Monday 26 April 2021

ಮಾಸ್ತಿ ಕನ್ನಡದ ಆಸ್ತಿ

 ಮಾಸ್ತಿ ಕನ್ನಡದ ಆಸ್ತಿ
- ಸುರೇಶ ಗೋವಿಂದರಾವ್ ದೇಸಾಯಿ,

 ಮಾಸ್ತಿ ಕನ್ನಡದ ಆಸ್ತಿ ಒಂದು ನುಡಿಗಟ್ಟಿದೆ. ಆ ಖ್ಯಾತಿಗೆ ಪಾತ್ರರಾದ ಮಾಸ್ತಿ ವೆಂಕಟೇಶ ಅಯ್ಯಂಗಾರರು ನವೋದಯ ಕಾಲದ ಕನ್ನಡದ ಶ್ರೀಮಂತಿಕೆಗೆ ಕಾರಣವಾಗಿದ್ದಾರೆ. ಪರಮ ತತ್ವದ ಅನುಕಂಪದ ಹಿರಿಮೆ ಮತ್ತು ಬುದ್ಧಿಮತ್ತೆಯಲ್ಲಿ ಮಾಸ್ತಿ ಅವರಿಗೆ ಅಪಾರ ಶ್ರದ್ಧೆಯಿತ್ತು.

ಮಾಸ್ತಿಯವರು 1891 ನೇ ಇಸ್ವಿಯ ಜೂನ್ 6 ರಂದು ಕೋಲಾರ ಜಿಲ್ಲೆಯ ಮಾಸ್ತಿ ಎಂಬ ಗ್ರಾಮದಲ್ಲಿ ಜನಿಸಿದರು. ತಂದೆ ರಾಮಸ್ವಾಮಿ ಅಯ್ಯಂಗಾರ, ತಾಯಿ ತಿರುಮಲಮ್ಮ. ವೈಷ್ಣವ ಪಂಥದ ದೊಡ್ಡ ಕುಟುಂಬದಲ್ಲಿ ಬೆಳೆದವರು ಮಾಸ್ತಿ. ಪ್ರಾಥಮಿಕ ಶಿಕ್ಷಣ ಮಳವಳ್ಳಿ ಹಾಗೂ ಕೆ.ಆರ್.ಪೇಟೆಯಲ್ಲಿ, ಪ್ರೌಢಶಿಕ್ಷಣವನ್ನು ಮೈಸೂರಿನ ವೆಸ್ಲಿಯನ್ ಹೈಸ್ಕೂಲಿನಲ್ಲಿ ಮುಗಿಸುತ್ತಾರೆ.

ಕಡುಬಡತನವಿದ್ದರೂ ಇವರು ವಾರಾನ್ನ ಮಾಡಿಕೊಂಡು ಓದುತ್ತಾರೆ. 1907 ರಲ್ಲಿ ಪ್ರಥಮ ಶ್ರೇಣಿಯಲ್ಲಿ ಮೆಟ್ರಿಕ್ಯುಲೇಶನ್ ಪರೀಕ್ಷೆ ಮುಗಿಸಿದ ಮಾಸ್ತಿಯವರು ಮೈಸೂರಿನ ಮಹಾರಾಜಾ ಕಾಲೇಜಿಗೆ ಎಫ್.ಎ. ತರಗತಿಗೆ ಸೇರಿದಾಗ ಅವರ ತಂದೆಯವರು ತೀರಿಕೊಂಡರು. ಆದರೂ ಅವರ ಸೋದರ ಮಾವನ ನೆರವಿನಿಂದ ಶಿಕ್ಷಣ ಕುಂಠಿತವಾಗದೆ ಎಫ್.ಎ. ಪದವಿ ಮುಗಿಸಿ 1912 ರಲ್ಲಿ ಬೆಂಗಳೂರಿನ ಸೆಂಟ್ರೆಲ್ ಕಾಲೇಜಿನಿಂದ ಬಿ.ಎ. ಪದವಿ ಪಡೆದರು. ಪದವಿಯೊಂದಿಗೆ ಬಂಗಾರದ ಪದಕವನ್ನೂ ಪಡೆದರು. ಎಮ್.ಸಿ.ಎಸ್, ಪರೀಕ್ಷೆಯನ್ನು ಮರುವರ್ಷವೇ ಕಟ್ಟಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗುತ್ತಾರೆ. ಮುಂದೆ ಮದ್ರಾಸಿನ ಪ್ರೆಸಿಡೆನ್ಸಿ ಕಾಲೇಜಿಗೆ ಸೇರಿ ಇಂಗ್ಲೀಷ್ ಸಾಹಿತ್ಯದಲ್ಲಿ ಎಂ.ಎ. ಪದವಿ ಪಡೆಯುತ್ತಾರೆ. ಕನ್ನಡ ಹಾಗೂ ಸಂಸ್ಕೃತ ಅವರ ಮೆಚ್ಚಿನ ವಿಷಯಗಳಾಗಿದ್ದವು.

