Wednesday 19 May 2021

ಗಾಂಧೀಜಿಯವರ ವಿಚಾರಧಾರೆ....!

 ಗಾಂಧೀಜಿಯವರ  ವಿಚಾರಧಾರೆ....!
- ಡಾ. ಸಂಗಮೇಶ ತಮ್ಮನಗೌಡ್ರ,

ಗಾಂಧೀಜಿ ಗ್ರಾಮನೆಲೆಯ ಬದುಕಿನ ಚಿಂತನೆ: ಗುಡಿ ಕೈಗಾರಿಕೆಗಳು ಬದುಕಿದರೆ ಗ್ರಾಮದ ಆರ್ಥಿಕತೆಯು ಚೇತರಿಸಿಕೊಳ್ಳತ್ತದೆ. ಬುಟ್ಟಿ ಹೆಣೆಯುವುದು, ಚಾಪೆ ಹೆಣೆಯುವುದು, ನೂಲುವುದು, ನೇಯುವುದು, ಕಸೂತಿ ಹಾಕುವುದು, ಕುಂಬಾರಿಕೆ, ಕಂಬಾರಿಕೆ, ಚಮ್ಮಾರಿಕೆ ಮುಂತಾದವುಗಳ ಕಸುಬುಗಾರಿಕೆ ನಡೆದಾಗ ಗ್ರಾಮ ಬದುಕು ಅತ್ಯಂತ ಸಮೃದ್ಧ ಸ್ಥಿತಿಯನ್ನು ತಲುಪುತ್ತದೆಂಬ ಚಿಂತನೆಯು ಗಾಂಧೀಜಿಯವರದಾಗಿತ್ತು.

ಪ್ರತಿಯೊಂದು ಜೀವಿಯದೂ ಪರಾವಲಂಬಿ ಬದುಕು ಎಂದ ಗಾಂಧೀಜಿ : ಈ ಬ್ರಹ್ಮಾಂಡದಲ್ಲಿ ವಾಸಿಸುವ ಎಂಬತ್ತಾರು ಲಕ್ಷ ಜೀವರಾಶಿಗಳು ಪರಾವಲಂಬಿಯಾಗಿಯೇ ಜೀವಿಸುತ್ತವೆ. ಒಂದೊಂದು ಜೀವಿಯದು ಒಂದೊಂದು ತರಹದ ವೈವಿಧ್ಯತೆಯನ್ನು ಹೊಂದಿದ ಬದುಕಿನ ಪದ್ಧತಿಯಾಗಿದೆ. ಸ್ವತಂತ್ರ ಸ್ವಾವಲಂಬಿತನವೆಂಬುದು ಬರೀ ಪೊಳ್ಳು ವಿಚಾರವೆಂದು ಗಾಂಧೀಜಿ ಅಭಿಪ್ರಾಯಪಡುತ್ತಾರೆ.

ಈ ಜಗತ್ತಿನಲ್ಲಿ ಯಾವುದು ಶಾಶ್ವತ? ಯಾವುದು ಕ್ಷಣಿಕ? ಎಂದು ಪ್ರಶ್ನಿಸಿದ ಗಾಂಧೀಜಿ : ದೇವರೊಬ್ಬಲ್ಲದೆ ಮತ್ತಾವುದೂ ಶಾಶ್ವತವೆನ್ನಲು ಬರುವಂತಿಲ್ಲ. ದೇವರೊಬ್ಬನೇ ಕೊನೆ-ಮೊದಲು ಇಲ್ಲದವನು. ಅನಂತವಾದುದನ್ನು ಪೂರ್ಣಾರ್ಥದಲ್ಲಿ ಸಂಪೂರ್ಣವಾಗಿ ಅರಿಯಲು ಮಾನವ ಬುದ್ಧಿಗೆ ಅಸಾಧ್ಯ! ಮಾನವ ಬುದ್ಧಿ ಪರಿಮಿತವಾದುದು ಈ ಅರಿವು ಕಾಲಾತೀತ, ದೇಶಾತೀತವಾದುದು. ದೇವರ ನಿಯಮಗಳಾದ ಸತ್ಯ, ಪ್ರೀತಿಗಳು ಸೂಕ್ಷ್ಮಾತಿಸೂಕ್ಷ್ಮ ಅರ್ಥದಲ್ಲೂ ಶಾಶ್ವತ, ಅಪರಿವರ್ತನೀಯ, ಆದುದರಿಂದ ದೇವರೆಂಬುದು ಅನಂತ ಸತ್ಯ.

