Saturday 17 April 2021

ಕಾಯಕಯೋಗಿ ಶಿಕ್ಷಕ, ನಿಂಗಪ್ಪ ಮುಂಗೊಂಡಿ,ಲೇಖನ-ಪ್ರಭು ಕಾನಾಪುರೆ,



 ಕಾಯಕಯೋಗಿ ಶಿಕ್ಷಕ, ನಿಂಗಪ್ಪ ಮುಂಗೊಂಡಿ,
ಲೇಖನ-ಪ್ರಭು ಕಾನಾಪುರೆ,

ಒಳ್ಳೆಯ ಮನಸ್ಸು, ಆತ್ಮವಿಶ್ವಾಸ, ಸತತ ಪ್ರಯತ್ನ, ನಿರಂತರ ಪರಿಶ್ರಮ, ಒಳ್ಳೆಯ ಆಲೋಚನೆ, ಉತ್ತಮ ಚಿಂತನೆ, ಪ್ರಾಮಾಣಿಕತೆ ಮತ್ತು ಸದ್ಗುಣಗಳು ಇವು ಕ್ರಿಯಾಶೀಲ ವ್ಯಕ್ತಿತ್ವದ ಲಕ್ಷಣಗಳು. ಇಂಥ ವ್ಯಕ್ತಿತ್ವವನ್ನು ಹೊಂದಿದ ಯಾವುದೇ ವ್ಯಕ್ತಿ ಸುಮ್ಮನೆ ಕುಳಿತು ಕಾಲಹರಣ ಮಾಡುವುದಿಲ್ಲ. ಆತ ಒಂದಿಲ್ಲೊಂದು ಚಟುವಟಿಕೆಯಲ್ಲಿ ತನ್ನನ್ನು ತಾನು ತೊಡಗಿಸಿಕೊಂಡಿರುತ್ತಾನೆ. ತಾನು ಬದುಕುವುದಲ್ಲದೆ ಇತರರನ್ನು ಬದುಕುವಂತೆ ಮಾಡುತ್ತಾನೆ. ಇಂಥ ವ್ಯಕ್ತಿಗಳು ಅಲ್ಲಲ್ಲಿ ಎಲೆ ಮರೆಯ ಕಾಯಿಯಂತೆ, ನೆಲದ ಮರೆಯ ನಿಧಾನದಂತೆ ತಮ್ಮಷ್ಟಕ್ಕೆ ತಾವೆ ಕೆಲಸ ಮಾಡುತ್ತಿರುತ್ತಾರೆ.

ಆಳಂದ ತಾಲೂಕಿನ ಬೋಳಣಿ ಗ್ರಾಮದ ಸರಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕ ನಿಂಗಪ್ಪ ಮುಂಗೊಂಡಿ ಇದಕ್ಕೆ ಒಳ್ಳೆಯ ಉದಾಹರಣೆ. ಶಿಕ್ಷಕನಾಗಿ ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ತನ್ನನ್ನು ಸೀಮಿತಗೊಳಿಸಿಕೊಳ್ಳದೆ ತಮ್ಮ ಗ್ರಾಮದಲ್ಲಿ ಸಮುದಾಯದ ಸಹಕಾರದೊಂದಿಗೆ ಶೌಚಾಲಯ ನಿರ್ಮಾಣ, ಮಾನವ ತ್ಯಾಜ್ಯದಿಂದ ಜೈವಿಕ ಅನಿಲ ಘಟಕಗಳನ್ನು ನಿರ್ಮಿಸಿ, ಹೊಗೆಮುಕ್ತ ಮನೆಯನ್ನು ಸೃಷ್ಟಿಸಿದ್ದಲ್ಲದೆ, ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮಹತ್ತರ ಕಾರ್ಯವನ್ನು ಮಾಡಿ ತೋರಿಸಿದ್ದಾರೆ. ಜನರು ಬರಗಾಲದಲ್ಲಿ ನಗರ ಪಟ್ಟಣಗಳಿಗೆ ಕೆಲಸ ಹುಡುಕಿಕೊಂಡು ವಲಸೆ ಹೋಗುವುದನ್ನು ಬಿಡಿಸಿ ಅವರ ಕೈಗಳಿಗೆ ಕೆಲಸ ಕೊಡಿಸಿದ್ದಾರೆ. ಸದಾ ಜನರೊಂದಿಗೆ, ಮಕ್ಕಳೊಂದಿಗೆ ಒಂದಿಲ್ಲೊಂದು ಕಾರ್ಯ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕ ಶ್ರೀ ನಿಂಗಪ್ಪ ಮುಂಗೊಂಡಿ ಸರಕಾರದ ಸವಲತ್ತುಗಳನ್ನು ಸದುಪಯೋಗ ಪಡೆದುಕೊಳ್ಳುವುದು, ಅವುಗಳ ಬಗೆಗೆ ರೈತರಿಗೆ ತಿಳುವಳಿಕೆ ನೀಡುವುದು ಸ್ವತಃ ಮುಂದಾಗಿ ಜವಾಬ್ದಾರಿ ಹೊತ್ತುಕೊಂಡು ದುಡಿಯುವುದನ್ನು ಬದುಕಿನ ಒಂದು ಭಾಗವಾಗಿ ಮಾಡಿಕೊಂಡಿದ್ದಾರೆ.

