Wednesday, 28 April 2021

ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಬಗೆ !

 ಆಡಳಿತ ವ್ಯವಸ್ಥೆಯಲ್ಲಿ ಕಾರ್ಯಕ್ಷಮತೆ ಹೆಚ್ಚಿಸುವ ಬಗೆ !
- ಎಸ್. ದಕ್ಷಿಣಾಮೂರ್ತಿ

ವಿಜ್ಞಾನ, ತಂತ್ರಜ್ಞಾನದ ಬೆಳವಣಿಗೆಯಷ್ಟೇ ವೇಗವಾಗಿ ಮಾನವೀಯ ಮೌಲ್ಯಗಳು ಗಟ್ಟಿಯಾದಾಗ ಜಗತ್ತು ಸುಂದರವಾಗಿರುತ್ತದೆ. ಇಲ್ಲವಾದಲ್ಲಿ ಪ್ರತಿ ವರ್ಷದ ಸಂದರ್ಭವೂ ಕಳೆದು ಹೋದ ವರ್ಷಗಳಂತೆಯೇ ಆಗುತ್ತದೆ. ಪ್ರತಿವರ್ಷ ಹೊಸತನಕ್ಕೆ ದಾರಿಯಾಗಬೇಕು. ಬದುಕಿನಲ್ಲಿ ಬದಲಾವಣೆ ತರಬೇಕು. ಪ್ರತಿನಿತ್ಯ ನೂತನವಾಗಿರಲಿ, ಹೊಸ ಚೈತನ್ಯ ಮೂಡಲಿ ಎಂಬ ಹಾರೈಕೆಗಳು ಎಲ್ಲೆಡೆಯಿಂದ ಮೊಳಗುತ್ತಿರುತ್ತದೆ. ಸುಸ್ಥಿರ ಅಭಿವೃದ್ಧಿಗೆ ನೂತನ ಕಾರ್ಯ ಯೋಜನೆಗಳು ಮೈದಾಳಲಿವೆ. ಶಾಂತಿ, ಸಹನೆ, ಸಹಬಾಳ್ವೆ ಎಂಬುದು ಚಿರಂತನ ಮೌಲ್ಯಗಳು. ಇವಕ್ಕೆ ಅತೀತವಾದುದು ಯಾವುದೂ ಇಲ್ಲ. ಇದೇ ವಿಶ್ವಧರ್ಮ. 2016 ನಮ್ಮ ಪಾಲಿಗೆ ಅವಿಸ್ಮರಣೀಯ. ಸಾರ್ವಜನಿಕ ಶಿಕ್ಷಣ ಇಲಾಖೆಯು ಹಮ್ಮಿಕೊಂಡಿರುವ ವಿದ್ಯಾರ್ಥಿಹಿತ ಸಂಬಂಧೀ ಕಾರ್ಯಯೋಜನೆಗಳನ್ನು ಶಿಕ್ಷಕಹಿತ ನೀತಿ ನಿರೂಪಣೆಗಳನ್ನು ರೂಪಿಸಿದೆ. ಅವರಿಗೆ ಹೊಣೆಗಾರಿಕೆ ಹೆಚ್ಚಾಗಿ ನೌಕರಶಾಹಿ ಹಾಗೂ ತಾಲ್ಲೂಕು, ಜಿಲ್ಲಾ ಮಟ್ಟದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ನಿಮ್ಮಗಳ ಮೇಲಿದೆ. ಆದ್ದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ತುಂಬುವ ಪ್ರಾಮಾಣಿಕ ಪ್ರಯತ್ನವೇ ಈ ಲೇಖನ.

