Saturday 29 May 2021

ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಎಲ್ಲಿ ಯಾವಾಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಎಲ್ಲಿ ಯಾವಾಗ

 


ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಎಲ್ಲಿ ಯಾವಾಗ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ಎಲ್ಲಿ ಯಾವಾಗ
 - ಡಾ. ಸಿ.ಆರ್.ಚಂದ್ರಶೇಖರ್,

ಓದುವುದರ ಬಗ್ಗೆ ನಿನಗೆ ಅನೇಕ ಪ್ರಶ್ನೆಗಳಿವೆ. ಅನುಮಾಗಳಿವೆ. ಆದರೆ ಏಕಾಗ್ರತೆಯಿಂದ ಓದುವುದೇ ಮುಖ್ಯ. ಮನಸ್ಸು ಸ್ವಭಾವತಃ ಚಂಚಲ. ಪಂಚೇಂದ್ರಿಯಗಳು ಸದಾ ಕೆಲಸ ಮಾಡುತ್ತಿರುತ್ತವೆ. ಕಣ್ಣುಗಳು ದೃಶ್ಯಗಳನ್ನು ನೋಡುತ್ತಿರುತ್ತವೆ ಅಥವಾ ಹಿಂದೆ ನೋಡಿದ ದೃಶ್ಯಗಳನ್ನು ನೆನಪಿಸಿಕೊಳ್ಳುತ್ತವೆ, ಕಿವಿಗಳು ಧ್ವನಿಗಳನ್ನು ಕೇಳುತ್ತವೆ. ಹಿತಮಾತು ಮಧುರವಾದ ಧ್ವನಿಗಳನ್ನು ಕೇಳುತ್ತವೆ. ಚರ್ಮ ಸ್ಪರ್ಷವನ್ನು ಅನುಭವಿಸುತ್ತದೆ. ರುಚಿ ಮತ್ತು ವಾಸನೆಯನ್ನು ನಾಲಿಗೆ ಮತ್ತು ಮೂಗು ನೆನಪಿಸಿಕೊಳ್ಳುತ್ತದೆ. ಜೊತೆಗೆ ಮನಸ್ಸು ಸಿಹಿ ಮತ್ತು ಕಹಿ ಘಟನೆಗಳನ್ನು ನೆನಪಿಗೆ ತಂದುಕೊಳ್ಳುತ್ತಲೇ ಇರುತ್ತದೆ. ನಾಳೆ ಏನಾಗುವುದು, ಒಳ್ಳೆಯ ಘಟನೆಗಳು ನಡೆಯುವುವೋ ಕೆಟ್ಟ ತೊಂದರೆದಾಯಕ ಘಟನೆಗಳು ನಡೆಯುವುವೋ ಎಂದು ಚಿಂತೆ ಮಾಡುತ್ತದೆ. ಓದಿ ಮತ್ತು ಕೇಳಿ ಮಾಹಿತಿಯನ್ನು ಗ್ರಹಿಸಲು ಏಕಾಗ್ರತೆ ಬಹಳ ಮುಖ್ಯ. ಏಕಾಗ್ರತೆ ಇಲ್ಲದೆ ಓದಿದರೆ, ಕೇಳಿದರೆ ಮಾಹಿತಿ ಮಿದುಳನ್ನು ತಲುಪುವುದೇ ಇಲ್ಲ. ತಲುಪಿದರೂ ಅಲ್ಲಿ ದಾಖಲಾಗುವುದೇ ಇಲ್ಲ. ಆದ್ದರಿಂದ ನೀನು ಓದುವಾಗ, ಅಧ್ಯಯನ ಮಾಡುವಾಗ, ತರಗತಿಯಲ್ಲಿ ಪಾಠ ಕೇಳುವಾಗ ಏಕಾಗ್ರಚಿತ್ತನಾಗಿರಬೇಕು. ಓದುವುದು ಅಧ್ಯಯನ ಮಾಡುವುದು ತಪಸ್ಸು ಮಾಡಿದಂತೆ. ಹಿಂದೆ ಯಾರಾದರೂ ರಾಜ, ಋಷಿ ಇತ್ಯಾದಿ ತಪಸ್ಸಿಗೆ ಕುಳಿತರೆ, ತಪಸ್ಸನ್ನು ಭಂಗ ಮಾಡಲು ರಂಭೆ, ಊರ್ವಶಿ, ಮೇನಕೆ, ತಿಲೋತ್ತಮೆಯರು ಬಂದು ನೃತ್ಯ ಮಾಡಿ ಹಾಡು ಹೇಳಿ, ತಮ್ಮ ಒನಪು ವಯ್ಯಾರ ತೋರಿಸಿ, ತಾಪಸಿಯ ತಪಸ್ಸನ್ನು ಭಂಗ ಮಾಡುತ್ತಿದ್ದರಂತೆ. ಈಗ ನಿನ್ನ ತಪಸ್ಸನ್ನು / ಏಕಾಗ್ರತೆಯನ್ನು ಭಂಗ ಮಾಡಲು ಕಾದಿರುವ ಅಪ್ಸರೆಯರೆಂದರೆ: * ಮೊಬೈಲ್ * ಟಿ.ವಿ. * ಇಂಟರ್ನೆಟ್ * ಬೈಕ್ * ಸ್ನೇಹಿತರು. ಆದ್ದರಿಂದ ಓದುವ ಸಮಯ/ಸ್ಥಳದಲ್ಲಿ ಈ ಅಪ್ಸರೆಯರು ಇರದಂತೆ ನೋಡಿಕೋ! ಮೊಬೈಲ್ ಆಫ್ ಮಾಡು. ಟೀವಿ ಇರುವ ಕೊಠಡಿಯಲ್ಲಿ ಓದಲು ಕೂಡಬೇಡ. ಕಂಪ್ಯೂಟರ್ನಲ್ಲಿ ಇಂಟರ್ನೆಟ್ ಆನ್ ಮಾಡಬೇಡ. ಸ್ನೇಹಿತರು ನಿನ್ನನ್ನು ಬಂದು ಕಾಣಬಾರದು!

ಓದುವ ಸಮಯದಲ್ಲಿ ಸ್ಥಳದಲ್ಲಿ(ಯಾವುದೇ ಸಮಯ ಸ್ಥಳವಾದರೂ ಸರಿಯೇ) ನಿನ್ನ ಮನಸ್ಸನ್ನು ಆಕರ್ಷಿಸುವ, ವಿಕರ್ಷಣೆಯನ್ನುಂಟುಮಾಡುವ ವ್ಯಕ್ತಿ, ವಸ್ತು ಇರದಂತೆ ನೋಡಿಕೋ. ಪ್ರಶಾಂತ ಪರಿಸರದ ಜೊತೆಗೆ ನಿನ್ನ ಮನಸ್ಸೂ ಪ್ರಶಾಂತವಾಗಿರಬೇಕು. ಅಂತಹ ಸಮಯ ಸ್ಥಳವನ್ನು ಓದಲು ಆಯ್ಕೆ ಮಾಡಿಕೋ. ನನ್ನನ್ನು ಡಿಸ್ಟರ್ಬ್ ಮಾಡಬೇಡಿ ಎಂದು ಎಲ್ಲರನ್ನೂ ಕೇಳಿಕೋ.