ಯಾವುದನ್ನು ತಿನ್ನಬೇಕು, ಯಾವುದನ್ನು ಬಿಡಬೇಕೆಂದು ಕಿವಿ ಮಾತು ಹೇಳಿದ ಗಾಂಧೀಜಿ:  ಪ್ರಕೃತಿ ನಮಗೆ ಯಥೇಚ್ಛವಾಗಿ ಸೇಬು, ಖರ್ಜೂರ, ದ್ರಾಕ್ಷಿ, ನಾನಾ ಬಗೆಯ ಫಲಗಳನ್ನು ಕೊಡುತ್ತದೆ. ಆ ಹಣ್ಣನ್ನು ಹಾಗೆಯೇ ತಿನ್ನದೇ ಮನುಷ್ಯ ಅವುಗಳನ್ನು ಹಿಂಡಿ ರಸ ತೆಗದು ಅದನ್ನು ಹುಳಿಯಿಸಿ ಮದ್ಯ, ದ್ರಾಕ್ಷಾರಸಗಳನ್ನು ಮಾಡಿ ಕುಡಿದು ಕೃತ್ರಿಮ ಉಲ್ಲಾಸವನ್ನು ಪಡೆಯುತ್ತಾನೆ. ಇಲ್ಲಿಯೂ ಅಷ್ಟೇ ತನ್ನ ದಾರಿಬಿಟ್ಟು ನಡೆದವರಿಗೆ ಪ್ರಕೃತಿ ತೀವ್ರ ಶಿಕ್ಷೆ ವಿಧಿಸುತ್ತದೆ.

ವ್ಯಕ್ತಿತ್ವ ಎಂದರೇನು? ಎಂಬ ಪ್ರಶ್ನೆಗೆ ಗಾಂಧೀಜಿಯ ಕಿವಿ ಮಾತು: ಮನುಷ್ಯ ಎಂಥವನು ಎಂಬುದು ಅವನು ಹೇಗೆ ಬದುಕುತ್ತಾನೆ ಎಂಬುದನ್ನು ಅವಲಂಬಿಸಿದೆ. ಅಂದರೆ ಮನುಷ್ಯ ತಾನು ಎಂಥವನಾಗಬೇಕೆಂಬುದನ್ನು ತಾನೇ ಇಚ್ಛಿಸಿದ ಹಾಗೆ, ಮನುಷ್ಯನ ಗುಣ ಶಕ್ತಿಗಳು ಅವನ ಬದುಕಿನ ರೀತಿಯಲ್ಲಿ ಪ್ರಕಟವಾಗುತ್ತವೆ. ಅದನ್ನೇ ವ್ಯಕ್ತಿತ್ವ ಎನ್ನುತ್ತೇವೆ. ಮನುಷ್ಯನ ವಿಕಾಸಕ್ಕೆ ಆಧಾರವಾದುದು ಬಾಳು, ಅವನ ಸೃಷ್ಟಿಶಕ್ತಿಯ ಮೂಲಕ ಅವನು ವ್ಯಕ್ತನಾಗುವಂತೆ ಪ್ರಕಟವಾಗುವ ಅವಕಾಶ ಕೊಡುವುದು ಬಾಳು. ಆದುದರಿಂದಲೇ ಮನುಷ್ಯರು ಹೀಗೇ ಬದುಕುತ್ತಾರೆ, ಹೀಗೆ ಬದುಕಬೇಕು ಎಂಬುದು ಮುಖ್ಯ.

ಬಾಳು ರಚನಾಮಯವಾಗಲು ಹೇಗಿರಬೇಕು? ವ್ಯಕ್ತಿಯ ಅಭಿರುಚಿ ಪ್ರಕಟವಾಗಲು ಅವಕಾಶ, ಅನುಕೂಲ ಇರಬೇಕು. ತನ್ನ ಮನೆಯ ಸಾಮಗ್ರಿಗಳನ್ನು ಮನೆಯನ್ನು ರಚಿಸುವ ಕಾರ್ಯ ತನ್ನ ವ್ಯಕ್ತಿತ್ವ ಪ್ರಕಟಣೆಗೆ ಯೋಗ್ಯ ಕ್ಷೇತ್ರವಾಗಿದೆ. ನಮ್ಮ ಚಿಂತೆಯನ್ನು ತಗ್ಗಿಸುವ ನೆಪದಲ್ಲಿ ಭಾರಿ ಉತ್ಪಾದಕರು ಮಾನವ ವ್ಯಕ್ತಿತ್ವವನ್ನು ವೈಶಿಷ್ಟ್ಯವನ್ನು ನಾಶ ಮಾಡುತ್ತಿದ್ದಾರೆ.

