Sunday, 4 April 2021

ಶಾಲಾ ಶಿಕ್ಷಣದ ಸಂರಚನೆ

ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಸಂಘಟನೆ
ರಘುನಂದನ್


 ಭಾರತೀಯ ಸಂವಿಧಾನದ ನಿಯಮ 45 ರಪ್ರಕಾರ ಭಾರತದ ಎಲ್ಲಾ ರಾಜ್ಯಗಳು ತಮ್ಮ ರಾಜ್ಯದ 6-14 ವರ್ಷ ವಯೋಮಿತಿಯ ಎಲ್ಲಾ ಮಕ್ಕಳು ಉಚಿತ ಮತ್ತು ಕಡ್ಡಾಯ ಶಿಕ್ಷಣವನ್ನು ಒದಗಿಸುವ ಜವಾಬ್ದಾರಿಗೆ ಬದ್ಧವಾಗಿರುತ್ತವೆ. ದೇಶದ ಎಲ್ಲಾ ರಾಜ್ಯಗಳೂ ಏಕರೂಪಶಿಕ್ಷಣ ವ್ಯವಸ್ಥೆಯನ್ನು (5+3+2+2)ಹೊಂದಿರಬೇಕೆಂಬುದು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ(ಎಂ.ಎಚ್. ಆರ್.ಡಿ) ಆಶಯವಾಗಿರುತ್ತದೆ. ಆದರೆ ಕೆಲವು ರಾಜ್ಯಗಳು ಇದಕ್ಕೆ ಹೊರತಾಗಿವೆ. ಹೊರತಾದ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ ರಾಜ್ಯವೂ ಒಂದು.ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು(5+2+3+2) ಅವಲೋಕಿಸಿದಾಗ ಯಾವುದೇ

 ಸಂದರ್ಭದಲ್ಲೂ ಗುಣಮಟ್ಟವನ್ನು ಕಾಪಾಡಿಕೊಂಡು ಹಾಗೂ ಬದಲಾದ ಶೈಕ್ಷಣಿಕ ವ್ಯವಸ್ಥೆಯನ್ನು ರಾಜ್ಯದ ಭೌಗೋಳಿಕ- ಸಾಮಾಜಿಕ-ಆರ್ಥಿಕ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಂತೆ ಮಾಡುವ ರಾಜ್ಯದ ಶೈಕ್ಷಣಿಕ ಆಡಳಿತ ಹಾಗೂ ನಿರ್ವಹಣೆಯು ಉತ್ತಮ ಮಟ್ಟದಲ್ಲಿದೆ. ದೇಶದೆಲ್ಲಡೆ ಇರುವ ಏಕರೂಪದ ಶೈಕ್ಷಣಿಕ ವ್ಯವಸ್ಥೆಯನ್ನು ರಾಜ್ಯದಲ್ಲೂ ಅಳವಡಿಸಿಕೊಳ್ಳಲೇಬೇಕೆಂಬ ಅನಿವಾರ್ಯದಲ್ಲೂ ರಾಜ್ಯದಲ್ಲಿ ಹಾಲಿ ಇರುವ ಶೈಕ್ಷಣಿಕ ವ್ಯವಸ್ಥೆಯನ್ನು ಕೆಲವು ಸಣ್ಣ ಮಾರ್ಪಾಡುಗಳೊಂದಿಗೆ ಸಮತೋಲಿಸಿಕೊಂಡು ಸಂಭಾಳಿಸಿಕೊಂಡು ಮಾನವ ಸಂಪನ್ಮೂಲ ಅಭಿವೃದ್ದಿ ಸಚಿವಾಲಯದ(ಎಂ.ಎಚ್. ಆರ್.