ಆಳಂದ ತಾಲೂಕಿನ ಮುನ್ನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಗೆ ನಿಂಗಪ್ಪ ಮುಂಗೊಂಡಿ ವರ್ಗವಾಗಿ ಬಂದಾಗ ಅದು ಹೆಸರಿಗೆ ಮಾತ್ರ ಶಾಲೆಯಾಗಿತ್ತು. ಹರಕು ಮುರುಕು ಕಟ್ಟಡ, ಖಾಲಿ ಕೋಣೆಗಳು, ಮಕ್ಕಳ ಸಂಖ್ಯೆ ತೀರಾ ಕಡಿಮೆ. ಮಕ್ಕಳ ಹಾಜರಾತಿ ಬೆರಳೆಣಿಕೆಯಷ್ಟು, ಶಿಕ್ಷಕರ ಗೈರುಹಾಜರಿ. ಸರಕಾರಿ ಶಾಲೆಯೆಂದರೆ ಅದರೆಲ್ಲ ಜವಾಬ್ದಾರಿ ಸರಕಾರದ್ದು ಶಾಲೆಗೂ ನಮಗೂ ಯಾವ ಸಂಬಂಧವಿಲ್ಲವೆಂಬ ಭಾವನೆ ಊರವರಲ್ಲಿ ಮನೆ ಮಾಡಿಕೊಂಡಿತ್ತು. ಶಾಲೆಯ ಆವರಣ ಕಸದ ಕುಪ್ಪೆಯಾಗಿತ್ತು, ಮಕ್ಕಳಿಗೆ ಕುಡಿಯುವ ನೀರಿನ ವ್ಯವಸ್ಥೆಯಿರಲಿಲ್ಲ, ಸರಿಯಾದ ಕಟ್ಟಡವಿರಲ್ಲಿಲ್ಲ, ಶೌಚಾಲಯವಂತೂ ಕೇಳಲೇಬೇಡಿ. ಗ್ರಾಮ ಪಂಚಾಯಿತಿ, ಎಸ್ಡಿಎಮ್ಸಿಯವರ ಮತ್ತು ಸಮುದಾಯದ ಸಹಕಾರ ಎಳ್ಳಷ್ಟೂ ಇರಲಿಲ್ಲ. ಮುಖ್ಯಗುರುಗಳ ನಿರಂತರ ಗೈರುಹಾಜರಿ, ಮಕ್ಕಳ ಶಿಷ್ಯವೇತನ ಕೊಡದೆ ಹಣ ದರುಪಯೋಗ ಮಾಡಿಕೊಂಡ ಕಾರಣಕ್ಕೆ ಅಮಾನತುಗೊಂಡರು. ಗ್ರಾಮವಂತೂ ರಾಜಕೀಯ ಕೇಂದ್ರವಾಗಿತ್ತು. ಶಾಲೆಯು ಅದರ ಒಂದು ಭಾಗವಾಗಿತ್ತು. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ 2003ರಲ್ಲಿ ನಿಂಗಪ್ಪ ಮುಂಗೊಂಡಿ ಪ್ರಭಾರಿ ಮುಖ್ಯಗುರುಗಳಾಗಿ ನೇಮಕಗೊಂಡರು. ಅಂದಿನಿಂದ ಬದಲಾವಣೆಯ ಗಾಳಿ ಬೀಸತೊಡಗಿತು.

