Friday 21 May 2021

ಸಾಕ್ಷರತೆ ದೀಪ ಜಿಮ್ಮಿಯೆನ್


ಸಾಕ್ಷರತೆ ದೀಪ ಜಿಮ್ಮಿಯೆನ್
- ಸುರೇಶ ಗೋವಿಂದರಾವ್


ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ, ಶಿಕ್ಷಣವೇ ಶಕ್ತಿ, ಹೆಬ್ಬೆಟ್ಟಿನ ಸಹಿ ಬಾಳಿಗೆ ಕಹಿ ಮೊದಲಾದ ಘೋಷವಾಕ್ಯಗಳೆಲ್ಲ ಸಾಕ್ಷರ ಭಾರತ ಕಾರ್ಯಕ್ರಮದ ಆಂದೋಲನದಲ್ಲಿ ಜನಜಾಗೃತಿಗಾಗಿ ಮಹತ್ವದ ಪಾತ್ರ ವಹಿಸಿದವು. ಈ ಸಾಕ್ಷರತೆ ಎಂಬ ರಾಮಬಾಣವನ್ನು, ಅನಕ್ಷರಸ್ಥರಿಗೆ ಜನಶಿಕ್ಷಣ ನಿಲಯಗಳನ್ನು ಹುಟ್ಟು ಹಾಕಿದ ಮಹಾಪುರುಷನ ಹೆಸರು ಯೆನ್ಯಾಂಗ್ಚು. ತೃತೀಯ ಜಗತ್ತಿನ ರಾಷ್ಟ್ರಗಳಲ್ಲಿದ್ದ ಅನಕ್ಷರತೆ ಹಾಗೂ ಸ್ತ್ರೀಶಿಕ್ಷಣಕ್ಕೆ ಭದ್ರ ಬುನಾದಿ ಹಾಕಿದವನು ಯೆನ್ಯಾಂಗ್ಚು ಜಿಮ್ಮಿಯೆನ್

ಈ ಮಹಾತ್ಮ ಯೆನ್ಯಾಂಗ್ ಚು 1893 ಅಕ್ಟೋಬರ್ 23 ರಂದು ಚೀನಾ ದೇಶದ ಸಿಚುವಾನ್ ಪ್ರಾಂತ್ಯದಲ್ಲಿ ಹಿಂದುಳಿದ ಹಳ್ಳಿಯಲ್ಲಿ ಜನಿಸಿದನು. ತಂದೆ ಬೇಝಾಂಗ್ ತಾಯಿ ಸಿಚ್ಯೂನ್. ಇವರು ತೀರಾ ಕಡುಬಡವರಾಗಿದ್ದರೂ, ಚೀನಿ ಸಾಹಿತ್ಯದ ಶ್ರೇಷ್ಠ ರತ್ನಗಳಾಗಿದ್ದರು. ಮಗ ಯೆನ್ ಶ್ರೇಷ್ಠ ಚೀನಿ ಕೃತಿಗಳನ್ನು ಕಂಠಪಾಠ ಮಾಡಿದ್ದನು. ಮಗ ಪಾಶ್ಚಾತ್ಯ ಶಿಕ್ಷಣ ಗಳಿಸಬೇಕು. ವಿಜ್ಞಾನ ಓದಿ ಏನನ್ನಾದರು ಸಾಧಿಸಲಿ ಎಂದು ಆತನ ತಂದೆ ತಾಯಿ ಬಯಸಿದರು.

ಈ ಬಯಕೆಯೇ 10 ವರ್ಷದ ಪುಟ್ಟ ಬಾಲಕನನ್ನು 145 ಕಿ.ಮೀ ದೂರದ ಬಾಯೋನಿಂಗ್ ಎಂಬ ಊರಿಗೆ ಅಣ್ಣನೊಂದಿಗೆ ಬುತ್ತಿ ಹೊತ್ತು 5 ದಿನಗಳ ಕಾಲುದಾರಿ ನಡೆದುಕೊಂಡೇ ಶಿಕ್ಷಣಕ್ಕಾಗಿ ಕರೆದುಕೊಂಡು ಹೋಯಿತು. ಅಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಪ್ರೌಢ ಶಿಕ್ಷಣಕ್ಕಾಗಿ ಮತ್ತೆ 320 ಕಿ.ಮೀ. ದೂರದ ಹದಿನಾಲ್ಕು ದಿನಗಳ ನಡಿಗೆಯ ಪ್ರಯಾಣ. ಅಲ್ಲಿ ಆತನ ಪ್ರೌಢಶಿಕ್ಷಣ ಮುಗಿಯಿತು. ಪ್ರಾಥಮಿಕ ಶಾಲೆಯಲ್ಲಿದ್ದ ಆಂಗ್ಲ ಗುರು ಅಲ್ಡೀಸ್ ಈತನಿಗೆ ಮತ್ತೆ ಸಹಾಯ ಮಾಡಿದನು. ಆಗ ಯಾಂಗ್ಚುಗೆ 17 ವರ್ಷ, ಇವನ ಅಸಾಧಾರಣ ಬುದ್ಧಿಮತ್ತೆಯನ್ನು ಗ್ರಹಿಸಿ ಡ್ಯೂಕ್ರ ಮೊಮ್ಮಗ ಜೇಮ್ಸ್ ಸ್ವೀವರ್ಟ್, ಚೀನಾದ ಉತ್ತರ ಪ್ರಾಂತ್ಯದ ನದಿತೀರದಲ್ಲೇ ಈತ ಅಸ್ತಂಗತನಾಗಬಾರದೆಂದು ಎಣಿಸಿ ಹೊಸ ಜಗತ್ತಿನ ದಿಡ್ಡಿಬಾಗಿಲು-ಹಾಂಗ್ಕಾಂಗ್ಗೆ ಕರೆತಂದ. 40 ದಿನಗಳ ಚಾರಣ! ಜೇಮ್ಸ್ನ ಪ್ರೋತ್ಸಾಹ ಮತ್ತು ದಯಾಳುತನಕ್ಕೆ ಮಾರುಹೋಗಿ ತನ್ನ ಆಶ್ರಯದಾತನ ಹೆಸರನ್ನು ತನ್ನ ಹೆಸರಿನ ಮುಂದೆ ಸೇರಿಸಿಕೊಂಡನು. ಯೆನ್ಯಾಂಗ್ ಚು ಅಂದಿನಿಂದ ಜೇಮ್ಸ್ಯೆನ್ ಆದ. ಅದು ಗೆಳೆಯರ ಬಾಯಲ್ಲಿ ಜಿಮ್ಮಿಯೆನ್ ಆಯಿತು.

1917 ರಲ್ಲಿ ಅಮೇರಿಕಾ ಜರ್ಮನಿಯ ಮೇಲೆ ಯುದ್ಧ ಸಾರಿತು. ಅದು ಹೇಗೋ ಜಿಮ್ಮಿ ಈ ಮಾರಕ ಯುದ್ಧದ ಬೆನ್ನಿಗೆ ಸೆಳೆಯಲ್ಪಟ್ಟ. ಇದು ಅವನ ಬದುಕಿನ ದಿಕ್ಕನ್ನೇ ಬದಲಾಯಿಸಿತು. ಆ ಸಮಯದಲ್ಲಿ ಬ್ರಿಟಿಷರು ಚೀನೀ ಸರ್ಕಾರದ ಅನುಮತಿ ಪಡೆದು ಉತ್ತರ ಚೀನಾದಿಂದ ಕೂಲಿಕಾರರನ್ನು ಭರ್ತಿ ಮಾಡಿಕೊಳ್ಳುತ್ತಿದ್ದರು. ಈ ಕೂಲಿಕಾರರು ರಸ್ತೆ ನಿರ್ಮಾಣ, ರೈಲ್ವೆ ಹಳಿ ಎಳೆಯುವುದು, ಸರಕು ಹೇರುವುದು, ಇಳಿಸುವುದು ಅಲ್ಲದೆ ಈ ಬಡಪಾಯಿಗಳು ಯುದ್ಧ ಭೂಮಿಯಲ್ಲಿ ಮುಂಚೂಣಿಗೆ ಹೋಗಬೇಕಾಗಿತ್ತು. ಇವರ ಸಾಂಪ್ರದಾಯಿಕ ಕೂದಲನ್ನು ಕತ್ತರಿಸಿ, ಸಮವಸ್ತ್ರ ತೊಡಿಸಿ, ಸಂಖ್ಯೆ ಬರೆದ ಲೋಹದ ತಗಡೊಂದನ್ನು ಪ್ರತಿಯೊಬ್ಬನ ಎಡಗೈ ಮಣಿಕಟ್ಟಿಗೆ ಕಟ್ಟಿದರು. ಈ ನತದೃಷ್ಟರ ಸಂಖ್ಯೆ 1,80,000 ಇವರೆಲ್ಲರ ವಾಸ ಅಸಹ್ಯಕರ ವಾತಾವರಣದಲ್ಲಿ, ಮೈಕೊರೆವ ಚಳಿಗಾಳಿ, ಡಬ್ಬಿಗಳಲ್ಲಿ ತುಂಬಿಕೊಡುತ್ತಿದ್ದ ದನದ ಮಾಂಸ, ಬೇಯಿಸಿದ ಹುರುಳಿಕಾಯಿ ಯಾತಕ್ಕೂ ಸಾಲುತ್ತಿರಲಿಲ್ಲ. ಯುದ್ಧದಲ್ಲಿ ಬಾಂಬಿನ ದಾಳಿಗೂ ಕೆಲವರು ತುತ್ತಾದರು. ಯುದ್ಧದಲ್ಲಿ ಮಡಿದ ಬ್ರಿಟಿಷ್, ಫ್ರೆಂಚ್ ಸೈನಿಕರ ದೇಹವನ್ನು ಹೂತಿಟ್ಟಿದ್ದ ಗೋರಿಗಳಿಂದ ಹೊರತೆಗೆದು ಪುನಃ ಹೂಳುವ ಅಸಹ್ಯಕರ ಕೆಲಸಕ್ಕೆ ಹಚ್ಚುತ್ತಿದ್ದರು.