ನಿನಗೆ ಹಿತವಾಗಿರುವ ಯಾವುದೇ ಸಮಯ, ಸ್ಥಳವಾದರೂ ಓಕೆ. * ಸ್ವಲ್ಪ ಹೊತ್ತು ನಿಶ್ಯಬ್ದವಾಗಿ ಓದು. ಸ್ವಲ್ಪ ಹೊತ್ತು ಗಟ್ಟಿಯಾಗಿ ಓದು. * ಪ್ರತಿಯೊಂದು ವಾಕ್ಯವನ್ನೂ ಓದಿ ಅರ್ಥ ಮಾಡಿಕೋ. ಅರ್ಥ ಮಾಡಿಕೊಳ್ಳದೆ ಮುಂದಕ್ಕೆ ಹೋಗಬೇಡ. * ನಿಘಂಟು ಅಥವಾ ಪದಕೋಶವನ್ನಿಟ್ಟುಕೊಂಡು ಕಷ್ಟ ಪದಗಳಿಗೆ ಅರ್ಥ ತಿಳಿ. ಪರಿಕಲ್ಪನೆ(ಕಾನ್ಸೆಪ್ಟ್) ಅರ್ಥವಾಗದಿದ್ದರೆ ಗುರುತು ಹಾಕಿಕೊಂಡು ನಿನ್ನ ಸಹಪಾಠಿಯನ್ನು ಅಥವಾ ಟೀಚರನ್ನು ಕೇಳು.  * ಈಗ ಪುಸ್ತಕ ಮುಚ್ಚಿಟ್ಟು ಓದಿದ್ದನ್ನು ನೆನಪಿಸಿಕೋ. ಚಿಕ್ಕದಾಗಿ ಬುಲೆಟ್ ಪಾಯಿಂಟ್ಸ್ ಹಾಕಿ, ನೋಟ್ಸ್ ಮಾಡು. ಎರಡು ನಿಮಿಷಗಳ ಬ್ರೇಕ್ ನಂತರ ಮತ್ತೆ ಓದು. * ಸಹಪಾಠಿ ಇದ್ದರೆ ಚರ್ಚೆ ಮಾಡು, * ಪ್ರಶ್ನೆಗಳಿಗೆ ಉತ್ತರ ಬರೆಯುವ ಪ್ರಾಕ್ಟೀಸ್ ಮಾಡು. * ಒಂದೇ ವಿಷಯವನ್ನು ದೀರ್ಘವಾಗಿ ಗಂಟೆಗಟ್ಟಲೆ ಓದುವ ಬದಲು, ವಿಷಯವನ್ನು ಬದಲಿಸು. ವಿಜ್ಞಾನವನ್ನು ಓದಿ ನಂತರ ಭಾಷೆಯನ್ನು ಓದು. ಆನಂತರ ಗಣಿತ. ಹೀಗೆ ಮಾಡಿದರೆ ಆಸಕ್ತಿ ಏಕಾಗ್ರತೆ ಉಳಿಯುತ್ತದೆ. * ರಿಲ್ಯಾಕ್ಸ್ ಮಾಡಲು ಸಂಗೀತ ಕೇಳು. ಸ್ವಲ್ಪ ಹೊತ್ತು ಎದ್ದು ಹೊರಗಡೆ ಓಡಾಡು. ಸುಂದರವಾದ ಪ್ರಕೃತಿ ದೃಶ್ಯಗಳಿರುವ ಆಲ್ಬಂ ನೋಡು. * ಎನರ್ಜಿಗಾಗಿ ಹಾಲು, ಮಜ್ಜಿಗೆ, ಹಣ್ಣು, ಸಕ್ಕರೆ ಹಾಕದ ಹಣ್ಣಿನ ರಸವನ್ನು ಮಧ್ಯೆ ಮಧ್ಯೆ ಸೇವಿಸು ಅಥವಾ ನೀರನ್ನು ಕುಡಿ. ಹಸಿ ತರಕಾರಿಯನ್ನು (ಕ್ಯಾರೆಟ್, ಬೀಟ್ರೂಟ್, ಸೌತೇಕಾಯಿ ಟೊಮ್ಯಾಟೋ ಇತ್ಯಾದಿ) ಸೇವಿಸು.