ಮಾಸ್ತಿಯವರು ಕೆಲಕಾಲ ಉಪನ್ಯಾಸಕರಾಗಿ ಮದ್ರಾಸಿನಲ್ಲಿ ಸೇವೆ ಸಲ್ಲಿಸಿದರು. ನಂತರ ಮೈಸೂರು ಸಂಸ್ಥಾನದ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಅಧಿಕ ಅಂಕ ಪಡೆದು ಪ್ರಥಮ ಸ್ಥಾನ ಪಡೆದರು. ಇದರಿಂದಾಗಿ 1914 ರಲ್ಲಿ ಮೈಸೂರು ಸಂಸ್ಥಾನದ ಆಡಳಿತ ಸೇವೆಯಲ್ಲಿ ಸಹಾಯಕ ಆಯುಕ್ತರಾಗಿ ನೇಮಕವಾದರು. ಆ ವೇಳೆಯಲ್ಲಿ ಇಂಗ್ಲೀಷ್ ಬಾರದ ಜನತೆಗೆ ಆಡಳಿತವನ್ನು ಕನ್ನಡದಲ್ಲಿ ನಡೆಸಿದರೆ ಮಾತ್ರ ಪೂರ್ಣ ಪ್ರಯೋಜನ ಪಡೆಯಲು ಸಾಧ್ಯ ಎಂಬ ಸತ್ಯ ಅವರಿಗೆ ತಿಳಿಯಿತು. ಅವರ ಕನ್ನಡ ಪ್ರೇಮ ಜಾಗೃತಗೊಂಡಿತು.

1944 ರಲ್ಲಿ ಸ್ವಪ್ರೇರಣೆಯಿಂದ ಸರಕಾರಿ ಸೇವೆಗೆ ರಾಜೀನಾಮೆ ನೀಡುತ್ತಾರೆ. ಮೈಸೂರು ಸಂಸ್ಥಾನದಲ್ಲಿ ದಿವಾನರಾಗಿ ಮಾಸ್ತಿಯವರಿಗೆ ಸಚಿವರಾಗುವ ಅವಕಾಶ ಬಂದಾಗ ವಿನಯಪೂರ್ವಕವಾಗಿ ಅದನ್ನು ತಿರಸ್ಕರಿಸುತ್ತಾರೆ. ತಮ್ಮ ಬಿಡುವಿನ ವೇಳೆಯಲ್ಲಿ ಸಾಹಿತ್ಯ ರಚನೆಗೆ ಪ್ರಾಶಸ್ತ್ಯ ಕೊಟ್ಟು ಮಾಸ್ತಿಯವರು ನಂತರ ತಮ್ಮ ಇಡೀ ಜೀವನವನ್ನೇ ಸಾಹಿತ್ಯಕ್ಕಾಗಿ ಮೀಸಲಿಟ್ಟರು. ಸಾಹಿತ್ಯದ ಎಲ್ಲಾ ಪ್ರ್ರಕಾರಗಳಲ್ಲಿಯೂ ಕೃಷಿ ನಡೆಸಿ 70 ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ. ಕನ್ನಡ ನವೋದಯ ಕವಿಗಳ ಸಾಲಿನಲ್ಲಿ ಮಾಸ್ತಿಯವರದು ಒಂದು ಮುಖ್ಯ ಹೆಸರು. ಇವರ ಕವಿತಾ ಸೃಷ್ಟಿ-ಬಿನ್ನಹ, ಅರುಣ, ತಾವರೆ, ಚೆಲವು, ಮಲಾರ, ಮಾನವಿ ಎಂಬ ಆರು ಸಂಕಲನಗಳಲ್ಲಿ ಹರಡಿಕೊಂಡಿದೆ. ಸರಳತೆ, ಮಾರ್ದವತೆ ಮಾಸ್ತಿಯವರ ಭಾವಗೀತೆಗಳ ಮೂಲಗುಣ ಭಾವಗೀತೆಗಳೊಡನೆ ಕಥನ ಕವನಗಳ ಸೃಷ್ಠಿಯೂ ಅಪಾರವಿದೆ. ಗೌಡರ ಮಲ್ಲಿ, ರಾಮನವಮಿ, ನವರಾತ್ರಿ, ಮೂಕನ ಮಕ್ಕಳು, ಸುನೀತಾ, ಸಂಕ್ರಾಂತಿ, ಶ್ರೀರಾಮಪಟ್ಟಾಭಿಷೇಕ. ಕಥನಕವನಗಳು ಉತ್ಕೃಷ್ಟ ರಚನೆಗಳಾಗಿವೆ.

