Sunday 18 April 2021

ಡಾ. ವಿ.ಕೃ. ಗೋಕಾಕ


ಡಾ. ವಿ.ಕೃ. ಗೋಕಾಕ
- ಡಾ. ಸಂಗಮೇಶ ತಮ್ಮನಗೌಡ್ರ,

ಬೇಂದ್ರೆಯವರ ಕಾವ್ಯ ಪ್ರಭಾವದಿಂದ ಮೈದುಂಬಿ ಬೆಳೆದ ವಿನಾಯಕ ಕೃಷ್ಣರಾವ್ ಗೋಕಾರರು ವಿನಾಯಕ ಕಾವ್ಯನಾಮದಿಂದ ಜನ ಜನಿತರಾದರು. ಕೊಂಕು ಬಿಂಕವಿಲ್ಲದೇ ಸಾಹಿತ್ಯ ಪ್ರಪಂಚದಲ್ಲಿ ನವ್ಯತೆಯ ಮೆರುಗಿನಿಂದ ಜೀವಂತಿಕೆಯ ನುಡಿಬೆಳಕನ್ನು ನಾಡಿಗೆ ಕೊಟ್ಟ ಅನನ್ಯ ಕವಿ. 1990ರಲ್ಲಿ ಜ್ಞಾನಪೀಠ ಪ್ರಶಸ್ತಿಗೆ ಭಾಜನವಾದ ಭಾರತಸಿಂಧು ರಶ್ಮಿ ಮಹಾಕಾವ್ಯ ಕೃತಿಯು ಮೂವತ್ತೈದು ಸಾವಿರಕ್ಕಿಂತಲೂ ಹೆಚ್ಚು ಪಂಕ್ತಿಗಳೊಂದಿಗೆ ಹರವು ಪಡೆದ ಕೃತಿಯಾಗಿದೆ. ಮಹಾಕಾವ್ಯ ಪ್ರಪಂಚದಲ್ಲಿ ಕುವೆಂಪು ಅವರ ತರುವಾಯ ಗೋಕಾಕರು ಕಾವ್ಯದ ಉತ್ಕೃಷ್ಟತಾ ರಚನಾ ಶಕ್ತಿಯು ನನ್ನಲ್ಲಿಯೂ ಅಂತರ್ಗತವಾಗಿದೆಯೆಂದು ಸಾಬೀತುಪಡಿಸಿದ ಕನ್ನಡಿಗರ ಹೆಮ್ಮೆಯ ಕವಿಯಾಗಿದ್ದಾರೆ. ಇವರ ಸಮರಸವೇ ಜೀವನ ಬೃಹತ್ ಕಾದಂಬರಿಯು 1268 ಪುಟಗಳ ವ್ಯಾಪ್ತಿಯ ಘನತೆ ಪಡೆದಿದೆ.

ಗೋಕಾಕರ ಬದುಕಿನ ಇಣುಕು ನೋಟ : 1909ರ ಆಗಸ್ಟ್ 9ರಂದು ಈಗಿನ ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ಜನಿಸಿದ ವ್ಹಿ. ಕೆ. ಗೋಕಾಕರು ಪ್ರಾಥಮಿಕ ಮತ್ತು ಪ್ರೌಢವಿದ್ಯಾಭ್ಯಾಸವನ್ನು ಸವಣೂರಿನಲ್ಲಿ ಕಲಿತರು. ತಂದೆ ಕೃಷ್ಣರಾವ್ ವಕೀಲರಾಗಿದ್ದರು. ಇಂಗ್ಲೀಷ್ ಶಾಲೆಯ ಶಿಕ್ಷಕರಾಗಿದ್ದ ಅಜ್ಜನ ಪ್ರೇರಣೆಯಿಂದ ಕಥೆ, ಕಾದಂಬರಿ, ಕವಿತೆ ಓದುವ ಹುಚ್ಚಿಗಂಟಿಕೊಂಡರು. ವಿದ್ಯಾರ್ಥಿದೆಸೆಯಿಂದಲೇ ಲಾಂಗ್ಫೆಲೋ, ವಡ್ರ್ಸವರ್ತ್, ಟೆನಿಸನ್ ಮತ್ತು ಶೆಲ್ಲಿಯವರ ಕವಿತೆಗಳನ್ನು ಓದುವ ಗೀಳನ್ನು ಅಂಟಿಸಿಕೊಂಡರು. ಇಂಗ್ಲೆಂಡಿನ ಆಕ್ಸ್ಫರ್ಡ್ ವಿಶ್ವವಿದ್ಯಾಲಯದಿಂದ ಇಂಗ್ಲೀಷ್ ಎಂ.ಎ. ಪರೀಕ್ಷೆಯನ್ನು ಪ್ರಥಮ ಶ್ರೇಣಿಯಲ್ಲಿ 1931ರಲ್ಲಿ ಪಾಸಾಗಿ ಅದೇ ವರ್ಷ ಸಾಂಗ್ಲಿಯ ವಿಲ್ಲಿಂಗ್ಟನ್ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ 1938ರಲ್ಲಿ ಅದೇ ಕಾಲೇಜಿನ ಪ್ರಾಚಾರ್ಯರಾದರು. 1945ರಲ್ಲಿ ಹೈದರಾಬಾದಿನ ಉಸ್ಮಾನಿಯಾ ವಿಶ್ವವಿದ್ಯಾಲಯದ ಇಂಗ್ಲೀಷ್ ಪ್ರಾಧ್ಯಾಪಕರಾಗಿ 1946ರಲ್ಲಿ ವೀಸನಗರದ ಕಾಲೇಜಿನ ಇಂಗ್ಲೀಷ್ ವಿಭಾಗದ ಮುಖ್ಯಸ್ಥರಾಗಿ, 1949ರಲ್ಲಿ ಕೊಲ್ಹಾಪುರದ ರಾಜಾರಾಂ ಕಾಲೇಜಿನ ಮುಖ್ಯಸ್ಥರಾಗಿ, 1952ರಲ್ಲಿ ಧಾರವಾಡದ ಕರ್ನಾಟಕ ಕಾಲೇಜಿನ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದಾರೆ. 1959ರಲ್ಲಿ ಹೈದರಾಬಾದಿನ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಇಂಗ್ಲೀಷ್ ಸಂಸ್ಥೆಯ ನಿರ್ದೇಶಕರಾದರು. 1966ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿಗಳಾಗಿ ಸೇವೆಗೈದಿದ್ದಾರೆ. ತದನಂತರ ಕೆಲಕಾಲ ಸಿ.ಎ. ಇನ್ಸ್ಟ್ಯೂಟ್ ಆಫ್ ಅಡ್ವಾನ್ಸ್ ದ ಸ್ಟಡೀಸ್ ಸಂಸ್ಥೆಯ ನಿರ್ದೇಶಕರಾಗಿದ್ದರು.

