Wednesday, 21 April 2021

ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ


 ವನ್ಯಜೀವಿ ಸಂರಕ್ಷಣೆ ನಮ್ಮೆಲ್ಲರ ಹೊಣೆ
- ಬೇದ್ರೆ ಎನ್. ಮಂಜುನಾಥ,

ಇದೋ ಮತ್ತೊಂದು ಪರಿಸರ ದಿನ ಬಂದಿದೆ. ವಿಶ್ವವನ್ನೇ ಬೆಚ್ಚಿಬೀಳಿಸುವ ಹೊಸ ಆಘಾತಕಾರಿ ಮಾಹಿತಿ ತಂದಿದೆ ! ನೆಲ, ಜಲ-ವಾಯು ಮಾಲಿನ್ಯಗಳ ಸಂಗತಿ ಕುರಿತು ಹೇಳುತ್ತಿದ್ದರು ಆಗ. ವನ್ಯಜೀವಿ ಪರಿಸರವನ್ನೇ ಮಾಯ ಮಾಡುವ ಹುನ್ನಾರ ನಡೆಯುತ್ತಿದೆ ಈಗ.

ಪ್ರತಿವರ್ಷ ಜೂನ್ 5 ರಂದು ವಿಶ್ವ ಪರಿಸರ ದಿನ ಆಚರಿಸಲಾಗುತ್ತದೆ. 1972 ರ ಜೂನ್ 5 ರಂದು ಸ್ಟಾಕ್ಹೋಮ್ನಲ್ಲಿ ಜರುಗಿದ ವಿಶ್ವಸಂಸ್ಥೆಯ ಮಾನವ ಪರಿಸರ ಸಮ್ಮೇಳನದ ಫಲಶ್ರುತಿಯಾಗಿ ಈ ಕಾರ್ಯಕ್ರಮ ಜಾರಿಗೆಬಂದಿದೆ. ಇದೇ ದಿನದಂದು ವಿಶ್ವಸಂಸ್ಥೆಯ ಪರಿಸರ ಸಂರಕ್ಷಣಾ ಕಾರ್ಯಕ್ರಮ ಒಂದು ಸಾಂಸ್ಥಿಕ ರೂಪ ತಳೆದು ಗಓಇಕ ಸ್ಥಾಪಿತವಾಯಿತು. ಜಗತ್ತಿನ ಎಲ್ಲೆಡೆಯೂ ಹಬ್ಬುತ್ತಿರುವ ಮಾಲಿನ್ಯವನ್ನು ತಡೆಗಟ್ಟಿ ಶುದ್ಧಪರಿಸರವನ್ನು ಮುಂದಿನ ಪೀಳಿಗೆಯವರಿಗೆ ನಿರ್ಮಿಸುವ ಜವಾಬ್ದಾರಿ ನಮ್ಮ ಮೇಲಿದೆ. ಇರುವುದೊಂದೇ ಭೂಮಿ, ಅದನ್ನು ಉಳಿಸೋಣ, ಸುಂದರ ಪರಿಸರ ನಿರ್ಮಿಸಿ ಮುಂದಿನವರಿಗೆ ಬಳುವಳಿ ನೀಡೋಣ ಎನ್ನುವುದೇ ಈ ದಿನಾಚರಣೆಯ ಉದ್ದೇಶ.

ಗೋ ವೈಲ್ಡ್ ಫಾರ್ ಲೈಫ್ :
2016 ರ ವಿಶ್ವ ಪರಿಸರ ದಿನದ ಘೋಷಣೆ - ಗೋ ವೈಲ್ಡ್ ಫಾರ್ ಲೈಫ್ - ಜೀವಕ್ಕಾಗಿ ವನ್ಯಪರಿಸರದ ಮೊರೆಹೋಗಿ ಎಂಬುದಾಗಿದೆ. ಹಾಗೆಯೇ ಈ ವರ್ಷದ ಮುಖ್ಯ ಧ್ಯೇಯ - ವನ್ಯಜೀವಿಗಳ ಅಕ್ರಮ ಮಾರಾಟ ತಪ್ಪಿಸುವುದಾಗಿದೆ. ಝೀರೋ ಟಾಲರೆನ್ಸ್ ಫಾರ್ ದ ಇಲ್ಲೀಗಲ್ ಟ್ರೇಡ್ ಇನ್ ವೈಲ್ಡ್ ಲೈಫ್ ಎಂಬ ಧ್ಯೇಯವಾಕ್ಯ ವಿಶ್ವದ ಎಲ್ಲ ದೇಶಗಳ ಜಾಹೀರಾತುಗಳಲ್ಲಿ ಮೂಡಿಬರಲಿದ್ದು ಜನರನ್ನು ವನ್ಯಜೀವಿಗಳತ್ತ ತಿರುಗಿ ನೋಡುವಂತೆ ಮಾಡುವಲ್ಲಿ ಸಫಲವಾಗುತ್ತದೆ ಎಂಬ ನಿರೀಕ್ಷೆ ಇದೆ.