ಮಾಸ್ತಿಯವರ ಹೆಸರು ಇಂದು ಕನ್ನಡಿಗರಿಗೆ ಚಿರಪರಿಚಿತವಾಗಿರುವುದು ಇವರ ಸಣ್ಣ ಕಥೆಗಳ ಮೂಲಕ. ಇವರು ಸುಮಾರು ಒಂದುನೂರು ಕಥೆಗಳನ್ನು ಬರೆದಿದ್ದಾರೆ. ಇವುಗಳಲ್ಲಿ ಸಾಮಾಜಿಕ, ಐತಿಹಾಸಿಕ, ಪೌರಾಣಿಕ, ಕಾಲ್ಪನಿಕ ಕಥೆೆಗಳು ಇವೆ. ಸರಳತೆ, ನೇರನಿರೂಪಣೆ ಈ ಕಥೆಗಳ ಮೂಲದ್ರವ್ಯ, ಭಾರತೀಯ ಸಂಸ್ಕೃತಿಯ ಉತ್ತಮಾಂಶಗಳನ್ನು ಒಪ್ಪ ಓರಣವಾಗಿ ಕನ್ನಡಿಗರಿಗೆ ಪರಿಚಯ ಮಾಡಿಕೊಡಬೇಕೆಂಬ ಆಕಾಂಕ್ಷೆ ಈ ಎಲ್ಲ ಕಥೆಗಳ ಸೃಷ್ಟಿಗೆ ಮೂಲ ಪ್ರೇರಣೆ. ರಂಗಪ್ಪನ ಮದುವೆ, ರಂಗಸ್ವಾಮಿಯ ಅವಿವೇಕ, ನಮ್ಮ ಮೇಷ್ಟ್ರು, ಮೊಸರಿನ ಮಂಗಮ್ಮ, ಮಸುಮತ್ತಿ, ಕಾಮನ ಹಬ್ಬದ ಒಂದು ಕಥೆ, ಡೂಬಾಯಿ ಪಾದ್ರಿಯ ಒಂದು ಪತ್ರ, ಚಂದ್ರವದನಾ, ವೆಂಕಟಿಗನ ಹೆಂಡತಿ , ನಿಜಗಲ್ಲಿನ ರಾಣಿ ಪೆನುಗೊಂಡೆಯ ಕೃಷ್ಣಮೂರ್ತಿ, ಒಂದು ಹಳೆಯ ಕಥೆ, ವೆಂಕಟಸ್ವಾಮಿಯ ಪ್ರಣಯ-ಈ ಮೊದಲಾದ ಕಥೆಗಳು ಮಾಸ್ತಿಯವರಿಗೆ ಹೆಚ್ಚು ಪ್ರಶಿದ್ಧಿಯನ್ನು ತಂದುಕೊಟ್ಟಿವೆ. ಸಣ್ಣ ಕತೆ ಹಾಗೂ ಕಾದಂಬರಿಯ ನಡುವಣ ಹರವನ್ನು ಪಡೆದುಕೊಂಡು ಮಾಸ್ತಿಯವರ ಪ್ರತಿಭಾ ಮೂಸೆಯಿಂದ ಮೂಡಿಬಂದ ಸುಬ್ಬಣ್ಣ ಕನ್ನಡದ ಮಹತ್ವದ ನೀಳ್ಗತೆಗಳಲ್ಲೊಂದು. ಇದರಲ್ಲಿ ಸುಬ್ಬಣ್ಣ ಎಂಬ ಸಂಗೀತಗಾರನೊಬ್ಬನ ಬದುಕಿನ ಏಳುಬೀಳು ಅಪೂರ್ವವಾಗಿ ಚಿತ್ರಿತಗೊಂಡಿದೆ.