ಒಂದು ದಿನ ಚೀನಾದ ರಾಷ್ಟ್ರೀಯ ಯುದ್ಧ ಕಾರ್ಯದ ಪರಿಷತ್ ಜಿಮ್ಮಿಯೆನ್ನನ್ನು ಪ್ರಾನ್ಸಿನಲ್ಲಿ ಚೀನಿ ಕೂಲಿಗಳ ಬವಣೆಯನ್ನು ನೀಗಿಸಲು ಅಲ್ಲಿಗೆ ಹೋಗುತ್ತೀರೇನು? ಎಂದು ಕೇಳಿತು. ಜಿಮ್ಮಿ ಕೂಡಲೇ ಒಪ್ಪಿಕೊಂಡನು. ರಾಷ್ಟ್ರೀಯ ಯುದ್ಧ ಕಾರ್ಯದ ಪರಿಷತ್ ಯೋಧರಿಗೆ ಫಲಹಾರ ಮಂದಿರಗಳನ್ನು ನಡೆಸುತ್ತಿತ್ತು. ಇಲ್ಲಿ ಜಿಮ್ಮಿ ಪಾನ್ ಬೀಡಾ ಜೊತೆಗೆ ಸಿಹಿತಿಂಡಿ ಮಾರುತ್ತಿದ್ದ. ಚೀನಿ ಕೂಲಿಕಾರರು ಜೂಜು, ಅಫೀಮು, ಗಾಂಜಾಗಳಿಗೆ ಬಲಿಯಾಗಿದ್ದರು. ದಿನವಿಡೀ ದುಡಿತ, ನಿರ್ಜೀವವಾದ ಬಾಳು ಅನೇಕರನ್ನು ಆತ್ಮಹತ್ಯೆಗೂ ಪ್ರೇರೇಪಿಸಿತ್ತು. ಆದರೆ ಈ ಪಿಡುಗಿಗೆ ತಾಯನೆಲ ಹಾಗೂ ಕುಟುಂಬದಿಂದ ದೂರವಿರುವುದೇ ಮೂಲಕಾರಣ ಎನ್ನುವುದು ಜಿಮ್ಮಿಗೆ ಬೇಗನೆ ಹೊಳೆಯಿತು. ತಂದೆ-ತಾಯಿ, ಹೆಂಡತಿ-ಮಕ್ಕಳು ಹಾಗೂ ತಮ್ಮ ಮೂಲನೆಲೆಯನ್ನು ಹೊಟ್ಟೆಪಾಡಿಗಾಗಿ ತೊರೆದು ಬಂದಿದ್ದ ಈ ಕೂಲಿಕಾರರು ಅಲ್ಲಿನ ಸಂಪರ್ಕವಿಲ್ಲದೆ, ಸಂಪರ್ಕಿಸಲು ಅವಿದ್ಯಾವಂತರಾದ ಇವರಿಗೆ ಸಾಧ್ಯವಾಗದೇ ಅವರ ಜೀವನವನ್ನು ನಿರಾಸೆಗೆ ತಳ್ಳಿತ್ತು.

ಒಂದು ರಾತ್ರಿ ಜಿಮ್ಮಿಯ ಗುಡಿಸಲಿಗೆ ಜೋಲು ಮೋರೆ ಹಾಕಿಕೊಂಡು ಮೂವರು ಚೀನೀ ಕೂಲಿಗಳು ಬಂದರು. ಮಾಸ್ಟರ್ ನಮ್ಮ ಮನೆಗೆ ಪತ್ರ ಬರೆದು ಕೊಡಿ... ಎಂದರು. ಯೆನ್ ಸಂತೋಷದಿಂದ ಪತ್ರ ಬರೆದುಕೊಟ್ಟ. ಅದರ ಮಾರನೇ ರಾತ್ರಿ ಒಂದು ಡಜನ್ ಚೀನೀ ಕೂಲಿಕಾರರು ಬಂದರು. ಅವರಿಗೂ ಪತ್ರ ಬರೆದುಕೊಟ್ಟ. ಮೂರನೇ ರಾತ್ರಿ 50 ಜನ ಬಂದರು. ಆ ಬಳಿಕ ಪ್ರತೀ ರಾತ್ರಿ ಈತನ ಗುಡಿಸಲಿನ ಮುಂದೆ ಹನುಮಂತನ ಬಾಲದಂತೆ ದೊಡ್ಡಸಾಲು ಬೆಳೆಯತೊಡಗಿತು. ಅವನಿದ್ದ ಬೋಲೋಗ್ನೆ ಕ್ಯಾಂಪಿನಲ್ಲಿ 5 ಸಾವಿರ ಕೂಲಿಗಳಿದ್ದರು. ಇದಕ್ಕೆ ಕೊನೆ ಎಂದು? ಎಂದು ಆಲೋಚಿಸಿದ. ಆಗ ಕೂಡಲೇ ಒಂದು ಉಪಾಯ ಹೊಳೆಯಿತು. ಅದೊಂದು ಕ್ರಾಂತಿಕಾರಿ ಉಪಾಯ !