2016 ರ ವಿಶ್ವ ಪರಿಸರ ದಿನದ ಧ್ಯೇಯವಾಕ್ಯವಾಗಿ ವಿಶ್ವದ ಪ್ರಮುಖ ಪರಿಸರ ಸಂಘಟನೆಗಳು ವಿವಿಧ ವಾಕ್ಯಗಳನ್ನು ನೀಡಿವೆ. ಅವುಗಳಲ್ಲಿ ಪ್ಲಾಂಟ್ ಟ್ರೀ ಟು ಲಿವ್ ಫ್ರೀ ಮತ್ತು ಜಾಯಿನ ದ ರೇಸ್ ಟು ಮೇಕ್ ದ ವರ್ಲ್ಡ್ ಅ ಬೆಟರ್ ಪ್ಲೇಸ್ ಹೆಚ್ಚು ಪ್ರಚಾರದಲ್ಲಿವೆ.

ವನ್ಯಜೀವಿ ಸಂರಕ್ಷಣೆಯ ತುರ್ತು ಅಗತ್ಯ :
ವಿಶ್ವದಾದ್ಯಂತ ವನ್ಯಪ್ರಾಣಿಗಳನ್ನು ಬೇಟೆಯಾಡುವುದು, ಕೊಲ್ಲುವುದು, ಅಕ್ರಮವಾಗಿ ಮಾರಾಟಮಾಡುವುದು ಇತ್ಯಾದಿ ಅಕ್ರಮ ಚಟುವಟಿಕೆಗಳಿಂದ ವನ್ಯಜೀವಿ ಸಂಕುಲ ಅಪಾಯದಲ್ಲಿದೆ. ಜಾವಾದ್ವೀಪದಲ್ಲಿದ್ದ ವಿಶಿಷ್ಟ ತಳಿಯ ಘೇಂಡಾಮೃಗ ಸಂಕುಲವೇ 2011 ರಲ್ಲಿ ನಶಿಸಿಹೋಗಿದೆ. ಘೇಂಡಾಮೃಗದ ಕೋಂಬಿಗಾಗಿ, ಆನೆಗಳ ದಂತಕ್ಕಾಗಿ, ಹುಲಿಗಳ ಚರ್ಮ, ಉಗುರು ಮತ್ತು ಮಾಂಸಕ್ಕಾಗಿ ಬೇಟೆ ನಡೆಯುತ್ತಿದ್ದರೆ ಹಲವು ಜಾತಿಯ ಆಮೆಗಳು, ಕಡಲ ಜೀವಿಗಳು ಮತ್ತು ಗೋರಿಲ್ಲಾಗಳನ್ನು ಮಾರಾಟಮಾಡಲು ಅಕ್ರಮವಾಗಿ ಸೆರೆಹಿಡಿಯಲಾಗುತ್ತಿದೆ. ಗ್ಯಾಂಬಿಯಾ, ಬುರ್ಕಿನಾ ಫಾಸೋ, ಬೆನಿನ್ ಮತ್ತು ಟೋಗೋ ಮತ್ತು ಇತರೆ ದೇಶಗಳಿಂದ ಗೋರಿಲ್ಲಗಳು ಮಾಯವಾಗಿವೆ. ಹಾರ್ನ್ ಬಿಲ್, ಪ್ಯಾಂಗೊಲಿನ್, ಅಪರೂಪದ ವನ್ಯ ಆರ್ಕೆಡ್ಗಳು ಬೀಟೆ, ಚೌಬೀನೇ ಮರಗಳು, ಹಲವು ಪುಷ್ಪಜಾತಿಗಳು ಕಣ್ಮರೆಯಾಗುತ್ತಲೇ ಸಾಗಿವೆ. ಪಕ್ಷಿಗಳನ್ನು ಹಿಡಿದು ತಿನ್ನುವ ಹವ್ಯಾಸದಿಂದಾಗಿ ಅವುಗಳ ಸಂಕುಲವೇ ಅಪಾಯದಲ್ಲಿದೆ.

