Friday 16 April 2021

ಚಜೇಮ್ಸ್ ವ್ಹಾಟ್ನ ಹಬೆಯಂತ್ರ

 


ಚಜೇಮ್ಸ್ ವ್ಹಾಟ್ನ ಹಬೆಯಂತ್ರ
- ಕೊಟ್ರೇಶ್ ಎಸ್.

ಮಾನವ ಇತಿಹಾಸದುದ್ದಕ್ಕೂ ವೈಜ್ಞಾನಿಕ ಸಂಶೋಧನೆಗಳನ್ನು ಮಾಡುತ್ತಾ ಜೊತೆ ಜೊತೆಗೆ ಅನೇಕ ದಾಖಲೆಗಳನ್ನು ಮಾಡಿ ಆಧುನಿಕ ಯುಗಕ್ಕೆ ಅಮೂಲ್ಯ ಕೊಡುಗೆ ಸಲ್ಲಿಸಿದ್ದಾನೆ. ಮಾನವ ದೈಹಿಕ ದುಡಿಮೆ ಹಾಗೂ ಪ್ರಾಣಿ ಶಕ್ತಿ ಜಾಗಕ್ಕೆ ಯಂತ್ರಶಕ್ತಿಯನ್ನು ತರುವುದರ ಜೊತೆಗೆ ಅವುಗಳ ಸಕಾರಾತ್ಮಕ ಉಪಯೋಗಕ್ಕೆ ಸ್ಪಂದಿಸುತ್ತಾ ಬಂದಿದ್ದಾನೆ. ತನ್ನ ಸುಖ, ಸಂಪತ್ತುಗಳ ಅಭಿವೃದ್ಧಿಗೆ ಚಿಂತಿಸಿ ಪ್ರಾಪಂಚಿಕ ಬದಲಾವಣೆಗೆ ಶ್ರಮಿಸಿದ. ನಿತ್ಯ ನೂತನವಾದ ಸಂಶೋಧನೆಗಳನ್ನು ಮಾಡಿ ಕಾರ್ಯರೂಪಕ್ಕೆ ತರುವುದರ ಮೂಲಕ ಜನ ಸಾಮಾನ್ಯರಿಗೆ ಉಪಯೋಗವಾಗುವಂತೆ ಮಾಡಿದ. ಈ ಎಲ್ಲಾ ಕ್ಷಿಪ್ರಗತಿಯ ಬದಲಾವಣೆಯಾದದ್ದು ವಿಜ್ಞಾನವೆಂಬ ಅಸ್ತ್ರದಿಂದ. ಈ ವಿಜ್ಞಾನದ ಹಿಂದೆ ಅನೇಕ ವಿಜ್ಞಾನಿಗಳ ಪರಿಶ್ರಮ ಅಡಗಿದೆ.

ಅದರಲ್ಲೂ ಕೈಗಾರಿಕಾ ಕ್ರಾಂತಿಗೆ ಕಾರಣವಾದ ಹಬೆಯಂತ್ರವನ್ನು ಆವಿಷ್ಕರಿಸಿದ್ದು ಖ್ಯಾತ ವಿಜ್ಞಾನಿ ಜೇಮ್ಸ್ ವ್ಹಾಟ್. ನಾವು ನಿತ್ಯ ಅಡುಗೆ ಮನೆಯಲ್ಲಿ ಅಡುಗೆ ಮಾಡುವಾಗ ಇಲ್ಲವೇ ನೀರು ಕಾಯಿಸುವಾಗ ನೀರಿನಿಂದ ಹಬೆ ಬರುವುದನ್ನು ನೋಡಿದ್ದೇವೆ. ಅದಕ್ಕೂ ಶಕ್ತಿಯಿದೆ ಎಂದು ಎಷ್ಟು ಜನ ಆಲೋಚಿಸಿದ್ದೇವೆ ? ಆದರೆ ಈ ಜೇಮ್ಸ್ ವ್ಹಾಟ್ ಎಂಬ ವಿಜ್ಞಾನಿ ಅದರ ಶಕ್ತಿ ಪತ್ತೆಹಚ್ಚುವುದರ ಜೊತೆಗೆ ಅದನ್ನು ಯಂತ್ರ ಚಲನೆಗೆ ಅನ್ವಯಿಸಿ ಮುಂದೆ ಮಾನವನ ಸಹಾಯಕ್ಕೆ ಬೇಕಾದ ಹಬೆ ಯಂತ್ರ ಕಂಡುಹಿಡಿದ. ಆದ್ದರಿಂದಲೇ ಇವರನ್ನು ಹಬೆಯಂತ್ರದ ಜನಕ ಎಂದು ಕರೆಯುತ್ತೇವೆ.