ಚೆನ್ನಬಸವನಾಯಕ, ಚಿಕ್ಕ ವೀರರಾಜೇಂದ್ರ ಇವು ಅವರ ಐತಿಹಾಸಿಕ ಕಾದಂಬರಿಗಳು. ಚಿಕ್ಕವೀರ ರಾಜೇಂದ್ರ ಕಾದಂಬರಿಗೆ ಭಾರತೀಯ ಜ್ಞಾನಪೀಠದ 1983ನೇ ಸಾಲಿನ ಜ್ಞಾನಪೀಠ ಪುರಸ್ಕಾರವನ್ನು ನೀಡಲಾಗಿದೆ. ಈ ವಿಶಿಷ್ಠ ಐತಿಹಾಸಿಕ ಕಾದಂಬರಿಯಲ್ಲಿ ವೈಯಕ್ತಿಕ ದುರಂತಗಳ ಸಾಮಾಜಿಕ-ರಾಜನೈತಿಕ ಧೋರಣೆಯ ಶಿಥಿಲತೆ, ರಾಜನೈತಿಕ ಹಾಗೂ ಸಾಂಸ್ಕೃತಿಕ ಧರಾತಲಗಳ ಮೇಲೆ ಪೂರ್ವಪಶ್ಚಿಮಗಳ ನಡುವಿನ ಸಂಘರ್ಷಗಳನ್ನು ಉಬ್ಬಿದ ಕನ್ನಡಿಯಂತೆ ಏಕಕಾಲದಲ್ಲಿ ಪ್ರತಿಬಿಂಬಿಸುತ್ತಾ, ಚಾರಿತ್ರಿಕ ಪ್ರಕ್ರಿಯೆಯ ಸುರುಳಿಯನ್ನು ಬಿಚ್ಚುತ್ತಾ ಹೋಗುತ್ತದೆ. ಅವರ ಗದ್ಯವು ಸ್ಪಷ್ಟ ಹಾಗೂ ಪಾರದರ್ಶಿ. ಶೈಲಿಯು ಶಿಷ್ಟ ಹಾಗೂ ಸುವ್ಯವಸ್ಥಿತ ಸ್ಫೂರ್ತಿಮಯ ಶಕ್ತಿಯುತ ಸಂಭಾಷಣೆಯು ರೋಚಕವಾಗಿದ್ದು ತಿಳಿ ಹಾಸ್ಯವನ್ನು ಮೈಗೂಡಿಸಿಕೊಂಡು ಜೀವಂತವಾಗಿದೆ. ಚೆನ್ನಬಸವನಾಯಕ ಕಾದಂಬರಿಯಲ್ಲಿ ಬಿದನೂರು ನಾಯಕನ ಮನೆತನದ ಏಳು ಬೀಳಿನ ಚಿತ್ರಣವಿದೆ. ಈ ಎರಡೂ ಕೃತಿಗಳಲ್ಲಿ ಅಂದಿನ ಕಾಲದ ಜನ ಜೀವನವನ್ನು ಸುಂದರವಾಗಿ ಚಿತ್ರಿಸಿದ್ದಾರೆ. ಶೇಷಮ್ಮ ಇವರ ಸಾಮಾಜಿಕ ಕಾದಂಬರಿ.