ಸರ್ಕಾರಿ ಸೇವೆಗೆ ಸೇರುವ ಪೂರ್ವದಲ್ಲಿ ನೀವು ಒಂದಲ್ಲ ಒಂದು ರೀತಿಯಲ್ಲಿ ಸರ್ಕಾರಿ ಕಚೇರಿಯನ್ನು ಎಡತಾಕಿರುತ್ತೀರಿ. ಅದರ ವ್ಯವಸ್ಥೆಯ ಅನುಭವ ಆಗಿರುತ್ತದೆ. ಅಲ್ಲಿ ನಿಮಗಾದ ಸಂಕಷ್ಟಗಳ ಪರಿಚಯ ನಿಮಗಿರುತ್ತದೆ. ಆಗಲೇ ಸರ್ಕಾರಿ ಕಚೇರಿ ಎಂದರೆ ಹೇಗೆ ಇರಬೇಕು ಎಂಬ ಕನಸನ್ನೂ ನೀವು ಕಂಡಿದ್ದಿರಬಹುದು. ಸರ್ಕಾರಿ ಕಚೇರಿಯಲ್ಲಿ ಕೆಲಸಗಳು ಹೇಗೆ ನಡೆಯುತ್ತವೆ, ಅಂದು ನೀವು ನಿಮ್ಮ ಕೆಲಸಮಾಡಿಕೊಳ್ಳಲು ಎಷ್ಟೆಲ್ಲಾ ಕಷ್ಟ ಅನುಭವಿಸಿದಿರಿ ಎಂದು ನೆನಪಿಸಿಕೊಳ್ಳಿ. ಈಗ ನೀವೇ ಸರ್ಕಾರಿ ಕಚೇರಿಯ ಒಂದು ಭಾಗವಾಗಿರುವಿರಿ. ಸರ್ಕಾರಿ ಕೆಲಸಕ್ಕೆ ಸೇರಿದೆ ಕೂಡಲೇ ನಿಮ್ಮ ಧೋರಣೆಗಳನ್ನು ಬದಲಿಸಿಕೊಳ್ಳಬೇಕು. ಇಷ್ಟು ಸಾಕಲ್ಲವೇ? ನೌಕರರು ಕಚೇರಿಯಲ್ಲಿ ಸದಾ ಉಲ್ಲಾಸದಿಂದ ಕೆಲಸ ಮಾಡಬೇಕು. ಹಂತ ಹಂತವಾಗಿ ನೀವು ಯಶಸ್ಸಿನ ಮಟ್ಟಿಲು ಹತ್ತಬೇಕು. ವೃತ್ತಿಜೀವನದಲ್ಲಿ ಯಶಸ್ಸು ಕಾಣುವುದು ಹೇಗೆ? ಇದಕ್ಕೆ ಎಲ್ಲರೂ ದೊಡ್ಡ ಸಾಧಕರ ಹೆಸರುಗಳನ್ನೇ ಹೇಳುತ್ತಾರೆ. ಆದರೆ ಕೆಲವೊಮ್ಮೆ ನಮಗಿಂತಲೂ ತುಂಬ ಚಿಕ್ಕವರು ನಮ್ಮ ಬದುಕಿಗೆ ಸ್ಫೂರ್ತಿಯಾಗಬಲ್ಲರು. ಉದಾಹರಣೆಗೆ: ಇರುವೆ ಸ್ಫೂರ್ತಿಯಾಗಬಲ್ಲದು. ಇರುವೆಗಳನ್ನು ಗಮನಿಸಿ. ಅವುಗಳ ನಾಲ್ಕು ನಡವಳಿಕೆಗಳು ನಮಗೆ ಜೀವನ ಪಾಠ ಹೇಳಿಕೊಡುತ್ತವೆ. ಮೊದಲನೆಯದು: ಇರುವೆ ಯಾವತ್ತೂ ಸೋಲು ಒಪ್ಪಿಕೊಳ್ಳುವುದಿಲ್ಲ. ಬೇಕಿದ್ದರೆ ಇರುವೆ ನಡೆಯುವ ಹಾದಿ ಮೇಲೆ ಬೆರಳಿಟ್ಟು ನೋಡಿ. ಅದು ತನ್ನ ದಾರಿ ಬದಲಾಯಿಸುತ್ತಿದೆಯೇ ಹೊರತು ಹಿಂದೆ ಸರಿಯುವುದಿಲ್ಲ ಅಥವಾ ನಿಂತಲ್ಲೇ ನಿಲ್ಲುವುದಿಲ್ಲ. ನಮ್ಮೆಲ್ಲರ ಬದುಕಲ್ಲಿ ಅಡೆತಡೆಗಳು ಸಾಮಾನ್ಯ. ಅವೆಲ್ಲವನ್ನೂ ದಾಟಿ ಗುರಿ ತಲುಪುವುದಕ್ಕೆ ನಾವೆಲ್ಲ ಹೊಸ ದಾರಿಗಳನ್ನು ತಲುಪಬೇಕು, ಎರಡನೆಂದು: ಇರುವೆ ಮತ್ತು ಮಿಡತೆಯ ಕಥೆ ನಿಮಗೆ ಗೊತ್ತಿರಬೇಕು. ಬೇಸಿಗೆ ಕಾಲದಲ್ಲಿ ಇರುವೆ ಮಜಾ ಮಾಡುತ್ತಾ ಕಾಲ ಕಳೆಯುವುದಿಲ್ಲ. ಬದಲಾಗಿ ಚಳಿಗಾಲವನ್ನು ಎದುರಿಸುವುದಕ್ಕೆ ಆಹಾರದ ಹುಡುಕಾಟದಲ್ಲಿ ಇರುತ್ತದೆ. ಆದರೆ ಮಿಡತೆ ಆರಾಮವಾಗಿ ಹಾರಾಡಿಕೊಂಡು ಇರುತ್ತದೆ. ಒಳ್ಳೆಯ ದಿನಗಳು ಶಾಶ್ವತವಲ್ಲ ಅನ್ನುವುದು ಇರುವೆಗೆ ಗೊತ್ತಿದೆ. ಇದು ಒಳ್ಳೆಯ ಪಾಠ. ವೃತ್ತಿಯಲ್ಲಿ ಯಶಸ್ಸಿನ ಹಾದಿಯಲ್ಲಿ ಇದ್ದಾಗ ನೀವು ಮೈಮರೆಯಬಾರದು. ಕಚೇರಿ ಕಾರ್ಯ ನಿರ್ವಹಿಸುವ ಸಮಯದಲ್ಲಿ ಮುಂದೆ ಕಷ್ಟಗಳು ಬಂದೇ ಬರುತ್ತವೆ. ಹಾಗಾಗಿ ಜನಕಲ್ಯಾಣ ಕಾರ್ಯಗಳಿಂದ ಜನರಿಗೆ ಸಹಾಯ ಮಾಡಿ. ನಿಮ್ಮ ಕಷ್ಟ ಕಾಲದಲ್ಲಿ ಅವರು ನೆರವಿಗೆ ಬರುತ್ತಾರೆ. ಮೂರನೆಯದು: ಬೇಸಿಗೆ ಬಂದೊಡನೆ ಇರುವೆ ತನ್ನ ಗೂಡಿನಿಂದ ಹೊರಗೆ ಬರುತ್ತದೆ. ದುಡಿಯುವುದಕ್ಕೆ ಮತ್ತು ಆಡುವುದಕ್ಕೆ ಇದು ಪ್ರಶಸ್ತ ಕಾಲ ಅನ್ನುವುದು ಅದಕ್ಕೆ ಗೊತ್ತಿದೆ. ಕಷ್ಟಕಾಲದಲ್ಲಿದ್ದಾಗ ನೀವು ಕೂಡ ಹೀಗೇ ಯೋಚಿಸಬೇಕು. ಮುಂದೊಂದು ದಿನ ಸಂತೋಷದ ದಿನಗಳು ಬಂದೇ ಬರುತ್ತವೆ. ಕಠಿಣ ಕಾಲ ಬಹಳ ದಿನ ಇರುವುದಿಲ್ಲ. ಕಛೇರಿಯಲ್ಲಿ ಬದ್ಧತೆಯಿಂದ ಕೆಲಸ ಮಾಡಿದಲ್ಲಿ ನಿಮ್ಮ ಬಗ್ಗೆ ಕಠಿಣ ನಿಲುವು ತಳೆದವರೂ ನಿಮ್ಮನ್ನು ಮೆಚ್ಚುತ್ತಾರೆ. ನಾಲ್ಕನೆಯದು: ಬೇಸಿಗೆಯಲ್ಲಿ ಒಂದು ಇರುವೆ ಎಷ್ಟು ಆಹಾರ ಸಂಪಾದಿಸಬಹುದು? ಯಾರೂ ಲೆಕ್ಕ ಇಟ್ಟಿಲ್ಲ. ಇರುವೆ ಕೂಡಾ ಅದರ ಬಗ್ಗೆ ಚಿಂತಿಸುವುದಿಲ್ಲ. ತನ್ನ ಸಹೋದ್ಯೋಗಿಯ ಸಂಪಾದನೆಯ ಬಗ್ಗೆಯೂ ಯೋಚಿಸುವುದಿಲ್ಲ. ತಾನೇಕೆ ಇಷ್ಟು ಕಷ್ಟಪಡಬೇಕು ಎಂಬ ಪ್ರಶ್ನೆಯನ್ನು ಅದು ಕೇಳುವುದಿಲ್ಲ, ಯಾರನ್ನೂ ದೂರುವುದೂ ಇಲ್ಲ.