ಜೇಮ್ಸ್ ವ್ಹಾಟ್ ಸ್ಕಾಟ್ಲ್ಯಾಂಡಿನ ಗ್ರೀನಾಕ್ ಎಂಬ ಊರಿನಲ್ಲಿ 1736 ಜನವರಿ 19 ರಂದು ವರ್ತಕ ಕುಟುಂಬದಲ್ಲಿ ಜನಿಸಿದರು. ತಂದೆ ಬಡಗಿಯಾದ್ದರಿಂದ ಬಾಲ್ಯ ಕಷ್ಟದಾಯಕವಾಗಿತ್ತು. ವಿದ್ಯಾರ್ಥಿ ದೆಸೆಯಿಂದಲೇ ವಿಭಿನ್ನ ಆಲೋಚನೆಯುಳ್ಳವರಾಗಿದ್ದ ಜೇಮ್ಸ್ ಚಿಕ್ಕ ವಯೋಮಾನದಲ್ಲಿಯೇ ಹಲವಾರು ಸಂಶೋಧನೆಗೆ ಪ್ರಯತ್ನಪಟ್ಟರು. ಆಗಿನ್ನೂ ವಿಜ್ಞಾನ ಅಷ್ಟೊಂದು ವಿಕಸನ ಹೊಂದಿರಲಿಲ್ಲ. ಆದರೆ ಜೇಮ್ಸ್ನ ಪುಟ್ಟ ಮೆದುಳು ಅವನನ್ನು ಸುಮ್ಮನೆ ಕೂರಲು ಬಿಡುತ್ತಿರಲಿಲ್ಲ. 18 ವಯಸ್ಸಿಗಾಗಲೆ ಹಬೆಯಂತ್ರದ ಪ್ರಾಥಮಿಕ ಹಂತವನ್ನು ಕಂಡುಹಿಡಿದಿದ್ದರು! 19 ನೆಯ ವಯಸ್ಸಿಗೆ ಲಂಡನ್ನಿನಲ್ಲಿ ಸಾಧನ ಸಲಕರಣೆ ತಯಾರಕನೊಬ್ಬನ ಬಳಿ ತರಬೇತಿ ಪಡೆದರು. ನಂತರ ಅಲ್ಲಿಯೇ ಕೆಲಸ ಆರಂಭಿಸಿದ, ಆದರೆ ಇಲ್ಲಿ ದೊರೆಯುತ್ತಿದ್ದ ಪಗಾರ ಊಟಕ್ಕೂ ಸಾಲದಾಯಿತು. ವರ್ಷಾಂತ್ಯದೊಳಗೆ ಅನಾರೋಗ್ಯಕ್ಕೆ ತುತ್ತಾಗಿ ಮನೆಗೆ ಹಿಂದಿರುಗಿದರು.

ಅಷ್ಟಕ್ಕೆ ಸುಮ್ಮನಾಗದೆ ಆರೋಗ್ಯ ಚೇತರಿಸಿಕೊಂಡ ಮೇಲೆ ಗ್ರೀನಾಕ್ಗೆ ಹತ್ತಿರದಲ್ಲಿದ್ದ ಗ್ಲಾಸ್ಗೋ ವಿಶ್ವವಿದ್ಯಾನಿಲಯದಲ್ಲಿ ಸಹಾಯಕನಾಗಿ ಕೆಲಸಕ್ಕೆ ಸೇರಿಕೊಂಡರು. ಅನಂತರ ಗಣಿತಶಾಸ್ತ್ರ ಸಾಧನ ಸಲಕರಣೆಗಳ ತಯಾರಿಕೆಯಲ್ಲಿ ಪರಿಣಿತಿ ಪಡೆದು ಅಂತರ್ಗತ ಹಬೆಯಂತ್ರ ಕಂಡುಹಿಡಿದರು. ಕಾಲೇಜನಲ್ಲಿ ಜೋಸೆಫ್ ಬ್ಲಾಕ್ ಗ್ಲಾಸ್ಗೋ ಮಾಡುವ ರಸಾಯನ ಶಾಸ್ತ್ರದ ಪಾಠ ಆಲಿಸುತ್ತ ಸಂಶೋಧನಾ ತೀಕ್ಷ್ಣತೆಯನ್ನು ವೃದ್ಧಿಸಿಕೊಂಡರು. ನಂತರದ ದಿನಗಳಲ್ಲಿ ಎಡಿನ್ಬರೋ ವಿಶ್ವ ವಿದ್ಯಾಲಯದಲ್ಲಿ ಫ್ರೊ. ಜಾನ್ ರೋಬಿಸನ್ ಅವರ ಶಿಷ್ಯರಾಗಿ ಹಬೆ ಸಿದ್ಧಾಂತಗಳನ್ನು ಮನನ ಮಾಡಿಕೊಂಡರು. ಆವಾಗಲೆ ತಮ್ಮ ಅಭಿಪ್ರಾಯಗಳನ್ನು ಗುರುಗಳ ಮುಂದೆ ಧೈರ್ಯವಾಗಿ ನಿರೂಪಿಸಿದರು. ಇಲ್ಲಿಯೇ ಜೇಮ್ಸ್ ಗೆ ಹಬೆಯಂತ್ರವನ್ನು ಬೃಹತ್ ಪ್ರಮಾಣದಲ್ಲಿ ರೂಪಿಸಬೇಕೆಂಬ ಗೀಳು ಅಂಟಿಕೊಂಡದ್ದು. ಈ ಸಾಧನೆಗಾಗಿಯೇ ಸತತವಾಗಿ ಆರು ವರ್ಷಗಳ ಕಾಲ ಕಾಲೇಜಿನ ಕಾರ್ಯಾಗಾರದಲ್ಲಿ ವಿಭಿನ್ನ ಪ್ರಯೋಗಗಳನ್ನು ಮಾಡಿದರು. ಆದರೆ ಫಲ ಸಿಗಲಿಲ್ಲ. ಆ ಹೊತ್ತಿಗಾಗಲೇ ಅಕ್ಕಸಾಲಿಗ ಥಾಮಸ್ ನ್ಯೂಕ್ಮೆನ್ ನಿರ್ಮಿಸಿದ್ದ ನೀರೆತ್ತುವ ಹಬೆ ಯಂತ್ರಗಳು ಬ್ರಿಟಿಷ್ ಗಣಿಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದವು. ಆದರೆ ಈ ಯಂತ್ರಗಳು ಅಧಿಕ ಪ್ರಮಾಣದ ಕಲ್ಲಿದ್ದಲು ಬೆಂಕಿಯನ್ನು ಬಯಸುತ್ತಿದ್ದವು. ಇವು ಕೇವಲ ಹೆಥೇಚ್ಚವಾಗಿ ಕಲ್ಲಿದ್ದಲು ಸಿಗುವ ಪ್ರದೇಶದಲ್ಲಿ ಕಾರ್ಯನಿರ್ವಹಿಸಲು ಯೋಗ್ಯವಾಗಿದ್ದವು. ಆದರೆ ಕಲ್ಲಿದ್ದಲು ದೊರೆಯದ ಪ್ರದೇಶಗಳಿಗೆ ಇವು ದುಬಾರಿಗಳಾಗಿದ್ದವು. ಈ ಸಮಸ್ಯೆಗೆ ಪರಿಹಾರ ಹುಡುಕಲೇಬೇಕು ಎಂಬ ಆಲೋಚನೆ ಜೇಮ್ಸ್ ಅವರಲ್ಲಿ ಕಾಡಿತು. ಇದಕ್ಕೆ ಪೂರಕವೆಂಬಂತೆ ಒಂದು ದಿನ ಕಾಲೇಜಿನ ಪ್ರೊಫೆಸರ್ ಕೆಟ್ಟುಹೋದ ನ್ಯೂಕ್ಮೆನ್ ಯಂತ್ರದ ಮಾದರಿಯನ್ನು ರಿಪೇರಿ ಮಾಡಲು ಜೇಮ್ಸ್ಗೆ ಹೇಳಿದರು. ಅಂತೆಯೇ ಜೇಮ್ಸ್ ಬಿಚ್ಚಿ ಸಿದ್ಧಗೊಳಿಸಿ, ಅದರ ಮೂಲ ಕಾರ್ಯಗಳನ್ನು ಅವಲೋಕಿಸಿದರು.