ಡಿ) ಹಲವಾರು ಕಾರ್ಯಕ್ರಮಗಳು, ಯೋಜನೆಗಳು ರಾಜ್ಯದ ಶಿಕ್ಷಣ ಇಲಾಖೆ ಯಶಸ್ವಿಯಾಗಿ ಬಳಸಿಕೊಳ್ಳುತ್ತಾ ಬರುತ್ತಿದೆ. ಸರ್ವಶಿಕ್ಷಣ ಅಭಿಯಾನದ ಅನುಷ್ಠಾನದಿಂದ ಪ್ರಾಥಮಿಕ ಶಿಕ್ಷಣದ ಸಾರ್ವತ್ರಿಕರಣ ಹಾಗೂ ಯಶಸ್ಸನ್ನು ಸಾಧಿಸಿದ ಅನುಭವವನ್ನು ರಾಜ್ಯವು ಪಡೆಯುತ್ತಿರುವ ಸುಸಂದರ್ಭದಲ್ಲೆ ಪ್ರೌಢಶಿಕ್ಷಣವನ್ನು ಸಾರ್ವತ್ರೀಕರಣಗೊಳಿಸಬೇಕೆಂದು ಹಾಗೂ ರಾಜ್ಯದ ಶೈಕ್ಷಣಿಕ ವ್ಯವಸ್ಥೆಯನ್ನು(5+2+3+2) ದೇಶದ ಏಕರೂಪ ಶಿಕ್ಷಣ ವ್ಯವಸ್ಥೆಗೆ (5+3+2+2) ಬದಲಾಯಿಸಲೇಬೇಕೆಂಬ ಅನಿವಾರ್ಯಕ್ಕಾಗಿ ರೂಪುಗೊಂಡಿರುವ ಸಮಿತಿಯೇ ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಸಂಘಟನೆ

 ಕರ್ನಾಟಕದಲ್ಲಿ ಶಾಲಾ ಶಿಕ್ಷಣದ ಸಂರಚನೆಯ ಉನ್ನತೀಕರಣ ಹಾಗೂ ಸಂಘಟನೆ ವರದಿಯನ್ನು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಸಲ್ಲಿಸಲು ಈ ಸಮಿತಿಯ ಅಧ್ಯಕ್ಷರಾಗಿ ಪ್ರೊ. ಆರ್.ಗೋವಿಂದ, ಉಪಕುಲಪತಿಗಳು, ನ್ಯೂಪಾ ವಿಶ್ವವಿದ್ಯಾನಿಲಯ, ದೆಹಲಿ, ನೇಮಕಗೊಂಡಿರುತ್ತಾರೆ. ಸದಸ್ಯ ಕಾರ್ಯದರ್ಶಿಗಳಾಗಿ ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯ ಆಯುಕ್ತರು ಇರುತ್ತಾರೆ. ಪ್ರಾಥಮಿಕ ಹಾಗೂ ಪ್ರೌಢಶಿಕ್ಷಣ ಇಲಾಖೆಯಲ್ಲಿರುವ ಅಧಿಕಾರಿಗಳು, ಇಲಾಖೆಯಿಂದ ನಿವೃತ್ತಗೊಂಡ ನಿರ್ದೇಶಕರುಗಳು, ಪದವಿಪೂರ್ವ ಶಿಕ್ಷಣ ಇಲಾಖೆಯ ನಿರ್ದೇಶಕರು ಮತ್ತು ಅಧಿಕಾರಿಗಳು, ಮತ್ತು ಹಲವಾರು ತಜ್ಙರನ್ನೊಳಗೊಂಡ ಸಂಪನ್ಮೂಲ ವ್ಯಕ್ತಿಗಳು ಈ ಸಮಿತಿಯಲ್ಲಿದ್ದು ಹಲವಾರು ಚರ್ಚೆಗಳು, ಮಾಹಿತಿಗಳ ವಿಶ್ಲೇಷಣೆ, ಉಪಸಮಿತಿಗಳ ವರದಿಗಳು, ತಜ್ಞರ ಸಲಹೆ ಸೂಚನೆಗಳನ್ನು ಆಧರಿಸಿ ಈ ವರದಿ ರೂಪಿತಗೊಂಡಿದೆ.  ಈ ವರದಿಯಲ್ಲಿ ಒಟ್ಟು 05 ಅಧ್ಯಾಯಗಳಿದ್ದು 04 ಅಧ್ಯಾಯಗಳು ಮಾತ್ರ ಸಂಪೂರ್ಣವಾಗಿದ್ದು ಕೊನೆಯ ಅಧ್ಯಾಯವನ್ನು ಹಿಮ್ಮಾಹಿತಿ ಪಡೆದು ನಂತರ ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ.

