಖ್ಯವಾಗುತ್ತದೆ.  ಮಕ್ಕಳ  ಮಿತಿಗಳ  ಅಥವಾ  ಸಾಮಥ್ರ್ಯಗಳ ಕುರಿತಂತೆ  ನಾವು  ಸಮಂಜಸವಾದ  ಹೇಳಿಕೆಗಳನ್ನು  ಆಯ್ಕೆ ಮಾಡಿಕೊಳ್ಳಬೇಕಾಗುತ್ತದೆ.  ಅಂತಹ  ಹೇಳಿಕೆಗಳ  ಮೂಲಕ  ನಾವು ನೀಡುವ ಹಿಮ್ಮಾಹಿತಿಯು ನೈಜವಾಗಿದ್ದು, ಅವರ ವೈಫಲ್ಯಗಳನ್ನೂ ಸಹ ಅವರ ಮನಸ್ಸನ್ನು ನೋಯಿಸದೇ ಸಮಂಜಸ ಹಾಗೂ ಧನಾತ್ಮಕವಾಗಿ ಅವರಿಗೆ  ತಿಳಿಸಿಕೊಡುವಂತಿರಬೇಕು.  ಮಕ್ಕಳಿಗೆ  ನಾವು  ನೀಡುವ ಹಿಮ್ಮಾಹಿತಿಯು ಖಚಿತ, ನಿರ್ಧಿಷ್ಟ ಮತ್ತು ವಸ್ತುನಿಷ್ಠವಾಗಿದ್ದಲ್ಲಿ, ಅದು ಪರಿಣಾಮಕಾರಿಯಾಗಿರುತ್ತದೆ.  ನಾವು  ನೀಡುವ  ಹಿಮ್ಮಾಹಿತಿಯು ಮಕ್ಕಳು  ನಿರ್ವಹಿಸುವ  ಕ್ರಿಯೆ  ಅಥವಾ  ತೋರುವ  ವರ್ತನೆಗಳಿಗೆ ನೀಡಬೇಕೇ ಹೊರತು ಮಕ್ಕಳನ್ನೇ ಗುರಿ ಮಾಡಿ, ನೀಡುವಂತಿರಬಾರದು.

ಕೆಲವೊಮ್ಮೆ  ಮಕ್ಕಳನ್ನು  ಸಮಾಧಾನಿಸಲು  ಅವರು  ಕಾರ್ಯ  ಸಾಧನೆ ಮಾಡದಿದ್ದರೂ  ಅವರನ್ನು  ತೃಪ್ತಿಪಡಿಸಲು  ನಾವು  ಅವರನ್ನು ಹೊಗಳುತ್ತೇವೆ. ಈ ರೀತಿಯ ಸುಳ್ಳು ಹೊಗಳಿಕೆಯಿಂದ  ಯಾವುದೇ ಪ್ರಯೋಜನ  ಉಂಟಾಗುವುದಿಲ್ಲ.  ಪರೀಕ್ಷೆಯಲ್ಲಿ  ಉತ್ತಮ  ಅಂಕ ಗಳಿಸದೇ  ಇದ್ದ  ಮಗುವಿಗೆ  ರಾಜ,  ನೀನು  ಎಷ್ಟು  ಚೆನ್ನಾಗಿ  ಓದಿದ್ದೆ, ಆದರೆ ಏನು ಮಾಡುವುದು. ಉತ್ತಮ ಫಲಿತಾಂಶ ಬರಲಿಲ್ಲ ಎಂದು ಹೇಳುವುದು ಸಮಂಜಸವಾಗಲಾರದು. ಇದಕ್ಕೆ ಬದಲಾಗಿ ಪರೀಕ್ಷೆಯಲ್ಲಿ ಕಡಿಮೆ  ಅಂಕ  ಬರಲು  ಇರಬಹುದಾದ  ಸಂಭವನೀಯ  ಕಾರಣಗಳ ಕುರಿತ  ವಿಶ್ಲೇಷಣೆಯನ್ನು  ಮಕ್ಕಳೇ  ಮಾಡಿಕೊಳ್ಳುವಂತೆ  ಸಹಾಯ ಮಾಡಿದಲ್ಲಿ,  ಮಕ್ಕಳು  ತಮ್ಮನ್ನು  ತಾವು  ಸುಧಾರಿಸಿಕೊಳ್ಳುವ  ನಿಟ್ಟಿನಲ್ಲಿ ಪರಿಣಾಮಕಾರಿಯಾಗಬಲ್ಲದು.