ಉತ್ಪಾದಕರ ಸೇವೆ ಗ್ರಾಹಕರಿಗೆ ನ್ಯಾಯವಾಗಿ ಸಿಗಬೇಕು:  ಜೀವನಕ್ಕೆ ವಿಚಾರವಂತಿಕೆ ಕಡಿಮೆಯಾದಷ್ಟು ಮನುಷ್ಯ ಅಯೋಗ್ಯನಾಗುತ್ತಾನೆ. ಆದುದರಿಂದ ಗಿರಾಕಿಯ ಪರ ತಾನೇ ಎಲ್ಲಾ ವಿಚಾರವನ್ನು ಮಾಡುವ ಆಧುನಿಕ ಉತ್ಪಾದಕ ನಿಜವಾಗಿ ಗಿರಾಕಿಯನ್ನು ವಿಚಾರಹೀನನಾಗಿ ಮಾಡುತ್ತಿದ್ದಾನೆ. ತಾಯಿ ಕೂಡ ಮಗುವನು ಅಂಬೆಗಾಲಿಡಲು ಒಂದೆರಡು ಸಲ ಬೀಳಲು ಬಿಡುತ್ತಾಳೆ. ಮಗು ಒಂದು ಸಲವೂ ಬೀಳದಂತೆ ಯಾವಾಗಲೂ ತಾನೇ ಅದನ್ನು ಎತ್ತಿಕೊಂಡು ಓಡಾಡಿದರೆ, ಕೊನೆಗೆ ಆ ಮಗುವಿಗೆ ನೆಟ್ಟಗೆ ನಿಲ್ಲುವ ರೂಢಿಯೇ ಇಲ್ಲದಾಗಿ ಅಂಗವಿಕಲವಾಗುತ್ತದೆ. ಈಗಿನ ಉತ್ಪಾದಕರಿಂದ ಸಮಾಜಕ್ಕೆ ಸಲ್ಲುವ ಸೇವೆ ಇದೇ. ಸೇವೆಯ ಲಾಭ ಗ್ರಾಹಕರಿಗೆ ಸಿಕ್ಕಾಗ ಅದರಿಂದ ಉತ್ಪಾದಕರ ಗೌರವವೂ ಹೆಚ್ಚುತ್ತದೆ.

ಮಾನವ ಜೀವನದ ಅವಶ್ಯಕತೆಗೆ ಒಂದು ಮಿತಿ ಇರಬೇಕು : ದೇಹಕ್ಕೆ ಒಂದು ಸಾಮಾನ್ಯ ಶಾಖದ ಪ್ರಮಾಣ ಇದೆ ; ಅದನ್ನು ಬದಲಿಸಲು ಪ್ರಯತ್ನಿಸುವುದು ವ್ಯರ್ಥ ಎಂದು ವೈದ್ಯರಿಗೆಲ್ಲ ಗೊತ್ತು. ಸಾಮಾನ್ಯ ಪ್ರಮಾಣಕ್ಕಿಂತ ಹೆಚ್ಚಾದರೆ ಜ್ವರಬರುತ್ತದೆ; ಕಡಿಮೆಯಾದರೆ ನಿತ್ರಾಣ, ನೀರಸತೆ ಬರುತ್ತದೆ. ಎರಡಕ್ಕೂ ಸಾವೇ ಕೊನೆ ! ಹೃದಯವು ತನ್ನ ಬಡಿತದ ಗತಿಯನ್ನು ಹೆಚ್ಚಿಸಿದರೆ ರಕ್ತದ ಒತ್ತಡ ಪ್ರಾರಂಭವಾಗುತ್ತದೆ. ಹೀಗೆ ಮಾನವನ ಜೀವನಕ್ಕೆ ಒಂದು ಇತಿ-ಮಿತಿ ಇದೆ. ಅಷ್ಟನ್ನು ಪೂರೈಸಿದರೆ ಬಾಳು ಉತ್ತಮವಾಗಿ ನಡೆಯುತ್ತದೆ.