ಮನೆಯಲ್ಲಿ ಅಡುಗೆ ಮಾಡುವಾಗ ಹಬೆಯ ಪ್ರಭಾವದಿಂದ ಮುಚ್ಚಿದ ಪ್ಲೇಟ್ ಕೆಳಗೆ ಬೀಳುವುದನ್ನು ಗಮನಿಸಿದ. ಪುನಃ ಪುನಃ ಅವಲೋಕಿಸಿದ. ಇದಕ್ಕ ಕಾರಣ ಹಬೆಯಲ್ಲಿನ ಶಕ್ತಿ ಎಂಬ ತೀಮರ್ಾನಕ್ಕೆ ಬಂದರು. ಹೊಸಶಕ್ತಿಯಾದ ಹಬೆಯನ್ನು ಮಾನವನ ಪ್ರಯೋಜನಕ್ಕಾಗಿ ಬಳಸಲು ಸಾಧ್ಯವಾದ ಯಂತ್ರಗಳ ಬೆಳವಣಿಗೆಗೆ ಜೇಮ್ಸ್ ಸಂಶೋಧನೆಯೆ ಬುನಾದಿಯಾಯಿತು. ಮುಂದೆ ಈ ಉಪಕರಣದ ಬಿಡಿಭಾಗಗಳ ತಯಾರಿಕೆಗೆ ಬಹಳ ಕಷ್ಟಪಟ್ಟು ನಿರಂತರ ನಾಲ್ಕು ವರ್ಷಗಳ ಕಾಲ ಸಂಶೋಧನೆಯಲ್ಲಿ ಕಾರ್ಯತತ್ಪರರಾಗಿ ಸನ್ನದನ್ನು ಪಡೆಯುತ್ತಾರೆ. ತನ್ನ ತಲೆಯಲ್ಲಿ ಸುಳಿದಾಡುತ್ತಿದ್ದ ಆಲೋಚನೆಗಳನ್ನೆಲ್ಲಾ ಪ್ರದರ್ಶಿಸಲು ಬೇಕಾಗಿದ್ದ ಯಂತ್ರ ತಯಾರಿಸಲು ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಆದ್ದರಿಂದ ಜೇಮ್ಸ್ಗೆ ಒಬ್ಬ ಬಂಡವಾಳಶಾಹಿಯ ಹಾಗೂ ಪಾಲುದಾರನ ಅಗತ್ಯ ಕಾಡಿತು. ಇದಕ್ಕಾಗಿಯೇ ವ್ಹಾಟ್ ಒಂದು ದಿನ ಬರ್ಮಿಂಗ್ ಹ್ಯಾಂ ಸೋಹೋ ಇಂಜಿನೀಯರಿಂಗ್ ವರ್ಕ್ಸ್ ಮಾಲೀಕರಾದ ಮ್ಯಾಥ್ಯೂ ಬೌಲ್ಟನ್ನನ್ನು ಭೇಟಿಯಾಗಿ ಯಂತ್ರದ ಆವಿಷ್ಕಾರದ ಹಾಗೂ ಕಾರ್ಯವೈಖರಿಯ ಬಗ್ಗೆ ವಿವರಿಸಿದರು. ಇದನ್ನೆಲ್ಲಾ ಆಲಿಸಿದ ಬೌಲ್ಟನ್ ಇದರ ಉನ್ನತಿಗೆ ಸಹಕರಿಸಲು ಒಪ್ಪಿದರು. ಇಬ್ಬರೂ ಜೊತೆಯಾಗಿ 'ಬೌಲ್ಟನ್ ಅಂಡ್ ವ್ಹಾಟ್' ಸಂಸ್ಥೆ ಸ್ಥಾಪಿಸಿದರು. ಮುಂದೆ ಈ ಯಂತ್ರ ಹಲವು ಅಶ್ವ ಶಕ್ತಿಗಳಿಗೆ ಸಮಾನವಾಗಿ ಕೆಲಸ ಮಾಡಬಲ್ಲ ಸಾಧನವಾಗಿ ಜನಪ್ರಿಯವಾಯಿತು.ಜೇಮ್ಸ್ ತನ್ನ ಯಂತ್ರದ ಸಾಮಥ್ರ್ಯವನ್ನು ಜನರಿಗೆ ಅರ್ಥೈಸಲು ಬಲವಾದ ಕುದುರೆಗಳನ್ನು ಬಳಸಿ ಲೆಕ್ಕಚಾರ ಹಾಕಿದ. ಒಂದು ನಿಮಿಷದಲ್ಲಿ ಒಂದು ಕುದುರೆ 33,000 ಪೌಂಡುಗಳ ಭಾರವನ್ನು ಒಂದು ಅಡಿ ದೂರಕ್ಕೆ ಎತ್ತಿಕೊಂಡು ಹೋಗಬಲ್ಲುದು. ಅಂದರೆ ಪ್ರತಿ ನಿಮಿಷಕ್ಕೆ 33000 ಪೌಂಡುಗಳು ಒಂದು ಅಶ್ವಶಕ್ತಿ ಎಂದಾಯಿತು. ಈ ಆಧಾರದ ಮೇಲೆ ತಾನು ತಯಾರಿಸಿದ ಯಂತ್ರ ನಲವತ್ತು ಕುದುರೆಗಳ ಕೆಲಸ ಮಾಡಬಲ್ಲದು ಎಂದು ಸಾರ್ವಜನಿಕವಾಗಿ ಮನವರಿಕೆ ಮಾಡಿಕೊಟ್ಟರು.