2016 ರ ಪರಿಸರ ಕಾರ್ಯಕ್ರಮ :
ಈ ವರ್ಷದ ಗೋ ಫಾರ್ ವೈಲ್ಡ್ ಘೋಷಣೆಗೆ ಪೂರಕವಾಗಿ ವನ್ಯಜೀವಿಗಳು ಮತ್ತು ಕಾಡಿನ ಉತ್ಪನ್ನಗಳ ಅಕ್ರಮ ಸಾಗಾಣಿಕೆಯನ್ನು ತಡೆಗಟ್ಟಲು ಜಗತ್ತಿನಾದ್ಯಂತ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಇದುವರೆಗೆ ಆಗಿರುವ ಹಾನಿಯನ್ನು ತಡೆಗಟ್ಟಿ ಇನ್ನು ಮುಂದೆ ಯಾವುದೇ ಅಪಾಯ ಒದಗದಂತೆ ಸುಭದ್ರ ಪರಿಸರವನ್ನು ವನ್ಯಜೀವಿಗಳಿಗೆ ಕಲ್ಪಿಸಿಕೊಡುವ ನಿಟ್ಟಿನಲ್ಲಿ ಜನಜಾಗೃತಿ ಜಾಥಾಗಳು ನಡೆಯುತ್ತಿವೆ.

ಈ ವರ್ಷದ ವಿಶ್ವ ಪರಿಸರ ದಿನದ ಪ್ರಮುಖ ಕಾರ್ಯಕ್ರಮ ಸಮೃದ್ಧ ಕಾಡುಗಳಿರುವ ಆಫ್ರಿಕಾದ ಅಂಗೊಲ ದೇಶದಲ್ಲಿ ಏರ್ಪಾಡಾಗಿದೆ. ಆಫ್ರಿಕಾ ಆನೆಗಳ ಸಂರಕ್ಷಣೆಗಾಗಿ ಹಲವು ವ್ಯಾಪಕ ಯೋಜನೆಗಳನ್ನು ಹಮ್ಮಿಕೊಂಡಿರುವ ಅಂಗೊಲ ಇತ-ರೆ ವನ್ಯಜೀವಿ ಮತ್ತು ಪರಿಸರವನ್ನು ಸಂರಕ್ಷಿಸಲು ಪಣತೊಟ್ಟಿದ್ದು ಈ ಸಂದೇಶವನ್ನು ವಿಶ್ವದೆಲ್ಲೆಡೆ ಪಸರಿಸಲು ಈ ವರ್ಷದ ಪರಿಸರ ದಿನದ ಕಾರ್ಯಕ್ರಮವನ್ನು ಪ್ರಾಯೋಜಿಸಿದೆ.

ಭಾರತದಲ್ಲೂ ನೂರಾರು ಸಭೆ ಸಮಾರಂಭಗಳನ್ನು ಆಯೋಜಿಸಿ ಪರಿಸರ ಸಂರಕ್ಷಣೆಯ ಪಣ ತೊಡುವಂತೆ ಮಾಡುವ ಕೆಲಸ ಭರದಿಂದ ನಡೆಯುತ್ತಿದೆ.

ಈ ಹಿಂದೆ ವಿಶ್ವದ ಎಲ್ಲ ರಾಷ್ಟ್ರಗಳೂ ಪರಿಸರ ಸಂರಕ್ಷಣೆಗಾಗಿ ಪಣತೊಡಲು ಹಲವಾರು ಪರಿಸರ ಸಮ್ಮೇಳನಗಳು ನಡೆದಿದ್ದು ಅವುಗಳಲ್ಲಿ ರಿಯೋ-ಡಿ - ಝನೈರೋ, ಬಲರ್ಿನ್ ಮತ್ತು ಟೋಕಿಯೋಗಳಲ್ಲಿ ನಡೆದ ಸಮಾವೇಶಗಳು ಹೆಚ್ಚಿನ ಯಶಸ್ಸು ಗಳಿಸಿದ್ದವು. ನೆಲ-ಜಲ- ವಾಯು-ಅಂತರೀಕ್ಷಗಳಲ್ಲಿನ ಮಾಲಿನ್ಯವನ್ನು ಕಡಿಮೆ ಮಾಡುವುದು, ವಿಕಿರಣದ ಪರಿಣಾಮ ಕುರಿತು ಎಚ್ಚರಿಸುವುದು, ಓಝೋನ್ ಪದರದ ಸಂರಕ್ಷಣೆಗಾಗಿ ಕ್ರಮ ಕೈಗೊಳ್ಳುವುದು, ಪರಿಸರ ಸ್ನೇಹಿ ಇಂಧನ, ಪದ್ಧತಿಗಳನ್ನು ಅಳವಡಿಸಿಕೊಳ್ಳುವುದು ಮತ್ತು ಜಾಗೃತಿ ಮೂಡಿಸುವುದು ಈ ಸಮಾವೇಶಗಳ ಮುಖ್ಯ ಉದ್ದೇಶವಾಗಿತ್ತು.