ದಪ್ಪ ಹಾಸಿಗೆಗಿಂತ ಚಾಪೆ ಉತ್ತಮವೆಂದ ಗಾಂಧೀಜಿ : ನಮ್ಮ ನಾಯಕರು ಮಂತ್ರಿಗಳು ಸರಳ ಜೀವನ ನಡೆಸಿದರೆ ದಪ್ಪ ಚಾಪೆಯ ಮೇಲೆ ಮಲಗಬಹುದು. ಜೊಂಡನ್ನು ಮೂವತ್ತೆರಡಾಗಿ ಸಣ್ಣಗೆ ಸೀಳಿ, ನಡುವೆ ರೇಶಿಮೆಯ ಹಾಸನ್ನು ಹೊಯ್ದರೆ ಮೆತ್ತನೆ ಚಾಪೆಯಾಗುತ್ತದೆ. ಈ ಚಾಪೆಗಳು ದೇಶೀ ಉತ್ಪಾದನೆ. ಹಾಸಿಗೆ ಕ್ವಿಲ್ಟ್ಟುಗಳಿಗಿಂತ ತಂಪು. ಈ ದೇಶಕ್ಕೆ ಬೇಕಾದ್ದು ಉಷ್ಣವಲ್ಲ ತಂಪು. ಅಲ್ಲಲ್ಲಿಯ ಚಾಪೆ ಹೆಣೆಯುವವರಿಗೆ ಇದರಿಂದ ಜೀವನ ನಡೆಯಿತು. ಅವರ ರಚನಾ ಸಾಮಥ್ರ್ಯ ಕೌಶಲಗಳಿಗೆ ಅವಕಾಶವಾಯಿತು. ಅವರ ವ್ಯಕ್ತಿತ್ವ ವಿಕಾಸಕ್ಕೆ ದಾರಿಯಾಯಿತು.

ಬಂಗಾರದ ಗಣಿ ಸುಖ ಒಬ್ಬರಿಗೆ, ದುಡಿತ ಮತ್ತೊಬ್ಬರಿಗೆ : ಬಂಗಾರದ ಗಣಿ ಕೈಗಾರಿಕೆಯಲ್ಲಿ ಬಹಳ ಸುಖ ಐಶ್ವರ್ಯ ಇದೆ ಎಂದು ಎಲ್ಲರೂ ತಿಳಿಯುತ್ತಾರೆ. ಆದರೆ ದುಡಿತವೆಲ್ಲ ಒಂದು ವರ್ಗಕ್ಕೆ, ಸುಖವೆಲ್ಲ ಇನ್ನೊಂದು ವರ್ಗಕ್ಕೆ. ಅದರಿಂದ ಹಿರಣ್ಯಗಭರ್ೆಯಾದ ಬಂಗಾರದ ಜಿಲ್ಲೆ ಎಲ್ಲಕ್ಕಿಂತಲೂ ಬಡಸೀಮೆಯಾಗಿದೆ. ಅಲ್ಲಿಯ ರೈತ ಬಹಳ ಬಡವನಾಗಿದ್ದಾನೆ. ಹಾಲು ಕರೆಯದೆ ಒದ್ದುಕೊಂಡ ಹಸುವನ್ನು ನೇಗಿಲಿಗೆ ಕಟ್ಟುವಷ್ಟು ಕಷ್ಟದಲ್ಲಿದ್ದಾನೆ. ಪ್ರಕೃತಿ ರೂಪಿಸಿದಂತೆ ಕೆಲಸದ ಪೂರ್ಣ ಲಾಭವನ್ನು ಪಡೆಯಬೇಕಾದರೆ ಕೆಲಸ ಪ್ರಕೃತಿಯ ಮೂಲರೂಪದ ಸರಳತೆಗೆ ಅನುಗುಣವಾಗಿರಬೇಕು. ಅದನ್ನು ವ್ಯರ್ಥವಾದ ಚಿಕ್ಕ ಚಿಕ್ಕ ಭಾಗಗಳಾಗಿ ಮಾಡಬಾರದು.