ಮಾಸ್ತಿಯವರು ನಾಟಕ ರಂಗದಲ್ಲಿಯೂ ಕೈಯಾಡಿಸಿ ಸೈ ಎನಿಸಿಕೊಂಡವರು. ಶಾಂತಾ, ಸಾವಿತ್ರಿ, ಉಷಾ, ತಾಳಿಕೋಟೆ , ಶಿವಛತ್ರಪತಿ, ಯಶೋಧರಾ, ತಿರುಪಾಣಿ, ಕಾಕನಕೋಟೆ, ಮಾಸ್ತಿ, ಅನಾರ್ಕಲಿ, ಪುರಂದರದಾಸ, ಕನಕಣ್ಣ, ಮಂಜುಳ, ಭಟ್ಟರ ಮಗಳು ಇತ್ಯಾದಿ ನಾಟಕಗಳನ್ನು ರಚಿಸಿದ್ದಾರೆ. ಮಂಜುಳಾ ಎಂಬ ಒಂದು ನಾಟಕವನ್ನುಳಿದು ಇತರ ಎಲ್ಲ ನಾಟಕಗಳು ಐತಿಹಾಸಿಕ ಪೌರಾಣಿಕ ವಸ್ತುಗಳಾಗಿವೆ. ತಾಳಿಕೋಟೆ, ಶಿವಛತ್ರಪತಿ, ಕಾಕನಕೋಟೆ, ಯಶೋಧರಾ, ಪುರಂದರದಾಸ, ಕನಕಣ್ಣ, ಮಂಜುಳಾ ಇವು ದೊಡ್ಡ ನಾಟಕಗಳು. ಉಳಿದವು ಏಕಾಂತ ನಾಟಕಗಳು. ಇವರ ನಾಟಕಗಳಲ್ಲೆಲ್ಲ ಕಾಕನಕೋಟೆ ಒಂದು ವಿಶಿಷ್ಟ ಕೃತಿ . ಈ ನಾಟಕ ಚಲನಚಿತ್ರವಾಗಿ ತೆರೆಯ ಮೇಲೆ ಕಾಣಿಸಿಕೊಂಡು 1977 ರಲ್ಲಿ ಚಿತ್ರರಸಿಕರ ಮನಸೂರೆಗೊಂಡಿದೆ. ಈ ನಾಟಕ ರಂಗಭೂಮಿಯ ಮೇಲೂ ಪ್ರಚಂಡ ಯಶಸ್ಸು ಗಳಿಸಿ ಕರ್ನಾಟಕ ರಂಗಭೂಮಿಯ ಪುನರುಜ್ಜೀವನದಲ್ಲಿ ಮಹತ್ವದ ಪಾತ್ರ ವಹಿಸಿತು. ಮಾಸ್ತಿಯವರು ಕಥೆಗಾರರಾಗಿ ಹೇಗೆ ನಾಡಿನ ಗಮನ ಸೆಳೆದರೋ ಹಾಗೆಯೇ ಕನ್ನಡದಲ್ಲಿ ಮೊದಲಿಗೆ ವಿಮಶರ್ೆಯ ವಿಚಾರವಾಗಿ ಬರೆದು ಅಲ್ಲಿಯೂ ಗಮನಾರ್ಹ ಸಾಧನೆ ಮಾಡಿದ್ದಾರೆ.