ಬೌಲ್ಟನ್ನಿನ ಮಾರಾಟ ಕೌಶಲದ ಪ್ರಭಾವದಿಂದ 1783 ರ ಹೊತ್ತಿಗೆ ಕಾರ್ನ್ ವಾಲ್ ಗಣಿಗಳನ್ನೊಳಗೊಂಡಂತೆ ಉಳಿದ ಎಲ್ಲಾ ಕಡೆ ವ್ಹಾಟ್ ಯಂತ್ರಗಳೇ ಬಳಕೆಗೆ ಬಂದವು. ಏಕೆಂದರೆ ಈ ಮಿತ ಇಂಧನ ಪಡೆದು ವೇಗವಾಗಿ ಕಾರ್ಯಮಾಡುತ್ತಿದ್ದವು. ಇಷ್ಟಕ್ಕೆ ಸುಮ್ಮನಾಗದ ಜೇಮ್ಸ್ ವ್ಹಾಟ್ ನವೀನ ರೀತಿಯ ಪ್ರಯೋಗಗಳನ್ನು ಮಾಡುತ್ತಾ ಬೇರೆ ಬೇರೆ ವಿಧದ ಯಂತ್ರಗಳನ್ನು ಓಡಿಸುವ ಹಾಗೆ ಆವಿಷ್ಕರಿಸಿದರು.

ಅಂದಹಾಗೆ ಜೇಮ್ಸ್ ವ್ಹಾಟ್ ಹಬೆಯಂತ್ರ ಕಂಡುಹಿಡಿದ ಮೊದಲ ವ್ಯಕ್ತಿಯಲ್ಲ, ಆದರೆ ಹಿಂದಿನ ಯಂತ್ರಗಳಿಗಿಂತ ವಿಭಿನ್ನವಾದ ಜನೋಪಯೋಗಿ ಹಾಗೂ ಕೇವಲ ಹಬೆಯ ಶಕ್ತಿ ಬಳಸಿ ಕಂಡುಹಿಡಿದಿದ್ದು ವಿಶೇಷ. ಅಲ್ಲಿಯವರೆಗೆ ಕಲ್ಲಿದ್ದಲನ್ನು ಮಾತ್ರ ಅವಲಂಬಿಸಿದ್ದ ಯಂತ್ರಗಳ ಮಾದರಿ ಹೊಸ ರೂಪ ಪಡೆದುಕೊಂಡವು. ಅದರಲ್ಲೂ ಹಬೆಯ ಶಕ್ತಿ ಬಳಕೆಯಲ್ಲಿ ವ್ಹಾಟ್ ತೋರಿದ ಜಾಣ್ಮೆ ಹಾಗೂ ಸುಧಾರಣಾ ನೀತಿಗಳು ಸರ್ವರನ್ನೂ ಆಕರ್ಷಿಸಿತು. ಮುಂದೆ ತಿರುಗುವ ಯಂತ್ರಗಳ ವೇಗವನ್ನು ಸ್ವಯಂಚಾಲಿತವಾಗಿ ನಿಯಂತ್ರಿಸುವ ಸಾಧನವನ್ನು ಕಂಡುಹಿಡಿದರು. ಹಬೆಯ ಒತ್ತಡಕ್ಕೂ, ಗಾತ್ರಕ್ಕೂ ಇರುವ ಸಂಬಂಧವನ್ನು ರೂಪಿಸಿದರು. ಇದೆ ಮುಂದೆ ಇದು ರೈಲಿನ ಸುಧಾರಣೆಗೆ ಕಾರಣವಾಯಿತು.

ಈ ಹಬೆಯಂತ್ರದ ಸಂಶೋಧನೆ ನಂತರದ ದಿನಗಳಲ್ಲಿ ಜಾಗತಿಕವಾಗಿ ಕ್ರಾಂತಿಕಾರಕ ಪರಿವರ್ತನೆಗೆ ಕಾರಣವಾಗುತ್ತದೆ. ಇಂತಹ ಕ್ರಾಂತಿಗೆ ಕಾರಣವಾದ ಮಹಾನ್ ಚಿಂತಕ, ಸಂಶೋಧಕ, ವಿವೇಕಶಾಲಿ, ಸ್ನೇಹಜೀವಿ 1819 ರಲ್ಲಿ   ತಮ್ಮ 83 ನೆಯ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದರು.

 ಶಾಲೆಗಳಲ್ಲಿ ಸೃಜನಶೀಲತೆಯ ಪಾತ್ರ ಸರ್ ಕೆನ್ ರಾಬಿನ್ಸನ್- ಕಲಾ ಶಿಕ್ಷಣದ ಪ್ರವರ್ತಕ
- ಹೃಷಿಕೇಶ್ ಬಹಾದ್ದೂರ್ ದೇಸಾಯಿ

``ಕಲಾ ತರಬೇತಿ ಬೇಕಿರುವುದು ಕೇವಲ ಕಲಾವಿದರಿಗಲ್ಲ. ಪ್ರತಿಯೊಬ್ಬ ವಿದ್ಯಾರ್ಥಿಗೂ ಕಲಾ ಶಿಕ್ಷಣ ದೊರಕಬೇಕು. ಹಾಗೆ ನೋಡಿದರೆ ಕಲಾ ತರಬೇತಿ ಇಲ್ಲದ ಶಿಕ್ಷಣ, ಶಿಕ್ಷಣವೇ ಅಲ್ಲ, ಎಂದು ಹೇಳುತ್ತಾ ಕಲೆ ಶಿಕ್ಷಣದ ಅವಿಭಾಜ್ಯ ಅಂಗ, ಅದು ಪ್ರತಿಯೊಂದು ಮಗುವಿನ ಮೂಲಭೂತ ಹಕ್ಕು ಎಂದು ಪ್ರತಿಪಾದಿಸಿದ ಸರ್.ಕೆನ್.ರಾಬಿನ್ಸನ್ ನಮ್ಮ ಕಾಲದ ಶ್ರೇಷ್ಠ ಶಿಕ್ಷಣ ತಜ್ಞರಲ್ಲೊಬ್ಬರು.

ಪಠ್ಯಕ್ರಮದಲ್ಲಿ ನಾಟಕ ಎನ್ನುವ ಸಂಶೋಧನಾ ಪ್ರಬಂಧದ ಬಗ್ಗೆ ಡಾಕ್ಟರೇಟ್ ಪಡೆದರು. ಇಂಗ್ಲೆಂಡ್ ನ ವಾರವಿಕ್ ವಿಶ್ವವಿದ್ಯಾಲಯದಲ್ಲಿ ಕಲಾಶಿಕ್ಷಣ ವಿಭಾಗದಲ್ಲಿ ಕೆಲಸ ಮಾಡಿ, ಈಗ ಅಲ್ಲಿ ಅತಿಥಿ ಪ್ರಾಧ್ಯಾಪಕರಾಗಿದ್ದಾರೆ.

ಇಂಗ್ಲೆಂಡ್ನ ಮಹಾರಾಣಿಯವರು ನೇಮಿಸಿದ್ದ ಕಲಾ ಶಿಕ್ಷಣ ಸುಧಾರಣಾ ಸಮಿತಿಯ ಅಧ್ಯಕ್ಷರಾಗಿ ಇವರು ಐದು ವರ್ಷ ಕೆಲಸ ಮಾಡಿದರು. ಈ ಸಮಿತಿಯ ವರದಿ ಈಗ ಅಂತಾರಾಷ್ಟ್ರೀಯ ಖ್ಯಾತಿ ಪಡೆದಿದೆ. ಕಲಾಶಿಕ್ಷಣ ಕ್ಷೇತ್ರಕ್ಕೆ ಸಲ್ಲಿಸಿದ ತಮ್ಮ ಜೀವಮಾನದ ಸೇವೆಗೆ 2003 ರಲ್ಲಿ ಅವರು ಇಂಗ್ಲೆಂಡ್ನ ರಾಣಿಯವರಿಂದ `ಸರ್ ಸನ್ಮಾನ ಪಡೆದರು.

ಇಂಗ್ಲೆಂಡ್ ಮೂಲದ ಸಾಮಾನ್ಯ ವರ್ಗದ ಕುಟುಂಬವೊಂದರಲ್ಲಿ ಹುಟ್ಟಿದ ಕೆನೆತ್ ರಾಬಿನ್ಸನ್ ಅವರು 4 ವರ್ಷದವರಿದ್ದಾಗ ಪೋಲಿಯೋ ರೋಗ-ಕ್ಕೆ ಒಳಗಾಗಿ ಕಾಲಿನ ಶಕ್ತಿ ಕಳೆದುಕೊಂಡರು. ವಿವಿಧ ಸರಕಾರಿ ಶಾಲೆಗಳಲ್ಲಿ ಓದಿದ ಅವರು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಸರಕಾರಿ ಅಂಗವಿಕಲರ ಶಾಲೆಗೆ ಸೇರಿದರು. ಶಿಕ್ಷಣ, ಕಲೆ ಹಾಗೂ ಸಾಹಿತ್ಯದಲ್ಲಿ ಪದವಿ ಹಾಗೂ ಸ್ನಾತಕೋತ್ತರ ಪದವಿ ಪಡೆದು ಶಾಲಾ ಈಗ ಅಮೇರಿಕಾದಲ್ಲಿ ನೆಲೆಸಿರುವ ಸರ್ ಕೆನ್ ರಾಬಿನ್ಸನ್ ಶಿಕ್ಷಣದ ಮೇಲಿನ ತಮ್ಮ ಸಂಶೋಧನೆಗಳನ್ನು ಮುಂದುವರೆಸಿದ್ದಾರೆ. ವಿವಿಧ ವಿಶ್ವವಿದ್ಯಾಲಯಗಳಿಗೆ ಸಲಹೆಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಶಾಲಾ ಶಿಕ್ಷಣದಲ್ಲಿ ಕಲೆಯ ಪ್ರಾಮುಖ್ಯತೆಯನ್ನು ಎತ್ತಿ ತೋರಿಸುವ ಚಿಂತಕರಲ್ಲಿ ಪ್ರಮುಖರಾದವರು ಇಂಗ್ಲೆಂಡಿನ ಸರ್.ಕೆನ್.ರಾಬಿನ್ಸನ್. ಈ ಕಾಲದ ಶೈಕ್ಷಣಿಕ ಚಿಂತನೆಯಲ್ಲಿ, ಶಾಲಾ ಶಿಕ್ಷಣದ ದಿಕ್ಕು ನಿರ್ಧರಿಸುವಲ್ಲಿ ಅವರ ಪ್ರಭಾವ ಅಧಿಕ.