 ನಿಂಗಪ್ಪ ತಮ್ಮ ಅಧಿಕಾರಾವಧಿಯಲ್ಲಿ ಮುನ್ನಹಳ್ಳಿ ಶಾಲೆಯನ್ನು ತಾಲೂಕಿನಲಿಯೇ ಅತ್ಯುತ್ತಮ ಮಾದರಿ ಶಾಲೆಯಾಗಿ ಮಾಡಬೇಕೆಂಬ ಕನಸು ಹೊತ್ತು ಸಮುದಾಯದ ಸಹಭಾಗಿತ್ವದಲ್ಲಿ ಅನೇಕ ಸುಧಾರಣಾ ಕಾರ್ಯಗಳನ್ನು ಕೈಗೆತ್ತಿಕೊಂಡರು. 2004-2005ರಲ್ಲಿ ಶಾಲೆಬಿಟ್ಟ ಮಕ್ಕಳನ್ನು ಗುರುತಿಸಿದರು. ಎಸ್ಡಿಎಂಸಿಯಿಂದ ಸ್ವಯಂಪ್ರೇರಕರನ್ನು ನೇಮಿಸಿಕೊಂಡರು. ಎಸ್ಡಿಎಂಸಿ ಅಧ್ಯಕ್ಷ, ಸದಸ್ಯರಿಂದ ಮತ್ತು ಸಮುದಾಯದವರಿಂದ ದೇಣಿಗೆ ಸಂಗ್ರಹಿಸಿದರು. 2005ರಲ್ಲಿ ಶಾಲೆಬಿಟ್ಟ 44 ಮಕ್ಕಳನ್ನು ಗುರುತಿಸಿ ಅವರಿಗೆ ಏಪ್ರಿಲ್ ತಿಂಗಳಲ್ಲಿ ಬೇಸಿಗೆ ಶಿಬಿರ ಏರ್ಪಡಿಸಿದರು. ಸರ್ವ ಶಿಕ್ಷಣ ಅಭಿಯಾನದ ಅಡಿಯಲ್ಲಿ ಹಲವಾರು ಜನಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡರು, ಎಸ್ಡಿಎಂಸಿ ಮತ್ತು ಗ್ರಾಮ ಪಂಚಾಯಿತಿ ಸದಸ್ಯರಿಗೆ ತರಬೇತಿ ನೀಡಿದರು, ಶಾಲಾ ದತ್ತು ಯೋಜನೆ, ಸಮುದಾಯದತ್ತ ಶಾಲೆ ಕಾರ್ಯಕ್ರಮ ಹಮ್ಮಿಕೊಂಡರು, ದಾಖಲಾತಿ ಅಂದೋಲನ ಪ್ರಾರಂಭಿಸಿ ಮನೆಮನೆಗೆ ಹೋಗಿ ಸಮೀಕ್ಷೆ ಮಾಡಿದರು, ಸಿವಿಲ್ ಕಾಮಗಾರಿ ಮತ್ತು ನಿರ್ಮಾಣ ಕುರಿತು ತರಬೇತಿ ಹಾಗೂ ಮಾರ್ಗದರ್ಶನ ನೀಡಿದರು, ಎಸ್ಡಿಎಂಸಿಯಿಂದಲೆ ಶಾಲೆಯ ಕಟ್ಟಡದ ಸಿವಿಲ್ ಕಾಮಗಾರಿ ನಿರ್ಮಾಣ ಮತ್ತು ಉಸ್ತುವಾರಿ ವಹಿಸುವಂತೆ ಮಾಡಿದರು. ಶಾಲೆಯ ಶೈಕ್ಷಣಿಕ ಪ್ರಗತಿ ಪರಿಶೀಲನೆ, ಶಿಕ್ಷಕರ ಹಾಜರಾತಿ ಮತ್ತು ಕಾರ್ಯಕ್ಷಮತೆಯ ಪರಿಶೀಲನೆ ಪರಿಣಾಮಕಾರಿಯಾಗಿ ಮಾಡಿದರು. ಈ ಎಲ್ಲ ಕಾರ್ಯಕ್ರಮಗಳ ಫಲವಾಗಿ 2005ರಲ್ಲಿ ಶೇಕಡಾ ನೂರಕ್ಕೆ ನೂರರಷ್ಟು ಮಕ್ಕಳ ದಾಖಲಾತಿ ಮತ್ತು ಶೇಕಡಾ 99.61 ಹಾಜರಾತಿ ಆಗುವಂತೆ ನೋಡಿಕೊಂಡರು. 2004ರಲ್ಲಿ ಕೇವಲ ಶೇಕಡಾ 4 ರಷ್ಟಿದ್ದ ಕಲಿಕಾ ಸಾಮಥ್ರ್ಯ 2005ರಲ್ಲಿ ಶೇಕಡಾ 92.28ಕ್ಕೆ ಏರಿತು. 2005ರಲ್ಲಿ ಕಲಿಕಾ ಖಾತರಿ ಅಡಿಯಲ್ಲಿ ಅಜೀಂ ಪ್ರೇಮ್ಜೀ ಫೌಂಢೇಶನ್ನಿನ ಎನ್.ಸಿ.ಇ.ಆರ್.ಟಿ. ತಂಡ ಶಾಲೆಗೆ ಭೇಟಿ ನೀಡಿ, ಶಾಲೆಯ ಚಟುವಟಿಕೆಗಳನ್ನು ಪರಿಶೀಲಿಸಿ ಎ ಗ್ರೇಡ್ ಶಾಲೆಯೆಂದು 60,000 ರೂ.ಗಳ ನಗದು ಅನುದಾನ ಪಡೆದಿದೆ. ಮೂರು ವರ್ಷ ಸತತವಾಗಿ ಬೇಸಿಗೆಯಲ್ಲಿ ರಜಾ ದಿನಗಳಲ್ಲಿಯೂ ಮೂರು ತಿಂಗಳ ಶಾಲೆ ನಡೆಸಿದರು. ಮುಂಜಾನೆ 9.00 ರಿಂದ 2.00 ಗಂಟೆಯವರೆಗೆ ಶಾಲೆ ನಡೆಸಲಾಯಿತು. ಮಕ್ಕಳಿಗಾಗಿ ಚೈತ್ರದ ಚಿಗುರು ಬೇಸಿಗೆ ಶಿಬಿರವನ್ನು ಆಯೋಜಿಸಿದರು. ಸ್ತ್ರೀ ಪರುಷರೆಂಬ ಭೇದವನ್ನು ಮಕ್ಕಳ ಮನಸಿನಲ್ಲಿ ಮೂಡಬಾರದೆಂದು ಲಿಂಗತ್ವ ತರಬೇತಿ ಮತ್ತು ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ಯೇಶದಿಂದ ಮೂಢನಂಬಿಕೆ ಪ್ರಗತಿಗೆ ಮಾರಕ ಈ ವಿಷಯಗಳ ಕುರಿತು ವಿಚಾರ ಸಂಕಿರಣವನ್ನು ಏರ್ಪಡಿಸಿದರು. ಸಂಪೂರ್ಣ ಜವಾಬ್ದಾರಿ ಹೊತ್ತು ಶಾಲೆ ಆವರಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನವನ್ನು ಮಾಡಿದರು. ಇಂಥ ಹತ್ತು ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಮಕ್ಕಳು ಮತ್ತು ಊರವರಿಗೆ ಅದರ ಉಪಯೋಗವಾಗುವಂತೆ ಮಾಡಿದರು. ಉತ್ತಮ ಶಿಕ್ಷಣ ಪ್ರಶಸ್ತಿಗಳನ್ನು ಪಡೆದ ಶಿಕ್ಷಕರಿರುವ ಈ ಶಾಲೆ ಎಷ್ಟು ಜನಪ್ರಿಯವಾಗಿತ್ತೆಂದರೆ ಊರಲ್ಲಿ ಖಾಸಗಿ ಶಾಲೆಯ ಸ್ಥಾಪನೆಗೆ ಗ್ರಾಮಸ್ಥರು ವಿರೋಧಿಸಿದರು.

ಮುಂಜಾನೆ ಎಂಟು ಗಂಟೆಯಿಂದ ರಾತ್ರಿ ಏಳೆಂಟು ಗಂಟೆಯವರೆಗೆ ಶಾಲೆಯಲ್ಲಿದ್ದು ಮಕ್ಕಳ ಜೊತೆಗೆ, ಎಸ್ಡಿಎಂಸಿಯವರೊಂದಿಗೆ ಯುವಕರೊಂದಿಗೆ ಶಾಲೆಯ ಆವರಣ ಸ್ವಚ್ಛಗೊಳಿಸುವುದು, ಉದ್ಯಾನದಲ್ಲಿ ಕಸ ಕೀಳುವ ಕೆಲಸ ಮಾಡುತ್ತಿದ್ದರು. ಸ್ವಸ್ತ್ ಪ್ಲಸ್ ಸಂಸ್ಥೆಯ ಕೊಡುಗೆಯಾಗಿ ಜೈವಿಕ ಸಸ್ಯಪಾಲನೆಗಾಗಿ ಶಾಲೆ ಆವರಣದಲ್ಲಿ ಕೈತೋಟ ಮಾಡಿ ಯಾವುದೇ ರಾಸಾಯನಿಕ ಬಳಸದೆ ಮೆಂತ್ಯ, ಸಬಸಿಪಲ್ಲೆ, ಕೊತ್ತಂಬರಿ ಇತ್ಯಾದಿ ಪಲ್ಲೆಗಳನ್ನು ಬೆಳೆದು ಅಕ್ಷರ ದಾಸೋಹಕ್ಕೆ ಬಳಸುತ್ತಿದ್ದರು. ಸ್ವಸ್ತ್ ಪ್ಲಸ್ ಮತ್ತು ಎನ್.ಪಿ.ಇ.ಜಿ.ಇ.ಎಲ್. ಸಂಸ್ಥೆಯವರು ಕೈಗೊಂಡ ನೂತನ ಯೋಜನೆಯಗಳಲ್ಲಿ ನಲಿ-ಕಲಿ ಪಾಠ ಕಾರ್ಯಕ್ರಮ ಈ ಶಾಲೆಯಲ್ಲಿ ನೂರಕ್ಕೆ ನೂರರಷ್ಟು ಅನುಷ್ಠಾನಗೊಂಡಿತು. ಕ್ರೀಡೆಯಲ್ಲಿಯೂ ಈ ಶಾಲೆ ಹಿಂದೆ ಬಿದ್ದಿಲ್ಲ. ತಾಲೂಕಾ ಮಟ್ಟದ ಖೋಖೋ ಸ್ಪರ್ಧೆಯಲ್ಲಿ ಪ್ರಥಮ ಮತ್ತು ಜಿಲ್ಲಾಮಟ್ಟದಲ್ಲಿ ದ್ವಿತೀಯ ಸ್ಥಾನವನ್ನು ಪಡೆದಿದೆ. ಆದಿತ್ಯ ಎಂಬ ವಿದ್ಯಾಥರ್ಿ ಕರಾಟೆಯಲ್ಲಿ ರಾಜ್ಯಮಟ್ಟದ ಪ್ರಶಸ್ತಿ ಪಡೆದಿದ್ದಾನೆ.

ಇಂಥ ಅಪರೂಪ ವ್ಯಕ್ತಿಯಾದ ಶಿಕ್ಷಕ ಶ್ರೀ ನಿಂಗಪ್ಪ ಮುಂಗೊಂಡಿ ಹುಟ್ಟಿದ್ದು ಕಲಬುರ್ಗಿ ಜಿಲ್ಲೆಯ ಆಳಂದ ತಾಲೂಕಿನ ಚಿಕ್ಕಹಳ್ಳಿ ಗುಂಜಬಬಲಾದ ಗ್ರಾಮದಲ್ಲಿ, ಸೆಪ್ಟೆಂಬರ್ 12, 1967ರಂದು. ಕೇವಲ 100-150 ಮನೆಗಳಿರುವ ತಾಲೂಕಾ ಸ್ಥಳದಿಂದ 20- 25 ಕಿ.ಮೀ. ದೂರದಲ್ಲಿರುವ, ಹೋಗಿ ಬರುವ ಯಾವುದೇ ಸೌಲಭ್ಯಗಳಿಲ್ಲದ ಒಂದು ಕಗ್ಗಳ್ಳಿ. ಸರಿಯಾದ ರಸ್ತೆಗಳಿರಲಿಲ್ಲ, ಬಸ್ಸಿನ ಸೌಕರ್ಯವಿರಲಿಲ್ಲ. ಕೇವಲ 4ನೇ ತರಗತಿಯವರೆಗೆ ಮಾತ್ರ ಶಾಲೆ. ಇಂಥ ಪ್ರತಿಕೂಲ ಪರಿಸ್ಥಿತಿಯಲ್ಲಿ ನಿಂಗಪ್ಪ ಮುಂಗೊಂಡಿ ಶಿಕ್ಷಣ ಪಡೆದಿದ್ದೆ ಒಂದು ಸಾಹಸದ ಕೆಲಸ. ಗುಂಜಬಬಲಾದದಿಂದ 7 ಕಿ.ಮೀ. ದೂರದಲ್ಲಿರುವ ನರೋಣ ಗ್ರಾಮಕ್ಕೆ ಹೋಗಿ ಶಿಕ್ಷಣ ಪಡೆಯಬೇಕು. ದಿನಾಲು ನರೋಣಾಕ್ಕೆ ನಡೆದುಕೊಂಡು ಹೋಗಿ 5ನೇ ತರಗತಿಯಿಂದ 10ನೇ ತರಗತಿಯವರೆಗೆ 5 ವರ್ಷ ಚಳಿ, ಮಳೆ, ಬಿಸಿಲೆನ್ನದೆ ಬಾಲಕ ನಿಂಗಪ್ಪ ಗೆಳೆಯರೊಂದಿಗೆ ದಿನಾಲು 14 ಕಿ.ಮೀ. ನಡೆದುಕೊಂಡು ಹೋಗಿ ಶಾಲೆ ಕಲಿತ. ಅನೇಕ ತೊಂದರೆಗಳನ್ನು ಎದುರಿಸಿ, ಛಲ ಬಿಡದೆ ಎಸ್.ಎಸ್.ಎಲ್.ಸಿ. ಪಾಸಾಗಿ. ಕಲಬುಗರ್ಿಯ ಪ್ರಾಕ್ಟೀಸಿಂಗ್ ಶಾಲೆಯಲ್ಲಿ ಟಿ.ಸಿ.ಎಚ್. ಮತ್ತು ಎಸ್.ಬಿ. ಕಾಲೇಜಿನಲ್ಲಿ ಬಿ.ಎ. ಮುಗಿಸಿದರು.

