ಪ್ರಸ್ತುತ ವರ್ಷವನ್ನು ಅಂತಾರಾಷ್ಟ್ರೀಯ ಬೇಳೆಕಾಳುಗಳ ವರ್ಷವನ್ನಾಗಿ ಘೋಷಿಸಲಾಗಿದೆ. ಈ ಘೋಷಣೆಯ ಹಿಂದೆ ಯು.ಎನ್. ನ ಆಹಾರ ಮತ್ತು ಕೃಷಿ ಸಂಘಟನೆಯ ಹಲವು ವರ್ಷಗಳ ಪರಿಶ್ರಮವಿದೆ. ಈ ವರ್ಷವಿಡೀ ಬೇಳೆಕಾಳುಗಳ ಬಗ್ಗೆ ಪ್ರಪಂಚದಾದ್ಯಂತ ಜಾಗೃತಿ ಮೂಡಿಸುವುದು ಇದರ ಹಿಂದಿನ ಉದ್ದೇಶವಾಗಿದೆ.
ಬೇಳೆಕಾಳುಗಳು ನಾವು ಒಣಗಿಸಿ ಬಳಸಬಹುದಾದಂತಹ ಬಟಾಣಿ, ಬೀನ್ಸ್, ಕಡಲೆಕಾಳು, ತೊಗರಿಬೇಳೆ ಮೊದಲಾದುವುಗಳನ್ನೊಳಗೊಂಡ ಕಾಳುಗಳಾಗಿವೆ. ಇವು ಅತ್ಯಂತ ರುಚಿಕರ ಹಾಗೂ ಪೌಷ್ಟಿಕವಾಗಿದ್ದು ಅತ್ಯಂತ ಕಡಿಮೆ ಖರ್ಚಿನಲ್ಲಿ ಸಿಗುತ್ತವೆ. ಬೇಳೆಕಾಳುಗಳು ಹೆಚ್ಚು ಲವಣ ಹಾಗು ಖನಿಜಗಳನ್ನು ಹೊಂದಿರುವುದಲ್ಲದೆ ಪ್ರೋಟೀನ್ನ ಖಜಾನೆಗಳಾಗಿವೆ. ಇವುಗಳ ನಿಯಮಿತ ಸೇವನೆಯಿಂದ ಹೃದಯ ಸಂಬಂಧಿತ ಖಾಯಿಲೆಗಳನ್ನು ನಿವಾರಿಸಿಕೊಳ್ಳಬಹುದಾಗಿದೆ. ಸಕ್ಕರೆ ಖಾಯಿಲೆಯನ್ನು ನಿಯಂತ್ರಿಸಬಹುದಾಗಿದೆ. ರಕ್ತದೊತ್ತಡ, ರಕ್ತದಲ್ಲಿನ ಕೊಲೆಸ್ಟರಾಲ್ ನಿಯಂತ್ರಣ ಅಲ್ಲದೇ ದೇಹದ ಅನಗತ್ಯ ತೂಕ ಕಡಿಮೆ ಮಾಡಿಕೊಳ್ಳುವಲ್ಲಿ ಇವು ಸಹಕಾರಿಯಾಗಿವೆ.