ಅವರ ಅಧ್ಯಕ್ಷತೆಯಲ್ಲಿ 1998ರಲ್ಲಿ ರೂಪುಗೊಂಡ ರಾಬಿನ್ಸನ್ ವರದಿ ಜಾಗತಿಕ ಮಟ್ಟದಲ್ಲಿ ಯುನೆಸ್ಕೋದಂತಹ ಸಂಸ್ಥೆಗಳನ್ನು, ವಿವಿಧ ದೇಶಗಳ ಸರಕಾರಗಳನ್ನು, ಹಾಗೂ ನೀತಿ ನಿರೂಪಕರನ್ನು ಪ್ರಭಾವಿಸಿದೆ. ಸೃಜನಶೀಲತೆ, ಸಂಸ್ಕೃತಿ ಹಾಗೂ ಶಿಕ್ಷಣ ಒಂದಕ್ಕೊಂದು ಬೆಸೆದುಕೊಂಡಾಗ ಮಾತ್ರ ನಮ್ಮೆಲ್ಲರ ಭವಿಷ್ಯ ಹಸನಾಗಬಲ್ಲುದು ಎನ್ನುವುದು ಈ ವರದಿಯ ಮುಖ್ಯಾಂಶ.  

ಟೆಡ್ ಎಂದೇ ಕರೆಯಲಾಗುವ ತಂತ್ರಜ್ಞಾನ, ಶಿಕ್ಷಣ ಹಾಗೂ ವಿನ್ಯಾಸ ವಿಷಯದ ಬಗ್ಗೆ ಚರ್ಚೆ ಏರ್ಪಡಿಸುವ ಸಾಂಸ್ಕೃತಿಕ ವೇದಿಕೆಯಲ್ಲಿ ಅವರು ಮಾಡಿದ ಭಾಷಣಗಳನ್ನು 2.8 ಕೋಟಿಗಿಂತಲೂ ಹೆಚ್ಚು ಜನ ಅಂತರ್ಜಾಲ ತಾಣಗಳಲ್ಲಿ ವೀಕ್ಷಿಸಿದ್ದಾರೆ.
ಶಾಲೆಗಳು ಸೃಜನಶೀಲತೆಯನ್ನು ಕೊಲ್ಲುತ್ತವೆಯೇ? (ಡು ಸ್ಕೂಲ್ಸ್ ಕಿಲ್ ಕ್ರಿಯೇಟಿವಿಟಿ?) ಎನ್ನುವ ಅವರ ಭಾಷಣದಲ್ಲಿ ಅವರು ವಿಶ್ವದ ಎಲ್ಲಾ ಶಾಲೆಗಳೂ ಸಿದ್ಧ ಶಿಕ್ಷಣ ಸೂತ್ರ ಹಾಗೂ ಪದ್ಧತಿಗಳನ್ನಿಟ್ಟುಕೊಂಡು ಸೃಜನಶೀಲತೆಯನ್ನು ಕಡೆಗಣಿಸಿರುವದರ ವಿರುದ್ಧ ಮಾತಾಡಿದ್ದಾರೆ.

ಪ್ರತಿಯೊಂದು ಮಗುವೂ ಬೇರೆ ಬೇರೆ. ಆದರೆ ನಾವು ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಎಲ್ಲರನ್ನೂ ಒಂದೇ ಎನ್ನುವಂತೆ ನೋಡುತ್ತೇವೆ. ಎಲ್ಲರಿಗೂ ಒಂದೇ ರೀತಿಯ ಆಟ , ಓದು, ಬರಹ, ಹೇಳಿಕೊಡುತ್ತೇವೆ. ಅವರವರ ವ್ಯಕ್ತಿತ್ವ ಬೇರೆಯಾಗಿರುತ್ತದೆ, ಕಲಿಕಾ ಮಟ್ಟವೂ ಬೇರೆಯಾಗಿರುತ್ತದೆ, ಎನ್ನುವುದನ್ನು ನಾವು ಅರಿಯುವುದಿಲ್ಲ ಅನ್ನುವುದು ಅವರ ಮುಖ್ಯ ಅನಿಸಿಕೆ.

ಚಿತ್ರಕಲೆ, ಸಾಹಿತ್ಯ, ಸಂಗೀತ, ನಾಟಕ, ಮುಂತಾದವುಗಳನ್ನು ನಾವು ಕೇವಲ ಕೆಲವೇ ವಿದ್ಯಾರ್ಥಿಗಳಿಗೆ ಮಾತ್ರ ಕಲಿಸುತ್ತೇವೆ. ಯಾರಿಗೆ ಆಸಕ್ತಿ ಇದೆಯೋ ಅವರು ಕಲಿಯಲಿ. ಇತರರಿಗೆ ಏಕೆ? ಎನ್ನುವ ಮನೋಭಾವ ಸರಿಯಲ್ಲ. ಎಷ್ಟೋ ಸಲ ಕಲೆಯ ಪರಿಚಯ ಆದ ನಂತರ ಅದರ ಬಗ್ಗೆ ಆಸಕ್ತಿ ಹುಟ್ಟುತ್ತದೆ. ನಮಗೆ ಏನೂ ಜ್ಞಾನವಿಲ್ಲದ ವಿಷಯದ ಬಗ್ಗೆ ನಮಗೆ ಆಸಕ್ತಿ ಹುಟ್ಟುವುದಾದರೂ ಹೇಗೆ? ಕಲಾ ಶಿಕ್ಷಣ ಎಲ್ಲರಿಗೂ ದೊರೆಯುವುದರಿಂದ ಮಕ್ಕಳ ವ್ಯಕ್ತಿತ್ವ ವಿಕಾಸವಾಗುತ್ತದೆ. ಅವರು ಜವಾಬ್ದಾರಿಯುತ ನಾಗರಿಕರಾಗಿ ರೂಪುಗೊಳ್ಳುತ್ತಾರೆ, ಅವರಿಗೆ ಇತರ ವಿಷಯಗಳ ಬಗ್ಗೆ ಹೆಚ್ಚಿನ ಆಸಕ್ತಿ ಮೂಡುತ್ತದೆ.