* ಮಾತಾಡುವವರು, ನಿದ್ದೆ ಮಾಡುವವರು, ಆಟವಾಡುವವರು ಪಕ್ಕದಲ್ಲಿರದಂತೆ ನೋಡಿಕೋ * ತರಗತಿಗೆ ತಪ್ಪದೇ ಹಾಜರಾಗು ತರಗತಿಗೆ ತಪ್ಪದೇ ಹಾಜರಾಗುವುದರಿಂದ ಅನೇಕ ಅನುಕೂಲಗಳಿವೆ. ಸಹಪಾಠಿಗಳೊಂದಿಗೆ ಕುಳಿತು ಪಾಠ ಕೇಳುವುದು ಒಂದು ಹಿತಕರವಾದ ಅನುಭವ. ಹೆಚ್ಚಿನ ಸಂಖ್ಯೆಯ ಶಿಕ್ಷಕರು ವಿಷಯವನ್ನು ಸರಳೀಕರಿಸಿ ಬೋಧಿಸಬಲ್ಲರು. ಕಲಿಕೆ ಸಾಧ್ಯವಾಗುತ್ತದೆ. ಪ್ರಶ್ನೆಗಳನ್ನು ಕೇಳಲು ಅವಕಾಶವಿರುತ್ತದೆ. ಪರೀಕ್ಷೆಗೆ ಹೇಗೆ ತಯಾರಿ ನಡೆಸಬೇಕು. ಪ್ರಶ್ನೆಗೆ ಹೇಗೆ ಉತ್ತರಿಸಬೇಕೆಂದು ತಿಳಿಯುತ್ತದೆ. ತರಗತಿಯಲ್ಲಿ ನಡೆಯುವ ಉಪನ್ಯಾಸದ ವ್ಯಾಪ್ತಿ ದೊಡ್ಡದು. ವಿಷಯದ ಆಳ ವಿನ್ಯಾಸಗಳನ್ನು ಅರಿಯಲು ಸಾಧ್ಯವಾಗುತ್ತದೆ. ಅದೇ ಕೋಚಿಂಗ್ ಕ್ಲಾಸಿನಲ್ಲಿ ಬೋಧನೆಯು, ಪರೀಕ್ಷೆಗೆ ಬರುವ ಪ್ರಶ್ನೆಗಳು ಮತ್ತು ಉತ್ತರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಕೋಚಿಂಗ್ ಕ್ಲಾಸಿನ ಒಂದೇ ಗುರಿ ಹೆಚ್ಚು ಅಂಕಗಳನ್ನು ಪಡೆಯುವುದು ಹೇಗೆ? ಎನ್ನುವುದು. ವಿಷಯ ಗ್ರಹಿಸುವಿಕೆ ಮತ್ತು ಅರ್ಥ ಅನುಷ್ಠಾನವು ಆಗುವುದು ತರಗತಿಗಳಲ್ಲಿ ಮಾತ್ರ ಎಂಬುದನ್ನು ಅರ್ಥ ಮಾಡಿಕೋ. ಆದ್ದರಿಂದ ತರಗತಿಗಳಿಗೆ ಹಾಜರಾಗಿ ನೋಟ್ಸ್ ಮಾಡಿಕೊಂಡು, ಅಗತ್ಯವಿದ್ದಾಗ ಸೆಲ್ಫ್ ಲರ್ನಿಂಗ್ ಮಾತ್ತು ಕೋಚಿಂಗ್ ಕ್ಲಾಸ್ ಅಟೆಂಡ್ ಮಾಡು. ಮೂರೂ ಸೇರಿದರೆ ನಿನಗೇ ಲಾಭ. ನೀನು ಒಬ್ಬನೇ ಸ್ಟಡಿ ಮಾಡುವುದು(ಸೆಲ್ಫ್ ಸ್ಟಡಿ) ಸಹಪಾಠಿಗಳೊಂದಿಗೆ ಸೇರಿ ಸ್ಟಡಿ ಮಾಡುವುದು * ವಿಶೇಷ ಕೋಚಿಂಗ್ ತರಗತಿಗಳು * ಸ್ಮರಣೆ ತಾಲೀಮು, ಟೆಸ್ಟು, ಪರೀಕ್ಷೆಗಳು ಈ ಎಲ್ಲ ವಿಧಾನಗಳನ್ನು ಬಳಸಿಕೊಂಡು, ಟೈಮ್ ಟೇಬಲ್ ಹಾಕಿಕೊಂಡು ಕ್ರಮಬದ್ಧವಾಗಿ ಸ್ಟಡಿಮಾಡು. ಯಶಸ್ಸು ಗ್ಯಾರೆಂಟಿ

ಎಲ್ಲಿ ಹೇಗೆ ಓದಬಾರದು?