ಇಂಗ್ಲೆಂಡಿಗೆ ಮೂರು ಬಾರಿ ಹೋಗಿ ಬಂದಿದ್ದಾರೆ. 1952ರಲ್ಲಿ ಜಪಾನಿಗೂ, 1985ರಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನಗಳಿಗೂ, 1959ರಲ್ಲಿ ಬೆಲ್ಜಿಯಂಗೂ, 1960ರಲ್ಲಿ ಪೂರ್ವದಕ್ಷಿಣ ಆಫ್ರಿಕಕ್ಕೂ ಭೇಟಿ ಕೊಟ್ಟ ಹಿರಿಮೆ ಗೋಕಾಕರದಾಗಿದೆ. ಸಾಹಿತ್ಯ ಕೃಷಿ ಅಧ್ಯಾಪನ ವೃತ್ತಿಯ ನಿರಂತರ ಕ್ರಿಯೆಯ ಗೋಕಾಕರು ಇಂಗ್ಲೀಷ್ ಪ್ರಾಧ್ಯಾಪಕರಾಗಿದ್ದು, ವಿದ್ಯಾರ್ಥಿಗಳ ಮೆಚ್ಚಿನ ಗುರುವೆನಿಸಿದ್ದರು. 1992ರ ಏಪ್ರಿಲ್ 28ರಂದು ಅವರು ಈ ನೆಲದ ಹಂಗುಬಿಟ್ಟು ನಮ್ಮಿಂದ ದೂರವಾದರೂ ಸಾಹಿತ್ಯ ಕೃತಿಗಳ ಮೂಲಕ ನಮ್ಮೊಂದಿಗೆ ಶಾಸ್ವತವಾಗಿ ನೆಲೆ ನಿಂತಿದ್ದಾರೆ.

ಗೋಕಾಕರ ಸಾಹಿತ್ಯ ಕೃಷಿ : 21 ಕಾವ್ಯಕೃತಿಗಳು, 2 ಕಾದಂಬರಿಗಳು, 4 ನಾಟಕಗಳು, 10 ವಿಮರ್ಶಾ ಕೃತಿಗಳು, 5 ಇತರೆ ವಿಷಯಗಳ ಕೃತಿಗಳು, 2 ಸಂಪಾದಿತ ಕೃತಿಗಳು, 3 ಪ್ರವಾಸಿ ಕೃತಿಗಳು, ಇಂಗ್ಲೀಷ್ ವಿಷಯಗಳಿಗೆ ಸಂಬಂಧಿಸಿದ 26 ಕೃತಿಗಳೂ ಸೇರಿದಂತೆ ಕನ್ನಡ ಮತ್ತು ಇಂಗ್ಲೀಷ್ ಭಾಷೆಗಳು ಜಂಟಿಯಾಗಿ 73ಕ್ಕೂ ಹೆಚ್ಚು ಪುಸ್ತಕಗಳನ್ನು ರಚಿಸಿದ್ದಾರೆ. ಇವರ ಹೊತ್ತಿಗೆಗಳು ಕಾರಯಿತ್ರೀ ಪ್ರತಿಭೆಯ ತನಿಬೆಳಕಿನ ಕುಸುಮಗಳಂತೆ ವರ್ಣಿತಗೊಂಡಿವೆ.

ಕಾವ್ಯಕೃತಿಗಳು :
1) ಕಲೋಪಾಸಕ
2) ಪಯಣ
3) ಸಮುದ್ರಗೀತೆಗಳು
4) ತ್ರಿವಿಕ್ರಮದ ಆಕಾಶಗಂಗೆ
5) ಅಭ್ಯುದಯ
6) ಹಿಗ್ಗು
7) ನವ್ಯ ಕವಿತೆಗಳು
8) ಬಾಳದೇಗುಲದಲ್ಲಿ
9) ಉಗಮ
10) ದ್ಯಾವಾಪೃಥವೀ
11) ವಾರ್ಣನಾಭ
12) ಕಾಶ್ಮೀರ
13) ಚಿಂತನ
14) ತ್ರಿಶಂಕುವಿನ ಪ್ರಜ್ಞಾಪ್ರಭಾತ
15) ಪುಣ್ಯಭೂಮಿ
16) ಭಾವರಾಗ
17) ಕೊನೆಯ ದಿನ
18) ಭಾಗವತ ನಿಮಿಷಗಳು
19) ಸಿಮ್ಲಾ ಸಿಂಪೋನಿ
20) ಪಾರಿಜಾತದಡಿಯಲ್ಲಿ
21) ಭಾರತ ಸಿಂಧುರಶ್ಮಿ

ಕಾದಂಬರಿಗಳು :
1) ಸಮರವೇ ಜೀವನ
2) ನವಯುಗ ಪ್ರವರ್ತಕ ನರಹರಿ

ನಾಟಕಗಳು :
1) ಜನನಾಯಕ
2) ವಿಮರ್ಶಕ ವೈದ್ಯ
3) ಯುಗಾಂತರ
4) ಮುನಿದರೆ ಮಾರಿ

ವಿಮರ್ಶಾ ಕೃತಿಗಳು :
1) ಕವಿ, ಕಾವ್ಯ, ಮಹೋನ್ನತಿ
2) ಸಾಹಿತ್ಯದಲ್ಲಿ ಪ್ರಗತಿ
3) ಇಂದಿನ ಕನ್ನಡ ಕಾವ್ಯದ ಗೊತ್ತುಗುರಿಗಳು
4) ನವ್ಯತೆ ಹಾಗೂ ಕಾವ್ಯಜೀವನ
5) ಆಂಗ್ಲಕಾವ್ಯ ನೀಡಿದ ಸ್ಫೂರ್ತಿ
6) ಸೌಂದರ್ಯ ಮೀಮಾಂಸೆ
7)ನವ್ಯತೆ
8)ಕವನಗಳಲ್ಲಿ ಸಂಕೀರ್ಣತೆ
9) ಕಲೆಯ ನೆಲೆ
10) ವಿಮರ್ಶಾ ತತ್ವಗಳು ಮತ್ತು ಪ್ರಾಯೋಗಿಕ ವಿಮರ್ಶೆ

ಇತರ ಬರಹಗಳು :
1) ಜೀವನ ಪಾಠಗಳು
2) ಚೆಲುವಿನ ನಿಲುವು
3) ವಿಶ್ವಮಾನವ ದೃಷ್ಟಿ
4)ಅರ್ಪಣ ದೃಷ್ಟಿ
5) ಋಗ್ವೇದದಲ್ಲಿ ಕ್ರಾಂತದೃಷ್ಟಿ

ಸಂಪಾದಿತ ಕೃತಿಗಳು:
1) ಇಂದಿನ ಕರ್ನಾಟಕ
2) ನವ್ಯಧ್ವನಿಗೋಕಾಕರಿಗೆ ಸಂದ ಪ್ರಶಸ್ತಿ , ಪುರಸ್ಕಾರಗಳು : ಗೋಕಾಕರು ತಮ್ಮ ಕೃತಿರಚನೆಯಲ್ಲಿ ಅಪಾರ ಗೌರವ ನಂಬಿಕೆ ಇಟ್ಟಿದ್ದರೇ ವಿನಹ ಪ್ರಶಸ್ತಿ - ಪುರಸ್ಕಾರಗಳು ಬದುಕಿಗಂಟಿಕೊಳ್ಳುವ ಲೊಳಲೊಟ್ಟೆ ಎಂಬ ತತ್ತ್ವ ಚಿಂತನೆಯಲ್ಲಿ ಬಾಳಿಬದುಕಿದವರು. ಆದರೂ ನಾಡಗೌರವ, ರಾಷ್ಟ್ರಗೌರವ, ಅಂತರಾಷ್ಟ್ರೀಯ ಗೌರವಕ್ಕೆ ಪಾತ್ರವಾದ ಹಲವಾರು ಪ್ರಶಸ್ತಿ ಪುರಸ್ಕಾರಗಳು ವಿ.ಕೃ.ಗೋಕಾಕ ಅವರಿಗೆ ಸಂದಿವೆ.

1934ರಲ್ಲಿ ರಾಯಚೂರಿನಲ್ಲಿ ನಡೆದ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಯ ಅಧ್ಯಕ್ಷತೆ, 1950ರಲ್ಲಿ ಮುಂಬೈ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ, 1958ರಲ್ಲಿ ಬಳ್ಳಾರಿಯಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷತೆಯ ಗೌರವ 1957ರಲ್ಲಿ ಪಿ.ಇ.ಎನ್. ಅಧಿವೇಶನದಲ್ಲಿ ಭಾಗವಹಿಸಿದ್ದು, 1955ರಲ್ಲಿ ಅಂತರಾಷ್ಟ್ರೀಯ ಕವಿಮೇಳಗಳ ಸದಸ್ಯತ್ವ, 1960ರಲ್ಲಿ ದ್ಯಾವಾಪೃಥಿವಿ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಬಹುಮಾನ, 1960ರಲ್ಲಿ ಪದ್ಮಶ್ರೀ ಪ್ರಶಸ್ತಿ, 1962ರಲ್ಲಿ ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್ ಪದವಿ, 1990ರಲ್ಲಿ ಭಾರತ ಸಿಂಧು ರಶ್ಮಿ ಕೃತಿಗೆ ಜ್ಞಾನಪೀಠ ಪ್ರಶಸ್ತಿ, ಅಭಿಮಾನಿಗಳು ವಿನಾಯಕ ವಾಙ್ಮಯ ಪ್ರಶಸ್ತಿ ಗ್ರಂಥ ಸಮರ್ಪಣೆ ಮಾಡಿದ್ದಾರೆ.

ಭಾರತ ಸಿಂಧು ರಶ್ಮಿಯ ವೈಚಾರಿಕತೆ : ಗೋಕಾಕರು ಸಹಜವಾಗಿ ಓದಿಸಿಕೊಂಡು ಹೋಗುವಂತಹ ಪ್ರಬುದ್ಧ ಭಾಷೆಯನ್ನು ಭಾರತ ಸಿಂಧುರಶ್ಮಿ ಕೃತಿಯಲ್ಲಿ ಬಳಸಿದ್ದಾರೆ. ಅದರಲ್ಲಿನ ಕೆಲವು ವಿಚಾರಗಳು ಮತ್ತೆ ಮತ್ತೆ ಓದಿಸಿಕೊಂಡು ಹೋಗುವ ಸ್ಥಿತಿಯಲ್ಲಿವೆ.

 ಆಕಸ್ಮಿಕವೆಂಬುದಿಲ್ಲ ಜೀವನದಲ್ಲಿ ನಾವರಿಯದಿಹ ದೈವವೆದುರುಗೊಳೆ ನಮ್ಮನ್ನು ಸೂರ್ಯವೀಥಿಗಳಲ್ಲಿ, ಕರೆಯುವೆವು ನಾವದನು ಆಕಸ್ಮಿಕವೆಂದು. ಗ್ರಹಗತಿಯೊಳಿರುವದದು ಕುಟ್ಮಲದೊಳಿರುವಂತೆ ಘಲ್ಲ ಕುಸುಮದ ಚೆಲುವು; ಇರುವದಲ್ಲದೆ ನಮ್ಮ ಪೂರಣ-ದೋಷ ದೂಷಣದ ದಾರುಣದ ಕರ್ಮಲ್ಲೊಂದು ಹೀಚಾಗಿ; ಉಳಿವುದದು ಅನುದಿನವು ವ್ಯಕ್ತಿ ಪ್ರಜ್ಞೆಯನು ಪೂರ್ಣತೆಯೆಡೆಗೆ ಒಯ್ಯುತಿಹ ಆದಿಶಕ್ತಿಯ ಕೈಯ್ಯ ಉಳಿಯಾಗಿ, ಆಕಸ್ಮಿಕವೆಂಬುದಿಲ್ಲ ಜೀವನದಲ್ಲಿ.ಮಾನವರಾದ ನಾವು ನಮ್ಮ ನಿತ್ಯಜೀವನ ಪಯಣದ ಹಾದಿಯಲ್ಲಿ ಒಳಿತೇ ಇರಲಿ, ಕೆಡುಕೇ ಇರಲಿ ಅದನ್ನು ಗ್ರಹಗತಿ, ಆಕಸ್ಮಿಕ, ಹಣೆಬರಹ ಅಥವಾ ವಿಧಿಗೆ ಹೋಲಿಸುತ್ತೇವೆ. ನಮ್ಮ ನಿತ್ಯ ಜೀವನದಲ್ಲಿ ಪೂರ್ಣತೆಯ ಕಡೆಗೆ ಸಾಗುವಾಗ ಈ ನೆಲದಲ್ಲಿ ಯಾವುದೂ ಆಕಸ್ಮಿಕ ಅಲ್ಲವೆಂದು ಕವಿ ಹೇಳುತ್ತಾರೆ.

ನಾವು ಅರಿಯದ ಧೀರ ಸ್ವಾತಂತ್ರ ಹೋರಾಟಗಾರರು
- ರಮೇಶ್ ಎಂ.ಎಸ್.

ಸ್ಯಾತಂತ್ರ್ಯ ಸಂಗ್ರಾಮದ ಕತೆ ನಮಗೆಲ್ಲಾ ಚಿರಪರಿಚಿತ. ಈ ಹೋರಾಟದ ಮುಂಚೂಣಿಯಲ್ಲಿದ್ದ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಮಹಾತ್ಮ ಗಾಂಧಿ, ಸರ್ದಾರ್ ವಲ್ಲಭಬಾಯಿ ಪಟೇಲ್, ಜವಹರಲಾಲ್ ನೆಹರು, ಚಂದ್ರಶೇಖರ್ ಆಜಾದ್, ಸರೋಜಿನಿದೇವಿ ನಾಯ್ಡು, ನೇತಾಜಿ ಸುಭಾಷ್ಚಂದ್ರ ಬೋಸ್, ಮಂಗಲ್ ಪಾಂಡೆ, ಭಗತ್ ಸಿಂಗ್, ಡಾ. ರಾಜೇಂದ್ರ ಪ್ರಸಾದ್, ಮುಂತಾದ ಪ್ರಮುಖ ಸ್ವ್ಯಾತಂತ್ರ್ಯ ಹೋರಾಟಗಾರರ ಹೆಸರು ಹಾಗೂ ಚಿತ್ರಗಳು ನಮ್ಮ ಸ್ಮೃತಿಪಟಲದ ಮೇಲೆ ಮೂಡಿಬರುತ್ತವೆ. ಆದರೆ ಮುಖ್ಯವಾಹಿನಿಗೆ ಬಾರದೆ ಭಾರತದ ಸ್ಯಾತಂತ್ರ್ಯ ಸಂಗ್ರಾಮದಲ್ಲಿ ಭಾಗವಹಿಸಿ ಕಣ್ಮರೆಯಾದ ಅನೇಕ ಮಹಾನ್ ವ್ಯಕ್ತಿಗಳ ಬಗ್ಗೆ ನಮಗೆ ಅಷ್ಟಾಗಿ ಮಾಹಿತಿಯಿರುವುದಿಲ್ಲ. ತಮ್ಮ ಜೀವನವನ್ನು ದೇಶಕ್ಕಾಗಿ ಪಣವಿಟ್ಟು ಭಾರತಮಾತೆಯನ್ನು ದಾಸ್ಯದಿಂದ ಬಿಡುಗಡೆ ಮಾಡಲು ಹೋರಾಡಿ ಹುತಾತ್ಮರಾಗಿ ಮುಖ್ಯವಾಹಿನಿಗೆ ಬಾರದೆ ತೆರೆಯ ಮರೆಯಲ್ಲೇ ಉಳಿದ ಮಹಾನ್ ವ್ಯಕ್ತಿಗಳಲ್ಲಿ ಕೆಲವು ಮಹನೀಯರನ್ನು ಪರಿಚಯಿಸುವ ಪ್ರಾಮಾಣಿಕ ಪ್ರಯತ್ನ ಇದಾಗಿದೆ.