``ಮಕ್ಕಳನ್ನು ಶಾಲೆಗೆ ಕಳಿಸುವುದು ಅವರು ಹೆಚ್ಚಿನ ಅಂಕ ಗಳಿಸಲು ಮಾತ್ರ ಎನ್ನುವ ಪಾಲಕರ ಮನೋಭಾವ ಖಂಡಿತ ತಪ್ಪು. ಶಾಲೆಗಳು ನಾಳಿನ ನಾಗರಿಕರನ್ನು ರೂಪಿಸುವ ಕೇಂದ್ರಗಳು. ನಾಳಿನ ಕೆಲಸಗಾರರನ್ನು ತಯಾರು ಮಾಡುವ ಕಾರ್ಖಾನೆಗಳಲ್ಲ. ಈ ಸತ್ಯವನ್ನು ಅರ್ಥ ಮಾಡಿಕೊಳ್ಳದಿದ್ದರೆ ನಾವು ಒಂದು ಆರೋಗ್ಯ ಪೂರ್ಣ ಸಮಾಜವನ್ನು ನಿರ್ಮಿಸುವುದು ಕಷ್ಟ.

ಶಾಲೆಯಲ್ಲಿ ನಾವು ಕಲಿಸುವ ಸಾಮಾನ್ಯ ವಿಷಯಗಳನ್ನೇ, ಕಲಾತ್ಮಕವಾಗಿ, ಹೊಸ ರೀತಿಯಿಂದ ಕಲಿಸಿದರೆ ಮಕ್ಕಳು ಇನ್ನೂ ಚೆನ್ನಾಗಿ ಕಲಿಯುತ್ತಾರೆ.

ಸೃಜನಶೀಲತೆ ಎಂದರೆ ಹೊಸ ರೀತಿಯ, ಸ್ವತಂತ್ರ ಚಿಂತನೆ ಮಾಡುವುದು. ಈ ರೀತಿಯ ಚಿಂತನೆಯನ್ನು ಮಕ್ಕಳಿಗೆ ಶಾಲೆಯಲ್ಲಿ ಕಲಿಸದಿದ್ದರೆ ಇನ್ನೆಲ್ಲಿ ಕಲಿಸುವುದು? ಆದರೆ ಈಗಿನ ಶಿಕ್ಷಣ ನೀತಿ ಏಕಮುಖವಾಗಿದೆ. ನಾವು ಹೇಳಿದ್ದನ್ನು ಮರುಮಾತಿಲ್ಲದೇ ಕೇಳಿಸಿಕೊಂಡು ಮುಂದಿನ ವರ್ಷಕ್ಕೆ ಸಾಗಿರಿ ಎನ್ನುವ ಧೋರಣೆಯೇ ವಿಶ್ವದ ಎಲ್ಲ ಶಾಲೆಗಳನ್ನೂ ನಡೆಸುತ್ತಿದೆ. ಇದು ಅಪೇಕ್ಷಣೀಯವಲ್ಲ. ಮಾನವಕುಲದ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕುವುದೇ ಸೃಜನಶೀಲ ಚಿಂತನೆಯಿಂದ. ಈ ರೀತಿ ಚಿಂತಿಸಲಾರದ ತಲೆಮಾರನ್ನು ತಯಾರು ಮಾಡುವುದು ಯಾವ ಉದ್ದೇಶಕ್ಕಾಗಿ ?

ವಿದ್ಯಾರ್ಥಿಗಳನ್ನು ಚಿಂತನೆಗೆ ಹಚ್ಚುವುದು, ಅದರಿಂದ ವಿವಿಧ ವಿಷಯಗಳನ್ನು ಕಲಿಸುವುದು ಆ ಮೂಲಕ ಶಿಕ್ಷಣದ ಮುಂದಿನ ದಾರಿಯಾಗಬೇಕೇ ಹೊರತು, ವಿದ್ಯಾರ್ಥಿಗಳನ್ನು ಚಿಂತನೆಯಿಂದ ದೂರ ಮಾಡುವ, ಕೇವಲ ಓದಿ, ಬರೆದು ಮನೆಗೆ ಕಳಿಸುವ ವ್ಯವಸ್ಥೆಯಿಂದ ನಾವೆಲ್ಲ ದೂರವಾಗಬೇಕು.

ವಾಷರ್ಿಕ ಪರೀಕ್ಷೆಗಳು ವಿದ್ಯಾರ್ಥಿಗಳನ್ನು ಕಂಠಪಾಠ ಮಾಡಲು ಕಲಿಸುತ್ತವೆಯೇ ಹೊರತು ಚಿಂತನೆಗೆ ಹಚ್ಚುವುದಿಲ್ಲ. ಶಾಲೆ ಎನ್ನುವುದು ಕೇವಲ ಪರೀಕ್ಷೆ ಎದುರಿಸಲು ಬೇಕಾದ ಕೌಶಲ್ಯಗಳನ್ನು ಕಲಿಸುವ ಸಂಸ್ಥೆ ಅಲ್ಲ. ವಿದ್ಯಾರ್ಥಿಗಳ ಜೀವನದಲ್ಲಿ ಶಿಸ್ತನ್ನು ರೂಪಿಸುವ ಸೈನಿಕ ತರಬೇತಿ ಕೇಂದ್ರವೂ ಅಲ್ಲ.