ಪರಿಸರ ಸಂರಕ್ಷಣೆ ಮತ್ತು ಪರಿಸರ ಸಂಬಂಧಿ ಮಾಹಿತಿ ಆಧರಿಸಿದ ಪ್ರಶ್ನೆಗಳನ್ನು ಶಾಲಾ ಕಾಲೇಜು ಹಂತದಿಂದ ಹಿಡಿದು ಸ್ಪರ್ಧಾತ್ಮಕ ಪರೀಕ್ಷೆಗಳವರೆಗೆ ಕಡ್ಡಾಯವಾಗಿ ಕೇಳಲಾಗುತ್ತಿದೆ. ಭಾರತದ ಸರ್ವೋಚ್ಛ ನ್ಯಾಯಾಲಯದ ಆದೇಶದಂತೆ ಆಕಾಶವಾಣಿ ಮತ್ತು ದೂರದರ್ಶನಗಳಲ್ಲಿ ಪರಿಸರ ಸಂಬಂಧಿ ಕಾರ್ಯಕ್ರಮಗಳನ್ನು ಬಿತ್ತರಿಸುವುದು ಕಡ್ಡಾಯವಾಗಿದೆ.

ವನಮಹೋತ್ಸವ ಸಪ್ತಾಹ :
ಪ್ರತಿವರ್ಷ ಜುಲೈ 1 ರಿಂದ 7 ರವರೆಗೆ ವನಮಹೋತ್ಸವ ಸಪ್ತಾಹ ಆಚರಿಸುವ ವಿಷಯ ತಮಗೆ ತಿಳಿದೇ ಇದೆ. 1950 ರಿಂದಲೂ ಈ ವನಮಹೋತ್ಸವ ಸಪ್ತಾಹ ನಮ್ಮ ದೇಶದ ಎಲ್ಲೆಡೆಯಲ್ಲಿಯೂ ನಡೆಯುತ್ತಲೇ ಬಂದಿದೆ. ಅದೇ ತಾನೇ ಮಳೆ ಆರಂಭವಾಗಿರುವ ಹಿನ್ನೆಲೆಯಲ್ಲಿ ನಾವು ಹಚ್ಚುವ ಸಸಿಗಳು ಸಮೃದ್ಧವಾಗಿ ಬೆಳೆದು ಹೆಮ್ಮರಗಳಾಗಲಿ ಎಂಬ ಆಶಯ ಈ ಸಪ್ತಾಹದ್ದು. 1947ರ ಜುಲೈನಲ್ಲಿ ಮೊದಲ ಬಾರಿಗೆ ದೆಹಲಿಯಲ್ಲಿ ಆರಂಭವಾದ ಈ ಆಚರಣೆ, 1950 ರಲ್ಲಿ ಭಾರತೀಯ ವಿದ್ಯಾಭವನದ ಶ್ರೀ ಕೆ. ಎಂ. ಮುನ್ಷಿ ಅವರ ವಿಶೇಷ ಆಸಕ್ತಿಯಿಂದಾಗಿ ರಾಷ್ಟ್ರಮಟ್ಟದ ಕಾರ್ಯಕ್ರಮದ ರೂಪತಾಳಿ, 1952ರಲ್ಲಿ ಅವರು ಉತ್ತರಪ್ರದೇಶದ ರಾಜ್ಯಪಾಲ ರಾಗಿದ್ದ ಸಂದರ್ಭದಲ್ಲಿ ಅಲ್ಲಿ ಜಾರಿಗೊಂಡು, ಅದು ಇಂದು ರಾಷ್ಟ್ರೀಯ ಕಾರ್ಯಕ್ರಮವಾಗಿ ಹೊರಹೊಮ್ಮಿದೆ. ಹಾಗೆಯೇ ಪ್ರತಿ ವರ್ಷ ಅಕ್ಟೋಬರ್ ಮೊದಲವಾರದಲ್ಲಿ ವನ್ಯಜೀವಿ ಸಪ್ರಾಹವನ್ನು ಕೂಡ ಆಚರಿಸಿಕೊಂಡು ಬರಲಾಗುತ್ತಿದೆ.

