Thursday 25 March 2021

ಅವಕಾಶ ನೀಡಿ ಜೊತೆಗೂಡಿ ಕಲಿಸಿ


 
ಅವಕಾಶ ನೀಡಿ ಜೊತೆಗೂಡಿ ಕಲಿಸಿ
-ಡಾ.ಎಚ್.ಬಿ.ಚಂದ್ರಶೇಖರ್,

ಬಾಡಿದ ಮುಖ, ನಿರಾಸೆ ಹೊತ್ತ ಕಂಗಳು. ಮಗನ ಭವಿಷ್ಯವನ್ನು ಉಜ್ವಲಗೊಳಿಸಲು ನಗರದ ಪ್ರತಿಷ್ಠಿತ ಶಾಲೆಯಲ್ಲಿ ಪ್ರವೇಶ ದೊರಕಿಸಬೇಕೆಂಬ ಹಂಬಲ ಆ ಪೋಷಕರಿಗೆ ಈಡೇರಲಿಲ್ಲ. ಕೇಳಿಸಿಕೊಳ್ಳುವುದರಲ್ಲಿ ತೊಂದರೆಯಿರುವ ಸಂತೋಷ್ನಿಗೆ ಪ್ರವೇಶವನ್ನು ಆ ಶಾಲೆಯು ನಿರಾಕರಿಸಿತ್ತು. ಸಂತೋಷ್ನಂತೆ ವಿವಿಧ ರೀತಿಯ ನ್ಯೂನತೆಯಿರುವ ಸಾವಿರಾರು ಕಂದಮ್ಮಗಳು ಹೆಚ್ಚಿನ ಶಾಲೆಗಳಲ್ಲಿ ಪ್ರವೇಶ ಪಡೆಯುವುದು ಕನಸಿನ ಮಾತೇ ಸರಿ!

ಸರ್ಕಾರಿ ಶಾಲೆಗಳಲ್ಲಿ ಎಲ್ಲಾ ಮಕ್ಕಳಿಗೆ ಮುಕ್ತ ಪ್ರವೇಶವಿದೆ. ಸರ್ಕಾರಿ ಶಾಲೆಗಳು ಅಂಗನ್ಯೂನತೆಯನ್ನು ಹೊಂದಿದ ಮಕ್ಕಳನ್ನು ಒಳಗೊಂಡಂತೆ ಎಲ್ಲಾ ಮಕ್ಕಳಿಗೆ ಪ್ರವೇಶ ನೀಡಲು ಅನುಕೂಲವಾಗುವಂತೆ ಶೂನ್ಯ ನಿರಾಕರಣೆಯ ಕಾರ್ಯನೀತಿಯನ್ನು ಅನುಸರಿಸುತ್ತಿವೆ. ಆದರೆ ಹೆಚ್ಚಿನ ಖಾಸಗಿ ಶಾಲೆಗಳು ವಿಕಲಚೇತನ ಮಕ್ಕಳಿಗೆ ಪ್ರವೇಶ ನೀಡುವುದಿಲ್ಲ. ಒಂದು ವೇಳೆ ಶಾಲೆಯಲ್ಲಿ ಪ್ರವೇಶ ಪಡೆದಾಗ್ಯೂ ತನ್ನ ಅಂಗವೈಕಲ್ಯತೆ ಅಥವಾ ತನ್ನ ದೈಹಿಕ ಅಥವಾ ಮಾನಸಿಕ ಮಿತಿಯ ಕಾರಣದಿಂದ ಒಂದಲ್ಲ ಒಂದು ರೀತಿಯ ನಿರ್ಲಕ್ಷ್ಯ ಅಥವಾ ಉದಾಸೀನತೆಯನ್ನು ಅನುಭವಿಸುತ್ತಿದ್ದಾರೆ. ವಿಶ್ವದ ಸುಮಾರು 9.3 ಕೋಟಿ ಮಕ್ಕಳು ಒಂದಲ್ಲ ಒಂದು ರೀತಿಯ ಅಂಗವೈಕಲ್ಯತೆಯಿಂದ ತೊಂದರೆ ಅನುಭವಿಸುತ್ತಿದ್ದಾರೆ. ಈ ಮಕ್ಕಳಲ್ಲಿ ಹೆಚ್ಚಿನವರು ತನ್ನ ಓರಗೆಯ ಇತರೆ ಮಕ್ಕಳು ಪಡೆಯುತ್ತಿರುವ ಶಿಕ್ಷಣ ಹಾಗೂ ಇತರೆ ಎಲ್ಲಾ ಹಕ್ಕುಗಳಿಂದ ವಂಚಿತರಾಗಿದ್ದಾರೆ. ಮತ್ತೊಂದು ವಿಶ್ವ ಅಂಗವಿಕಲರ ದಿನಾಚರಣೆ (ಡಿಸೆಂಬರ್ 3) ನಮ್ಮ ಮುಂದಿದೆ. ಈ ಹೊತ್ತಿನಲ್ಲಿ ವಿಕಲಚೇತನ ಮಕ್ಕಳ ಶಿಕ್ಷಣದ ಕುರಿತ ಸ್ಥಿತಿಗತಿಯತ್ತ ಗಮನಹರಿಸೋಣ.