ಇರುವೆಗಳು ಒಗ್ಗಟ್ಟಾಗಿ ದುಡಿಯುತ್ತವೆ. ತಮ್ಮ ಎಲ್ಲಾ ಶ್ರಮವನ್ನೂ ಧಾರೆಯುತ್ತವೆ. ಬದುಕಲ್ಲಿ ಯಶಸ್ಸು ಕಂಡ ಮನುಷ್ಯರನ್ನೊಮ್ಮೆ ನೋಡಿ. ಅವರ ಧೋರಣೆಯೂ ಇದೇ ಥರ ಇರುತ್ತದೆ. ಸೋಲು ಒಪ್ಪಿಕೊಳ್ಳದಿರು. ಸದಾ ಮುಂದೆ ನೋಡುತ್ತಿರು, ಯಾವತ್ತೂ ಜೀವನ್ಮುಖಿಯಾಗಿರು ಮತ್ತು ನಿನ್ನಿಂದ ಎಷ್ಟು ಸಾಧ್ಯವೋ ಅಷ್ಟನ್ನು ಮಾಡು. ಕಛೇರಿಯಲ್ಲಿ ಕೆಲಸ ಮಾಡುವ ಎಲ್ಲರೂ ಸಮಾನ ಶ್ರದ್ಧೆಯಿಂದ ಕೆಲಸ ಮಾಡಬೇಕು. ಜನಹಿತವೇ ನಿಮ್ಮ ಗುರಿಯಾಗಬೇಕು. ಅಂದ ಹಾಗೆ ಇರುವೆ ಕುರಿತು ಇನ್ನೂ ಎರಡು ಪಾಠಗಳು ಇವೆ.

ಮೊದಲ ಪಾಠ : ಒಂದು ಇರುವೆ ತನ್ನ ದೇಹದ ಭಾರಕ್ಕಿಂತ ಇಪ್ಪತ್ತು ಪಟ್ಟು ಭಾರವಿರುವ ವಸ್ತುವನ್ನು ಹೊತ್ತೊಯ್ಯುತ್ತದೆ. ಎರಡನೆಯ ಪಾಠ: ನೀವು ಯಾವುದೋ ಒತ್ತಡಕ್ಕೆ ಸಿಲುಕಿ ಕುಸಿಯುತ್ತಿದ್ದರೆ ಇರುವೆಯನ್ನು ನೆನಪಿಸಿಕೊಳ್ಳಿ. ಆಗ ನಿಮಗೆ ಯಾವುದೂ ಭಾರ ಎನಿಸುವುದಿಲ್ಲ. ಕಛೇರಿ ಕೆಲಸವನ್ನು ಶಿಸ್ತಿನಿಂದ ಮಾಡಿರಿ ಗುಣಮಟ್ಟ ಕಾಯ್ದುಕೊಳ್ಳಿರಿ. ಎಂದಿಗೂ ಸತ್ಯ ಮತ್ತು ಸ್ಪಷ್ಟತೆಯನ್ನು ಕಳೆದುಕೊಳ್ಳಬೇಡಿ. ಎಲ್ಲವನ್ನೂ ಸಕಾರಾತ್ಮಕವಾಗಿ ನಿಯಮಗಳ ಅಡಿಯಲ್ಲಿ ಚಿಂತಿಸಿರಿ ನಿಮ್ಮ ಕೆಲಸದಲ್ಲಿ ಪರಿಪೂರ್ಣತೆ ಸಾಧಿಸಿರಿ. ಪರಿಪೂರ್ಣತೆ ಎಂದರೆ ನಿಮ್ಮ ಕೆಲಸದಲ್ಲಿ ಯಾರೂ ತಪ್ಪನ್ನು ಕಂಡುಹಿಡಿಯುವಂತಿರಬಾರದು. ಪಾರದರ್ಶಕತೆ ನಿಮ್ಮನ್ನು ಕಾಯುತ್ತದೆ. ಇರುವ ನಿಯಮಗಳನ್ನು ಸ್ಪಷ್ಟವಾಗಿ ಮನವರಿಕೆ ಮಾಡಿ, ಸರ್ಕಾರಕ್ಕೆ ನಿಷ್ಠೆ ತೋರಿಸಬೇಕು. ಬದ್ಧತೆಯ ನಡೆವಳಿಕೆ ಹೊಂದಿರಬೇಕು. ಆದರೆ ಸ್ವಾಭಿಮಾನ ಬಿಟ್ಟುಕೊಡಬೇಡಿ.