ಪರಿಸರ ಮಾಹಿತಿ ವ್ಯವಸ್ಥೆ - ಎನ್.ವಿಸ್.
ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಹೆಮ್ಮೆಯ ಯೋಜನೆ ಪ ರಿ ಸ ರ ಮಾಹಿತಿ ವ್ಯವಸ್ಥೆ - ಎನ್ವಿಸ್ ಗಿಖ) ವಿಶ್ವ ಬ್ಯಾಂಕಿನ ಪರಿಸರ ನಿರ್ವಹಣೆ ತಾಂತ್ರಿಕ ನೆರವು ಕಾರ್ಯಕ್ರಮದ ಅನ್ವಯ ಜಾರಿಗೆ ಬಂದಿದ್ದು ಪರಿಸರ ಮಾಹಿತಿ ಮತ್ತು ಜಾಗೃತಿ ಕಾರ್ಯಕ್ರಮಗಳಿಗಾಗಿ ಭಾರತದ ಎಲ್ಲ ರಾಜ್ಯಗಳಲ್ಲಿ ಸರ್ಕಾರಿ ಮತ್ತು ಸರ್ಕಾರೇತರ ಸಂಘ ಸಂಸ್ಥೆಗಳು, ಹಾಗೂ ಕಾರ್ಪೋರೇಟ್ ವಲಯಗಳನ್ನು ಒಳಗೊಂಡಂತೆ ಎಲ್ಲ ರಂಗಗಳಲ್ಲಿ ನಿರಂತರ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದೆ. ಬೆಂಗಳೂರಿನ ಜೆ.ಪಿ. ನಗರದ ಹಸಿರು ಭವನದಲ್ಲಿರುವ ಪರಿಸರ ನಿರ್ವಹಣೆ ಮತ್ತು ಯೋಜನಾ ಸಂಶೋಧನಾ ಸಂಸ್ಥೆಯಲ್ಲಿ ಪರಿಸರ ಮಾಹಿತಿ ವ್ಯವಸ್ಥೆ - ಎನ್ವಿಸ್ ಕರ್ನಾಟಕ ಕೇಂದ್ರ ಕಾರ್ಯನಿವಾಹಿಸುತ್ತಿದೆ.

ಮಾಹಿತಿಯ ಮಹಾಪೂರ - ಎನ್ವಿಸ್ ವೆಬ್ಸೈಟ್
ಪರಿಸರ ಮಾಹಿತಿ ವ್ಯವಸ್ಥೆ - ಎನ್ವಿಸ್ ಕರ್ನಾಟಕ ಕೇಂದ್ರದ ಜಾಲತಾಣವು ಇಡೀ ದೇಶದ ಪರಿಸರ ಕಾರ್ಯಗಳ ಪರಿಚಯ ಮಾಡಿಕೊಡುವುದರ ಜೊತೆಗೆ ಕರ್ನಾಟಕದಲ್ಲಿ ನಡೆಯುತ್ತಿರುವ ಪರಿಸರ ಜಾಗೃತಿ ಕಾರ್ಯಕ್ರಮಗಳ ಸಮಗ್ರ ಪರಿಚಯ, ಇಕೋ ಕ್ಲಬ್ಗಳ ಪರಿಚಯ, ಲೈಬ್ರರಿ, ಪ್ರಕಟಣೆಗಳು, ಹಸಿರು ಮಾಹಿತಿ ಹೀಗೆ ಏನೆಲ್ಲಾ ವೈಶಿಷ್ಟ್ಯಗಳನ್ನೊಳಗೊಂಡಿದೆ.