ಶಿಕ್ಷಣ ವಂಚಿತ ಮಕ್ಕಳಲ್ಲಿ ಹೆಚ್ಚಿನವರು ವಿಕಲಚೇತನರು, ಬಡತನದ ಬೇಗೆಯಲ್ಲಿರುವ ಮಕ್ಕಳು, ಬಾಲಕಿಯರಾಗಿದ್ದಾರೆ. ಇವರೊಂದು ರೀತಿಯಲ್ಲಿ ಅದೃಶ್ಯ ಮಕ್ಕಳೆಂದರೆ ತಪ್ಪಾಗದು. ಸಾಮಾನ್ಯ ನೋಟಕ್ಕೆ ಇವರು ಕಾಣಸಿಗರು. ಸೂಕ್ಷ್ಮವಾಗಿ ಅವಲೋಕಿಸಿದಲ್ಲಿ ಇವರಲ್ಲಿ ಹೆಚ್ಚಿನವರು ಶಾಲೆಯ ಮುಖ ನೋಡದವರು ಮತ್ತು ಶಾಲೆಗೆ ಸೇರಿದಾಗ್ಯೂ ಅಲ್ಲಿಯ ವಾತಾವರಣ ಇವರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಯಶಸ್ವಿಯಾಗದೇ ಇವರು ಶಾಲೆ ಬಿಡುವುದನ್ನು ಗಮನಿಸಬಹುದಾಗಿದೆ. ವಿಕಲಚೇತನರು, ಬಡತನದ ಬೇಗೆಯಲ್ಲಿರುವ ಮಕ್ಕಳು, ಬಾಲಕಿಯರನ್ನು ಒಳಗೊಂಡಂತೆ ಇತರೆ ಎಲ್ಲಾ ಪ್ರಕಾರದ ಮಕ್ಕಳನ್ನು ಶೈಕ್ಷಣಿಕ ಪರಿಧಿಯೊಳಗೆ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಜಾಗತಿಕ ಮಟ್ಟದಲ್ಲಿ ಎಲ್ಲರಿಗೂ ಶಿಕ್ಷಣ ಎಂಬ ಮಹತ್ವದ ಘೋಷಣೆ ಹೊರಡಿಸಿದ ಜೊಮ್ತಿಯನ್ ವಿಶ್ವ ಸಮಾವೇಶವು (1990) ಮಹತ್ವದ ಮೈಲಿಗಲ್ಲಾಗಿದೆ. ವಿಶೇಷ ಅವಶ್ಯಕತೆಗಳ ಶಿಕ್ಷಣದ ಕುರಿತಂತೆ ನಡೆದ ಸಾಲಮಂಕಾ ವಿಶ್ವ ಸಮಾವೇಶವು (1994) ಎಲ್ಲಾ ಮಕ್ಕಳಿಗೂ ಶಿಕ್ಷಣದ ಘೋಷಣೆಗೆ ಹೆಚ್ಚು ಒತ್ತು ನೀಡಿತು. ಬೀದಿ ಮಕ್ಕಳು ಹಾಗೂ ವಿಕಲಚೇತನ ಮಕ್ಕಳನ್ನೂ ಒಳಗೊಂಡಂತೆ ಎಲ್ಲಾ ಮಕ್ಕಳಿಗೆ ಶಾಲೆಯು ಮುಕ್ತ ಅವಕಾಶ ಕಲ್ಪಿಸಬೇಕೆಂಬ ನಿರ್ಣಯವನ್ನು ಸಮಾವೇಶ ತೆಗೆದುಕೊಂಡಿತು. ಎಲ್ಲಾ ಮಕ್ಕಳೂ ಶೈಕ್ಷಣಿಕ ಪ್ರಕ್ರಿಯೆಗಳಲ್ಲಿ ಒಳಗೊಳ್ಳುವಂತೆ, ಪಾಲ್ಗೊಳ್ಳುವಂತೆ, ಸಮಾನವಾಗಿ ಗೌರವದಿಂದ ಪರಿಗಣಿಸುವ ರೀತಿಯಲ್ಲಿ ಶೈಕ್ಷಣಿಕ ಸನ್ನಿವೇಶಗಳನ್ನು ಸೂಕ್ತವಾಗಿ ಮಾರ್ಪಡಿಸುವುದು ಹಾಗೂ ಈ ನಿಟ್ಟಿನಲ್ಲಿ ಅಗತ್ಯವಾದ ಸಡಿಲಿಕೆ ಹಾಗೂ ಸ್ವಾತಂತ್ರ್ಯಗಳನ್ನು ಶಾಲೆಯು ಹೊಂದಿರುವುದು ಅವಶ್ಯಕವಾಗಿದೆ. ವಿಕಲಚೇತನ ಮಕ್ಕಳನ್ನು ಒಳಗೊಂಡಂತೆ ಎಲ್ಲಾ ಮಕ್ಕಳನ್ನೂ ಶೈಕ್ಷಣಿಕ ಮುಖ್ಯವಾಹಿನಿಗೆ ತೊಡಗಿಸಿಕೊಳ್ಳುವಲ್ಲಿ ರಾಷ್ಟ್ರ ಹಾಗೂ ರಾಜ್ಯ ಸರ್ಕಾರಗಳು ಅಗತ್ಯವಾದ ಕಾರ್ಯನೀತಿಯನ್ನು ಜಾರಿಗೊಳಿಸಬೇಕು ಹಾಗೂ ಸ್ಥಳೀಯ ಸಮುದಾಯಗಳು ಈ ನಿಟ್ಟಿನಲ್ಲಿ ಅವಶ್ಯಕವಾದ ಜನಜಾಗೃತಿ ಮತ್ತು ಸಂಪನ್ಮೂಲ ಬೆಂಬಲ ನೀಡುವಂತೆ ಕ್ರಮವಹಿಸಬೇಕಿದೆ.

ಸಂಪೂರ್ಣ ದೃಷ್ಟಿಯಿರದ ಅಥವಾ ಮಾತು ಬಾರದ ಅಥವಾ ಕೇಳಿಸಕೊಳ್ಳಲು ಸಾಧ್ಯವಾಗದ ಮಕ್ಕಳನ್ನು ಅದು ಹೇಗೆ ಸಾಮಾನ್ಯ ಶಾಲೆಗಳಲ್ಲಿ ಸೇರಿಸಿಕೊಂಡು ಶಿಕ್ಷಣ ನೀಡುವುದು ಎಂದು ನಿಮ್ಮಲ್ಲಿ ಸಂಶಯ ಮೂಡಬಹುದು; ವಿಶೇಷ ಶಾಲೆಗಳಲ್ಲಿ ಕಲಿಸಿದರೆ ಅವರು ಪರಿಣಾಮಕಾರಿಯಾಗಿ ಕಲಿಯಬಲ್ಲರು ಎಂದು ನೀವು ಭಾವಿಸಬಹುದು. ಆದರೆ ವಿಕಲಚೇತನರು ಇತರೆ ಮಕ್ಕಳೊಂದಿಗೆ ಬೆರೆತು ಕಲಿಯುವುದರಿದ ಹೆಚ್ಚು ಉತ್ಸಾಹ ಹಾಗೂ ಪರಿಣಾಮಕಾರಿಯಾಗಿ ಕಲಿಯುತ್ತಾರೆಂದು ಹೆಚ್ಚಿನ ಸಂಶೋಧನೆಗಳು ದೃಢಪಡಿಸುತ್ತವೆ. ಇಲ್ಲಿ ಮುಖ್ಯವಾದ ಅಂಶವೆಂದರೆ ವಿಕಲಚೇತನರ ನ್ಯೂನತೆಯ ಪ್ರಮಾಣವನ್ನು ಅಳೆದು, ಅವರಿಗೆ ಅಗತ್ಯವಾದ ಸೂಕ್ತ ಸಾಧನ ಮತ್ತು ಸಲಕರಣೆಗಳನ್ನು (ದೃಷ್ಟಿ ವಿಕಲಚೇತನರಿಗೆ ಬ್ರೈಲ್ ಪುಸ್ತಕ, ಶ್ರವ್ಯ ವಿಕಲಚೇತನರಿಗೆ ಕೇಳಿಸಿಕೊಳ್ಳುವ ಉಪಕರಣಗಳು, ಆಂಗಿಕ ವಿಕಲಚೇತನರಿಗೆ ಗಾಲಿ ಕುಚರ್ಿ ಇತ್ಯಾದಿಗಳು) ನೀಡುವುದರ ಜೊತೆ ಅವರನ್ನು ಇತರೆ ಮಕ್ಕಳೊಂದಿಗೆ ಹೇಗೆ ಕಲಿಸಬೇಕೆಂಬ ಬಗ್ಗೆ ಅಗತ್ಯ ತರಬೇತಿಯನ್ನು ಶಿಕ್ಷಕರಿಗೆ ನೀಡಿದಲ್ಲಿ ಸಾಮಾನ್ಯ ತರಗತಿಗಳಲ್ಲಿ ವಿಕಲಚೇತನರನ್ನು ಸಮನ್ವಯಗೊಳಿಸಿ ಕಲಿಸಲು ಸಾಧ್ಯವಿದೆ. ಕೆಲವು ವಿಧದ ವಿಕಲಚೇತನರು ಸಾಮಾನ್ಯ ಮಕ್ಕಳಿಗೆ ಸರಿಸಮಾನವಾಗಿ ಕಲಿಯದಿರಬಹುದು. ಆದರೆ ಸಾಮಾನ್ಯ ತರಗತಿಗಳಲ್ಲಿ ವಿಕಲಚೇತನರನ್ನು ಸೇರಿಸಿಕೊಂಡು ಕಲಿಸುವುದರಿಂದ ಜೀವನ ಕೌಶಲಗಳನ್ನು ಕಲಿಯುವುದರ ಜೊತೆ ಜೀವನೋತ್ಸಾಹವನ್ನು ಪಡೆದುಕೊಳ್ಳುತ್ತಾರೆ. ಇದರಿಂದ ಅವರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಇಲ್ಲದಿದ್ದಲ್ಲಿ ವಿಕಲಚೇತನರನ್ನು ಪ್ರತ್ಯೇಕವಾದ ವಿಶೇಷ ಶಾಲೆಗಳಲ್ಲಿ ಮಾತ್ರ ದಾಖಲಿಸಿ ಕಲಿಸುವುದು ಅವರನ್ನು ಪ್ರತ್ಯೇಕಿಸುವುದರ ಜೊತೆ  ಸಮಾಜದ ಮುಖ್ಯ ಸ್ತರದಿಂದ ದೂರ ಇಟ್ಟಂತಾಗುತ್ತದೆ. ಇದು ಕಾನೂನಿನ ದೃಷ್ಟಿಯಿಂದ ಅಪರಾಧವಾಗುವುದರ ಜೊತೆ ಅಮಾನವೀಯವೂ ಆಗುತ್ತದೆ. ಅವಶ್ಯವಿದ್ದಲ್ಲಿ ಅಲ್ಪ ಅವಧಿಯವರೆಗೆ ವಿಕಲಚೇತನರು  ವಿಶೇಷ ಕೌಶಲಗಳ ಕಲಿಕೆಗೆ (ಬ್ರೈಲ್ ಲಿಪಿ ಕಲಿಕೆ, ಮಾತಿನ ಚಿಕಿತ್ಸೆ...) ಶಾಲೆಯಲ್ಲಿಯೇ ಸ್ಥಾಪಿಸಿರಬಹುದಾದ ಸಂಪನ್ಮೂಲ ಕೊಠಡಿಗಳಿಗೆ ತೆರಳಿ ತರಬೇತಿ ಪಡೆಯಬಹುದು. ಆದರೆ ವಿಕಲಚೇತನರನ್ನು ಸಾಮಾನ್ಯ ತರಗತಿಗಳಲ್ಲಿ ದಾಖಲಿಸಿ ಎಲ್ಲ ಮಕ್ಕಳಂತೆ ಶಿಕ್ಷಣ ನೀಡುವ ಸಮನ್ವಯ ಶಿಕ್ಷಣವು ಪ್ರಸ್ತುತ ಪ್ರಚಲಿತದಲ್ಲಿದೆ. ಇಲ್ಲಿ ಇನ್ನೊಂದು ಪ್ರಮುಖ ಆಯಾಮವಿದೆ. ವಿಕಲಚೇತನ ಮಕ್ಕಳು ಸಾಮಾನ್ಯ ಮಕ್ಕಳ ಜೊತೆ ಕಲಿಯುವುದರಿಂದ ಸಾಮಾನ್ಯ ಮಕ್ಕಳು ವಿಕಲಚೇತನ ಮಕ್ಕಳನ್ನು ಅರ್ಥಮಾಡಿಕೊಳ್ಳಲು, ಅವರೊಂದಿಗೆ ಒಡನಾಡಲು, ಮುಕ್ತವಾಗಿ ಬೆರೆಯಲು ಅವಕಾಶ ದೊರೆ- ಯುತ್ತದೆ. ಇದು ಭವಿಷ್ಯದಲ್ಲಿ ಸಾಮಾನ್ಯರು ವಿಕಲಚೇತನರೊಂದಿಗೆ ಸಾಹಚರ್ಯ ಸಾಧಿಸುವ ಜೊತೆ ಆರೋಗ್ಯಕರ, ಸಮಾನ ಸಮಾಜದ ಸೃಷ್ಟಿಗೆ ಉತ್ತಮ ವೇದಿಕೆ ಒದಗಿಸಬಲ್ಲದು.

ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿಯಲ್ಲಿ ಪ್ರಾಥಮಿಕ ಶಾಲೆಗಳಲ್ಲಿ ವಿಕಲಚೇತನ ಮಕ್ಕಳಿಗಾಗಿ ಸಮನ್ವಯ ಶಿಕ್ಷಣ ಕಾರ್ಯಕ್ರಮ ಜಾರಿಯಲ್ಲಿದೆ. ಅದೇ ರೀತಿಯಲ್ಲಿ 9 ರಿಂದ 12ನೇ ತರಗತಿಯವರೆಗೆ ಪ್ರೌಢ ಹಂತದಲ್ಲಿ ವಿಕಲಚೇತನರಿಗಾಗಿ ಸಮನ್ವಯ ಶಿಕ್ಷಣ ಕಾರ್ಯಕ್ರಮ ಜಾರಿಯಲ್ಲಿದೆ. ಸರ್ವ ಶಿಕ್ಷಣ ಅಭಿಯಾನದಡಿಯಲ್ಲಿ ಪ್ರತಿ ವರ್ಷ ವಿಕಲಚೇತನ ಮಕ್ಕಳನ್ನು ಗುರುತಿಸಲು ಸಮೀಕ್ಷೆ ಹಮ್ಮಿಕೊಳ್ಳಲಾಗುತ್ತಿದೆ. 2013-14 ನೇ ಸಾಲಿನಲ್ಲಿ ರಾಜ್ಯದಲ್ಲಿ ಹತ್ತು ವಿವಿಧ ವರ್ಗಗಳಡಿಯಲ್ಲಿ (ಸಂಪೂರ್ಣ ದೃಷ್ಟಿದೋಷ, ಭಾಗಶಃ ದೃಷ್ಟಿದೋಷ, ಶ್ರವ್ಯ ದೋಷ, ಮಾತಿನ ದೋಷ, ಮೂಳೆ ಸಂಬಂಧಿ ದೋಷ, ಬಹುವಿಕಲತೆ, ಬುದ್ಧಿಮಾಂದ್ಯತೆ, ಕಲಿಕಾ ದೋಷ, ಮೆದುಳಿನ ಪಾಶ್ರ್ವವಾಯು, ಆಟಿಸಂ ಸ್ಪೆಕ್ಟ್ರಮ್ ದೋಷ) ಒಟ್ಟು 1.27 ಲಕ್ಷ ವಿಕಲಚೇತನ ಮಕ್ಕಳನ್ನು ಗುರುತಿಸಲಾಗಿದೆ. ಗುರುತಿಸಿದ ಮಕ್ಕಳಿಗೆ ತಾಲ್ಲೂಕು ಹಂತದಲ್ಲಿ ತಜ್ಞ ವೈದ್ಯರಿಂದ ವೈದ್ಯಕೀಯ ಶಿಬಿರಗಳನ್ನು ಆಯೋಜಿಸಿ, ಅವರಲ್ಲಿರುವ ನ್ಯೂನತೆಯ ಪ್ರಮಾಣವನ್ನು ಅಳೆದು, ಅಗತ್ಯವಾದ ಸಾಧನ- ಸಲಕರಣೆಗಳನ್ನು ಒದಗಿಸಲಾಗುತ್ತ್ತಿದೆ. ವಿಕಲಚೇತನ ಮಕ್ಕಳನ್ನು ಇತರೆ ಮಕ್ಕಳೊಂದಿಗೆ ಹೇಗೆ ಸಮನ್ವಯಗೊಳಿಸಿ ಕಲಿಸಬಹುದೆಂಬ ಬಗ್ಗೆ ಶಿಕ್ಷಕರಿಗೆ ತರಬೇತಿ ಹಾಗೂ ಪೋಷಕರಿಗೆ ಆಪ್ತ ಸಮಾಲೋಚನೆಯನ್ನು ಹಮ್ಮಿಕೊಳ್ಳಲಾಗುತ್ತಿದೆ. ಶಾಲೆಗೆ ಬರಲಾಗದ ತೀವ್ರ ನ್ಯೂನತೆಯ ಮಕ್ಕಳಿಗೆ ಶಾಲಾ ಸಿದ್ಧತಾ ಶಿಬಿರಗಳನ್ನು ಕ್ಲಸ್ಟರ್ ಹಂತದಲ್ಲಿ ಆಯೋಜಿಸಿ ಶಾಲಾಪೂರ್ವ ತರಬೇತಿಯನ್ನು ನೀಡಿ ಸಮನ್ವಯಗೊಳಿಸಲಾಗುತ್ತಿದೆ. ತೀವ್ರ ನ್ಯೂನತೆ ಹೊಂದಿದ ಮಕ್ಕಳನ್ನು ಹತ್ತಿರದ ಶಾಲೆಗಳಿಗೆ ದಾಖಲಿಸಿ, ತರಬೇತಿ ಹೊಂದಿದ ಸ್ವಯಂ ಸೇವಕರಿಂದ ಅವರ ಮನೆಯಲ್ಲಿಯೇ ಶಿಕ್ಷಣವನ್ನೂ ಸಹ ನೀಡುವ ವ್ಯವಸ್ಥೆ ಮಾಡಲಾಗಿದೆ. ಈ ಪ್ರಯತ್ನಗಳ ಫಲವಾಗಿ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಿಕಲಚೇತನ ಮಕ್ಕಳು ಶಾಲೆಗಳಲ್ಲಿ ಕಲಿಯುತ್ತಿದ್ದಾರೆ.

ವಿಕಲಚೇತನ ಮಕ್ಕಳು ಶಾಲೆಗಳಿಗೆ ಸರಾಗವಾಗಿ ಬರಲು ಅನುಕೂಲವಾಗುವಂತೆ ಎಲ್ಲಾ ಶಾಲೆಗಳಲ್ಲಿ ಇಳಿಜಾರು ಹಾಗೂ ನಗರ ಪ್ರದೇಶಗಳಲ್ಲಿರುವ ಬಹುಮಹಡಿಗಳಿರುವ ಶಾಲೆಗಳಲ್ಲಿ ಲಿಫ್ಟ್ ಸೌಲಭ್ಯವಿರುವಂತೆ ಗಮನಹರಿಸಬೇಕಿದೆ.  ವಿಕಲಚೇತನರಿಗಾಗಿ ವಿಶೇಷ ವ್ಯವಸ್ಥೆ ಹೊಂದಿದ ಶೌಚಾಲಯಗಳನ್ನು ನಿರ್ಮಿಸಬೇಕಿದೆ. ವಿಕಲಚೇತನ ಮಕ್ಕಳಿಗೆ ಅವರ ನ್ಯೂನತೆಗಳಿಗೆ ತಕ್ಕಂತೆ ಅಗತ್ಯವಾದ ಸಾಧನ ಸಲಕರಣೆಗಳನ್ನು ಒದಗಿಸುವುದರ ಜೊತೆ ಶಾಲೆಯಲ್ಲಿ ಸಂಪನ್ಮೂಲ ಕೊಠಡಿ ಸ್ಥಾಪಿಸಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಶಿಕ್ಷಕರ ಮನೋಭಾವದಲ್ಲಿ ಬದಲಾವಣೆ ತರಲು ಹಾಗೂ ಸಾಮಾನ್ಯ ತರಗತಿಗಳಲ್ಲಿ ವಿಕಲಚೇತನರನ್ನು ಸಮನ್ವಯಗೊಳಿಸುವ ವಿಧಾನಗಳ ಕುರಿತು ಅಗತ್ಯವಾದ ತರಬೇತಿಗಳನ್ನು ಖಾಸಗಿ ಶಾಲೆಗಳ ಶಿಕ್ಷಕರನ್ನೂ ಒಳಗೊಂಡಂತೆ ಎಲ್ಲಾ ಶಿಕ್ಷಕರಿಗೆ ಹಾಗೂ ಪೋಷಕರು, ಎಸ್.ಡಿ.ಎಂ,ಸಿ. ಸದಸ್ಯರು ಮತ್ತು ಖಾಸಗಿ ಶಾಲೆಗಳ ಆಡಳಿತ ಮಂಡಳಿಗಳ ಸದಸ್ಯರಿಗೂ ಆಪ್ತ ಸಮಾಲೋಚನೆ ಅಥವಾ ಜಾಗೃತಿ ಶಿಬಿರಗಳನ್ನು ಏರ್ಪಡಿಸುವ ಮೂಲಕ ಅಗತ್ಯ ಬದಲಾವಣೆ ತರಲು ಸಾಧ್ಯವಿದೆ.

ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಪ್ರಕಾರ ದೈಹಿಕ ಅಂಗವೈಕಲ್ಯತೆಯನ್ನೂ ಒಳಗೊಂಡಂತೆ ಯಾವುದೇ ಕಾರಣಗಳಿಗಾಗಿ ಯಾವುದೇ ರೀತಿಯ ಮಕ್ಕಳಿಗೆ ಪ್ರವೇಶವನ್ನು ನಿರಾಕರಿಸುವಂತಿಲ್ಲ. ಪ್ರತಿ ವಿಕಲಚೇತನ ಮಗುವು ಯಾವುದೇ ಶಾಲೆಯಲ್ಲಿ ಪ್ರವೇಶ ಪಡೆದು, ಕಲಿಯುವುದು ಅವನ ಹಕ್ಕಾಗಿದೆ. ಅದೇ ರೀತಿ ಯಾವುದೇ ರೀತಿಯ ವಿಕಲಚೇತನ ಮಕ್ಕಳನ್ನು ಒಪ್ಪಿಕೊಂಡು ಪ್ರವೇಶ ದೊರಕಿಸುವುದು ಪ್ರತಿ ಶಾಲೆಯ ಕರ್ತವ್ಯವಾಗಿದೆ. ಕಾನೂನಾತ್ಮಕವಾಗಿಯೂ  ವಿಕಲಚೇತನರನ್ನು ಪ್ರತ್ಯೇಕ ತರಗತಿ ಅಥವಾ ಶಾಲೆಯಲ್ಲಿ ಕಲಿಯುವಂತೆ ಮಾಡುವುದು ತಪ್ಪಾಗುತ್ತದೆ. ವಿಕಲಚೇತನರಿಗೆ ಬೇಕಿರುವುದು ಅನುಕಂಪವಲ್ಲ, ಎಲ್ಲರಂತೆ ಅವರೂ ಇರುವ ಅವಕಾಶ. ಪ್ರತಿ ಮಗುವೂ ವಿಶಿಷ್ಟ ಹಾಗೂ ಅಮೂಲ್ಯ. ಈ ನಿಟ್ಟಿನಲ್ಲಿ ಎಲ್ಲಾ ಮಕ್ಕಳು ಜೊತೆಗೂಡಿ ಕಲಿಯುವಂತೆ ಕಾರ್ಯೋನ್ಮುಖರಾಗುವುದು ನಾಗರಿಕ ಸಮಾಜದ ಕರ್ತವ್ಯವಲ್ಲವೇ