ಮಕ್ಕಳಿಗೆ ನೀಡುವ ಯಾವುದೇ ಹಿಮ್ಮಾಹಿತಿಯು ಪೂರ್ವಾಗ್ರಹಗಳಿಂದ ಮುಕ್ತವಾಗಿರಬೇಕು.  ನಿರ್ಧಿಷ್ಟ  ಉದ್ದೇಶ  ಹಾಗೂ  ಸ್ಪಷ್ಟತೆಯೊಂದಿಗೆ ಕೇಂದ್ರೀಕೃತಗೊಂಡ ಹಿಮ್ಮಾಹಿತಿಯು ಉಪಯುಕ್ತವಾಗುತ್ತದೆ. ಒಂದು ಮಗುವಿನ ವರ್ತನೆಯ ಆಧಾರದ ಮೇಲೆ ಇಡೀ ತರಗತಿಯ ಎಲ್ಲಾ ಮಕ್ಕಳಿಗೆ  ಒಂದೇ  ರೀತಿಯಲ್ಲಿ  ನಾವು  ಪ್ರತಿಕ್ರಿಯಿಸಿದಲ್ಲಿ  (ನೀವೆಲ್ಲಾ ತರಲೆಗಳು,  ನೀವು  ದಡ್ಡರು..ಇತ್ಯಾದಿ)  ಅಪಾಯಕಾರಿಯಾಗುತ್ತದೆ. ನಿರ್ಧಿಷ್ಟ  ವಿದ್ಯಾರ್ಥಿಯ  ಕ್ರಿಯೆ  ಅಥವಾ  ವರ್ತನೆಗಳ ಕುರಿತಾಗಿ  ನೀಡುವ  ಖಚಿತ  ಮತ್ತು  ನಿಧರ್ಿಷ್ಟ  ಹಿಮ್ಮಾಹಿತಿಯು ಪರಿಣಾಮಕಾರಿಯಾಗುತ್ತದೆ.  ನಾವು  ನೀಡುವ  ಹೇಳಿಕೆಗಳು  ಮಕ್ಕಳು ಆ  ಸನ್ನಿವೇಶಗಳಲ್ಲಿ  ತೋರುವ  ವರ್ತನೆಗಳಿಗೆ  ಮಾತ್ರ  ಗುರಿ ಮಾಡದೇ, ಅವರು ಹೇಗೆ ತಮ್ಮ ವರ್ತನೆ ಅಥವಾ ಕಾರ್ಯ ಅಥವಾ ಕ್ರಿಯೆಗಳನ್ನು ಮಾರ್ಪಡಿಸಿಕೊಳ್ಳಬಹುದೆಂಬುದನ್ನು ವಿವರಿಸಿದಲ್ಲಿ ನಮ್ಮ ಹಿಮ್ಮಾಹಿತಿಯು ಹೆಚ್ಚು ಶಕ್ತಿಶಾಲಿಯಾಗುತ್ತದೆ.

ಪೋಷಕರಾಗಲಿ  ಅಥವಾ  ಶಿಕ್ಷಕರಾಗಲಿ  ಅವರ  ನಿರೀಕ್ಷೆಗಳನ್ನು ಮೊದಲೇ  ಹಂಚಿಕೊಂಡಲ್ಲಿ  ಮಕ್ಕಳ  ವರ್ತನೆಗಳನ್ನು  ತಿದ್ದಲು ಸುಲಭವಾಗುತ್ತದೆ. ಹೆಚ್ಚಿನ ವೇಳೆಯಲ್ಲಿ ನಾವು ಹಲವು ನಿರೀಕ್ಷೆಗಳನ್ನು ನಮ್ಮ  ಮನದೊಳಗೇ  ಇಟ್ಟುಕೊಂಡು  ಆ  ನಿರೀಕ್ಷೆಗಳಿಗೆ  ಪೂರಕವಾಗಿ ಮಕ್ಕಳು  ವರ್ತಿಸಬೇಕೆಂದುಕೊಳ್ಳುತ್ತೇವೆ.  ಆದರೆ  ನಮ್ಮ  ನಿರೀಕ್ಷೆಗಳನ್ನು ಅರಿಯದ  ಮಕ್ಕಳು  ಬೇರೆ  ರೀತಿಯಲ್ಲಿ  ವರ್ತಿಸಿದಾಗ  ನಾವು ತಕ್ಷಣಕ್ಕೆ  ಅಸಮಾಧಾನಕ್ಕೊಳಗಾಗುತ್ತೇವೆ.  ಇದಕ್ಕೆ  ಬದಲಾಗಿ  ಮಕ್ಕಳ ಕುರಿತಾದ  ನಮ್ಮ  ನಿರೀಕ್ಷೆಗಳ  ಬಗ್ಗೆ  ಮುಕ್ತವಾಗಿ  ಚರ್ಚಿಸಿದಲ್ಲಿ  ಮಕ್ಕಳ ವರ್ತನೆಗಳಲ್ಲಿ  ಗಮನಾರ್ಹ  ಮಾರ್ಪಾಡನ್ನು  ಕಾಣಲು  ಸಾಧ್ಯವಿದೆ. ಇದರ ಜೊತೆ ಮಕ್ಕಳ ಕುರಿತಾಗಿ ವಿಪರೀತವೆನಿಸುವಷ್ಟು ನಿರೀಕ್ಷೆಯೂ ಸಹ  ಸಲ್ಲದು.  ಮಕ್ಕಳ  ಕುರಿತಾದ  ನಮ್ಮ  ನಿರೀಕ್ಷೆಗಳು  ಮಕ್ಕಳ  ಆಸಕ್ತಿ ಹಾಗೂ ಸಾಮಥ್ರ್ಯಗಳಿಗೆ ಅನುಗುಣವಾಗಿವೆಯೇ ಎಂಬುದನ್ನೂ ಸಹ ಗಮನಿಸಿಕೊಳ್ಳುವುದು ಮುಖ್ಯವಾದುದಾಗಿದೆ.