ವರದಿಯ ಪ್ರಕಾರ ಪ್ರಾಥಮಿಕ ಶಿಕ್ಷಣದಲ್ಲಾಗುವ ಬದಲಾವಣೆಗಳು:
* ಮುಖ್ಯವಾಗಿ 8ನೇ ತರಗತಿ ಪ್ರಾಥಮಿಕ ಶಿಕ್ಷಣದ ಭಾಗವಾಗಿರುತ್ತದೆ. 1 ರಿಂದ 8 ಅಥವಾ 1ರಿಂದ5(ಕಿರಿಯ ಪ್ರಾಥಮಿಕ ಶಾಲೆ), 6ರಿಂದ8(ಹಿರಿಯ ಪ್ರಾಥಮಿಕ ಶಾಲೆ) ಈ ಮಾದರಿಯ ಶಾಲೆಗಳೂ ರೂಪಿತವಾಗಬಹುದು.
* ಈಗಾಗಲೇ ರಾಜ್ಯದ ಕೆಲವು ಪ್ರಾಥಮಿಕ ಶಾಲೆಗಳಲ್ಲಿ 8ನೇ ತರಗತಿಯನ್ನು ಪ್ರಾಥಮಿಕ ವಿಭಾಗಕ್ಕೆ ಸೇರಿಸುವ ಸರ್ವಶಿಕ್ಷಣ ಅಭಿಯಾನದ ಪ್ರಕ್ರಿಯೆಯನ್ನು ರಾಜ್ಯದ ಎಲ್ಲಾ ಪ್ರಾಥಮಿಕ (1 ರಿಂದ8 ಅಥವಾ6ರಿಂದ 8) ಶಾಲೆಗಳು ಅಳವಡಿಸಿಕೊಳ್ಳುವುದಕ್ಕೆ ದಾರಿ ಸುಗಮವಾಗುವುದು.
* 6 ರಿಂದ 8 ನೇ ತರಗತಿಯನ್ನು ಬೋಧನೆ ಮಾಡುವ ಶಿಕ್ಷಕರು ಪದವಿ ಹಾಗೂ ಬಿ.ಇಡಿ ಶಿಕ್ಷಣವನ್ನು ಪಡೆದಿರಬೇಕಾಗಿರುತ್ತದೆ.
* ಶಿಕ್ಷಕರ ನೇಮಕಾತಿಯಲ್ಲಿ ಹೆಚ್ಚಳವಾಗಬಹುದು ಅಥವಾ ಶಿಕ್ಷಕರ ಅವಶ್ಯಕತೆಯನ್ನು ಶಿಕ್ಷಕರ ಯೋಜನಾಬದ್ಧ ನಿಯೋಜನೆಯ (Redeployment) ಮುಖಾಂತರ ಮರು ವಿನ್ಯಾಸಗೊಳಿಸಬಹುದು.
* ರಾಜ್ಯದ ಶಿಕ್ಷಣ ಇಲಾಖೆಯ 151110 ಪ್ರಾಥಮಿಕ ಶಾಲಾ ಶಿಕ್ಷಕರು ಡಿ.ಇಡಿ/ಟಿ.ಸಿ.ಎಚ್ ಪಡೆದವರಾಗಿದ್ದು ಸುಮಾರು 34614 ಶಿಕ್ಷಕರು ಕಲಾಪದವಿ, 3531 ಶಿಕ್ಷಕರು ವಿಜ್ಞಾನ ಪದವಿ ಹೊಂದಿದವರಾಗಿರುತ್ತಾರೆ. ಉಳಿದ 1,12,965 ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭೋದಿಸಲು ಹಾಗೂ ಕಿರಿಯ ಪ್ರಾಥಮಿಕ ಶಾಲೆಗಳಲ್ಲಿ ಬೋದಿಸಲು ಅನುಕೂಲವಾಗುವಂತೆ ಪದವಿ ಹಾಗೂ ಬಿ.ಇಡಿ ಪದವಿ ಹೊಂದಲು ಶಿಕ್ಷಣ ಇಲಾಖೆಯು ಅವಕಾಶ ನೀಡಬಹುದು ಅಥವಾ ಸ್ಯಾಂಡ್ವಿಚ್ ವಿಧಾನದ ಕಿರುಅವಧಿಯ ವಿಷಯ ಸಂಪದೀಕರಣ ತರಬೇತಿಗಳನ್ನು ನೀಡಬಹುದು.