ಮಾಸ್ತಿ ವೆಂಕಟೇಶ ಅಯ್ಯಂಗಾರರವರು ಭಾಷಾಂತರಕಾರರಾಗಿಯೂ ಅನೇಕ ಕೃತಿಗಳನ್ನು ಕನ್ನಡಕ್ಕೆ ನೀಡಿದ್ದಾರೆ. ಷೇಕ್ಸ್ಪಿಯರ್ ನಾಟಕಗಳನ್ನು ಅನುವಾದ ಮಾಡಿದ್ದಾರೆ. ಸಾಹಿತ್ಯರಂಗದ ನಾನಾಕ್ಷೇತ್ರಗಳಲ್ಲಿ ದುಡಿದು ಉತ್ತಮ ಸಾಹಿತಿ ಎಂಬ ಹೆಸರು ಪಡೆದಂತೆ ; ಪತ್ರಿಕೋದ್ಯಮದಲ್ಲಿಯೂ ಕೈ ಹಾಕಿ ಒಳ್ಳೆಯ ಸಂಪಾದಕರೆಂಬ ಹೆಸರು ಗಳಿಸಿದ್ದಾರೆ. ಧಾರವಾಡದಿಂದ ಪ್ರಾರಂಭಗೊಂಡ ಜೀವನ ಪತ್ರಿಕೆಗೆ ಸಂಪಾದಕರಾಗಿ ಇಪ್ಪತ್ತು ವರುಷ ಸೇವೆ ಸಲ್ಲಿಸಿದ್ದಾರೆ. ಆಗ ಅನೇಕ ಜನ ಉದಯೋನ್ಮುಖ ಲೇಖಕರನ್ನು ಪ್ರೋತ್ಸಾಹಿಸಿದರು. ತಮ್ಮ ಆತ್ಮಕಥೆಯನ್ನು ಭಾವ ಎಂಬ ಹೆಸರಿನಲ್ಲಿ ಮೂರು ಭಾಗಗಳಲ್ಲಿ ಪ್ರಕಟಿಸಿದ್ದಾರೆ. 1968-69 ರಲ್ಲಿ ಈ ಗ್ರಂಥ ಮಾಸ್ತಿಯವರ ಮನೋಧರ್ಮವನ್ನು ಅರಿಯುವಲ್ಲಿ, ಅವರ ಸಾಹಿತ್ಯವನ್ನು ಕುರಿತು ಹೆಚ್ಚಿನ ಅಭ್ಯಾಸ ಮಾಡುವಲ್ಲಿ ತುಂಬಾ ಸಹಕಾರಿಯಾಗಿದೆ. ಕರ್ನಾಟಕದ ಏಕೀಕರಣ ಕಾರ್ಯದಲ್ಲಿಯೂ ಮಾಸ್ತಿಯವರು ಅಪಾರವಾಗಿ ದುಡಿದಿದ್ದಾರೆ. ಇವರು ಅನೇಕ ಸಾಹಿತ್ಯಿಕ ಸಂಘ ಸಂಸ್ಥೆಗಳೊಂದಿಗೆ ನಿಕಟ ಸಂಪರ್ಕವಿಟ್ಟುಕೊಂಡಿದ್ದರು. ಕನ್ನಡ ಸಾಹಿತ್ಯ ಪರಿಷತ್ತಿನ ಉಪಾಧ್ಯಕ್ಷರಾಗಿ (1943-48), ಅನಂತರ ಅಧ್ಯಕ್ಷರಾಗಿ (1953-54) ಕೆಲಸ ನಿರ್ವಹಿಸಿದ ಇವರು ಆ ಸಂಸ್ಥೆಯನ್ನು ಅಭಿವೃದ್ಧಿ ಪಡಿಸುವಲ್ಲಿ ಅವಿಶ್ರಾಂತವಾಗಿ ಶ್ರಮಿಸಿದ್ದಾರೆ. ಮಾಸ್ತಿಯವರಿಗೆ ಬಿರುದುಬಾವಲಿಗಳು, ಪ್ರಶಸ್ತಿಗಳು, ಪುರಸ್ಕಾರಗಳು, ಗೌರವಗಳು ಅವರನ್ನು ಹುಡುಕಿಕೊಂಡು ತಾವಾಗಿಯೇ ಬಂದಿವೆ. ಅವುಗಳಲ್ಲಿ ಕೆಲವೊಂದು ಈ ಕೆಳಗಿನಂತಿವೆ.

* ಪ್ರಥಮದಲ್ಲಿ ಇವರಿಗೆ ಮೈಸೂರು ಮಹಾರಾಜರು ರಾಜ ಸೇವಾಸಕ್ತ ಎಂಬ ಬಿರುದು ಕೊಟ್ಟು ಗೌರವಿಸಿದ್ದಾರೆ.
* 1929 ಬೆಳಗಾವಿಯಲ್ಲಿ ನಡೆದ 15 ನೇ ಅಖಿಲಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.
* 1942 ಹೈದರಾಬಾದಿನಲ್ಲಿ ನಡೆದ ಅಖಿಲಭಾರತ ಪ್ರಾಚ್ಯ ಸಮ್ಮೇಳನದ 11 ನೇ ಅಧಿವೇಶನದ ಕನ್ನಡ ವಿಭಾಗದ ಅಧ್ಯಕ್ಷರಾಗಿದ್ದರು.
* 1946 ಮದ್ರಾಸಿನಲ್ಲಿ ನಡೆದ ದಕ್ಷಿಣ ಭಾರತೀಯ ಭಾಷೆಗಳ ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
* 1956 ಕರ್ನಾಟಕ ವಿಶ್ವವಿದ್ಯಾಲಯದ ಗೌರವ ಡಿಲಿಟ್ ಪುರಸ್ಕೃತರಾದರು.
* 1961 ಅಖಿಲಭಾರತ ಬರಹಗಾರರ ಸಮ್ಮೇಳನ ಮುಂಬೈನಲ್ಲಿ ನಡೆಯಿತು. ಸಮ್ಮೇಳನದ ಅಧ್ಯಕ್ಷತೆ ವಹಿಸಿದ್ದರು.
* 1964 ಇಂಡಿಯನ್ ಪಿ.ಇ.ಎನ್. ಉಪಾಧ್ಯಕ್ಷರಾಗಿ ಆಯ್ಕೆಯಾದರು.