ಒಂದು ಮುಂಜಾನೆ ಆ ಎಲ್ಲ ಕೂಲಿಕಾರರು ಒಂದೆಡೆ ಸೇರಿದ್ದರು. ಇಂತಹ ಸಂದರ್ಭವನ್ನೇ ಕಾಯುತ್ತಿದ್ದ ಜಿಮ್ಮಿ ಅವರನ್ನುದ್ದೇಶಿಸಿ ಮಹನೀಯರೇ ತಮ್ಮಲ್ಲಿ ಅನೇಕರಿಗೆ ನಾನು ಪತ್ರ ಬರೆದುಕೊಡುತ್ತಿರುವುದು ತಿಳಿದಿದೆ. ಆದರೆ ಈ ರಾತ್ರಿಯಿಂದ ಅದನ್ನು ನಿಲ್ಲಿಸುತ್ತೇನೆ. ಇನ್ನು ಮುಂದೆ ನಿಮ್ಮ ಪತ್ರ ನೀವೇ ಬರೆದುಕೊಳ್ಳಿ ಎಂದು ಹೇಳಿದನು. ಕೂಲಿಕಾರರ ತಂಡದಲ್ಲಿ ನಗೆಯ ಅಲೆಯನ್ನು ಎಬ್ಬಿಸಿತು. ಆದರೆ ಜಿಮ್ಮಿ ಗಂಭೀರವಾಗಿ ನಿಮ್ಮ ಮನೆಗೆ ಪತ್ರಗಳನ್ನು ನೀವೇ ಬರೆಯಬೇಕು, ಬೇರೆಯವರ ಕೈಯಿಂದ ಅಲ್ಲ ಅಂದರೆ... ನೀವು ಅಕ್ಷರಸ್ಥರಾಗಬೇಕು. ನಿಮಗೆ ಅಕ್ಷರಾಭ್ಯಾಸ ನಾನು ಮಾಡಿಸುತ್ತೇನೆ, ನಿಮ್ಮಲ್ಲಿ ಅಕ್ಷರ ಕಲಿಯಲು ಇಚ್ಛೆ ಇರುವವರು ಕೈ ಮೇಲೆತ್ತಿ ಎಂದ. ಬಹಳ ಹೊತ್ತು ಒಂದೂ ಕೈ ಮೇಲೇಳಲಿಲ್ಲ. ಸ್ವಲ್ಪ ಸಮಯದ ಬಳಿಕ ಒಂದೇ ಒಂದು ಕೈ ಮೇಲೆದ್ದಿತು. ತರುವಾಯ ಮತ್ತೊಂದು ಅದನ್ನು ನೋಡಿ ಮತ್ತೊಂದು, ಮಗದೊಂದು ಹೀಗೆ 40 ಕೈಗಳು ಮೇಲೆದ್ದವು. ಅವರನ್ನು ಕುರಿತು ನೀವು ನನ್ನ ವಿದ್ಯಾರ್ಥಿಗಳು, ಈ ರಾತ್ರಿ ನನ್ನ ಗುಡಿಸಿಲಿಗೆ ಬನ್ನಿ... ಎಂದು ಹೊರಟ ಜಿಮ್ಮಿ.

ಜಿಮ್ಮಿ ತನ್ನ ಮುಂದಿನ ಗುರಿಯನ್ನು ಸ್ಪಷ್ಟವಾಗಿ ಕಂಡುಕೊಂಡಿದ್ದ. ಈ ಕ್ಯಾಂಪಿನಲ್ಲಿ 5 ಸಾವಿರ ಕೂಲಿಗಳು, ಇಡೀ ಫ್ರಾನ್ಸಿನಲ್ಲಿ 1,80,000 ಮಂದಿ! ತಾಯ್ನಾಡು ಚೀನಾದಲ್ಲಿ 350 ಮಿಲಿಯನ್ ಅನಕ್ಷರಸ್ಥರು. ಅಸಾಧಾರಣ ಕೆಲಸಕ್ಕೀಗ ಆತ ಧುಮುಕಿದ್ದ. ಪ್ರತಿ ರಾತ್ರಿ ಈ 40 ಮಂದಿ ಕೂಲಿಕಾರರು ಅವನ ಗುಡಿಸಿನಲ್ಲಿ ಒಂದೊಂದು ಗಂಟೆ ಅಕ್ಷರಾಭ್ಯಾಸ ನಿರತರಾದರು. ಇವರಿಗೆಲ್ಲ ಪತ್ರ ಬರೆಯುವಷ್ಟು, ವಾರ್ತೆ ಓದುವಷ್ಟು ತರಬೇತಿಯನ್ನು ನೀಡಿದ.

ಚೀನಾದಲ್ಲಿ 4 ಸಾವಿರ ವರ್ಷಗಳಿಂದಲೂ ಓದು ಬರಹ ಪಂಡಿತರಿಗೆ ಮಾತ್ರ ಮೀಸಲಾಗಿತ್ತು. ರೈತಾಪಿ ವರ್ಗ ಶಿಕ್ಷಣಕ್ಕೆ ಅನರ್ಹರು ಎಂಬ ಹಣೆಪಟ್ಟಿ ಹಚ್ಚಲಾಗಿತ್ತು. ಅವರೇನಿದ್ದರೂ ದುಡಿಮೆಗೆ ಮಾತ್ರ ಸೀಮಿತರಾಗಿದ್ದರು. ಈಗ ಜಿಮ್ಮಿ 40 ಮಂದಿ ಕೂಲಿಗಳಿಗೆ ಅಕ್ಷರಾಭ್ಯಾಸ ಮಾಡಿಸಿ, ಒಂದು ದಿನ ಪದವಿ ಪ್ರಧಾನ ಸಮಾರಂಭ ಹಮ್ಮಿಕೊಂಡ, ಈ ಸಮಾರಂಭಕ್ಕೆ ಅಧಿಕಾರಿಗಳನ್ನು ಅಹ್ವಾನಿಸಿದ. ಇಡೀ ಕ್ಯಾಂಪಿನ ಎಲ್ಲ ಕೂಲಿಕಾರರು ಸೇರಿದ್ದರು. ಅಕ್ಷರಸ್ಥ 40 ಕೂಲಿಗಳಿಗೆ ಒಂದೊಂದು ಡಿಪ್ಲೊಮಾ ಸರ್ಟಿಫಿಕೇಟ್ ವಿತರಿಸಿದ ಅದರಲ್ಲಿ ಶ್ರೀಯುತ.......... ಪ್ರಜಾಪ್ರಭುತ್ವ ಚೀನಾದ ಸಾಕ್ಷರತಾ ಪ್ರಜೆಯಾಗಿದ್ದಾನೆ. ಎಂದು ಮುದ್ರಿತವಾಗಿತ್ತು. ಉಳಿದ ಅನಕ್ಷರಸ್ಥ ಕೂಲಿಕಾರರನ್ನು ಈ ವರ್ಣರಂಜಿತ ಸಮಾರಂಭ ಸೂಜಿಗಲ್ಲಿನಂತೆ ಸೆಳೆಯಿತು. ಸಾಕ್ಷರತೆಯೆಡೆಗೆ ಮಾರನೇ ದಿನವೇ 2 ಸಾವಿರಕ್ಕಿಂತಲೂ ಹೆಚ್ಚು ಕೂಲಿಕಾರರು ಜಿಮ್ಮಿಯೆನ್ನ ಚಾರಿತ್ರಿಕ ಸಾಕ್ಷರತಾ ತರಬೇತಿಗೆ ದಾಖಲಾದರು.