* 8 ನೇ ತರಗತಿ ಪ್ರಾಥಮಿಕ ವಿಭಾಗಕ್ಕೆ ಸೇರ್ಪಡೆಯಾಗುವುದರಿಂದ ಶಾಲೆಗಳ ಮೂಲಸೌಕರ್ಯ ಅಭಿವೃದ್ದಿ, ಸಿವಿಲ್ ಕಾಮಗಾರಿ, ಶಿಕ್ಷಕರ ನೇಮಕಾತಿ, ಶೈಕ್ಷಣಿಕ ಗುಣಮಟ್ಟ ನಿರ್ವಹಣೆಗೆ ಹೆಚ್ಚು ಸಂಪನ್ಮೂಲದ ಅವಶ್ಯಕತೆ ಬೇಕಾಗಬಹುದು.

ಈ ವರದಿಯ ಪ್ರಕಾರ ಪ್ರೌಢಶಿಕ್ಷಣದಲ್ಲಾಗುವ ಬದಲಾವಣೆಗಳು
* ಪ್ರೌಢಶಿಕ್ಷಣದ ವ್ಯಾಖ್ಯಾನ ಬದಲಾವಣೆ ಹೊಂದಬಹುದು 9 ಮತ್ತು 10 ನೇ ತರಗತಿ  ಹೊಂದಿರುವ ಶಾಲೆಗಳು ಕಿರಿಯ ಪ್ರೌಢಶಾಲೆಗಳೆಂದು, 11 ಮತ್ತು 12 ನ್ನು ಹೊಂದಿದ ಶಾಲೆಗಳು ಉನ್ನತ ಸಂಯುಕ್ತ ಪ್ರೌಢಶಾಲೆಗಳೆಂದು ಪುನರ್ ನಾಮಕರಣ ಮಾಡಬೇಕಾಗಬಹುದು.
* ಸಧ್ಯದ ವ್ಯವಸ್ಥೆಯಲ್ಲಿ ಪ್ರೌಢಶಾಲೆಯಲ್ಲಿರುವ 8ನೇ ತರಗತಿ ಪ್ರಾಥಮಿಕ ವಿಭಾಗಕ್ಕೆ ಸೇರ್ಪಡೆಯಾಗುವುದರಿಂದ ಪ್ರೌಢಶಾಲಾ ಶಿಕ್ಷಕರ ಕಾರ್ಯಾಭಾರ ಕಡಿಮೆಯಾಗುತ್ತದೆ. ಶಿಕ್ಷಕರ ಕಾರ್ಯಭಾರ ಸರಿದೂಗಿಸಲು ಸಮರ್ಪಕವಾದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ.
* 6-10 ಮಾದರಿಯ ಮತ್ತು 9-12 ಮಾದರಿಯ ಕಿರಿಯ ಹಾಗೂ ಉನ್ನತ ಸಂಯುಕ್ತ ಪ್ರೌಢಶಾಲೆಗಳು ಹೆಚ್ಚು ಪ್ರಾರಂಭವಾಗಬಹುದು.
* ಸ್ನಾತಕೋತ್ತರ ಹೊಂದಿದ ಎಲ್ಲಾ ಉಪನ್ಯಾಸಕರು ಬಿ.ಇಡಿ ಪದವಿಯನ್ನು ಹೊಂದುವುದು ಕಡ್ಢಾಯವಾಗಿರುತ್ತದೆ, ಅಥವಾ ಕಿರು ಅವಧಿಯ ತರಬೇತಿ ಕಾರ್ಯಕ್ರಮಗಳ ಮುಖಾಂತರ +2 ಉಪನ್ಯಾಸಕರ ಬೋಧನ ಸಾಮಥ್ರ್ಯಗಳ ಉನ್ನತೀಕರಣ ಮತ್ತು ಸಬಲೀಕರಣ.