ಕಛೇರಿಯಲ್ಲಿ ನಿಮ್ಮ ನಕಾರಾತ್ಮಕ ಅನುಭವಗಳು ಮರುಕಳಿಸದಂತೆ ಕೆಲಸ ಮಾಡಿರಿ. ಎಲ್ಲರೂ ಹೇಳುತ್ತಾರೆ ಸರ್ಕಾರಿ ಕೆಲಸ ದೇವರ ಕೆಲಸ. ಕಚೇರಿ ಕೆಲಸ ಮಾಡಿದರೂ ಆಯಿತು ಮಾಡದಿದ್ದರೂ ಆಯಿತು. ಸಂಬಳ ಬಂದೇ ಬರುತ್ತದೆ. ನಿಗದಿತ ದಿನ ನೀವು ಸಂಬಳ ತೆಗೆದುಕೊಳ್ಳಲಿಲ್ಲ ಎಂದುಕೊಳ್ಳಿ. ನಿಮ್ಮನ್ನು ಕರೆದು ಸಂಬಳ ನೀಡುತ್ತಾರೆ. ಶಿಕ್ಷಕರ ಹಿತವನ್ನು ಕಾಯುವುದಕ್ಕಾಗಿ ದುಡಿಯುವವರು ನೀವು. ತಾಲ್ಲೂಕು, ಜಿಲ್ಲೆ ಹಾಗೂ ಆಡಳಿತ ಕಛೇರಿಗಳಲ್ಲಿ ಆಡಳಿತದ ಸೂತ್ರ ಹಿಡಿದವರು ನೀವು. ಎಲ್ಲರಿಗೂ ಸರ್ಕಾರದ ಕೆಲಸ ಸಿಗುವುದಿಲ್ಲ. ಅರ್ಹತೆ ಇರುವವರಿಗೆ ಮಾತ್ರವೇ ಸಿಗುತ್ತದೆ. ಹುಟ್ಟಿನಿಂದ ಯಾರೂ ಅದಕ್ಕಾಗಿ ಹಂಬಲಿಸದಿದ್ದರೂ ಜೀವನ ಕ್ರಮದಲ್ಲಿ ಅವರು ಬೆಳೆದ ವಾತಾವರಣ ಮತ್ತು ಅನುಭವಗಳು ಕೆಲವರನ್ನು ಸಮಾಜ ಸೇವಾ ಮನೋಭಾವನೆಗೆ ಪ್ರೇರೇಪಿಸುತ್ತದೆ. ಒಂದು ಅರ್ಥದಲ್ಲಿ ನೀವೂ ಸಮಾಜಸೇವಾ ಕಾರ್ಯದಲ್ಲಿ ನಿರತರಾಗಿರುವಿರಿ, ಸಮಾಜದಲ್ಲಿ ಇನ್ನು ಕೆಲವರು ಸಮಾಜ ಸೇವಕರೆಂದು ಹೇಳಿಕೊಂಡು ಹೊಟ್ಟೆ ಹೊರೆಯುವುದನ್ನು ಸಾರ್ವಜನಿಕ ರಂಗದಲ್ಲಿ ಕಂಡಿದ್ದೇವೆ. ಅವರಿಗಿಂತ ನೀವು ಭಿನ್ನವಾಗಿ ಸೇವೆ ಸಲ್ಲಿಸಿರಿ.