* ಮಲಗುವ ಕೊಠಡಿಯಲ್ಲಿ ಹಾಸಿಗೆಯ ಮೇಲೆ ಕೂತು ಓದಬೇಡ.ಎಲ್ಲಿ ಹೇಗೆ ಓದಬಾರದು?* ಮಲಗುವ ಕೊಠಡಿಯಲ್ಲಿ ಹಾಸಿಗೆಯ ಮೇಲೆ ಕೂತು ಓದಬೇಡ. * ಗಂಟೆಗಟ್ಟಲೇ ಒಂದೇ ವಿಷಯವನ್ನು ಓದಬೇಡ. * ನಡುವೆ ನಡುವೆ ವಿಶ್ರಾಂತಿ ಪಡೆಯದೆ ಆಯಾಸ ಪಟ್ಟುಕೊಂಡು ಓದಬೇಡ. * ಪರೀಕ್ಷೆಯ ಫಲಿತಾಂಶದ ಬಗ್ಗೆ ಚಿಂತೆ ಮಾಡುತ್ತಾ ಓದಬೇಡ. * ಓದಿ ಮನನ ಮಾಡದೇ ಇರಬೇಡ * ಕ್ರಮಬದ್ಧವಾಗಿ ಓದದೇ ಬೇಕಾಬಿಟ್ಟಿ ಓದಬೇಡ. * ಶ್ರದ್ಧೆ ಇಲ್ಲದೇ ಓದಬೇಡ. * ನೋಟ್ಸ್ ಮಾಡಿಕೊಳ್ಳದೇ ಓದಬೇಡ. * ಅನಾರೋಗ್ಯವಿದ್ದಾಗ ಓದಬೇಡ. * ಟೆನ್ಷನ್ ಮಾಡಿಕೊಂಡು ಓದಬೇಡ. * ಎಷ್ಟು ಕಾಲ ಓದಿದೆ ಎನ್ನವುದಕ್ಕಿಂತ ಹೇಗೆ ಓದಿದೆ ಎಂಬುದೇ ಮುಖ್ಯ. * ಹರಟೆ ಹೊಡೆಯುವ, ಬೇರೆ ಬೇರೆ ವಿಚಾರಗಳನ್ನು ಮಾತನಾಡುವ, ನಿನ್ನನ್ನು ಡಿಸ್ಟರ್ಬ್ ಮಾಡುವ ಸಹಪಾಠಿಗಳ ಜೊತೆ ಸೇರಿ ಓದಬೇಡ. * ಓದಬೇಕಾದ ವಿಷಯ ಕಷ್ಟ, ಯಾರಪ್ಪಾ ಇದನ್ನು ಓದೋರು ಎಂದುಕೊಂಡು ಓದಬೇಡ. * ಇತರರೆಲ್ಲ ಆಟವಾಡಿಕೊಂಡು ಮಜವಾಗಿದ್ದಾರೆ. ಓದುವುದು ನನಗೊಂದು ಶಿಕ್ಷೆ ಎಂದುಕೊಂಡು ಓದಬೇಡ. * ನಾನು ಫೇಲಾಗಬಹುದು, ಒಳ್ಳೆಯ ಮಾಕ್ಸರ್್ ಬರುವುದಿಲ್ಲ ಎಂದುಕೊಂಡು ಓದಬೇಡ.

ಭಾಗ-2
ಪರೀಕ್ಷಾ ಭಯಕ್ಕೆ ಸಾಮಾನ್ಯ ಕಾರಣಗಳು
* ಪರೀಕ್ಷೆ ಹತ್ತಿರ ಬರುತ್ತಿದೆ. ಓದಲು ಆಗುತ್ತಿಲ್ಲ ಏಕಾಗ್ರತೆ ಇಲ್ಲ. * ಓದಿದ್ದು ಕಲಿತದ್ದು ನೆನಪಿಗೆ ಬರುತ್ತಿಲ್ಲ, ಮರೆತು ಹೋಗುತ್ತಿದೆ. * ಓದಿದರೆ ಕಣ್ಣುರಿ ಬರುತ್ತಿದೆ. ತಲೆನೋವು ತಲೆ ಭಾರವಾಗುತ್ತಿದೆ. ದಣಿವಾಗುತ್ತಿರುವುದರಿಂದ ಓದಲು ಆಗುತ್ತಿಲ್ಲ. * ಒಂದೆರಡು ವಿಷಯಗಳನ್ನು ಅರ್ಥ ಮಾಡಿಕೊಳ್ಳುವುದು-ಕಲಿಯುವುದು ಕಷ್ಟವೆನಿಸುತ್ತಿದೆ. * ಪರೀಕ್ಷಾ ಸಿದ್ಧತೆಯನ್ನು ಪರೀಕ್ಷೆಗೆ ಓದುವುದನ್ನು ತಡವಾಗಿ ಶುರು ಮಾಡಿದೆ. ಓದುವುದು ಬೆಟ್ಟದಷ್ಟಿದೆ. ಸಮಯ ಬಹಳ ಕಡಿಮೆ ಇದೆ. ಪರೀಕ್ಷೆ ಸಮಯಕ್ಕೆ ಎಲ್ಲವನ್ನೂ ಓದಲು ಆಗುವುದಿಲ್ಲ. * ಬೇರೆಯವರೆಲ್ಲ ಚೆನ್ನಾಗಿ ಓದಿದ್ದಾರೆ. ಚೆನ್ನಾಗಿ ಬರೆದು ಪ್ರ್ಯಾಕ್ಟೀಸ್ ಮಾಡಿದ್ದಾರೆ. ನಾನು ಮಾಡಿಲ್ಲ. * ಈ ಬಾರಿ ಪರೀಕ್ಷೆಯಲ್ಲಿ ಕಷ್ಟಕರವಾದ ಪ್ರಶ್ನೆ ಕೇಳಬಹುದು. * ಈ ಸಲ ಮೌಲ್ಯಮಾಪನ ತುಂಬಾ ಸ್ಟ್ರಿಕ್ಟ್ ಆಗಿರುತ್ತದೆ. *  ಮೌಲ್ಯಮಾಪಕರು ನನ್ನ ಉತ್ತರ ಪತ್ರಿಕೆಗಳನ್ನು ಸರಿಯಾಗಿ ನೋಡುವುದಿಲ್ಲ. ಎರ್ರಾಬಿರ್ರಿ ಅಂಕಗಳನ್ನು ಕೊಡುತ್ತಾರೆ. * ಹಿಂದಿನ ಟೆಸ್ಟ್ ಪರೀಕ್ಷೆಯಲ್ಲಿ ಕಡಿಮೆ ಮಾರ್ಕ್ಸ್ ಬಂದಿತ್ತು * ಈ ಪರೀಕ್ಷೆಯಲ್ಲಿ ಒಳ್ಳೆಯ ಮಾಕ್ಸರ್್ ತೆಗೆಯದಿದ್ದರೆ ವಿದ್ಯಾಭ್ಯಾಸವನ್ನು ಮುಂದುವರಿಸಲು ಮನೆಯವರು ಬಿಡುವುದಿಲ್ಲ. ನನ್ನನ್ನು ಹೀನಾಯವಾಗಿ ಕಾಣುತ್ತಾರೆ. * ನನ್ನ ಅಣ್ಣ/ಅಕ್ಕ ರ್ಯಾಂಕ್ ಹೋಲ್ಡರ್. ಚಿನ್ನದ ಪದಕ ಗಳಿಸಿದ್ದಾರೆ. ನೀನೂ ಗಳಿಸಬೇಕೆಂದು ಮನೆಯವರು ನಿರೀಕ್ಷೆ ಮಾಡಿದ್ದಾರೆ. * ನಾನು ಕೆಲವು ಕ್ಲಾಸ್ಗಳನ್ನು ಅಟೆಂಡ್ ಮಾಡಲಿಲ್ಲ. ಆ ಪಾಠಗಳನ್ನು ಓದಿದಾಗ ಏನೂ ಅರ್ಥವಾಗುವುದಿಲ್ಲ. ಆ ವಿಷಯದ ಬಗ್ಗೆ ಪ್ರಶ್ನೆ ಬಂದರೆ ಕಷ್ಟ. ಫೇಲಾಗುತ್ತೇನೆ. * ನನ್ನ ಆರೋಗ್ಯ ಸರಿ ಇಲ್ಲ. ಬೇಗ ಸುಸ್ತಾಗುತ್ತದೆ. ಯಾವಾಗಲೂ ಮಲಗಿರಬೇಕು, ರೆಸ್ಟ್ ತೆಗೆದುಕೋಬೇಕು ಎನಿಸುತ್ತದೆ. ಕೂತು ಓದಲು ಶಕ್ತಿಯೇ ಇಲ್ಲ. * ನನ್ನ ಹ್ಯಾಂಡ್ರೈಟಿಂಗ್ ಚೆನ್ನಾಗಿಲ್ಲ. ವ್ಯಾಕರಣ ಶುದ್ಧವಾಗಿ ಬರೆಯಲು ಆಗುವುದಿಲ್ಲ. ನೀನು ಈ ರೀತಿ ಬರೆದರೆ ನಿನಗೆ ಮಾರ್ಕ್ಸ್ ಸಿಗುವುದಿಲ್ಲ ಎಂದು ಟೀಚರ್ಸ್ ಹೇಳುತ್ತಾರೆ. * ಪರೀಕ್ಷೆಯಲ್ಲಿ ಕೆಲವರು ಕಾಪಿ ಮಾಡುತ್ತಾರೆ. ಕಾಪಿ ಮಾಡಲು ನನಗೂ ಆಸೆ. ಆದರೆ ಸಿಕ್ಕಿಹಾಕಿಕೊಳ್ಳುವ ಭಯ. ಜೇಬಿನಲ್ಲಿ ಚೀಟಿ ಇರುತ್ತದೆ. ತೆಗೆಯಲು ಹೆದರಿಕೆ. ಯಾರಾದರೂ ಇನ್ವಿಜಿಲೇಟರ್ ಬಂದು ಚೆಕ್ ಮಾಡಿದರೆ, ನನ್ನ ಜೇಬಿನಲ್ಲಿ ಚೀಟಿ ಇರುವುದನ್ನು ಕಂಡುಹಿಡಿದುಬಿಟ್ಟರೆ, ಡಿಬಾರ್ ಮಾಡಿಬಿಡುತ್ತಾರೆ. ಆಗ ಎಷ್ಟೊಂದು ಅವಮಾನ. * ಪರೀಕ್ಷೆಯ ಹಿಂದಿನ ದಿನ ಹೊಟ್ಟೆನೋವು/ತಲೆನೋವು/ ವಾಕರಿಕೆ ವಾಂತಿ ಶುರುವಾಗುತ್ತದೆ. ಶುರುವಾಗಬಹುದು ಎಂದೆನಿಸಿ ಭಯವಾಗುತ್ತದೆ. ಪರೀಕ್ಷಾ ದಿನವೂ ಆಗಬಹುದು ಎನಿಸುತ್ತದೆ. * ನಾನು ಪರೀಕ್ಷೆಗೆ ಕೂರುವುದಿಲ್ಲ ಮುಂದಿನ ಸಲ ಕೂರುತ್ತೇನೆ ಎಂದರೆ, ಅಪ್ಪ ಅಮ್ಮ ಒಪ್ಪುವುದಿಲ್ಲ. ಅವರಿಗೆ ನನ್ನ ಕಷ್ಟ ಗೊತ್ತಾಗುವುದಿಲ್ಲ ಇತ್ಯಾದಿ.