* ಉನ್ನತ ಸಂಯುಕ್ತ ಪ್ರೌಢಶಾಲೆಗಳ ಪ್ರಾಂಶುಪಾಲರು 11 ಮತ್ತು 12 ನೇ ಭೋದಕ ವರ್ಗದವರೇ ಆಗಿರಬೇಕು. ಸಂಪೂರ್ಣ ಆಡಳಿತದ ಹೊಣೆ ಇವರದಾಗಿರುತ್ತದೆ. ಉಪ-ಪ್ರಾಂಶುಪಾಲರು 9-10 ನೇ ಬೋದಕ ವರ್ಗದವರಾಗಿರುತ್ತಾರೆ.
* ಮಧ್ಯಾಹ್ನದ ಬಿಸಿಊಟ ಯೋಜನೆ ಹಾಗೂ ಹಲವಾರು ವಿದ್ಯಾರ್ಥಿಪ್ರೇರಕ ಚಟುವಟಿಕೆಗಳನ್ನು 11-12 ನೇ ತರಗತಿಗೂ ವಿಸ್ತರಿಸಗೊಳ್ಳಬಹುದು.
* ಆರ್.ಎಂ.ಎಸ್.ಎ ಹಾಗೂ ನಬಾರ್ಡ ಅನುದಾನಗಳನ್ನು ಮೂಲಸೌಕರ್ಯ ಅಭಿವೃದ್ದಿ, ಶಿಕ್ಷಕರ ನೇಮಕಾತಿ, ಶಿಕ್ಷಕರತರಬೇತಿ, ಸಿವಿಲ್ ಕಾಮಗಾರಿಗಳು, ಮುಂತಾದವುಗಳಿಗೆ ಯಶಸ್ವಿಯಾಗಿ ಬಳಸಿಕೊಳ್ಳಬಹುದು.
* ಸದ್ಯ 1-10 ತರಗತಿ ಬೋದಿಸುವ ಶಿಕ್ಷಕರಿಗೆೆ ಮಾತ್ರ ತರಬೇತಿ ಕಾರ್ಯಕ್ರಮಗಳು ನಡೆಯುತ್ತಿವೆ. ಮುಂದುವರೆದು +2 ತರಗತಿ ಬೋಧಿಸುವ ಉಪನ್ಯಾಸಕರುಗಳಿಗೂ ತರಬೇತಿ ಕಾರ್ಯಕ್ರಮಗಳು ಪಡೆಯುವಂತೆ ಮಾಡಬಹುದು.
* 10ನೇ ತರಗತಿಯ ವಾರ್ಷಿ ಪರೀಕ್ಷೆಯನ್ನು ಶಾಲಾ ಮಟ್ಟದಲ್ಲಿ ನಡೆಸಬಹುದು.

ಆಡಳಿತಾತ್ಮಕ ಶಿಫಾ಼ರಸ್ಸುಗಳು
* ಉನ್ನತ ಸಂಯುಕ್ತ ಪ್ರೌಢಶಾಲಾ ಇಲಾಖೆ(ಈಗಿನ ಪದವಿ ಪೂರ್ವ), ಕಿರಿಯ ಪ್ರೌಢಶಾಲಾ ವಿಭಾಗಗಳನ್ನು ಒಳಗೊಂಡ ಪ್ರೌಢಶಿಕ್ಷಣ ಇಲಾಖೆ ಮತ್ತು ಪ್ರಾಥಮಿಕ ಶಿಕ್ಷಣ(1-8) ಇಲಾಖೆಗೆ ಕ್ರಮವಾಗಿ ಇಬ್ಬರು ಆಯುಕ್ತರಿರುತ್ತಾರೆ.ಆಯುಕ್ತರು ಸೂಪರ್ ಟೈಮ್ ಸ್ಕೇಲ್ಗೆ ಸೇರಿದ ಐ.ಎ.ಎಸ್ ವೃಂದದ ಅಧಿಕಾರಿಗಳಾಗಿರುತ್ತಾರೆ.