ಬಡತನ ತೊಲಗಿಸುವ ವಿಚಾರ:  ಬಡತನ ತೊಲಗಿಸಬೇಕು ಎಂದು ಪದೇ ಪದೇ ಹೇಳುತ್ತಾರೆ. ಬಡತನ ಎಂದರೇನು ? ನಿಮಗೇನು ಬೇಕೋ ಅದರ ಅಭಾವ. ಜೀವಿಸಲು ಕೆಲವು ಪದಾರ್ಥಗಳ ಅವಶ್ಯಕತೆ ಇದೆ ಅನ್ನ-ಆಹಾರ ಮುಖ್ಯ, ಬಟ್ಟೆಯಿಲ್ಲದಿದ್ದರೂ ಬದುಕಬಹುದು ಆಹಾರವಿಲ್ಲದಿದ್ದರೆ ಬದುಕಲು ಸಾಧ್ಯವೇ ?

ಆಹಾರ ಲೋಪದ ಕೆಲವು ಪದಾರ್ಥಗಳನ್ನು ಬೆಳೆಯಬಾರದೆಂದು ಹೇಳಿದ ಗಾಂಧೀಜಿ: ಹೊಗೆಸೊಪ್ಪು, ಸೆಣಬು, ಕಬ್ಬು, ಮುಂತಾದವು ಎರಡು ರೀತಿ ನಷ್ಟ ಮಾಡುತ್ತವೆ. ಮನುಷ್ಯನಿಗೂ ಆಹಾರ ಕಡಿಮೆ ಮಾಡುತ್ತವೆ. ದನಗಳಿಗೂ ಆಹಾರಲೋಪ ಮಾಡುತ್ತವೆ. ಇವನ್ನು ಬಿಟ್ಟು ಆಹಾರದ ಪೈರನ್ನು ಬೆಳೆದರೆ ದನಕ್ಕೆ ಮೇವು ಆಗುತ್ತದೆ.

ಹಣದ ಬೆಲೆ ಎಲ್ಲರಿಗೂ ಒಂದೇ ರೀತಿ ಇಲ್ಲವೆಂದ ಗಾಂಧೀಜಿ : ಹಣದ ಅರ್ಥವ್ಯವಸ್ಥೆ ನಿಜವಾದ ಬೆಲೆಗಳನ್ನು ತಿಳಿಸದು. ಒಬ್ಬರ ಕೈಯಿಂದ ಒಬ್ಬರಿಗೆ ಸಾಗಿಹೋದಾಗ ಹಣದ ಬೆಲೆ ವ್ಯತ್ಯಾಸವಾಗುತ್ತದೆ. ಬಡವನ ಕೈಯಲ್ಲಿ ಒಂದು ರೂಪಾಯಿ ಇದ್ದರೆ ಅದರ ಬೆಲೆ ಬೇರೆ, ಹಣವಂತನ ಕೈಯಲ್ಲಿದ್ದರೆ ಅದರ ಬೆಲೆಯೇ ಬೇರೆ! ಈ ಬಗೆಯ ಹಸ್ತಾಂತರಗಳು ರಾಷ್ಟ್ರದ ಸಂಪತ್ತನ್ನು ಹೆಚ್ಚಿಸಲೂಬಹುದು, ತಗ್ಗಿಸಲೂಬಹುದು. ಮೇಲೆ ನೋಡಲಿಕ್ಕೆ ರೂಪಾಯಿ ರೂಪಾಯಿಯೇ, ಆದರೆ ವ್ಯವಹಾರದಲ್ಲಿ ವಾಸ್ತವವಾಗಿ ಹಾಗಲ್ಲ, ಒಬ್ಬ ಬಡವನ ಕೈಯಲ್ಲಿ ಒಂದು ರೂಪಾಯಿ ಇದ್ದರೆ 4-5 ದಿನದ ಅನ್ನವಾಯಿತು. ಒಬ್ಬ ಭಾಗ್ಯವಂತನ ಕೈಯಲ್ಲಿದ್ದರೆ ಅದರ ಯೋಗ್ಯತೆ ಒಂದು ಚುಟ್ಟಾ ಆಗುತ್ತದೆ.