ರಾಣಿ ವೇಲು ನಾಚಿಯಾರ್ - 1730 ರಲ್ಲಿ ತಮಿಳುನಾಡಿನ ರಾಮನಾಡ್ ರಾಜಕುಟುಂಬದಲ್ಲಿ ಜನಿಸಿದ ಈಕೆಯ ತಂದೆ ರಾಜಾ ಸೆಲ್ಲುಮುತ್ತು ಸೇತುಪತಿ ಹಾಗೂ ರಾಣಿ ಸುಕಂದಿಮುತ್ತಾಳ್ರ ಏಕೈಕ ಪುತ್ರಿ ಇವರು. ಚಿಕ್ಕ ವಯಸ್ಸಿನಲ್ಲಿಯೇ ಈಕೆ ಕುದುರೆ ಸವಾರಿ, ಕಲರಿ ಪಟ್ಟು, ದೊಣ್ಣೆವರೆಸೆ ಮುಂತಾದ ಯುದ್ಧಕಲೆಗಳಲ್ಲಿ ಪ್ರವೀಣೆಯಾಗಿದ್ದರು. ಬಹುಭಾಷಾ ಪ್ರವೀಣೆಯಾಗಿದ್ದ ಈಕೆ ಬ್ರಿಟಿಷರ ಆಳ್ವಿಕೆಯ ವಿರುದ್ಧ ಸಕ್ರಿಯವಾಗಿ ಹೋರಾಡಿದ ಮೊದಲ ರಾಣಿಯೆಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಪತಿ ಮುತ್ತುವಡುಗನಾಥ ಪೆರಿಯಾರ್ ಬ್ರಿಟೀಷರ ವಿರುದ್ಧ ಹೋರಾಡಿ ಮೃತನಾಗುತ್ತಾನೆ. ಬ್ರಿಟೀಷರ ವಿರುದ್ಧ ಸೆಟೆದು ನಿಂತ ಈಕೆ, ಕರ್ನಾಟಕದ ಹೈದರಾಲಿ ಹಾಗೂ ಗೋಪಾಲ ನಾಯಕರ್ ಇವರ ಸಹಯೋಗದೊಂದಿಗೆ 1780 ರಲ್ಲಿ ಆಂಗ್ಲರ ವಿರುದ್ಧ ಹೋರಾಡಿ ಜಯಗಳಿಸುತ್ತಾರೆ. ಬ್ರಿಟೀಷರು ಸಂಗ್ರಹಿಸಿದ್ದ ಯುದ್ಧ ಸಾಮಗ್ರಿಯ ರಹಸ್ಯ ಗೋದಾಮನ್ನು ಗೋಪಾಲ ನಾಯಕರ್ ಪತ್ತೆ ಹಚ್ಚುತ್ತಾರೆ. ಇದನ್ನು ತನ್ನ ನಂಬಿಕೆಯ ಸೇವಕಿ ಕುಯಿಲಿ ಎಂಬ ಯುವತಿಯನ್ನು ಮೊದಲ ಮಾನವ ಬಾಂಬ್ ಆಗಿ ಬಳಸಿ ಸಂಗ್ರಹಿಸಿದ್ದ ಯುದ್ಧ ಸಾಮಗ್ರಿಯ ರಹಸ್ಯ ಗೋದಾಮನ್ನು ಸ್ಫೋಟಿಸಿ ಬ್ರಿಟೀಷರನ್ನು ಬಗ್ಗು ಬಡಿಯುತ್ತಾರೆ. ಮೊದಲ ಮಹಿಳಾ ಸೈನ್ಯವನ್ನು ಕಟ್ಟಿ ಬ್ರಿಟೀಷರ ವಿರುದ್ಧ ಸಮರ್ಥವಾಗಿ ಹೋರಾಡಿದ ರಾಣಿ ವೇಲು ನಾಚಿಯಾರ್ ಹೆಸರು ಭಾರತದ ಇತಿಹಾಸದ ಪುಟದಲ್ಲಿ ಅಜರಾಮರ.

ಬೇಗಂ ಹಜರತ್ ಮಹಲ್: ಈಸ್ಟ್ ಇಂಡಿಯಾ ಕಂಪನಿಯ ವಿರುದ್ಧ 1857 ರಲ್ಲಿ ನಡೆದ ಭಾರತೀಯ ಸಿಪಾಯಿ ದಂಗೆಯ ಸಮಯದಲ್ಲಿ ಅನೇಕ ಮಹನೀಯರು ದೇಶಕ್ಕಾಗಿ ಹೋರಾಡಿ ಜೀವ ತೆತ್ತಿದ್ದಾರೆ. ಇದರಲ್ಲಿ ಮಹಿಳೆಯರೂ ಪ್ರಧಾನ ಪಾತ್ರ ವಹಿಸಿದ್ದರೆಂಬುದು ವಿಶೇಷ. ಉತ್ತರ ಪ್ರದೇಶದ ಲಖನೌ ರಾಜ ಅಜರತ್ ಅಲಿ ಷಾ ಪತ್ನಿ, ಬೇಗಂ ಹಜರತ್ ಮಹಲ್ 1857 ರ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಆಂಗ್ಲರು ಈಕೆಯ ಪತಿಯನ್ನು ದೇಶಭ್ರಷ್ಟನನ್ನಾಗಿ ಮಾಡಿ ಕಲ್ಕತ್ತಾಗೆ ಓಡಿಸಿದ ನಂತರ ಸ್ವಾಭಿಮಾನಿಯಾದ ಈಕೆ ಬ್ರಿಟೀಷರ ವಿರುದ್ಧ ಸಿಡಿದೆದ್ದರು. ಮಹಾರಾಜಾ ಬಾಲಕೃಷ್ಣ, ರಾಜಾ ಜೈಲಾಲ್ ಮುಂತಾದವರಿಂದ ಸಹಾಯ ಪಡೆದು, ತನ್ನ ಚಿಕ್ಕ ವಯಸ್ಸಿನ ಮಗನನ್ನು ಅವಧ್ನ ಸಿಂಹಾಸನದಲ್ಲಿ ಕೂರಿಸಿ ಪಟ್ಟಕಟ್ಟಿದರು. ಇದರಿಂದ ಕಂಗೆಟ್ಟ ಆಂಗ್ಲರು ಈಕೆಯ ವಿರುದ್ಧ ಸಮರ ಸಾರಿದರು. ತನ್ನ ಉತ್ಸಾಹಿ ಸೈನಿಕರೊಂದಿಗೆ ತೀವ್ರ ಹೋರಾಟ ನಡೆಸಿದರೂ ಬ್ರಿಟೀಷರು ಷಹಜಾನ್ಪುರವನ್ನು ಗೆದ್ದುಕೊಂಡರು. ಸೋತ ನಂತರ ಈಕೆ ಲಕ್ನೋದಿಂದ ತಪ್ಪಿಸಿಕೊಂಡು ಫೈಝಾಬಾದ್ ಮೌಲ್ವಿಯವರಲ್ಲಿ ಆಶ್ರಯ ಪಡೆದರು. ರಾಜ್ಯ ಕಳೆದುಕೊಂಡರೂ ಸ್ವಾಭಿಮಾನಿಯಾದ ಈಕೆ, ಬ್ರಿಟೀಷರು ತನಗೆ ನೀಡಿದ ಮಾಸಾಶನವನ್ನು ತಿರಸ್ಕರಿಸಿದರು. ತನ್ನ ಕೊನೆ ದಿನಗಳಲ್ಲಿ ತುಂಬಾ ಕಷ್ಟ ಅನುಭವಿಸಿ 1879 ನೇಪಾಳದಲ್ಲಿ ತೀರಿಕೊಂಡರು. ಇಂತಹ ಸ್ವಾಭಿಮಾನಿ ದೇಶಭಕ್ತರನ್ನು ಸ್ವಾತಂತ್ರ್ಯೋತ್ಸವದ ಈ ಸಮಯದಲ್ಲಿ ಗೌರವದಿಂದ ನೆನೆಯೋಣ. ಇವರ ಗೌರವಾರ್ಥವಾಗಿ ಭಾರತ ಸರ್ಕಾರ ಅಂಚೆ ಚೀಟಿ ಹೊರತಂದಿದೆ.