ಬೇಳೆಕಾಳುಗಳು ಬೇರೆ ಆಹಾರ ಪದಾರ್ಥಗಳಿಗಿಂತ ಸುಮಾರು ಎರಡು ಪಟ್ಟು ಪ್ರೋಟೀನ್ ಹೊಂದಿರುವುದಲ್ಲದೇ ಒಂದೂವರೆ ಪಟ್ಟು ಕಬ್ಬಿಣದ ಅಂಶವನ್ನು ಹೊಂದಿವೆ. ಆದ್ದರಿಂದಾಗಿಯೇ ಬೆಳೆಯುವ ಮಕ್ಕಳಿಗೆ ಅತ್ಯಂತ ಉಪಯುಕ್ತವಾಗಿವೆ. ಬೇಳೆಕಾಳುಗಳಲ್ಲಿ ವಿಟಮಿನ್ ಬಿ ಹಾಗು ಅಮೈನೋ ಆಮ್ಲ ಯಥೇಚ್ಛವಾಗಿದ್ದು ಹಲವು ದೈಹಿಕ ದೌರ್ಬಲ್ಯಗಳನ್ನು ನಿವಾರಿಸುವಲ್ಲಿ ಸಹಕಾರಿಯಾಗಿವೆ. ಇವುಗಳಲ್ಲಿನ ನಾರಿನ ಅಂಶವು ಬ್ರೌನ್ರೈಸ್ಗೆ ಹೋಲಿಸಿದಲ್ಲಿ ನಾಲ್ಕು ಪಟ್ಟು ಹೆಚ್ಚಾಗಿರುವುದರಿಂದ ದೇಹದ ಬೊಜ್ಜು ನಿಯಂತ್ರಣದಲ್ಲಿ ಬೇಳೆಕಾಳುಗಳು ಮಹತ್ವದ ಪಾತ್ರ ವಹಿಸುತ್ತವೆ. ಬೇಳೆಕಾಳುಗಳನ್ನು ಬೇರೆ ಆಹಾರ ಪದಾರ್ಥಗಳಿಗೆ ಹೋಲಿಸಿದಲ್ಲಿ ಹೆಚ್ಚಿನ ದಿನಗಳ ಕಾಲ ಪೌಷ್ಟಿಕಾಂಶಗಳು ಹಾಳಾಗದಂತೆ ಸಂರಕ್ಷಿಸಿ ಇಡಬಹುದಾಗಿದೆ.
ಬೇಳೆಕಾಳುಗಳು ಪರಿಸರ ಹಾಗೂ ರೈತಮಿತ್ರ ಬೆಳೆಯಾಗಿವೆ. ಇವುಗಳನ್ನು ಬೆಳೆಯುವುದರಿಂದ ಮಣ್ಣಿನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಸಾರಜನಕ ಸೇರುವುದರಿಂದ ಮಣ್ಣಿನ ಫಲವತ್ತತೆ ಹೆಚ್ಚುತ್ತದೆ. ಬೇರೆ ಬೇರೆ ಬೇಳೆಕಾಳುಗಳನ್ನು ಸರದಿ ಪ್ರಕಾರ ಬೆಳೆಯವುದರಿಂದ ಮಣ್ಣನ್ನು ಮತ್ತಷ್ಟು ಸಾರಯುಕ್ತಗೊಳಿಸಬಹುದಾಗಿದೆ. ಬೇಳೆಕಾಳುಗಳನ್ನು ಬೆಳೆಯಲು ಅಗತ್ಯವಿರುವ ನೀರಿನ ಪ್ರಮಾಣ ಬೇರೆ ಬೆಳೆಗಳಿಗೆ ಹೋಲಿಸಿದರೆ ಅತಿ ಕಡಿಮೆ ಇರುತ್ತದೆ. ಕಾಳುಗಳನ್ನು ಬೆಳೆಯುವ ರೈತರು ಅವುಗಳನ್ನು ತಮ್ಮ ಆಹಾರದಲ್ಲಿ ಬಳಸುವ ಮೂಲಕ ಆರೋಗ್ಯ ವೃದ್ಧಿಸಿಕೊಳ್ಳಬಹುದಲ್ಲದೇ ಮಾರಾಟ ಮಾಡುವ ಮೂಲಕ ಉತ್ತಮ ಲಾಭವನ್ನು ಪಡೆಯಬಹುದಾಗಿದೆ. ಅದ್ದರಿಂದಲೇ ಬೇಳೆಕಾಳುಗಳನ್ನು ರೈತ ಮಿತ್ರ ಬೆಳೆಗಳೆನ್ನಬಹುದು. ಬೇಳೆಕಾಳುಗಳ ಬೆಳೆಯು ಪರಿಸರದಲ್ಲಿನ ಜೀವವೈವಿಧ್ಯತೆಯನ್ನು ಹೆಚ್ಚಿಸುತ್ತದೆ. ಬೇಳೆಕಾಳುಗಳನ್ನು ಬೆಳೆಯಲು ರಸಾಯನಿಕ ಗೊಬ್ಬರಗಳ ಅಗತ್ಯವಿರುವುದಿಲ್ಲ. ನೀರಿನ ಅಗತ್ಯ ಕಡಿಮೆ ಅಲ್ಲದೇ ಇವುಗಳಿಂದಾಗುವ ಇಂಗಾಲದ ಉತ್ಪಾದನೆ ಅತ್ಯಂತ ಕಡಿಮೆ ಇರುವುದರಿಂದ ಇವುಗಳನ್ನು ಪರಿಸರ ಸ್ನೇಹಿ ಬೆಳೆಗಳೆನ್ನಬಹುದಾಗಿದೆ.