ಬಂಡವಾಳಗಾರರು ಮನುಷ್ಯನ ಮೈಯಿಂದ ರಕ್ತ ಹೀರುವ ಪಿಚಕಾರಿ ಇದ್ದಂತೆ : ಮನುಷ್ಯನ ಮೈಯಿಂದ ರಕ್ತವನ್ನು ತೆಗೆದುಕೊಳ್ಳಲು ಒಂದು ಬಗೆಯ ಪಿಚಕಾರಿ; ಅದಕ್ಕೊಂದು ಸೂಜಿ ಇರುತ್ತವೆ. ಪಾಶ್ಚಾತ್ಯ ಸೀಮೆಗಳ ಬ್ಯಾಂಕು-ಲೇವಾದೇವಿ ಪದ್ಧತಿ, ಉತ್ಪಾದಕರ ಮೈಯಿಂದ ಪ್ರಾಣವನ್ನೇ ಹೀರುವ ಪಿಚಕಾರಿ ಸೂಜಿ ಇದ್ದಂತೆ. ಬಂಡವಾಳಗಾರರು ಅದನ್ನು ಉಪಯೋಗಿಸುತ್ತಾರೆ. 1943ರಲ್ಲಿ ಬಂಗಾಳದಲ್ಲಿ ಭೀಕರ ಕ್ಷಾಮ ಬಡಿದು ಮೂವತ್ತು ಲಕ್ಷ ಜನ ಸತ್ತರು. ಅದು ರಿಜ಼ರ್ವ್ ಬ್ಯಾಂಕಿನ ಅಧಿಕಾರದ ದುರುಪಯೋಗದ ಫಲ. ಸಾರ್ವಜನಿಕರ ಹಣ, ರಾಷ್ಟ್ರದ ಹಣ, ಆ ಬ್ಯಾಂಕಿನಲ್ಲಿ ಇರುತ್ತದೆ. ಹಣವನ್ನು ವಿನಿಮಯದ ಸಾಧನವಾಗಿ ಅಥವಾ ಕ್ರಯಶಕ್ತಿಯ ಮುಡುಪಾಗಿ ಬಳಸಿದರೆ ಆಗ ಅದು ತನ್ನ ಕೆಲಸವನ್ನು ಸರಿಯಾಗಿ ಮಾಡುತ್ತದೆ. ಹಾಗಾಗದಿದ್ದರೆ ಅದು ಜನೋಪಯೋಗಿಯಲ್ಲವೆಂದು ಗಾಂಧೀಜಿ ಹೇಳುತ್ತಾರೆ.

ಹಳ್ಳಿಗಳ ಹೊಲಸನ್ನು ಕಾಂಪೋಸ್ಟ್ ಗೊಬ್ಬರ ಮಾಡಿರೆಂದ ಗಾಂಧೀಜಿ :
ಹಳ್ಳಿಯ ಕಸ-ಹೊಲಸು, ಮೂಳೆ, ಮಲ-ಮೂತ್ರ ಎಲ್ಲವೂ ಈಗ ಹಳ್ಳಿಗೆ ಅನಾರೋಗ್ಯಕರವಾಗಿವೆ. ಅದೆಲ್ಲವನ್ನು ಕಂಪೋಸ್ಟ್ ಮಾಡಿ ಗೊಬ್ಬರವಾಗಿ ಬಳಸಬಹುದು. ದನದ ಗೊಬ್ಬರದಷ್ಟೇ ಒಳ್ಳೆಯ ಗೊಬ್ಬರವಿದು. ಇದನ್ನು ಬಹಳ ಸುಲಭವಾಗಿ ಮಾಡಬಹುದು, ಸಾಧಾರಣವಾಗಿ ಮೂಳೆಗಳನ್ನು ಗಾಣದ ಹಿಂಡಿಯನ್ನು ದೇಶದಿಂದ ಹೊರಗೆ ಸಾಗಿಸುತ್ತಾರೆ. ಅದನ್ನು ಹಳ್ಳಿಗಳಿಂದ ಹೊರಗೆ ಸಾಗದ ಹಾಗೆ ನೋಡಿಕೊಳ್ಳಬೇಕು. ಮೂಳೆಗಳನ್ನು ಹಳ್ಳಿಗಳಲ್ಲಿಯೇ ಪುಡಿಮಾಡಬೇಕು. ಅವನ್ನು ಸುಣ್ಣದ ಭಟ್ಟಿಗಳಲ್ಲಿ ಸ್ವಲ್ಪ ಸುಟ್ಟು ಗಾಣಕ್ಕೆ ಹಾಕಿ ತಿರುವಿದರೆ ಸಾಕು. ಆ ಪುಡಿಯನ್ನು ರೈತರಿಗೆ ಹಂಚಬೇಕು. ಊರಿನ ಕಸ ಹೊಲಸನ್ನು ಗೊಬ್ಬರ ಮಾಡಲು ಯಾರಿಗಾದರೂ ಗುತ್ತಿಗೆ ಕೊಡಬಹುದು. ಮೊದಮೊದಲು ಆ ಗುತ್ತಿಗೆದಾರರಿಗೆ ಸಹಾಯ ಧನವನ್ನು ಕೊಡಬಹುದು. ಆ ಊರು ಚೊಕ್ಕಟವಾಯಿತು. ಕಸಗುಡಿಸುವವರ ಮರ್ಯಾದೆ ಹೆಚ್ಚಾಯಿತು. ಗೊಬ್ಬರ ಮಾಡಿ ಮಾರುವ ಅಂತಸ್ತಿಗೆ ಅವರು ಬಂದರು.