ಬಿರ್ಸಾ ಮುಂಡಾ: 15-11-1875 ಜನಿಸಿದ ಈತ ಬಿಹಾರ ರಾಜ್ಯದ ಬುಡಕಟ್ಟು ಒಂದರ ಮುಖಂಡರಾಗಿದ್ದರು. ಬ್ರಿಟಿಷ್ ಆಡಳಿತದ ವಿರುದ್ಧ ದಂಗೆಯೆದ್ದ ಸ್ವಾತಂತ್ರ್ಯ ಹೋರಾಟಗಾರ. ಬ್ರಿಟಿಷರ ಹೊಸ ನೀತಿಯಿಂದಾಗಿ ತಮ್ಮ ಮೂಲ ನೆಲೆಗಳನ್ನು ಕಳೆದುಕೊಂಡ ಅಲ್ಲಿನ ಬುಡಕಟ್ಟು ಸಮುದಾಯಗಳ ಪರವಾಗಿ ಹೋರಾಟಕ್ಕೆ ನಿಂತ ಈತ, ಆಂಗ್ಲರ ದಬ್ಬಾಳಿಕೆ, ಚಿತ್ರಹಿಂಸೆಯ ಜೊತೆಗೆ ಭಾರತದ ಸಂಪತ್ತನ್ನು ವಿದೇಶಕ್ಕೆ ಸಾಗಿಸಲು ಪ್ರಯತ್ನಿಸುತ್ತಿರುವುದರ ಬಗ್ಗೆ ಜನರಲ್ಲಿ ಅರಿವು ಮೂಡಿಸಿದ್ದಲ್ಲದೇ, ಬ್ರಿಟಿಷರ ವಿರುದ್ಧ ಹೊರಾಡಲು ಬುಡಕಟ್ಟು ಜನರ ಸೇನೆಯನ್ನು ಕಟ್ಟಿ ಗೆರಿಲ್ಲಾ ಮಾದರಿಯಲ್ಲಿ ಯುದ್ಧ ತಂತ್ರ ಬಳಸಿದ ಮೊದಲಿಗ. 03-03- 1900 ರಂದು ಬುಡಕಟ್ಟು ಗೆರಿಲ್ಲಾ ಸೇನೆಯ ಜೊತೆಗೆ ಜಮಕೋಪೈ ಅರಣ್ಯ ಪ್ರದೇಶದಲ್ಲಿ ಬ್ರಿಟಿಷ್ ಸೇನೆ ಬಿರ್ಸಾ ಮುಂಡಾರನ್ನು ಬಂಧಿಸಿದರು. 09-06-1900 ರಂದು ತನ್ನ 25 ನೇ ವಯಸ್ಸಿನಲ್ಲಿ ರಾಂಚಿ ಜೈಲ್ ನಲ್ಲಿರ್ತ ಕಾಲರಾ ರೋಗದಿಂದ ಈತ ಮೃತಪಟ್ಟರೆಂದು ಬ್ರಿಟಿಷ್ ಸರ್ಆರವು ಪ್ರಕಟಿಸಿತು. ಆದರೆ ಇವರಿಗೆ ಯಾವುದೇ ರೋಗ ಇರಲಿಲ್ಲ, ಜೈಲಿನಲ್ಲಿ ವಿಷವನ್ನು ನೀಡಿ ಕೊಂದಿರಬಹುದೆಂದು ಅನುಮಾನಪಡಲಾಗಿದೆ. ಈ ಕ್ರಾಂತಿಕಾರಿ ಸ್ವಾತಂತ್ರ್ಯ ಯೋಧನಿಗೆ ಗೌರವಾರ್ಥವಾಗಿ ಬಿಹಾರ ಸರ್ಕಾರವು ಬಿರ್ಸಾ ಕೃಷಿ ವಿಶ್ವವಿದ್ಯಾಲಯ, ಬಿರ್ಸಾ ಇನ್ಸಿಸ್ಟೂಟ್ ಆಫ್ ಟೆಕ್ನಾಲಜಿ, ಬಿರ್ಸಾ ಮುಂಡಾ ಅಥ್ಲೆಟಿಕ್ ಕ್ರೀಡಾಗಣ ಹಾಗೂ ಬಿರ್ಸಾ ಮುಂಡಾ ವಿಮಾನ ನಿಲ್ದಾಣಗಳಿಗೆ ಈತನ ಹೆಸರನ್ನಿಟ್ಟು ಗೌರವ ಸೂಚಿಸಿದೆ.