ಜಿಮ್ಮಿಯೆನ್ ಸಾಕ್ಷರತೆಯನ್ನು ಕಾಡ್ಗಿಚ್ಚಿನಂತೆ ಹರಡಿದ. ಅವನೀಗ ತಾನು ತಯಾರು ಮಾಡಿದ ಸಾಕ್ಷರತಾ ಕೂಲಿಗಳನ್ನೇ ಶಿಕ್ಷಕರಾಗಿ ನೇಮಿಸಿದ. ಮುಂದೆ ಜಿಮ್ಮಿ-ಕಾರ್ನೆಲ್, ಹಾರ್ವಡರ್್ ಮುಂತಾದ ಇತರ ಅಮೆರಿಕನ್ ಕಾಲೇಜುಗಳಲ್ಲಿ ವ್ಯಾಸಂಗ ಮಾಡುತ್ತಿದ್ದ ಚೀನೀ ವಿದ್ಯಾರ್ಥಿಗಳನ್ನು ಕರೆತಂದ. ಅವರು ಕೂಲಿಕಾರರಿಗೆ ಅಕ್ಷರಾಭ್ಯಾಸ ಪ್ರಾರಂಭಿಸಿದರು. ಇವರಿಗೆ ಪುಸ್ತಕಗಳ ಕೊರತೆ ಎದುರಾಯಿತು. ಈಗ ಜಿಮ್ಮಿ ತಾನೇ ಚೀನೀ ಕಾರ್ಮಿಕರ ಸಾಪ್ತಾಹಿಕ ಎಂಬ ವಾರ್ತಾಪತ್ರಿಕೆಯನ್ನು ಸರಳ ಭಾಷೆಯಲ್ಲಿ ಬರೆದು ಪ್ರಕಟಿಸಿದನು.

ಒಂದು ದಿನ ಯೆನ್ಗೆ ಒಬ್ಬ ನವಸಾಕ್ಷರ ಕೂಲಿಕಾರನಿಂದ ಒಂದು ಪತ್ರ ಬಂದಿತು. " ಅಸಾಧಾರಣ ಮಾಸ್ಟರ್ ಯೆನ್... ತಮ್ಮ ವೃತ್ತ ಪತ್ರಿಕೆ ಪ್ರಕಟವಾದ ದಿನದಿಂದ ತಪ್ಪದೇ ಓದುತ್ತಿರುವ ನನಗೆ ಈ ಭೂಮಂಡಲದ ಸಕಲ ವಿಚಾರಗಳೂ ಅರ್ಥವಾಗುತ್ತಿವೆ. ಆದರೆ ತಮ್ಮ ಪತ್ರಿಕೆ ತುಂಬಾ ಅಗ್ಗ. ಹೀಗಾದರೆ ನೀವು ಪತ್ರಿಕೆಯನ್ನು ಬೇಗನೆ ಮುಚ್ಚಬೇಕಾಗುವುದು, ಈ ಪತ್ರದ ಜೊತೆಗೆ ಲಗತ್ತಿಸಿರುವ 365 ಫ್ರಾಂಕ್ಗಳನ್ನು ದಯವಿಟ್ಟು ಸ್ವೀಕರಿಸಿ ಇದನ್ನು ನಾನು ಫ್ರಾನ್ಸ್ನಲ್ಲಿ 3 ವರ್ಷಗಳ ಕೂಲಿಯ ದುಡಿಮೆಯಿಂದ ಉಳಿಸಿದ್ದೇನೆ"

ಎಂದು ಬರೆದಿದ್ದನ್ನು ಕಂಡು ಯೆನ್ ಮೂಕವಿಸ್ಮಿತನಾದ. ಈ ಪತ್ರ ಓದಿದ ಮೇಲೆ ಯೆನ್ ತನ್ನ ಉಳಿದ ಜೀವಿತಾವಧಿಯನ್ನು ನವಚೀನಾಕ್ಕೆ ಹೋಗಿ ಎಲ್ಲ ಚೀನೀ ರೈತ ಸಮುದಾಯದವರ ಶಿಕ್ಷಣಕ್ಕೇ ಮುಡುಪಾಗಿಡಲು ನಿರ್ಧರಿಸಿದ. 1920 ರಲ್ಲಿ ಚೀನೀ ಕೂಲಿಕಾರರ ದಳವನ್ನು ವಿಸರ್ಜಿಸಲಾಯಿತು. ಯುದ್ಧ ನಿಂತ ಮೇಲೆ ಜಿಮ್ಮಿ ಚರಿತ್ರೆ ವಿಷಯವನ್ನು ತೆಗೆದುಕೊಂಡು ಎಮ್.ಎ. ಪದವಿ ಪಡೆದನು. ಕೊಲಂಬಿಯ ಮತ್ತು ಹಾರ್ವಡರ್್ನಿಂದ ಶಿಕ್ಷಣ ಮುಗಿಸಿಕೊಂಡು ಬಂದ ಇಬ್ಬರು ವಿದ್ಯಾರ್ಥಿಗಳ ನೆರವಿನೊಂದಿಗೆ ಜನ ಸಾಮಾನ್ಯರಿಗಾಗಿ ಸಹಸ್ರ ಚಿಹ್ನೆಗಳ ಪುಸ್ತಕ ಎಂಬ ಸರಳ ವರ್ಣ ಮಾಲೆಯೊಂದನ್ನು ಸಿದ್ಧಪಡಿಸಿದನು. ಹಾಗೂ ಅಶಿಕ್ಷಿತ ಮನುಷ್ಯ-ಕುರುಡು ಮನುಷ್ಯ ಎಂಬ ಘೋಷಣೆ ಹೊತ್ತ ಭಿತ್ತಿ ಚಿತ್ರಗಳನ್ನು ಪ್ರಕಟಿಸಿ ನಗರದ ಹಾಗೂ ಹಳ್ಳಿ- ಹಳ್ಳಿಗಳಲ್ಲಿ ಬೀದಿ, ಬೀದಿಗಳಲ್ಲಿ ಸಾಗುವ ಬೃಹತ್ ಮೆರವಣಿಗೆಯನ್ನು ಸ್ಥಳೀಯ ವಿದ್ಯಾರ್ಥಿಗಳ ನೆರವಿನಿಂದ ಏರ್ಪಡಿಸಿದನು. ಸಾಕ್ಷರತೆಯ ಅರಿವು ಮೂಡಿಸಲು ಕೂಲಿಕಾರರು, ರಿಕ್ಷಾವಾಲಾಗಳು, ಚಮ್ಮಾರರು, ನೇಕಾರರು, ಜಾಡಮಾಲಿಗಳು, ಭಿಕ್ಷುಕರು ಹಾಗೂ ಮತ್ತಿತರನ್ನು ಪಟ್ಟಿ ಮಾಡಿ, ರಾತ್ರಿಶಾಲೆಗೆ ಸೇರಿಸಕೊಳ್ಳಲು ಸೂಕ್ತ ವ್ಯವಸ್ಥೆ ಮಾಡಿದನು.

ಜಿಮ್ಮಿಯ ಮತ್ತೊಂದು ಕ್ರಾಂತಿಕಾರಿ ಯೋಜನೆ ಸ್ತ್ರೀ ಶಿಕ್ಷಣ. ಚೀನೀ ಮಹಿಳೆಯರು ಚರಾಸ್ಥಿ ಇದ್ದಂತೆ ಅವರ ಕೈಕಾಲುಗಳಿಗೆ ಕೋಳ ತೊಡಿಸಲಾಗುತ್ತಿತ್ತು. ಆದರೆ ಯೆನ್ನ ಈ ಹೋರಾಟದಿಂದಾಗಿ 633 ಬಾಲಕಿಯರು ಹಾಗೂ ಸ್ತ್ರೀಯರು ಅಕ್ಷರಾಭ್ಯಾಸ ಪಡೆಯಲು ಮುಂದಾದರು. ಈ ಅಸಾಧಾರಣ ಯೋಜನೆಯನ್ನು ಮೆಚ್ಚಿ ಅನೇಕರು ಸಹಾಯ ನೀಡಿದರು. ಸಣ್ಣದಾಗಿ ಆರಂಭಗೊಂಡ ಈ ಸಾಕ್ಷರತಾ ಕಾರ್ಯಕ್ರಮ ಎರಡು ದಶಕಗಳಲ್ಲಿ ಚೀನಾದಾದ್ಯಂತ ಲಕ್ಷೊಪಲಕ್ಷ ಬಡ ಸ್ತ್ರೀ, ಪುರುಷರನ್ನು ಅಕ್ಷರಸ್ಥರನ್ನಾಗಿಸಿತು.

ಮುಂದೆ ಯೆನ್ ವಿದ್ಯಾವಂತರ ತಂಡದೊಂದಿಗೆ ಹಳ್ಳಿಗಳಿಗೆ ಹೋಗಿ ವಾಸಿಸಲು ತೊಡಗಿದನು. ಅವನ ತಂಡ ಶಿಕ್ಷಣ, ಜೀವನೋಪಾಯ, ಆರೋಗ್ಯ ಹಾಗೂ ಸ್ವಯಂ ಆಡಳಿತ ಎಂಬ 4 ಹಂತದ ಕಾರ್ಯಕ್ರಮವೊಂದನ್ನು ಹಾಕಿಕೊಂಡಿತು. ಈ ತಂಡ ಪ್ರತಿ ದಿನ ಸಾಯಂಕಾಲ ಒಂದೊಂದು ಹಳ್ಳಿಗೆ ಹೋಗಿ ಸಭೆ ಸೇರಿಸಿ, ಜನರನ್ನುದ್ದೇಶಿಸಿ ನಿಮಗೆ ಕಣ್ಣುಗಳಿವೇ? ಕಣ್ಣುಗಳಿರುವ ಪ್ರತಿಯೊಬ್ಬನೂ ನಿಮ್ಮ ಕೈ ಮೇಲೆತ್ತಿ ಎಂದು ಕೇಳುತ್ತಿದ್ದನು. ಸಹಜವಾಗಿ ಎಲ್ಲರ ಕೈಗಳೂ ಮೇಲೆ ಏಳುತ್ತಿದ್ದವು. ಸಭೆಯ ಮುಖಂಡ ಪುಸ್ತಕವೊಂದನ್ನು ಎತ್ತಿ ಹಿಡಿದು ಎಷ್ಟು ಜನ ಇದನ್ನು ಓದಬಲ್ಲಿರಿ? ಎಂದು ಪ್ರಶ್ನಿಸುತ್ತಿದ್ದ. ಯಾರೂ ಕೈ ಎತ್ತದೇ ಇದ್ದಾಗ. ಇಲ್ಲಿಗೆ ಕೆಲವರು ಬಂದಿದ್ದಾರೆ. ಅವರು ನಿಮ್ಮ ಕುರುಡನ್ನು ನಾಲ್ಕೆ ತಿಂಗಳಲ್ಲಿ ವಾಸಿ ಮಾಡುತ್ತಾರೆ. ನೀವು ಹಣ ಕೊಡಬೇಕಾಗಿಲ್ಲ. ಆದರೆ ಪ್ರತಿರಾತ್ರಿ ಒಂದು ಗಂಟೆ ಅವರ ಜೊತೆ ಕಾಲ ಕಳೆಯಬೇಕು. ತತ್ಫಲವಾಗಿ ಸಹಸ್ರಾರು ಜನಶಿಕ್ಷಣ ನಿಲಯಗಳು ಸ್ಥಾಪನೆಗೊಂಡವು.