ಹೊಸದಾಗಿ ನಿರ್ಮಿಸುವ ಹಳ್ಳಿ ಹೇಗಿರಬೇಕು?  ... ಊರನ್ನು ಬೆಳೆಸುವಾಗ, ವಾಸದ ಮನೆಗಳಿಗೆ ದೂರವಾಗಿ ಗೋಶಾಲೆಯನ್ನು ಕಟ್ಟಬೇಕು. ಗ್ರಾಮ ನೈರ್ಮಲ್ಯ ದೃಷ್ಟಿಯಿಂದ ಕೆಲವರು ಊರಿಗೆಲ್ಲ ಒಂದೇ ನಂದಿಶಾಲೆ, ಗೋಶಾಲೆ ಇರಲಿ, ಒಬ್ಬೊಬ್ಬರ ಮನೆಯಲ್ಲಿ ಪ್ರತ್ಯೇಕವಾಗಿ ಇರುವುದು ಬೇಡ. ನೈರ್ಮಲ್ಯವೇ ಅಲ್ಲಿ ಪ್ರಧಾನವಾಗಲಿ.

ಬಡತನವಿರುವ ದೇಶವು ಹೀಗಿರಬೇಕು, ಗಾಂಧೀಜಿ...
ಬಡತನವಿರುವ ದೇಶದಲ್ಲಿ ಮೊಟ್ಟಮೊದಲು ಎಲ್ಲರಿಗೂ ಅನ್ನ, ಬಟ್ಟೆ ಬೇಕು. ಆದುದರಿಂದ ನಮ್ಮ ಸಮಸ್ಯೆಗೆ ಉತ್ತರವು ಬೇಸಾಯದಲ್ಲಿದೆ. ಜನರ ದೇಶಭಕ್ತಿಯನ್ನು ಪ್ರಚೋದಿಸಬೇಕಾಗಿಲ್ಲ. ಜನರ ಶ್ರಮಶಕ್ತಿಗೆ ಒಂದು ಅವಕಾಶ ಮಾಡಿಕೊಡಬೇಕು. ಪ್ರತಿಯೊಬ್ಬರಿಗೂ ಅನ್ನ, ಬಟ್ಟೆ ಒದಗಿಸಲೇಬೇಕು.