ಭಾರತ ಕೃಷಿಪ್ರಧಾನ ದೇಶವಾಗಿದ್ದರೂ ಕೃಷೀ ಕ್ಷೇತ್ರ ಇಂದು ಬಿಕ್ಕಟ್ಟಿನಲ್ಲಿದೆ. ರೈತರು ಆತ್ಮಹತ್ಯೆಯ ಹಾದಿಯಲ್ಲಿದ್ದಾರೆ. ಲಾಭವಿರಲಿ ಹಾಕಿದ ಬಂಡವಾಳವೂ ದೊರೆಯುತ್ತಿಲ್ಲ ಎಂಬ ಕೊರಗು ರೈತರನ್ನು ಕಾಡುತ್ತಿದೆ. ಮತ್ತೆ ಮತ್ತೆ ಕಾಡುವ ಬರಗಾಲ, ವಿಪರೀತ ಪರಿಸ್ಥಿತಿಗಳು, ಹೆಚ್ಚುತ್ತಿರುವ ರಸಾಯನಿಕ ಗೊಬ್ಬರ, ಔಷಧಿ ಬೆಲೆಗಳು, ಸಕಾಲಕ್ಕೆ ದೊರೆಯದ ಕಾಲುವೆ ನೀರು, ಪಾತಾಳ ಸೇರಿರುವ ಕೊಳವೆಬಾವಿಗಳಲ್ಲಿನ ನೀರು ಇತ್ಯಾದಿ ಸಮಸ್ಯೆಗಳಿಂದ ರೈತ ಕಂಗಾಲಾಗಿದ್ದಾನೆ. ಈಗಲೂ ಶೇಕಡಾ 60 ರಷ್ಟು ಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದರೂ ನಮ್ಮ ದೇಶಕ್ಕೆ ಬೇಕಾದಷ್ಟು ಆಹಾರವನ್ನು ಉತ್ಪಾದಿಸಲಾಗುತ್ತಿಲ್ಲ. ಅಪೌಷ್ಟಿಕತೆ ದೇಶವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಹಿಳೆಯರಲ್ಲಿನ ಹಾಗು ಎಳೆಯ ಮಕ್ಕಳಲ್ಲಿನ ಅಪೌಷ್ಟಿಕತೆಯನ್ನು ಗಮನಿಸಿದರೆ ಭಾರತದ ಭವಿಷ್ಯದ ಬಗ್ಗೆ ಪ್ರಶ್ನೆಗಳೇಳುತ್ತವೆ.