ಜಿಮ್ಮಿಯನ್ ಸ್ಥಾಪಿಸಿದ ಜನಶಿಕ್ಷಣ ನಿಲಯಗಳು ಚೀನಾದ ಜನತೆಗೆ ರಾಜಕೀಯ ಕಲ್ಪನೆಯನ್ನು, ಸಾಮರಸ್ಯದಿಂದ ಬಾಳುವುದನ್ನು ಮತ್ತು ಆಡಳಿತದಲ್ಲಿ ಎಲ್ಲರೂ ಭಾಗಿಯಾಗುವುದನ್ನು ಕಲಿಸಿಕೊಟ್ಟವು. ಮನೆಗೆದ್ದು ಮಾರು ಗೆಲ್ಲು ಎಂಬಂತೆ, ತನ್ನ ಮನೆಯಿಂದ ಆರಂಭವಾದ ಅವನ ಸಾಕ್ಷರತಾ ಯೋಜನೆ ಇಡೀ ದೇಶವನ್ನೇ ವ್ಯಾಪಿಸಿತು. ಇಡೀ ಮಾನವ ಕುಲದ ಕುರುಡನ್ನು ಹೋಗಲಾಡಿಸಲು ಯೋಜನೆಯೊಂದನ್ನು ರೂಪಿಸಿದ ತತ್ಪರಿಣಾಮ ಆರೋಗ್ಯ, ನೈರ್ಮಲ್ಯ, ಕೃಷಿಮಾರಾಟ, ಸ್ವಯಂ ಆಡಳಿತ, ಸಾಕ್ಷರತೆ, ಕಲೆ ಹಾಗೂ ಸಂಸ್ಕೃತಿ ಅಭಿವೃದ್ಧಿಗೊಂಡಿತು. ಸ್ಥಳೀಯ ನಾಯಕರು ಬೇಗನೆ ಬೆಳಕಿಗೆ ಬಂದರು. ಪ್ರತಿಯೊಬ್ಬ ರೈತನೂ ತನ್ನ ಸ್ವಹಿತಕ್ಕೆ ದುಡಿಯುವ ಬದಲು ಎಲ್ಲರೂ ಒಗ್ಗೂಡಿ ಸಾಮೂಹಿಕವಾಗಿ ದುಡಿಯುವಂತೆ ಪ್ರೇರಣೆ ನೀಡಿದ.

ಆದರೆ 1937 ರಲ್ಲಿ ಉತ್ತರ ಚೀನಾವನ್ನು ಆಕ್ರಮಿಸಿಕೊಂಡ ಜಪಾನೀಯರು ಯೆನ್ ಮತ್ತವನ ತಂಡವನ್ನು ಅಲ್ಲಿಂದ ಓಡಿಸಿದರು. ಜಿಮ್ಮಿ ಈಗ ತನ್ನ ಮೊದಲ ಸಾಕ್ಷರತಾ ಕೇಂದ್ರ ಚಾಂಗ್ಶಾಗೆ ಬಂದ. ತನ್ನ ಗುರಿಯನ್ನು ಮತ್ತೂ ವಿಶಾಲಗೊಳಿಸಿದನು. ಜಪಾನಿ ಆಕ್ರಮಣಕಾರರನ್ನು ಹಿಮ್ಮೆಟ್ಟಿಸಲು ಕೂಲಿಕಾರರನ್ನು ರೈತರನ್ನು, ನೌಕರರನ್ನು ಹುರುದುಂಬಿಸಿದ. ಚೀನೀಯರಲ್ಲಿ ದೇಶಪ್ರೇಮ ಭುಗಿಲೆದ್ದು ಮೂರು ಜಪಾನಿದಳಗಳನ್ನು ಹಿಮ್ಮೆಟ್ಟಿಸಿದರು. 1946 ರಲ್ಲಿ ಇಡೀ ದೇಶಕ್ಕೆ ಯೋಜನೆಯೊಂದನ್ನು ರೂಪಿಸಿದ. ಇದರ ಅನುಷ್ಠಾನಕ್ಕೆ ಸಂಯುಕ್ತ ಸಂಸ್ಥಾನದ ಸಹಾಯವನ್ನು ಯಾಚಿಸಿದ. 1948 ರಲ್ಲಿ ಅದು 27 ಮಿಲಿಯನ್ ಡಾಲರನ್ನು ನೀಡಿತು. ಈ ನೆರವಿನಲ್ಲಿ 4 ಮಿಲಿಯನ್ ಡಾಲರ್ ಖರ್ಚು ಮಾಡುವಷ್ಟರಲ್ಲಿಯೇ ಅಂದರೆ 1949 ರಲ್ಲಿ ಚೀನಾ ಕಮ್ಯುನಿಸ್ಟರ ವಶವಾಯಿತು. ನಾಯಕ ಮಾವೋನ ಕ್ರೂರ ಸಮತಾವಾದವನ್ನು ವಿರೋಧಿಸಿದ ಕೂಡಲೇ ಜಿಮ್ಮಿಯೆನ್ನನ್ನು ದೇಶ ಬಿಟ್ಟು ಹೊರ ಹಾಕಿದರು.