ಹಸಿರು ಮಾಹಿತಿ ವಿಭಾಗದಲ್ಲಿ ನೆಲ, ಜಲ, ವಾಯು ಮಾಲಿನ್ಯ, ಅರಣ್ಯ ಸಂಪನ್ಮೂಲ, ಶಕ್ತಿಯ ಆಕರಗಳು ಇತ್ಯಾದಿ ವಿಷಯಗಳಿದ್ದು ಅರಣ್ಯ ಮತ್ತು ಜೈವಿಕ ವೈವಿಧ್ಯ ವಿಭಾಗದಲ್ಲಿ ಪಶು-ಪಕ್ಷಿ, ಔಷಧೀಯ ಸಸ್ಯಗಳು, ಮೀನುಗಳು, ಗಿಡ-ಮರಗಳ ಸಚಿತ್ರ ಮಾಹಿತಿ ಲಭ್ಯವಿದೆ. ಕರ್ನಾಟಕದ ಪಕ್ಷಿಗಳು ಮತ್ತು ಮೀನುಗಳ ವಿಭಾಗಗಳಿಗೆ ಭೇಟಿನೀಡಲೇಬೇಕು ಏಕೆಂದರೆ ನೂರಾರು ಪಕ್ಷಿಗಳ ಮತ್ತು ಮೀನುಗಳ ವಿವಿಧ ಭಂಗಿಗಳ ಚಿತ್ರಗಳು, ವೈಜ್ಞಾನಿಕ ನಾಮಕರಣ ಮತ್ತು ಜೀವನ ಚಿತ್ರಣದ ವಿಕಿ ಲಿಂಕ್ ಅಲ್ಲಿ ದೊರೆಯುತ್ತವೆ.

ಇನೆಪ್ ಪರಿಸರ ಸೊಬಗು ರೇಡಿಯೋ ಕಾರ್ಯಕ್ರಮ
ಆಕಾಶವಾಣಿ ಬೆಂಗಳೂರು - ವಿವಿಧ ಭಾರತಿ ವಾಣಿಜ್ಯ ಸೇವಾ ವಿಭಾಗದ 102.9 ಎಫ್.ಎಂ. ಕೇಂದ್ರದಿಂದ 2006-07ನೇ ಸಾಲಿನಲ್ಲಿ ಪ್ರತಿ ಶನಿವಾರ ಸಂಜೆ 4 ರಿಂದ 5 ರವರೆಗೆ ಒಂದು ವರ್ಷಕಾಲ, ರಾಜ್ಯವ್ಯಾಪಿ ಪ್ರಸಾರವಾದ ಇನೆಪ್ ಪರಿಸರ ಸೊಬಗು - ರೇಡಿಯೋ ಕಾರ್ಯಕ್ರಮ ಇಂಡೋ ನಾರ್ವೇಜಿಯನ್ ಪರಿಸರ ಕಾರ್ಯಕ್ರಮದ ಹಣಕಾಸಿನ ನೆರವಿನೊಂದಿಗೆ ಪ್ರಸಾರವಾಗಿ ಜನಪ್ರಿಯತೆ ಗಳಿಸಿತ್ತು. ಶ್ರೋತೃಗಳ ಅಭಿಲಾಷೆಯ ಮೇರೆಗೆ 52 ಕಂತುಗಳ ಪುನಃಪ್ರಸಾರವನ್ನು ಪ್ರತಿ ಮಂಗಳವಾರ ಮತ್ತು ಶುಕ್ರವಾರಗಳಂದು ನಡೆಸಿಕೊಡಲಾಗಿತ್ತು.

ಪರಿಸರ ತಜ್ಞರು, ಪರಿಸರವಾದಿಗಳು, ಕಾರ್ಯಕರ್ತರು, ಅಧಿಕಾರಿಗಳು ಮತ್ತು ಪರಿಸರಕ್ಕಾಗಿ ಶ್ರಮಿಸಿದ ಹಲವು ಗಣ್ಯರನ್ನು, ಜನಸಾಮಾನ್ಯರನ್ನು ಸಂದಶರ್ಿಸಿ, ಹಿರಿಯ ಕಾರ್ಯಕ್ರಮ ನಿರ್ವಾಹಕಿ ಶ್ರೀಮತಿ ಮಂಜುಳಾ ಅವರು ಲಲಿತಾ ಸತ್ಯಮೂರ್ತಿ ಅವರ ನೆರವಿನೊಂದಿಗೆ ರೂಪಿಸಿ ಪ್ರಸ್ತುತಪಡಿಸಿದ ಇನೆಪ್ ಪರಿಸರ ಸೊಬಗು ರೇಡಿಯೋ ಕಾರ್ಯಕ್ರಮದ ಎಲ್ಲಾ ಕಂತುಗಳು ಇದೀಗ ಅಂತರಜಾಲದಲ್ಲಿ ಲಭ್ಯವಿವೆ. ಧ್ವನಿಮುದ್ರಿತ ಕಾರ್ಯಕ್ರಮ, ಅದರ ಅಕ್ಷರ ರೂಪ ಮತ್ತು ಮುದ್ರಿತ ರೂಪಗಳು ಓದಲು, ಕೇಳಲು ಉಚಿತವಾಗಿ ಸಿಗುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧರಾಗುತ್ತಿರುವವರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಪರಿಸರ ಮಾಹಿತಿಯ ಮಹಾಪೂರವೇ ದೊರೆಯುವಂತಾಗಿದೆ. ಪ್ರಬಂಧ ರಚನೆಗೆ ವಿಫುಲ ಮಾಹಿತಿ ಇಲ್ಲಿ ಲಭ್ಯ.