* ಪ್ರಾಥಮಿಕ ಶಿಕ್ಷಣ(1-8) ಇಲಾಖೆ ಆಯುಕ್ತರು ಸರ್ವಶಿಕ್ಷಣ ಅಭಿಯಾನದ ಯೋಜನನಿರ್ದೇಶಕರು ಆಗಿರುತ್ತಾರೆ,ಹಾಗೂ ರಾಜ್ಯದ ಪ್ರಾಥಮಿಕ ಶಿಕ್ಷಣ ಇಲಾಖೆಯ ಮುಖ್ಯಸ್ಥರಾಗಿರುತ್ತಾರೆ.ಹಾಗೂ ಕೇಂದ್ರಿಕೃತ ದಾಖಲಾತಿ ಘಟಕ ಇವರ ವ್ಯಾಪ್ತಿಗೆ ಬರುವುದು.
* ಉನ್ನತ ಸಂಯುಕ್ತ ಪ್ರೌಢಶಾಲಾ ಇಲಾಖೆ (ಈಗಿನ ಪದವಿ ಪೂರ್ವ), ಕಿರಿಯ ಪ್ರೌಢಶಾಲಾ(9-10) ಇಲಾಖೆಗೊಬ್ಬರು ಆಯುಕ್ತರು (ಉನ್ನತ ಪ್ರೌಢಶಾಲಾ ಶಿಕ್ಷಣ ಆಯುಕ್ತರು)ಇರುತ್ತಾರೆ. ಪ್ರೌಢಶಿಕ್ಷಣ ಶಾಲೆಗಳ ವ್ಯಾಪ್ತಿಗೆ ಬರುವ ಉದ್ಯೋಗಿಗಳ ನಿಯಂತ್ರಣ , ಸಾಮಾನ್ಯ ಪ್ರವೇಶ ಪರೀಕ್ಷೆ (ಸಿ.ಇ.ಟಿ) ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (ಕೆ.ಇ.ಎ) ಇವರ ವ್ಯಾಪ್ತಿಯ ಅಧೀನದಲ್ಲಿರುವುದು.
* ಗುಲ್ಬರ್ಗಾ ಮತ್ತು ಧಾರವಾಡ ವಿಭಾಗದ ಆಯುಕ್ತರ ಕಾರ್ಯ ಮತ್ತು ಅಧಿಕಾರಗಳನ್ನು ಪುನರ್ ಸಂಘಟಿಸಬೇಕು. ಇವರನ್ನು ಹೆಚ್ಚುವರಿ ಆಯುಕ್ತರೆಂದು ಕರೆದು, ಪ್ರಾಥಮಿಕ(ಹೆಚ್ಚುವರಿ ಆಯುಕ್ತರು) ಮತ್ತು ಪ್ರೌಢ ಮತ್ತು ಉನ್ನತ ಪ್ರೌಢಶಿಕ್ಷಣ(ಹೆಚ್ಚುವರಿ ಆಯುಕ್ತರು) ರೆಂದು ವಿಭಾಗಿಸಬೇಕು.
* ಜಿಲಾಮಟ್ಟದಲ್ಲಿ ಈಗಿರುವ ಉಪನಿರ್ದೇಶಕರು(ಸಾರ್ವಜನಿಕ ಶಿಕ್ಷಣ ಇಲಾಖೆ), ಮತ್ತು ಉಪನಿರ್ದೇಶಕರು(ಪದವಿ ಪೂರ್ವಶಿಕ್ಷಣ ಇಲಾಖೆ) ಪುನರ್ ವ್ಯಾಖ್ಯಾನಿಸಿ ಕ್ರಮವಾಗಿ ಉಪನಿರ್ದೇಶಕರು(ಪ್ರಾಥಮಿಕ ಶಿಕ್ಷಣ ಇಲಾಖೆ), ಉಪನಿರ್ದೇಶಕರು(ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣ ಇಲಾಖೆ) ರೆಂದು ಪದನಾಮೀಕರಿಸುವುದು.