ಇವೆಲ್ಲದರ ಪರಿಹಾರವಾಗಿ ಬೇಳೆಕಾಳುಗಳನ್ನು ಪ್ರೋತ್ಸಾಹಿಸಬಹುದೇ? ಖಂಡಿತ. ಭಾರತ ಜೈವಿಕವಾಗಿ ಸಂಪದ್ಭರಿತವಾಗಿದ್ದು ನಮ್ಮದೇ ಆದ ಹಲವು ಬೇಳೆಕಾಳುಗಳನ್ನು ಪೂರ್ವಿಕರು ಬೆಳೆಯುತ್ತಾ, ಬಳಸುತ್ತಾ ಬಂದಿದ್ದಾರೆ. ಬೇಳೆಕಾಳುಗಳು ನಮ್ಮ ಸಂಸ್ಕೃತಿಯ ಭಾಗವೇ ಅಗಿವೆ. ಅದರೆ ಇಂದು ಆಧುನಿಕ ವಾಣಿಜ್ಯ ಬೆಳೆಗಳ ಭರದಲ್ಲಿ ಅವು ನೇಪಥ್ಯಕ್ಕೆ ಸರಿದಿವೆ. ಆದ್ದರಿಂದಲೇ ರೈತರಿಗೂ ಉಳಿಗಾಲವಿಲ್ಲ ದೇಶದ ಜನತೆಗೂ ಆಹಾರವಿಲ್ಲ ಎನ್ನುವಂತಾಗಿದೆ. ಪ್ರಪಂಚದ ಜನಸಂಖ್ಯೆ ಏರಿಕೆ ಪ್ರಮಾಣವನ್ನು ಗಮನಿಸಿದರೆ 2050ರ ವೇಳೆಗೆ ಜನರ ಆಹಾರ ಅಗತ್ಯತೆಯನ್ನು ಪೂರೈಸಲು ಇಂದಿಗಿಂತ ಶೇ.70 ರಷ್ಟು ಹೆಚ್ಚು ಆಹಾರ ಬೆಳೆಯಬೇಕಾದ ಅಗತ್ಯವಿದೆ. ಜೊತೆಗೆ ಹೆಚ್ಚುತ್ತಿರುವ ವಾತಾವರಣದ ಇಂಗಾಲದ ಪ್ರಮಾಣವನ್ನು ನಿಯಂತ್ರಿಸಲು ರಾಸಾಯನಿಕ ಗೊಬ್ಬರ ಬಳಕೆಯನ್ನು ಕನಿಷ್ಠ ಪ್ರಮಾಣಕ್ಕೆ ತರಬೇಕಾಗಿದೆ. ಮುಂದಿನ ದಿನಗಳಲ್ಲಿ ಕೃಷಿಗೆ ದೊರೆಯುವ ನೀರಿನ ಪ್ರಮಾಣವೂ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗಲಿದೆ. ಈ ಎಲ್ಲ ಸಮಸ್ಯೆಗಳ ಪರಿಹಾರವಾಗಿ ಬೇಳೆಕಾಳುಗಳನ್ನು ಬೆಳೆಯುವ ಅಗತ್ಯ ಹೆಚ್ಚಲಿದೆ. ಬೇಳೆಕಾಳುಗಳನ್ನು ಬೆಳೆಯಲು ರಾಸಾಯನಿಕ ಗೊಬ್ಬರಗಳ ಅವಶ್ಯಕತೆ ಅತ್ಯಂತ ಕಡಿಮೆ ಹಾಗೂ ಇವು ಬರಗಾಲದಂತಹ ಪರಿಸರ ವಿಕೋಪಗಳನ್ನು ಸಹಿಸಿಕೊಂಡು ಬೆಳೆಯಬಲ್ಲವಾಗಿವೆ.
ಬೇಳೆಕಾಳುಗಳು ಭವಿಷ್ಯದ ಆಹಾರದ ಮೂಲಗಳಾಗಿವೆ. ಅದ್ಭ್ಬುತ ರುಚಿ ಹೊಂದಿವೆ ಎಲ್ಲರಿಗೂ ಇಷ್ಟವಾಗುತ್ತವೆ. ಕೃಷಿ ಕ್ಷೇತ್ರವನ್ನು ಉಳಿಸುವ ನಿಟ್ಟಿನಲ್ಲಿ, ಜನರ ಅಪೌಷ್ಟಿಕತೆಯನ್ನು ನಿವಾರಿಸುವ ನಿಟ್ಟಿನಲ್ಲಿ, ಪ್ರಸ್ತುತ ವರ್ಷವನ್ನು ಬೇಳೆಕಾಳುಗಳ ವರ್ಷವನ್ನಾಗಿ ಆಚರಿಸುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಕಾರ್ಯಕ್ರಮಗಳನ್ನು ರೂಪಿಸಬೇಕಾದ ಅಗತ್ಯವಿದೆ