ಅಲ್ಲೂರಿ ಸೀತಾರಾಮ ರಾಜು: 07-07-1897ರಲ್ಲಿ ಆಂಧ್ರ ಪ್ರದೇಶದ ಪಶ್ಛಿಮ ಗೋದಾವರಿ ಜಿಲ್ಲೆಯ ಮೊಗಲ್ಲು ಎಂಬ ಹಳ್ಳಿಯಲ್ಲಿ ಜನಿಸಿದ ಅಲ್ಲೂರಿ ಸೀತಾರಾಮರಾಜು ಭಾರತೀಯ ಸ್ವಾತ್ರಂತ್ಯ ಚಳುವಳಿಯಲ್ಲಿ ಕ್ರಾಂತಿಕಾರಿ ಮುಖಂಡ. 1922-24 ರ ಅವಧಿಯಲ್ಲಿ ಬುಡಕಟ್ಟು ಜನಾಂಗದ ರಂಪ ದಂಗೆ ಚಳುವಳಿಯ ಮುಂದಾಳತ್ವ ವಹಿಸಿದ ಇವರು ಸ್ಥಳೀಯರಿಂದ ಕಾಡಿನ ನಾಯಕ ಎಂದೇ ಕರೆಯಲ್ಪಟ್ಟರು. ಅರಣ್ಯ ಪ್ರದೇಶದಲ್ಲಿ ಬುಡಕಟ್ಟಿನವರು ಮುಕ್ತವಾಗಿ ಸಂಚಾರ ಮಾಡುವುದು ಹಾಗೂ ಅರಣ್ಯ ಪ್ರದೇಶದಲ್ಲಿ ಸಾಂಪ್ರಾದಾಯಿಕ ಕೃಷಿ ಪದ್ಧತಿಯನ್ನು ಅನುಸರಿಸುವುದರ ವಿರುದ್ದವಾಗಿ ಚಾಲ್ತಿಗೆ ತಂದ ಮದ್ರಾಸ್ ಅರಣ್ಯ ಕಾಯ್ದೆ 1882 ರ ವಿರುದ್ಧ ಚಳುವಳಿಯನ್ನು ಮಾಡಿದರು. ಬಂಗಾಳದ ಕ್ರಾಂತಿಕಾರರಿಂದ ಸ್ಫೂರ್ತಿ ಪಡೆದ ಸೀತಾರಾಮ ರಾಜು, ಚಿಂತಪಲ್ಲೆ, ರಾಂಪಚೋದಾವರಂ, ಹಾಗೂ ಕೃಷ್ಣದೇವಿ ಪೇಟ ಮುಂತಾದ ಪೊಲೀಸ್ ಠಾಣೆಗಳಿಗೆ ನುಗ್ಗಿ ಬಂದೂಕು ಹಾಗೂ ಮದ್ದುಗುಂಡುಗಳು ಇನ್ನಿತರ ಸಲಕರಣೆಗಳನ್ನು ಕದ್ದು ದಂಗೆಗೆ ಬಳಸಿಕೊಂಡರು. ಸ್ಕ್ಯಾಟ್ ಕವರ್ಡ್ ಒಳಗೊಂಡಂತೆ ಹಲವಾರು ಬ್ರಿಟಿಷ್ ಸೇನಾಧಿಕಾರಿಗಳನ್ನು ಕೊಂದು ಬ್ರಿಟೀಷ್ರಿಗೆ ಸಿಂಹಸ್ವಪ್ನವಾಗಿದ್ದ ಸೀತಾರಾಮ ರಾಜು ಕೊನೆಗೆ ಚಿಂತಾಪಲ್ಲಿಯ ಅರಣ್ಯ ಪ್ರದೇಶದಲ್ಲಿ ಬ್ರಿಟೀಷರಿಗೆ ಸೆರೆಸಿಕ್ಕರು. ನಂತರ ಮರಕ್ಕೆ ಕಟ್ಟಿ ಹಾಕಿ ಇವರನ್ನು ಗುಂಡಿಕ್ಕಿ ಕೊಲ್ಲಲಾಯಿತು.

ತಿರುಪ್ಪೂರು ಕುಮಾರನ್ : 04-10-1904ರಲ್ಲಿ ತಮಿಳುನಾಡಿನ ತಿರುಪ್ಪೂರು ಜಿಲ್ಲೆಯ ಚಿನ್ನಿಮಲೈ ಎಂಬಲ್ಲಿ ಜನಿಸಿದ ಕುಮಾರಸ್ವಾಮಿ ಮೊದಲಿಯಾರ್, ತಿರುಪ್ಪೂರು ಕುಮಾರನ್ ಎಂದೇ ಸುಪ್ರಸಿದ್ದರು. ಹುಟ್ಟು ಹೋರಾಟಗಾರರಾದ ಇವರು ಗಾಂಧೀಜಿಯವರಿಂದ ಪ್ರೇರಿತರಾಗಿ ಅಲ್ಲಲ್ಲಿ ಬ್ರಿಟೀಷರ ವಿರುದ್ಧ ಜನರನ್ನು ಕೂಡಿಸಿ ಹೋರಾಟ ನಡೆಸುತ್ತಿದ್ದರು. 11-01-1931 ರಂದು ಬ್ರಿಟಿಷ್ ಸರ್ಕಾರದ ವಿರುದ್ಧ ಹೋರಾಟ ಆರಂಭಿಸಿದ ಕುಮಾರನ್, ಆಂಗ್ಲರು ದೇಶದ ಬಾವುಟವನ್ನು ನಿಷೇಧಿಸಿರುವುದನ್ನು ಲೆಕ್ಕಿಸದೇ ಬಾವುಟವನ್ನು ಎತ್ತಿ ಹಿಡಿದು ಪ್ರತಿಭಟನೆಯಲ್ಲಿ ಪಾಲ್ಗೊಂಡರು. ಅಂದಿನ ಹೋರಾಟದಲ್ಲಿ ಪೋಲಿಸರ ಗುಂಡಿಗೆ ಗಂಭೀರವಾಗಿ ಗಾಯಗೊಂಡು, ಸ್ವಾತಂತ್ರ್ಯ ಚಳುವಳಿಯಲ್ಲಿ ತನ್ನ ಪ್ರಾಣವನ್ನೇ ಬಲಿದಾನ ನೀಡಿದ ಮಹಾನ್ ವ್ಯಕ್ತಿ ಕುಮಾರನ್. ಯಾವ ಪ್ರತಿಫಲಾಪೇಕ್ಷೆಯಿಲ್ಲದೆ ತಾಯ್ನಾಡಿಗಾಗಿ ಹೋರಾಡಿ ಮಡಿದ ಇಂತಹ ವೀರರ ಜೀವನ ಚರಿತ್ರೆ ನಮ್ಮ ಮಕ್ಕಳಿಗೆ ಆದರ್ಶವಾಗಲಿ.

ದುರ್ಗಾಬಾಯಿ ದೇಶಮುಖ್: 15-07-1909ರಲ್ಲಿ ಆಂಧ್ರ ಪ್ರದೇಶದ ರಾಜಮಂಡ್ರಿಯಲ್ಲಿ ಜನಿಸಿದ ಇವರು ತಮ್ಮ 12ನೇ ವಯಸ್ಸಿನಲ್ಲಿ ಕಾಕಿನಾಡದಲ್ಲಿ ನಡೆದ ಗಾಂಧೀಜಿಯವರ ಅಸಹಕಾರ ಚಳುವಳಿಯಲ್ಲಿ ಪಾಲ್ಗೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡರು. ತಮ್ಮ ಪ್ರಚಂಡ ಸಂಘಟನಾ ಶಕ್ತಿಯಿಂದ ಇವರು ಆಂಧ್ರ ಮಹಿಳಾ ಸಭಾದ ಮುಖ್ಯಸ್ಥರಾದರು. ಆ ಮೂಲಕ ದಕ್ಷಿಣ ಭಾರತದಲ್ಲಿ ಮಹಿಳಾ ಶಿಕ್ಷಣ ಸಂಸ್ಥೆಗಳನ್ನು ತೆರಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಸ್ವಾಂತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡ ಇವರು ಭಾರತೀಯ ನ್ಯಾಷನಲ್ ಕಾಂಗ್ರೆಸ್ನಲ್ಲಿ ಮಹಾತ್ಮ ಗಾಂಧಿಯ ನಿಕಟವರ್ತಿಗಳಾಗಿದ್ದುದಲ್ಲದೆ ಸತ್ಯಾಗ್ರಹ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಮೂರು ಬಾರಿ ಜೈಲುವಾಸ ಅನುಭವಿಸಿದರು. ಈ ಹೋರಾಟದ ಮಧ್ಯೆಯೂ ತಮ್ಮ ಶಿಕ್ಷಣಕ್ಕೆ ಆದ್ಯತೆ ನೀಡಿ ಎಂ.ಎ. ಎಲ್.ಎಂ. ಪದವಿ ಮುಗಿಸಿದರು. ತಮ್ಮ ಜೀವಿತದ ಕೊನೆಯವರೆಗೂ ಅವರು ಮಕ್ಕಳು ಮತ್ತು ಮಹಿಳೆಯರ ಶಿಕ್ಷಣಕ್ಕಾಗಿ ದುಡಿದರು. 1971 ರಲ್ಲಿ ನೆಹರು ಲಿಟ್ರೆಸಿ ಅವಾರ್ಡ್ ಹಾಗೂ 1975 ರಲ್ಲಿ ಪದ್ಮವಿಭೂಷಣ ಪಡೆದರು. ದುರ್ಗಾಬಾಯಿ ದೇಶಮುಖ್ ಅವರು 09-05- 1981 ರಂದು ಇಹಲೋಕ ತ್ಯಜಿಸಿದರು. ಇಂತಹ ಮಹನೀಯರು ನಮಗೆ ಆದರ್ಶ ಪ್ರಾಯರಾಗಲಿ.