 ಉತ್ತಮ ಕಲಿಕೆ ಮತ್ತು ನೆನಪಿಗೆ ಅಷ್ಟಸೂತ್ರಗಳು:
1ನೇ ಸೂತ್ರ: ಅಧ್ಯಯನ ಮಾಡಲು ನಿರ್ದಿಷ್ಟ ಸಮಯ ಮತ್ತು ಜಾಗವನ್ನು ಆಯ್ಕೆ ಮಾಡಿಕೊಳ್ಳಿ. ಆ ಸಮಯ ಮತ್ತು ಸ್ಥಳದಲ್ಲಿ ಯಾವುದೇ ಆಕರ್ಷಣೆ ಮತ್ತು ವಿಕರ್ಷಣೆ ಇರಬಾರದು. ನೀವು ಪ್ರಶಾಂತವಾಗಿರಬೇಕು. ನಿತ್ಯ ಅದೇ ಜಾಗ ಮತ್ತು ಸಮಯದಲ್ಲಿ ಓದಿ.
2ನೇ ಸೂತ್ರ: ಏಕಾಗ್ರತೆಯಿಂದ ಶ್ರದ್ಧೆಯಿಂದ 30 ರಿಂದ 45 ನಿಮಿಷಗಳ ಕಾಲ ಓದಿ. ಓದಿದ್ದನ್ನು ಅರ್ಥ ಮಾಡಿಕೊಳ್ಳಿ.
3ನೇ ಸೂತ್ರ: ಸಾರಾಂಶ ಅಥವಾ ಮುಖ್ಯಾಂಶವನ್ನು ನೆನಪಿನಿಂದ ಬರೆಯಿರಿ.
4ನೇ ಸೂತ್ರ: ಎರಡು ನಿಮಿಷ ವಿಶ್ರಮಿಸಿ. ಎದ್ದು ಓಡಾಡಿ ಅಥವಾ ಕಣ್ಣು ಮುಚ್ಚಿ ಧ್ಯಾನ ಮಾಡಿ. ದೀರ್ಘವಾಗಿ ಉಸಿರಾಡಿ.
5ನೇ ಸೂತ್ರ: ಮತ್ತೆ ಓದಿ ಆದರೆ ವಿಷಯವನ್ನು ಬದಲಿಸಿ. ಒಂದೇ ವಿಷಯವನ್ನು ಒಂದೇ ಸಮನೆ ದೀರ್ಘಕಾಲ ಓದಬೇಡಿ.
6ನೇ ಸೂತ್ರ: ಸ್ಮರಣೆ: ಓದಿದ್ದನ್ನು ಮತ್ತೆ ಮತ್ತೆ ಸ್ಮರಿಸಿ. ನಿನ್ನೆ ಓದಿದ್ದು, ಹೋದವಾರ ಓದಿದ್ದು, ತಿಂಗಳ ಹಿಂದೆ ಓದಿದ್ದು, ನೆನಪಿಸಿಕೊಳ್ಳಿ. ಮರೆತು ಹೋದದ್ದನ್ನು ಮತ್ತೆ ಓದಿ.
7ನೇ ಸೂತ್ರ: ಪ್ರಶ್ನೆಗಳಿಗೆ ಕಾಲಮಿತಿಯಲ್ಲಿ ಉತ್ತರ ಬರೆಯುವ ಪ್ರಾಕ್ಟೀಸ್ ಮಾಡಿ. ಉತ್ತರಗಳನ್ನು ಹೇಗೆ ಉತ್ತಮಪಡಿಸಬಹುದು ಎಂದು ನಿಮ್ಮ ಅಧ್ಯಾಪಕರನ್ನು ಕೇಳಿ.
8ನೇ ಸೂತ್ರ: ವೇಳೆಗೆ ಸರಿಯಾಗಿ ಆಹಾರವನ್ನು ಸೇವಿಸಿ. ಉಪವಾಸವೂ ಬೇಡ ಫುಲ್ ಮೀಲ್ಸೂ ಬೇಡ. ನಿತ್ಯ ನಿಗದಿತ ಅವಧಿಯಲ್ಲಿ ಆರೇಳು ಗಂಟೆ ನಿದ್ರಿಸಿ. ದಿನದ ನಿದರ್ಿಷ್ಟ ಅವಧಿಯಲ್ಲಿ ಮನರಂಜನಾ ಚಟುವಟಿಕಕೆಗಳಲ್ಲಿ ಭಾಗವಹಿಸಿ (ಸಂಗೀತ, ಕ್ರೀಡೆ, ಇತ್ಯಾದಿ).