ನೀವು ಸಮರ್ಥವಾಗಿ ಕೆಲಸ ಮಾಡಿದರೆ ಶಿಕ್ಷಣ ಇಲಾಖೆ ಬಲಗೊಳ್ಳುತ್ತದೆ. ಶಿಕ್ಷಕರ ಬಾಳಲ್ಲಿ ನೆಮ್ಮದಿ ಮೂಡುತ್ತದೆ. ನಿಮ್ಮ ನಂತರವೂ ನಿಮ್ಮ ವೃತ್ತಿಬದುಕು ಮಾತನಾಡುತ್ತದೆ, ನೆನಪಿರಲಿ, ಈ ಸಮಾಜ ಕೇವಲ ಮಹಾತ್ಮರನ್ನು ನೆನಪಿಟ್ಟುಕೊಳ್ಳುವುದಿಲ್ಲ, ಆದರೆ ನೀವು ಮಾಡಿದ ನೆರವನ್ನು ಸದಾ ಸ್ಮರಿಸಿಕೊಳ್ಳುತ್ತದೆ. ಮಾಡುವ ದಿನನಿತ್ಯದ ಕೆಲಸವನ್ನೇ ಹೆಚ್ಚಿನ ಶ್ರದ್ಧೆಯಿಂದ ಮಾಡಬೇಕು. ಸಾಧನೆ ಎಂಬುದು ನಾವು ಮಾಡುವ ಕೆಲಸವನ್ನು ಅವಲಂಬಿಸಿರುತ್ತದೆ, ಸಾಧನೆ ಮಾಡುವವರು ಸಹನೆ ಮತ್ತು ತಾಳ್ಮೆಗಳನ್ನು ಅಳವಡಿಸಿಕೊಂಡಿರಬೇಕು. ನಿದರ್ಿಷ್ಟವಾದ ಗುರಿಯನ್ನು ಇಟ್ಟುಕೊಂಡು ಪ್ರಯತ್ನಪಟ್ಟರೆ ಯಶಸ್ಸು ಸಾಧ್ಯ. ವೃತ್ತಿಜೀವನದಲ್ಲಿ ಎದುರಾಗುವ ಅನುಭವಗಳಿಂದ ಪಾಠ ಕಲಿತು ನಿಮ್ಮ ಭವಿಷ್ಯದ ದಾರಿಗೆ ರಚನಾತ್ಮಕ ತಿರುವನ್ನು ಪಡೆದುಕೊಳ್ಳುವುದರಲ್ಲಿಯೇ ಜೀವನದ ಗುಟ್ಟು ಅಡಗಿದೆ. ಮನಸ್ಸನ್ನು ಸದಾ ಸಕಾರಾತ್ಮಕ ಆಲೋಚನೆಗಳಿಂದ ತುಂಬಿಸಿಕೊಳ್ಳಿ, ಇದು ಸವಾಲುಗಳನ್ನು ಧೈರ್ಯದಿಂದ ಎದುರಿಸುವ ಮನೋಬಲವನ್ನು ಒದಗಿಸುತ್ತದೆ. ಭವಿಷ್ಯದ ನಿಮ್ಮ ವೃತ್ತಿ ಜೀವನ ನಿರಾತಂಕವಾಗಿ ಸಾಗಲಿ ಎಂದು ಆಶಿಸುತ್ತೇನೆ.