ಎನ್ವಿಸ್ ಪರಿಸರ ವಾರ್ತಾಪತ್ರ : ಎನ್ವಿಸ್ ಕರ್ನಾಟಕ ಕೇಂದ್ರವು ಪರಿಸರ ಜಾಗೃತಿಗಾಗಿ 2003 ರ ಏಪ್ರಿಲ್ನಿಂದ ನಿಯಮಿತವಾಗಿ ಪರಿಸರ ವಾತರ್ಾಪತ್ರಗಳನ್ನು ಪ್ರಕಟಿಸುತ್ತಿದ್ದು ಕಾಲಕಾಲಕ್ಕೆ ಲಭ್ಯವಿರುವ ಅಂಕಿ-ಅಂಶಗಳನ್ನು ಆಧರಿಸಿದ, ಪರಿಸರ ಸಂರಕ್ಷಣೆ ಸಂದೇಶವನ್ನು ತಿಳಿಸಿ ಜಾಗೃತಿ ಉಂಟುಮಾಡುತ್ತಿದೆ. ನೀರು, ಮಳೆನೀರಿನ ಸಂರಕ್ಷಣೆ, ಜೈವಿಕ ಇಂಧನ, ಶಬ್ದ ಮಾಲಿನ್ಯ, ನಗರಗಳಲ್ಲಿ ಗೃಹಬಳಕೆಯ ಶಕ್ತಿಯ ಅಂಕಿ ಅಂಶಗಳ ವರದಿ, ಊರ್ಜಿತ ತೋಟಗಾರಿಕೆ, ಮರುಭೂಮಿ ಆಗುವಿಕೆಯನ್ನು ತಪ್ಪಿಸುವುದು, ಒಳಾಂಗಣ ಮಾಲಿನ್ಯ, ಜೀವಾಣು ವಿಷ, ಹಾರುಬೂದಿ, ಪರಿಸರ ಸ್ನೇಹಿ ಕಟ್ಟಡ ನಿಮರ್ಾಣ ಸಾಮಗ್ರಿಗಳು, ಜೈವಿಕ ವೈವಿಧ್ಯ, ಇ-ತ್ಯಾಜ್ಯ, ಅಪಾಯಕಾರಿ ತ್ಯಾಜ್ಯ, ಜಾಗತಿಕ ತಾಪಮಾನ ಏರಿಕೆ, ಓಜೋ಼ನ್ ಪದರ ಕ್ಷೀಣಿಸುತ್ತಿರುವುದು, ಜೈವಿಕ ಕೃಷಿ, ಪ್ಲಾಸ್ಟಿಕ್, ಪರಿಸರ ಅವಘಡಗಳು, ಸಾವಯವ ಕೃಷಿ, ಹೈಡ್ರೋಫೋನಿಕ್ಸ್, ನೀರಿನ ತಾಣಗಳ ಸಂರಕ್ಷಣೆ ಹೀಗೆ ವಿವಿಧ ವಿಷಯಗಳನ್ನು ಕುರಿತಂತೆ ವಾರ್ತಾಪತ್ರಗಳನ್ನು ಪ್ರಕಟಿಸಿದ್ದು ಅಮೂಲ್ಯ ಮಾಹಿತಿ ನೀಡುವ ಇವು ಅಂತರಜಾಲದಲ್ಲಿ ಉಚಿತವಾಗಿ ಲಭ್ಯ.