ಜನರ ಬಳಿ ಏನುಂಟೋ ಅದರಿಂದಲೇ ಜೀವನ ನಿರ್ಮಿಸಿ ಎಂದು ಕರೆ ನೀಡಿದ ಜಿಮ್ಮಿಯೆನ್ನನ ವಿಚಾರಧಾರೆ ವಿಶ್ವಪ್ರಸಿದ್ಧಿ ಪಡೆಯಿತು. ಜನರ ಬಳಿಗೆ ಹೋಗಿ ಅವರೊಡನೆ ಬಾಳಿ, ಅವರೊಂದಿಗೆ ಯೋಚಿಸಿ, ಅವರಿಗೆ ಏನು ಗೊತ್ತಿದೆಯೋ ಅದರಿಂದಲೇ ಜೀವನ ನಿರ್ಮಿಸಿ ಎಂಬ ಜಿಮ್ಮಿಯೆನ್ನ ನವ ಚೈತನ್ಯದ ಕರೆ ಪಿಲಿಫೈನ್ಸ್ ವಿದ್ಯಾರ್ಥಿಗಳ ಮನ ಮುಟ್ಟಿತು. ಮೂರುಸಾವಿರ ಸ್ವಯಂಸೇವಕರು ಅವನನ್ನು ಹಿಂಬಾಲಿಸಿದರು. 1956 ರ ವೇಳೆಗೆ ಯೆನ್ನ ತಂಡ ಶಿಕ್ಷಣ, ಜೀವನೋಪಾಯ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ ಸಾಧಿಸಿದ ಅಪಾರ ಅಭಿವೃದ್ಧಿಯನ್ನು ಕಂಡ ಮನಿಲಾ ಸರ್ಕಾರ ರಾಜಕೀಯಕ್ಕೆ ಸಂಬಂಧಿಸಿದಂತೆ ತಮ್ಮ ಹೋಬಳಿಗೆ ತಮ್ಮವರೇ ಕೌನ್ಸಿಲರುಗಳನ್ನು ಆರಿಸಲು ಕಾನೂನೊಂದನ್ನು ಜಾರಿಗೆ ತಂದಿತು. ಜಿಮ್ಮಿಯೆನ್ನನ ಈ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಅವನಿಗೆ ಪ್ರತಿಷ್ಠಿತ ಮ್ಯಾಗ್ಸೇಸ್ ಪಾರಿತೋಷಕವನ್ನು ನೀಡಿದರು.

1960 ರಲ್ಲಿ ಅಂತಾರಾಷ್ಟ್ರೀಯ ಗ್ರಾಮೀಣ ಪುನರುಜ್ಜೀವನ ಕೇಂದ್ರ ತಲೆ ಎತ್ತಿತು. 1970-80ರ ದಶಕ ಪೂರ್ತಿ ಇಲ್ಲಿ ತೃತೀಯ ಜಗತ್ತಿನ ರಾಷ್ಟ್ರಗಳ ಅಭ್ಯರ್ಥಿಗಳಿಗೆ ಪ್ರಪ್ರಥಮ ತರಬೇತಿಯನ್ನು ನೀಡಲಾಯಿತು. ಅದರ ಫಲವಾಗಿ ಇಂದು ಸಹಸ್ರಾರು ಸ್ವಯಂಸೇವಕರು ಕೊಲಂಬಿಯಾ, ಕೀನ್ಯಾ, ಗ್ವಾಟೆಮಾಲ, ಘಾನ, ಭಾರತ, ಬಾಂಗ್ಲಾ, ಶ್ರೀಲಂಕಾ, ನೇಪಾಲ, ಥೈಲ್ಯಾಂಡ್ ಮತ್ತು ಇಂಡೋನೇಶಿಯಾದಂತಹ ದೇಶಗಳಲ್ಲಿ ಅನಕ್ಷರಸ್ಥರಿಗೆ ಅಕ್ಷರ ಕಲಿಸಲು ಇಂದಿಗೂ ಹಳ್ಳಿಗಳಲ್ಲಿ ಕೆಲಸ ಮಾಡುವ ಅಭ್ಯರ್ಥಿಗಳಿದ್ದಾರೆ.

ಮಾನವ ಕುಲಕೋಟಿಗೆ ಅಪೂರ್ವವಾದ ಧ್ಯೇಯವನ್ನು ಜಿಮ್ಮಿಯೆನ್ ನೀಡಿ, 1990ರಲ್ಲಿ ನ್ಯೂಯಾರ್ಕ್ ನಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಕೊನೆಯುಸಿರೆಳೆದನು. ಆ ಮಹಾತ್ಮನ ಆತ್ಮಕ್ಕೆ ಶಾಂತಿ ಕೋರಿ ಇಡೀ ಪ್ರಪಂಚವೇ ಪ್ರಾರ್ಥನೆ ಸಲ್ಲಿಸಿ ಕಂಬನಿ ಮಿಡಿಯಿತು.