* ತಾಲ್ಲೋಕು ಮಟ್ಟದಲ್ಲಿ ಕ್ಷೇತ್ರಶಿಕ್ಷಣಾಧಿಕಾರಿಗಳು ಪ್ರಾಥಮಿಕ ಶಿಕ್ಷಣದ ಉಸ್ತುವಾರಿಯನ್ನು ನೋಡಿಕೊಳ್ಳುವರು. ಪ್ರೌಢ ಮತ್ತು ಉನ್ನತ ಪ್ರೌಢಶಿಕ್ಷಣಕ್ಕೆ ಸಂಬಂಧಿಸಿದಂತೆ ಕಂದಾಯ ವಿಭಾಗಕ್ಕೆ ಬರುವ 150-200 ಪ್ರೌಢ ಮತ್ತು ಉನ್ನತ ಪ್ರೌಢ ಶಿಕ್ಷಣ ಶಾಲೆಗಳಿಗೆ ಒಬ್ಬರಂತೆ ಸಹಾಯಕ ನಿರ್ದೇಶಕರನ್ನು ನೇಮಿಸುವುದು.ಈಗಿರುವ ಎಸ್,ಎಸ್.ಎಲ್.ಸಿ ಮತ್ತು ಪಿ.ಯು ಪರೀಕ್ಷಾ ಮಂಡಲಿಗಳನ್ನು ಒಂದಾಗಿಸುವುದು
 
 ಪ್ರೊ. ಆರ್.ಗೋವಿಂದ ಸಮಿತಿಯು ಕೊನೆಯ ಅಧ್ಯಾಯವನ್ನು ಪೂರ್ಣಗೊಳಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲಾಗುತ್ತದೆ. ಸರ್ಕಾರ ಈ ವರದಿಯನ್ನು ಒಪ್ಪಬಹುದು ಅಥವಾ ಬಿಡಬಹುದು, ಅದು ಸರ್ಕಾರಕ್ಕೆ ಬಿಟ್ಟ ವಿಚಾರವಾಗಿರುತ್ತದೆ. ಯಾವುದೇ ಹೊಸ ವಿಚಾರ, ಹೊಸ ವ್ಯವಸ್ಥೆ ಜಾರಿಗೆ ಬಂದು ಅನುಷ್ಠಾನಗೊಳ್ಳುವಲ್ಲಿ ಪ್ರಾರಂಭಿಕ  ಪರ ಮತ್ತು ವಿರೋಧಾಭಿಪ್ರಾಯಗಳು, ಬರುವುದು ಅತ್ಯಂತ ಸಹಜ. ಈ ನಿಟ್ಟಿನಲ್ಲಿ  ಪ್ರೊ. ಆರ್.ಗೋವಿಂದ ಸಮಿತಿಯು ಹಾಗೂ ಸರ್ಕಾರ, ವರದಿಯ ಬಗ್ಗೆ ನಿರ್ಧಾರ ಹಾಗೂ ಅನುಷ್ಠಾನಿಸುವಲ್ಲಿ ರಾಜ್ಯದ ಸಾರ್ವಜನಿಕರ, ವಿದ್ಯಾರ್ಥಿಗಳ, ಪೋಷಕರ, ಶಿಕ್ಷಕರ, ಉಪನ್ಯಾಸಕರ ಹಾಗೂ ಇಲಾಖಾ ನೌಕರರ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಸೂಕ್ತ ಹಾಗೂ ಸಮರ್ಪಕ ನಿರ್ಧಾರ ತೆಗೆದುಕೊಳ್ಳುತ್ತದೆ ಎನ್ನುವುದು ಎಲ್ಲರ ಆಶಯವಾಗಿರುತ್ತದೆ.
ಪ್ರೊ, ಆರ್.ಗೋವಿಂದ ಸಮಿತಿಯ ವರದಿಯ ಹೆಚ್ಚಿನ ಮಾಹಿತಿಗಾಗಿ www.ssakarnataka.gov.in ಜಾಲತಾಣಕ್ಕೆ ಭೇಟಿ ನೀಡಬಹುದು