1995ರಲ್ಲಿ ಆಳಂದ ಮುನ್ನಹಳ್ಳಿ ಸರಕಾರಿ ಪ್ರಾಥಮಿಕ ಶಾಲೆಯ ಸಹಶಿಕ್ಷಕರಾಗಿ ವರ್ಗವಾಗಿ ಬಂದರು. ಇದಕ್ಕೂ ಮೊದಲು ಒಂದು ವರ್ಷ ಬಿ.ಎಂ.ಟಿ.ಸಿ. ಬೆಂಗಳೂರಿನ ಸಾರಿಗೆ ಇಲಾಖೆಯಲ್ಲಿ ಬಸ್ ಕಂಡಕ್ಟರಾಗಿ ಸೇವೆ ಸಲ್ಲಿಸಿದರು. ಮುಂದೆ ಶಿಕ್ಷಕರಾಗಿ ಚಿತಾಪೂರ ತಾಲೂಕಿ ಹಣಕೇರಾ ತಾಂಡಾದಲ್ಲಿ ಸಹಶಿಕ್ಷಕರಾಗಿ ಸೇರಿದರು. 1995ರಿಂದ 2012ರವರೆಗೆ ಮುನ್ನಹಳ್ಳಿಯಲ್ಲಿ ಸೇವೆ ಸಲ್ಲಿಸಿದರು ಅದರಲ್ಲಿ 2003 ರಿಂದ 2005 ರವರೆಗೆ ಪ್ರಭಾರಿ ಮುಖ್ಯಗುರುಗಳಾಗಿದ್ದರು. ನಂತರ 2012ರಿಂದ ಆಳಂದ ತಾಲೂಕಿನ ಬೋಳನಿ ಗ್ರಾಮದಲ್ಲಿ ಸಹಶಿಕ್ಷಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

ನಿಂಗಪ್ಪ ಮುಂಗೊಂಡಿ ತಮ್ಮ ಕೆಲಸವನ್ನು ಕೇವಲ ಶೈಕ್ಷಣಿಕ ಕ್ಷೇತ್ರಕ್ಕೆ ಮಾತ್ರ ಸೀಮಿತಗೊಳಿಸದೆ ತನ್ನ ಗ್ರಾಮದ ಅಭಿವೃದ್ಧಿಯತ್ತ ಕೂಡ ಗಮನ ಹರಿಸಿ ಸರಕಾರದ ಯೋಜನೆಗಳು ರೈತರಿಗೆ, ಕೂಲಿಕಾರ್ಮಿಕರಿಗೆ ತಲುಪಿಸುವ ಕೆಲಸವನ್ನು ಮಾಡಿದ್ದಾರೆ. ಗುಂಜಬಬಲಾದ ಗ್ರಾಮಕ್ಕೆ ವಿವಿಧ ಇಲಾಖೆಯ ಅಧಿಕಾರಿಗಳನ್ನು ಕರೆಸಿ ಜನಸ್ಪಂದನ ಕಾರ್ಯಕ್ರಮವನ್ನು ಏರ್ಪಡಿಸಿ ರೈತರಿಂದ, ಶಾಲಾ ಮಕ್ಕಳಿಂದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಸಲ್ಲಿಸಿ, ಅವುಗಳನ್ನು ಕಾರ್ಯರೂಪಕ್ಕೆ ತರುವ ತಂದಿದ್ದಾರೆ.

ಹಳ್ಳಿಗಳಲ್ಲಿ ಮಹಿಳೆಯರು ರಸ್ತೆ ಬದಿಯಲ್ಲಿ ಬಯಲು ಶೌಚಾಲಯಕ್ಕೆ ಹೋಗುವುದನ್ನು ತಡೆಯಲು ಗ್ರಾಮದ ಪ್ರತಿ ಮನೆಗಳಿಗೆ ಶೌಚಾಲಯವನ್ನು ನಿಮರ್ಿಸಿಕೊಳ್ಳುವ ವಿಚಾರವನ್ನು ಜನರಿಗೆ ತಿಳಿಸಿ ಹೇಳಿದರು. ಶೌಚಾವಿಲ್ಲದೆ ಇರುವುದರಿಂದ ಆಗುವ ಕೆಟ್ಟ ಪರಿಣಾಮಗಳ ಬಗ್ಗೆ ವಿವರಿಸಿದರು. ಪ್ರತಿ ಮನೆಗಳಲ್ಲಿ ಶೌಚಾಯಗಳ ನಿರ್ಮಾಣಕ್ಕೆ ನಾಂದಿ ಹಾಡಿದರು. ಮೊದಮೊದಲು ಜನ ವಿರೋಧಿಸಿದರೂ, ಸಂಸ್ಥೆಗಳ ಸಹಾಯ ಪಡೆದು ಜನರ ಸಹಭಾಗಿತ್ವದಲ್ಲಿ ಗ್ರಾಮದ 260 ಮನೆಗಳಲ್ಲಿ 161 ಮನೆಗಳ ಜನರು ಶೌಚಾಲಯಗಳನ್ನು ಕಟ್ಟಿಕೊಂಡರು. ಈ 161 