* 1968 ಕೇಂದ್ರಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿತು.
* 1972 ಶ್ರೀನಿವಾಸ ಎಂಬ ಸಂಭಾವನ ಗ್ರಂಥ ಅರ್ಪಣೆ.
* 1976 ಇಂಡಿಯನ್ ಪಿ..ಇ.ಎನ್ ಅಧ್ಯಕ್ಷರಾಗಿ ಆಯ್ಕೆಯಾದರು.
* 1977 ಮೈಸೂರು ವಿಶ್ವವಿದ್ಯಾಲಯ ಗೌರವ ಡಿಲಿಟ್ ಪ್ರಶಸ್ತಿ ನೀಡಿದೆ.
* 1980 ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ದೊರೆಯಿತು.
* 1983 ಕಾಳಿದಾಸ ಮತ್ತು ವರ್ಧಮಾನ ಪ್ರಶಸ್ತಿಗಳು ದೊರೆತವು.
* 1983 ಚಿಕ್ಕವೀರರಾಜೇಂದ್ರ ಕಾದಂಬರಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿತು.
* 1991 ಮಾಸ್ತಿಯವರ ಜನ್ಮಶತಮಾನೋತ್ಸವವನ್ನು ನಾಡಿನಲ್ಲಿ, ದೇಶದಲ್ಲಿ, ಹೊರದೇಶಗಳಲ್ಲಿ, ಹಲವಾರು ನಗರಗಳಲ್ಲಿ ಪ್ರೀತಿ ಸಂಭ್ರಮಗಳಿಂದ ಆಚರಿಸಲಾಯಿತು.
* 1992 ರಿಂದ ಬೆಂಗಳೂರಿನ ಮಾಸ್ತಿ ಪ್ರಶಸ್ತಿ ಸಮಿತಿಯೂ ಮಾಸ್ತಿಯವರ ಹೆಸರಿನಲ್ಲಿ ನಾಡಹಿರಿಯರೊಬ್ಬರಿಗೆ ಪ್ರತಿವರ್ಷ ಪ್ರಶಸ್ತಿಯನ್ನು ನೀಡುತ್ತಿದೆ.
* ಮಾಸ್ತಿಯವರಿಗೆ 1983 ರಲ್ಲಿ ಜ್ಞಾನಪೀಠ ಪ್ರಶಸ್ತಿ ಬಂದಾಗ ದೇಶಾದ್ಯಂತ ಅವರಿಗೆ ಶುಭಾಶಯ ಕೋರಿ ಬಂದಂತಹ ಸುಮಾರು 900 ಪತ್ರಗಳಿಗೆ ಅವರೇ ಉತ್ತರಿಸಿ ಮಾನವತೆ ಮೆರೆದರು. ಮಾಸ್ತಿ ಕನ್ನಡದ ಆಸ್ತಿ ಎಂದು ಇದಕ್ಕೇ ಕರೆದಿರಬೇಕು. ಇವರ ಕಾಕನಕೋಟೆ ನಾಟಕ ಚಲನಚಿತ್ರನವಾಗಿದೆ. ಇಂಗ್ಲೀಷಿನಲ್ಲಿ ಬರೆದ ಕೃತಿಗಳೂ ಸೇರಿ 125 ಕೃತಿಗಳು ಪ್ರಕಟಗೊಂಡಿವೆ. ಕನ್ನಡೇತರ ಭಾಷೆಗಳನ್ನು ಕಲಿತರೂ ಕನ್ನಡವನ್ನು ಮರೆಯದೇ ಇದ್ದರೆ ಕನ್ನಡ ಉಳಿಯಲು ಸಾಧ್ಯ. ಇಂಗ್ಲೀಷನ್ನು ಕಲಿತವರು ಅದಕ್ಕೆ ತಮ್ಮ ಬಾಳನ್ನು ಮಾರಿಕೊಳ್ಳಬಾರದು ಎಂದು ಅತ್ಯಂತ ಕಳಕಳಿಯಿಂದ ಕನ್ನಡಿಗರಿಗೆ ಹೇಳುತ್ತಾ 06-06-1986 ರಂದು ಬೆಂಗಳೂರಿನಲ್ಲಿ ವಿಧಿವಶರಾದರು. ಅಂದೇ ಅವರ ಹುಟ್ಟಿದ ದಿನವೂ ಹೌದು.