ಹಿರಿಯರಾದ  ನಾವು  ಮಕ್ಕಳಿಗೆ  ಹಚ್ಚುವ  ವಿವಿಧ  ರೀತಿಯ ಹಣೆಪಟ್ಟಿಗಳಿಂದ  ಅವರು  ಅನುಭವಿಸುವ  ತೊಂದರೆಗಳ  ಕುರಿತಂತೆ ಚರ್ಚೆ ಮಾಡುವುದು  ಅಗತ್ಯ.  ಎಷ್ಟೋ  ವೇಳೆ  ನಾವು  ಲಘುವಾಗಿ ಮಕ್ಕಳ  ಕುರಿತಾಗಿ  ನೀಡುವ  ಹೇಳಿಕೆಗಳು  ಅವರ  ಭವಿಷ್ಯವನ್ನೇ ಮಸುಕು  ಮಾಡಬಹುದು.  ಇಂತಹ  ಸನ್ನಿವೇಶದಲ್ಲಿ  ಈ  ಕುರಿತಂತೆ ಚರ್ಚೆಯಾಗದೇ  ಇದ್ದರೆ  ಪರಿಹಾರ  ಹೇಗೆ?  ಮಕ್ಕಳು  ತಮ್ಮ ಸಮಸ್ಯೆಗಳನ್ನು  ತಾವೇ  ಪರಿಹರಿಸಿಕೊಳ್ಳಲಾರರು.  ಅವರ  ಧ್ವನಿಯಾಗಿ ಸಮಾಜದಲ್ಲಿ  ವಯಸ್ಕರೇ  ಕಾರ್ಯನಿರ್ವಹಿಸಬೇಕಾಗುತ್ತದೆ.  ಮಕ್ಕಳ ಸಂಕಷ್ಟಗಳ ಕುರಿತು ಹೆಚ್ಚಿನ ಚರ್ಚೆಗಳು ಅವಶ್ಯವಿವೆ. ಇಂತಹ ಚರ್ಚೆಗಳು ಮಕ್ಕಳ  ಕುರಿತಂತೆ  ಹಲವಾರು  ವರ್ಷಗಳ  ಕಾಲ  ಸ್ಥಾಪಿತಗೊಂಡ ಮನೋಭಾವಗಳ  ಬದಲಾವಣೆಗೆ  ಅನುಕೂಲ  ಕಲ್ಪಿಸುತ್ತವೆ.  ಮಕ್ಕಳ ಕುರಿತಂತೆ ನಮ್ಮ ನಂಬಿಕೆ ಮತ್ತು ಮನೋಭಾವಗಳಲ್ಲಿ ಬದಲಾವಣೆಗಳ ಅವಶ್ಯವಿದೆ. ಮಕ್ಕಳಿಗೆ ಹಿಮ್ಮಾಹಿತಿ ನೀಡುವಾಗ ಹೆಚ್ಚಿನ ತಾಳ್ಮೆ ಮತ್ತು ಸಮಾಧಾನಗಳು  ಅಗತ್ಯ.  ಕೆಲವೊಮ್ಮೆ  ಅಗತ್ಯ  ಸಂದರ್ಭಗಳಲ್ಲಿ ಹಿಮ್ಮಾಹಿತಿ ನೀಡುವಾಗ ಖಾಸಗಿಯಾಗಿ ಹಿಮ್ಮಾಹಿತಿ ನೀಡಿದಲ್ಲಿ ಇತರೆ ಸ್ನೇಹಿತರೆದುರು  ಮುಜುಗರಕ್ಕೊಳಗಾಗುವುದು  ತಪ್ಪುತ್ತದೆ.  ಒಟ್ಟಿನಲ್ಲಿ ಮಕ್ಕಳನ್ನು ರೂಪಿಸುವಲ್ಲಿ ನಾವು ನೀಡುವ ಧನಾತ್ಮಕ ಹಿಮ್ಮಾಹಿತಿಯು ಪ್ರಾಮುಖ್ಯತೆ ಹೊಂದಿದೆ, ಈ ನಿಟ್ಟಿನಲ್ಲಿ ಪ್ರಯತ್ನಿಸಬಹುದಲ್ಲವೇ