ವಿಶ್ವದಲ್ಲಿಯೇ ಅತ್ಯಂತ ಮಾದರಿ ಶಿಕ್ಷಣ ದೊರೆಯುತ್ತಿರುವುದು ಅಮೇರಿಕಾ ಅಥವಾ ಇಂಗ್ಲೆಂಡಿನಲ್ಲಿ ಅಲ್ಲ. ಸ್ಕ್ಯಾಂಡಿನೇವಿಯನ್ ದೇಶಗಳಲ್ಲಿ. ಅಲ್ಲಿ ಏಳು ವರ್ಷಗಳವರೆಗೆ ಮಕ್ಕಳು ಶಾಲೆಗೆ ಹೋಗುವುದಿಲ್ಲ. ಮನೆ ಹಾಗೂ ನಿಸರ್ಗವೇ ಅವರ ಗುರು. ಸುಮಾರು 10 ವರ್ಷದ ಶಾಲಾ ಶಿಕ್ಷಣದ ನಂತರ ಅವರ ಆಸಕ್ತಿ ತಿಳಿದುಕೊಳ್ಳಲು ರಾಷ್ಟ್ರಮಟ್ಟದ ಪರೀಕ್ಷೆ ಎದುರಿಸುತ್ತಾರೆ. ಅದರ ಆಧಾರದ ಮೇಲೆ ತಮ್ಮ ತಮ್ಮ ಆಸಕ್ತಿಯ ವಿಷಯವನ್ನು ಆಯ್ದುಕೊಂಡು ಹೆಚ್ಚಿನ ವಿದ್ಯಾಭ್ಯಾಸ ಮುಂದುವರೆಸುತ್ತಾರೆ.

ಶಿಕ್ಷಣ ಎನ್ನುವುದು ಯಾಂತ್ರೀಕೃತ ಪ್ರಕ್ರಿಯೆ ಅಲ್ಲ. ಅದೊಂದು ಸಾವಯವ ಕ್ರಿಯೆ. ವಿದ್ಯಾರ್ಥಿಗಳಿಗೆ ಹೇಗೆ ಸದಾಕಾಲ ಶಿಕ್ಷಣ ಬೇಕೋ, ಹಾಗೆಯೇ ಶಿಕ್ಷಕರಿಗೆ ಕೂಡ ಕಾಲಕಾಲಕ್ಕೆ ತರಬೇತಿ ದೊರೆಯಬೇಕು. ಇದು ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗಬಾರದು. ಅದರಲ್ಲಿ ಕಲೆ, ಸೃಜನಾತ್ಮಕ ಚಿಂತನೆ, ನೈತಿಕ ಮೌಲ್ಯಗಳು, ಉನ್ನತ ಶಿಕ್ಷಣ ಹಾಗೂ ಉದ್ಯೋಗ ಮಾರ್ಗದರ್ಶನ, ವ್ಯಕ್ತಿತ್ವ ವಿಕಸನ ಮುಂತಾದ ವಿಷಯಗಳು ಸಹ ಸೇರಿರಬೇಕು.

ಮಕ್ಕಳು ಆಟವಾಡುತ್ತಲೇ ಬೆಳೆಯಬೇಕು. ಇದನ್ನೇ ಸೃಜನಾತ್ಮಕ ಕಲಿಸುವಿಕೆ ಎನ್ನುವುದು. ಕಲಿಕೆ ಎನ್ನುವುದು ಬೇಸರದ ಕೆಲಸ ಆಗಬಾರದು. ಮಕ್ಕಳು ಯಾವ ದಿನ ಕಲಿಕೆಯಲ್ಲಿ ಸಂತೋಷದಿಂದ ಪಾಲುಗೊಳ್ಳುತ್ತಾರೋ ಅಂದಿನಿಂದ ನೈಜ ಕಲಿಕೆ ಆರಂಭವಾದಂತೆ.

ರಾಬಿನ್ಸನ್ ಅವರು ಚರ್ಚೆಗಳಲ್ಲಿ ಶಿಕ್ಷಣದ ಸಮಸ್ಯೆಗಳ ಬಗ್ಗೆ ಪ್ರಶ್ನಿಸಿದವರಿಗೆ ``ನಮ್ಮ ಕೋಟಿನಲ್ಲಿ ಎಲ್ಲಿ ರಂಧ್ರ ಇದೆ ಎಂದು ಗೊತ್ತಾದರೆ ತಾನೆ ನಾವು ಹೊಲಿಗೆ ಹಾಕಲಿಕ್ಕೆ ಸಾಧ್ಯ, ಅಲ್ಲವೇ? ಹಾಗೆಯೇ ಎಲ್ಲಿ ಸಮಸ್ಯೆಗಳಿವೆ ಎಂದು ಗೊತ್ತಾದರೆ ಅಲ್ಲಿಂದ ಅದನ್ನು ಸರಿಪಡಿಸಲು ಸಾಧ್ಯ, ಅಲ್ಲವೇ ಎನ್ನುವ ರಾಬಿನ್ಸನ್, ಸೃಜನಶೀಲತೆಯನ್ನು ಬೆಳೆಸುವುದು ಹಾಗೂ ಶಾಲಾ ಶಿಕ್ಷಣದಲ್ಲಿ ಕಲೆಗಳನ್ನು ಅವಿಭಾಜ್ಯ ಅಂಗವಾಗಿಸುವುದು ಆ ಮೂಲಕ ನಾಳಿನ ಜಗತ್ತಿಗೆ ಸೃಜಶೀಲ ವ್ಯಕ್ತಿಗಳನ್ನು ನೀಡುವುದು ಜಗತ್ತಿನ ಎಲ್ಲಾ ಶಾಲೆಗಳ ಆದ್ಯ ಕರ್ತವ್ಯ ಎಂದಿದ್ದಾರೆ