ಮನೆಗಳಲ್ಲಿ 18 ಮನೆಯವರು ಜೈವಿಕ ಅನಿಲ ಘಟಕಗಳನ್ನು ನಿಮರ್ಿಸಿಕೊಂಡರು. ಸಗಣಿ ಜೊತೆಗೆ ಮಾನವ ಮಲಮೂತ್ರ ಬೆರಸಿ ಉತ್ಪಾದಿಸುವ ಜೈವಿಕ ಅನಿಲವನ್ನು ಅಡುಗೆ ಮಾಡಲು ಬಳಸಬಹುದಾಗಿದೆ ಎಂಬುದನ್ನು ತೋರಿಸಿಕೊಟ್ಟರು. ಪಾಯಿಖಾನೆಯಿಂದ ಬರುವ ಗ್ಯಾಸ್ ಅಡಿಗೆ ಮಾಡಲು ಬಳಸುವುದೆ? ಎಂದು ಮೂಗು ಮುರಿದ ಜನರೆ ಇಂದು ಈ ವಿಧಾನವನ್ನು ಅಳವಡಿಸಿಕೊಂಡಿದ್ದಾರೆ. ಕಸವನ್ನು ವರವನ್ನಾಗಿ ಮಾಡುವ ಈ ಯೋಜನೆಯ ಸಫಲತೆಯ ಹಿಂದೆ ಇರುವ ವ್ಯಕ್ತಿ ಶಿಕ್ಷಕ ನಿಂಗಪ್ಪ ಮುಂಗೊಂಡಿ,

ಹೋದ ವರ್ಷ 2015 ರಲ್ಲಿ ಹೈದ್ರಾಬಾದ ಕರ್ನಾಟಕ ಪ್ರದೇಶ ಬರಗಾಲಕ್ಕೆ ತುತ್ತಾಗಿ ಕುಡಿಯಲು ನೀರು, ತಿನ್ನಲು ಅನ್ನಕ್ಕೂ ಗತಿಯಿಲ್ಲದ ಪರಿಸ್ಥಿತಿ ನಿರ್ಮಾಣವಾಗಿತ್ತು. ರೈತರು ಮತ್ತು ಬಡಕೂಲಿ ಕಾರ್ಮಿಕರು ಕಂಗಾಲಾಗಿ ಹೋದರು. ಕೆಲಸಿಲ್ಲದೆ ಪರದಾಡುವಂತಾಯಿತು. ದಿನಗೂಲಿ ಮಾಡಿ ಬದಕು ಸಾಗಿಸುವ ಬಡವರು ಕೆಲಸ ಹುಡುಕಿಕೊಂಡು ಬೆಂಗಳೂರು, ಮುಂಬೈ ಮತ್ತು ಪುಣೆ ಪಟ್ಟಣಗಳಿಗೆ ಗುಳೆ ಹೊರಟರು. ಮಕ್ಕಳು ಮರಿಗಳನ್ನು ಬಿಟ್ಟು ಗುಳೆ ಹೋಗುವದನ್ನು ತಡೆಯಲು ಸರಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಅಡಿಯಲ್ಲಿ ಕಾಮಗಾರಿಯನ್ನು ಆರಂಭಿಸಬೇಕೆಂದು ನಿರ್ಧರಿಸಿ ಕಾರ್ಯಪ್ರವೃತ್ತರಾದರು. ಆರಂಭದಲ್ಲಿ ಅನೇಕ ತೊಂದರೆಗಳನ್ನು ಅನುಭವಿಸಿದರು. ಪಟ್ಟುಬಿಡದೆ ಜಿಲ್ಲಾ ಪಂಚಾಯಿತಿ ಸಿ.ಇ.ಓ ಶ್ರೀ ಅನುರುದ್ದ್ ಶ್ರವಣ ಅವರಿಗೆ ಭೇಟಿಯಾಗಿ, ಜನವಾದಿ ಮಹಿಳಾ ಸಂಘಟನೆಯ ರಾಜ್ಯ ಉಪಾಧ್ಯರಾದ ಕೆ. ನೀಲಾ ಮತ್ತು ಪ್ರಜ್ಞಾ ಕಾನೂನು ಸಲಹಾ ಸಮಿತಿಯ ಅಧ್ಯಕ್ಷರಾದ ಡಾ. ಮೀನಾಕ್ಷಿ ಬಾಳಿಯವರೊಂದಿಗೆ ಅಧಿಕಾರಿಗಳ ವಿರುದ್ಧ ಹೋರಾಟ ಮಾಡಿ ಉದ್ಯೋಗ ಖಾತರಿ ಕೆಲಸ ಜಾರಿಗೊಳಿಸಿ ಬಡವರ ಕಣ್ಣೀರ ಒರೆಸಿದರು. ಗುಂಜಬಬಲಾದ ಗ್ರಾಮದಲ್ಲಿ ಉದ್ಯೋಗ ಖಾತರಿ ಕೆಲಸ ಮಾಡಿದ ಪ್ರತಿ ಕುಟುಂಬಕ್ಕೆ 35,000 ರೂ. ಕೂಲಿ ಹಣ ಪಡೆದರು. ಊರು ಬಿಟ್ಟು ಗುಳೆ ಹೋದವರು ಮರಳಿ ಬಂದರು.