ಪಾರ್ವತಿ ಗಿರಿ : 19-02-1926 ರಲ್ಲಿ ಪಶ್ಚಿಮ ಒರಿಸ್ಸಾದ ಸಮ್ಲಾಯ್ಪದರ್ ಎಂಬ ಹಳ್ಳಿಯಲ್ಲಿ ಜನಿಸಿದರು. ತಮ್ಮ 16 ನೇ ವಯಸ್ಸಿನಲ್ಲಿ ಕ್ವಿಟ್ ಇಂಡಿಯಾ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡು ಸ್ವಾತಂತ್ರ್ಯ ಹೋರಾಟದಲ್ಲಿ ಗುರುತಿಸಿಕೊಂಡರು. ಮಹಾತ್ಮ ಗಾಂಧಿಯವರಿಂದ ಪ್ರಭಾವಿತರಾದ ಇವರು ಕ್ವಿಟ್ ಇಂಡಿಯಾ ಹೋರಾಟಕ್ಕಾಗಿ ತಮ್ಮ 16 ನೇ ವಯಸ್ಸಿನಲ್ಲಿ ಎರಡು ವರ್ಷಗಳ ಕಾಲ ಜೈಲುವಾಸ ಅನುಭವಿಸಿದರು. ಇವರ ಚಿಕ್ಕಪ್ಪ ರಾಮಚಂದ್ರಗಿರಿ ಗಾಂಧೀಜಿಯವರ ಒಡನಾಡಿಯಾಗಿದ್ದು, ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿದ್ದವರು. ಇವರ ಗಾಢ ಪ್ರಭಾವ ಪಾರ್ವತಿ ಗಿರಿ ಅವರ ಮೇಲಾಗಿತ್ತು, ಹಾಗಾಗಿ ಇವರು ಚಿಕ್ಕ ವಯಸ್ಸಿನಲ್ಲಿಯೇ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತೊಡಗಿಕೊಂಡರು. ಇವರ ಜೊತೆ ಫಕೀರ್ ಬೆಹೆರಾ, ಭಾಗೀರತಿ ಪಟ್ನಾಯಕ್, ದುರ್ಗಾ ಪ್ರಸಾದ್ ಗುರು, ಲಕ್ಷ್ಮಿನಾರಾಯಣ ಮಿಶ್ರಾ ಮುಂತಾದ ಹಿರಿಯ ಹೋರಾಟಗಾರರು ಇದ್ದರು. ಬಿಡುಗಡೆಯ ನಂತರವೂ ಅವರ ಗಿರಿಜನರ ಹಕ್ಕಿಗಾಗಿ ಹೋರಾಡಿದರು. ಅನಾಥರಿಗೆ ಆಶ್ರಯ ನೀಡಿ ದೇಶ ಸೇವೆಯನ್ನು ಮುಂದುವರೆಸಿದರು. ಇವರನ್ನು ಪಶ್ಚಿಮ ಒರಿಸ್ಸಾದ ಮದರ್ ತೆರೆಸಾ ಎಂದೇ ಗುರುತಿಸಲ್ಪಟ್ಟಿದ್ದಾರೆ.

ಬೆನಾಯ್, ಬಾದಲ್, ದಿನೇಶ್: ಇವರುಗಳನ್ನು ಬಂಗಾಳದ ತ್ರಿವಳಿ ಕ್ರಾಂತಿಕಾರಿಗಳೆಂದು ಸ್ಮರಿಸಲಾಗುತ್ತದೆ. ಇವರ ಸ್ನೇಹವು ಬೇರ್ಪಡಿಸಲಾಗದ ದೇಶಭಕ್ತಿಯಿಂದ ಕೂಡಿತ್ತು. ಬ್ರಿಟಿಷ್ ಅಧಿಕಾರಿಗಳ ಸರಣಿ ದಾಳಿಯ ನಂತರ, ಇವರುಗಳು ಎನ್.ಎಸ್. ಕಾಲೋನೆಲ್ ಸಿಂಪ್ಸನ್ಗೆ ಗುರಿಯಾಗಿಟ್ಟುಕೊಂಡು ಧಾಳಿ ಮಾಡುತ್ತಾರೆ. 08-12-1930 ರಲ್ಲಿ ಈ ಮೂವರು ಬೆಂಗಾಲಿ ಯುವಕರು ಬ್ರಿಟೀಷ್ ಅಧಿಕಾರಿಗಳ ವೇಷ ಧರಿಸಿ, ದೇಶಭಕ್ತರನ್ನು ಬಂಧಿಸಿಡುತ್ತಿದ್ದ ಕಾರಾಗೃಹದ ಮುಖ್ಯ ಪೊಲೀಸ್ ಅಧಿಕಾರಿ ಎನ್.ಎಸ್. ಕಾಲೋನೆಲ್ ಸಿಂಪ್ಸನ್ ಕಛೇರಿ ರೈಟರ್ಸ್ ಕಟ್ಟಡಕ್ಕೆ ಹೋಗಿ ಆತನನ್ನು ಕೊಂದರು. ಗುಂಡಿನ ಸದ್ದು ಕೇಳಿ ಪೊಲೀಸ್ ಅಧಿಕಾರಿಗಳು ಇವರನ್ನು ಸುತ್ತುವರೆದರು. ಕೆಲವು ಸುತ್ತಿನ ಗುಂಡಿನ ಚಕಮಕಿಯಲ್ಲಿ ಅನೇಕ ಪೊಲೀಸ್ ಅಧಿಕಾರಿಗಳು ತೀವ್ರವಾಗಿ ಗಾಯಗೊಂಡರು. ನಂತರ ಇವರುಗಳನ್ನು ಜೀವಂತವಾಗಿ ಸೆರೆಹಿಡಿಯಲಾಯಿತು. ಆದರೆ ಶತ್ರಗಳ ಕೈಗೆ ಸಿಗಬಾರದೆಂದು ಈ ದೇಶಭಕ್ತ ಯುವಕರು ಜೀವಕ್ಕೆ ಹೆದರದೆ ಬೆನಾಯ್ ಮತ್ತು ದಿನೇಶ್ ಗುಂಡು ಹೊಡೆದುಕೊಂಡು ಜೀವತ್ಯಾಗ ಮಾಡಿದರೆ, ಬಾದಲ್ ಪೋಟಾಷಿಯಂ ಸಯನೇಡ್ ಸೇವಿಸಿ ವೀರಮರಣ ಹೊಂದಿದರು. ಈ ವೀರ ಯುವಕರು ತಾಯ್ನಾಡಿನ ಬಿಡುಗಡೆಗಾಗಿ ತಮ್ಮ ಪ್ರಾಣವನ್ನೂ ಲೆಕ್ಕಿಸದೆ ತೋರಿದ ಶೌರ್ಯ ನಮ್ಮ ಯುವಕರಿಗೆ ಎಲ್ಲಾ ಕಾಲಕ್ಕೂ ಮಾದರಿ.

ಪೊಟ್ಟಿ ಶ್ರೀರಾಮುಲು : 16-03-1901ರಲ್ಲಿ ಮದರಾಸಿನಲ್ಲಿ ಜನಿಸಿದ ಇವರ ಕುಟುಂಬ ಆಂಧ್ರಪ್ರದೇಶದ ನೆಲ್ಲೂರಿಗೆ ಸೇರಿದ್ದಾಗಿತ್ತು. ಮದರಾಸಿನಲ್ಲಿ ಪ್ರೌಢಶಿಕ್ಷಣದವರೆಗೆ ಓದಿದ ಇವರು, ಮುಂಬೈನ ವಿಕ್ಟೋರಿಯಾ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿ ರೈಲ್ವೆ ಇಲಾಖೆಯಲ್ಲಿ 4 ವರ್ಷ ಸೇವೆ ಸಲ್ಲಿಸಿದರು. 1925 ರಲ್ಲಿ ಗಾಂಧೀಜಿಯ ವಿಚಾರಧಾರೆಗೆ ಮನಸೋತು ತನ್ನ ಆಸ್ತಿಯನ್ನೆಲ್ಲಾ ತನ್ನ ಸೋದರರಿಗೆ ಹಂಚಿ ಸಾಬರಮತಿ ಆಶ್ರಮಕ್ಕೆ ಹೋಗಿ ಅವರ ಜೊತೆ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡರು. ಇವರು ಮಹಾತ್ಮ ಗಾಂಧಿಯವರ ನಿಷ್ಟ ಅನುಯಾಯಿಯಾಗಿದ್ದರು, ದಲಿತ ಸಮೂಹದ ಬೆಂಬಲ ಸೇರಿದಂತೆ, ಅನೇಕ ಮಾನವೀಯ ಮೌಲ್ಯಗಳನ್ನು ರೂಢಿಸಿಕೊಂಡಿದ್ದರು. ಮದ್ರಾಸ್ ಪ್ರೆಸಿಡೆನ್ಸಿಯನ್ನು ಬ್ರಿಟಿಷ್ ಅಧಿಕಾರಿಗಳು ಆಂಧ್ರ ಪ್ರದೇಶದಲ್ಲಿ ಸ್ಥಾಪಿಸುವ ಬಗ್ಗೆ ವಿರೋಧಿಸಿ, ತೆಲಗು ಮಾತನಾಡುವ ಜನರಿಗೆ ಪ್ರತ್ಯೇಕವಾದ ರಾಜ್ಯವನ್ನು ರೂಪಿಸಲು ಉಪವಾಸ ಸತ್ಯಾಗ್ರಹದ ಮೂಲಕ ಪ್ರತಿಭಟನೆ ಮಾಡಿದ್ದರು. ಇವರು ಆಂಧ್ರ ಪ್ರದೇಶದ ಪ್ರತ್ಯೇಕತೆಗಾಗಿ ಮಾಡಿದ ಆಮರಣಾಂತ ಉಪವಾಸದಲ್ಲಿಯೇ ಮಡಿದ ಇವರನ್ನು ಆಂಧ್ರಪ್ರದೇಶದ ಜನ ಅಮರಜೀವಿ ಎಂದು ಕರೆದು ಗೌರವಿಸಿದ್ದಾರೆ. ಇವರ ಉಪವಾಸ ಸತ್ಯಾಗ್ರಹ ಹಾಗೂ ಸಮರ್ಪಣಾ ಮನೋಭಾವದ ಬಗ್ಗೆ ಮಹಾತ್ಮ ಗಾಂಧೀಜಿಯವರು ಪ್ರತಿಕ್ರಿಯೆ ನೀಡುತ್ತಾ ಶ್ರೀರಾಮುಲು ಅಂತಹ ಇನ್ನು 11 ಅನುಯಾಯಿಗಳು ನನ್ನ ಜೊತೆಗೂಡಿದರೆ ಒಂದು ವರ್ಷದಲ್ಲಿ ಬ್ರಿಟಿಷ್ರ ವಿರುದ್ಧ ಸ್ವಾತಂತ್ರ್ಯವನ್ನು ಪಡೆಯತ್ತೇನೆ ಎಂದು ಪ್ರಶಂಸೆಯನ್ನು ವ್ಯಕ್ತಪಡಿಸಿದ್ದರು. ಈ ಕ್ರಾಂತಿಕಾರಿಯ ಗೌರವಾರ್ಥವಾಗಿ ಪೊಟ್ಟಿ ಶ್ರೀರಾಮುಲು ತೆಲಗು ವಿಶ್ವವಿದ್ಯಾಲಯವನ್ನು ಪ್ರಾರಂಭಿಸಲಾಗಿದೆ.

ತಾರಾ ರಾಣಿ ಶ್ರೀವಾಸ್ತವ : ಇವರು ಬಿಹಾರದ ಬಡತನದ ಕುಟುಂಬದಲ್ಲಿ ಜನಿಸಿ, 13 ನೇ ವಯಸ್ಸಿಗೆ ಫುಲೇಂದು ಬಾಬು ಅವರನ್ನು ಮದುವೆಯಾದರು. ದಂಪತಿಗಳಿಬ್ಬರೂ ದೇಶಪ್ರೇಮಿಗಳಾಗಿದ್ದು, ಒಮ್ಮೆ ಮಹಾತ್ಮ ಗಾಂಧಿಯವರು ಬ್ರಿಟಿಷರ ವಿರುದ್ಧ ಹೋರಾಟ ನಡೆಸಿ ಸಿವಾನ್ ಪೋಲಿಸ್ ಠಾಣೆಯ ಮೇಲೆ ರಾಷ್ಟ್ರಧ್ವಜವನ್ನು ಏರಿಸುವಂತೆ ಕರೆ ನೀಡಿದರು. ಆ ಹಿನ್ನೆಲೆಯಲ್ಲಿ ದಂಪತಿಗಳಿಬ್ಬರೂ ಚಳುವಳಿಯ ಮುಂದಾಳತ್ವವನ್ನು ವಹಿಸಿಕೊಂಡು ಜನಗುಂಗಳಿಯ ಮುಂದೆ ನಿಂತು ಘೋಷಣೆಗಳನ್ನು ಕೂಗುತ್ತಿದ್ದಾಗ ಪೊಲೀಸರ ಗುಂಡು ಫುಲೇಂದು ಬಾಬು ಅವರಿಗೆ ತಾಗಿತು. ಆಗ ತಾರಾ ರಾಣಿ ಶ್ರೀವಾಸ್ತವ ಅವರು ವಿಚಲಿತರಾಗದೇ, ಗಂಡನ ಗಾಯಕ್ಕೆ ಬ್ಯಾಂಡೇಜ್ ಮಾಡಿ ಚಳುವಳಿಯನ್ನು ಮುಂದುವರೆಸಿ ಧ್ವಜವನ್ನು ಹಿಡಿದುಕೊಂಡು ಪೊಲೀಸ್ ಠಾಣೆ ಕಡೆಗೆ ನುಗ್ಗಿದರು. ವಾಪಸ್ಸು ಬರುವ ಹೊತ್ತಿಗೆ ಫುಲೆಂದು ಬಾಬುರವರು ಮೃತಹೊಂದಿದ್ದರು. ತದನಂತರವೂ ಧೈರ್ಯವನ್ನು ಕಳೆದುಕೊಳ್ಳದೇ ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು. ಇಂತಹ ಮಹನೀಯರ ತ್ಯಾಗ ಮತ್ತು ಬಲಿದಾನಗಳಿಂದ ಈ ದೇಶ ಸ್ವತಂತ್ರವಾಯಿತು