ಅನಂತರ 10-15 ಜನರ ಶಿಕ್ಷಕರು ಕೂಡಿಕೊಂಡು ಸುತ್ತು ಮುತ್ತಲಿನ ನರೋಣಾ, ಕಿಣ್ಣಿಸುಲ್ತಾನ, ವೈಜಾಪುರ, ಆಲೂರು, ಕಡಗಂಚಿ, ಹೊನ್ನಹಳ್ಳಿ ಮುನ್ನಹಳ್ಳಿ ಮುಂತಾದ ಸುಮಾರು 30 ಹಳ್ಳಿಗಳಿಗೆ ಹೋಗಿ ಜನರಲ್ಲಿ ಜಾಗೃತಿ ಮೂಡಿಸಿ ಎಲ್ಲ ಊರುಗಳಲ್ಲಿ ಉದ್ಯೋಗ ಖಾತರಿ ಕೆಲಸ ಆರಂಭಗೊಳ್ಳುವಂತೆ ಮಾಡಿದ್ದಾರೆ. ಸುಮಾರು ಮೂರು ತಿಂಗಳ ಸತತ ಹಳ್ಳಿ ಹಳ್ಳಿಗಳಲ್ಲಿ ತಿರುಗಾಡಿ ಉದ್ಯೋಗ ಖಾತರಿಯಲ್ಲಿ ಕೆಲಸ ಕೊಡಿಸುವ ಅಭಿಯಾನ ಮಾಡಿದರು. ಶಿಕ್ಷಕ ನಿಂಗಪ್ಪ ಮುಂಗೊಂಡಿ ಅಷ್ಟೆ ಅಲ್ಲ ಅವರ ಪತ್ನಿ ನಂದಾದೇವಿ ಮುಂಗೊಂಡಿಯವರು ಕೂಡ ಪತಿಯೊಂದಿಗೆ ಈ ಅಭಿಯಾನದಲ್ಲಿ ಇದ್ದು ಪತಿಯ ಮಾಡುವ ಕೆಲಸಕ್ಕೆ ಬೆನ್ನೆಲುಬಾಗಿ ನಿಂತರು.

ಶಿಕ್ಷಕ ನಿಂಗಪ್ಪ ಮುಂಗೊಂಡಿ ಶೈಕ್ಷಣಿಕ ಕ್ಷೇತ್ರದ ಗಮನಾರ್ಹ ಕೆಲಸ ಮಾಡಿದ್ದಕ್ಕಾಗಿ ತಾಲೂಕಾ ಮಟ್ಟದ ಉತ್ತಮ ಶಿಕ್ಷಕ ಗೌರವಕ್ಕೆ ಪಾತ್ರರಾಗಿದ್ದಾರೆ. ಡಿ.ಎಸ್.ಇ.ಆರ್.ಟಿ. ಬೆಂಗಳೂರು ಇವರಿಂದ ಪ್ರಶಂಸಾ ಪತ್ರ ಲಭಿಸಿದೆ. 2005ರಲ್ಲಿ ಕಲಿಕಾ ಖಾತ್ರಿ ಕಾರ್ಯಕ್ರಮ ನೂರಕ್ಕೆ ನೂರರಷ್ಟು ಯಶಸ್ವಿ ಮಾಡಿದಕ್ಕೆ ಅಭಿನಂದನಾ ಪತ್ರ ನೀಡಲಾಗಿದೆ. ಎಜುಸ್ಯಾಟ್ ಕಾರ್ಯಕ್ರಮವನ್ನು ಮಕ್ಕಳಿಗೆ ಪರಿಣಾಮಕಾರಿಯಾಗಿ ತೋರಿಸಿದ ಪ್ರಯುಕ್ತ ಶಿಕ್ಷಣ ಸಚಿವರಾದ ಶ್ರೀ ಬಸವರಾಜ ಹೊರಟಿಯವರು ಸನ್ಮಾನಿಸಿದ್ದಾರೆ. ಜೈವಿಕ ಅನಿಲ ಘಟಕಗಳನ್ನು ಸ್ಥಾಪನೆ ಮಾಡಿದ ಮತ್ತು ಹಳ್ಳಿಗಳಲ್ಲಿ ಪ್ರಚಾರ ಮಾಡಿದ ಕಾರಣಕ್ಕೆ 2013ರಲ್ಲಿ ಜಿಲ್ಲಾ ಕೃಷಿ ಮೇಳದಲ್ಲಿ ಸನ್ಮಾನ ಮಾಡಿದ್ದಾರೆ. 2016 ರಲ್ಲಿ ಧಾರವಾಡದಲ್ಲಿ ನಡೆದ 14ನೇ ಟೀಚರ್ ಶೈಕ್ಷಣಿಕ ಹಬ್ಬದಲ್ಲಿ ಸನ್ಮಾನಿಸಲಾಯಿತು