ಎಲ್ಲಾ ಹಳ್ಳಿಗಳಿಗೂ ನೀರಾವರಿ ಅಗತ್ಯವೆಂದ ಗಾಂಧೀಜಿ : ಪ್ರತಿಯೊಂದು ಹಳ್ಳಿಗಳಿಗೂ ನೀರಾವರಿಯ ಅನುಕೂಲತೆ ಬೇಕು. ಇದನ್ನು ಎಷ್ಟು ಒತ್ತಿ ಹೇಳಿದರೂ ಕಡಿಮೆಯೇ ! ಕೃಷಿಯ ಪ್ರಗತಿಗೆ ಇದೇ ಆಧಾರ. ಇದರ ಹೊರತು ಕೃಷಿ ಬರೀ ಜೂಜಾಟ. ಭಾವಿಗಳನ್ನು ತೋಡಿಸುವುದು, ಕೆರೆಗಳನ್ನು ಆಳ, ಅಗಲ ತೋಡುವುದು ಮುಂತಾದ ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು. ಭತ್ತದ ಗಿರಣಿ, ಹಿಟ್ಟಿನ ಗಿರಣಿಗಳಲ್ಲಿರುವ ಇಂಜಿನ್ಗಳನ್ನು ಸರಕಾರ ತೆಗೆದುಕೊಂಡು ಕೊಳವೆ ಬಾವಿ, ಸುರಂಗ ಬಾವಿಗಳಿಂದ ನೀರೆತ್ತಲು ಉಪಯೋಗಿಸಬಹುದು. ನೀರಿನ ಅನುಕೂಲವಿಲ್ಲದೇ ಗೊಬ್ಬರ ಹಾಕಿದರೆ ಪ್ರಯೋಜನವಿಲ್ಲ. ನೀರಿಲ್ಲದಿದ್ದರೆ ಗೊಬ್ಬರದಿಂದ ಅಪಾಯವಾಗುತ್ತದೆ.

ಹಳ್ಳಿಗರಿಗೆ ಶಿಕ್ಷಣ ಮುಖ್ಯವೆಂದ ಗಾಂಧೀಜಿ : ನಮ್ಮ ಪ್ರಯತ್ನಗಳೆಲ್ಲ ಹಳ್ಳಿಗಳಲ್ಲಿ ನಡೆಯಬೇಕು. ವಿಶ್ವವಿದ್ಯಾನಿಲಯದ ಶಿಕ್ಷಣವನ್ನು ನಾಲ್ಕು ವರ್ಷ ಕೈಬಿಟ್ಟರೂ ರಾಷ್ಟ್ರಕ್ಕೇನೂ ನಷ್ಟವಾಗದು ! ಈಗಲೇ ನಮಗೆ ತಲೆ ಭಾರವಾಗಿದೆ. ಬೇಕಾದುದಕ್ಕಿಂತ ಹೆಚ್ಚು ಜನ ಪದವೀಧರರಿದ್ದಾರೆ. ಇವರು ಪಡೆದ ಶಿಕ್ಷಣ ನಮಗೆ ಅಗತ್ಯವಾದುದಲ್ಲ. ಆದುದರಿಂದ ಇವರು ನಿರುದ್ಯೋಗಿಗಳಾಗಿ ಕುಳಿತಿದ್ದಾರೆ. ಇಲ್ಲದಿದ್ದರೆ ಇವರಿಗೆ ಮಾಡಲು ಕೆಲಸ ಸಿಗುತ್ತಿರಲಿಲ್ಲವೇ ? ನಮ್ಮ ಹಳ್ಳಿಗಳು ಹೆಚ್ಚು ಸಮರ್ಥವೂ, ಪ್ರಯೋಜನಕರವೂ ಆಗುವಂತೆ ಮಾಡಬೇಕಿದೆ.

ಯಾಂತ್ರಿಕ ಶಿಕ್ಷಣಕ್ಕಿಂತ ಪ್ರಾಯೋಗಿಕ ಶಿಕ್ಷಣ ಮುಖ್ಯವೆಂದ ಗಾಂಧೀಜಿ :
ಬರೀ ಅಕ್ಷರ ಜ್ಞಾನವೇ ಮುಖ್ಯವಲ್ಲ. ಆದುದರಿಂದ ಶಿಕ್ಷಣಕ್ಕೆ ಮೊದಲಿಟ್ಟ ಗಳಿಗೆಯಿಂದಲೂ ಏನಾದರೂ ಉತ್ಪತ್ತಿ ಮಾಡುವಂತೆ ಮಗುವಿಗೆ ಒಂದು ಕೈಗಾರಿಕೆಯನ್ನು ಕಲಿಸುವುದೇ ನಾಂದಿ ! ಪ್ರತಿಯೊಂದು ಪಾಠಶಾಲೆಯೂ ಸ್ವಾವಲಂಬಿಯಾಗಬೇಕು. ಅಲ್ಲಿ ಉತ್ಪತ್ತಿಯಾದುದನ್ನು ಸರಕಾರ ತೆಗೆದುಕೊಳ್ಳಬೇಕು. ಈಗ ಕಲಿಸುವಂತೆ ಯಾಂತ್ರಿಕವಾಗಿ ಕೈಗಾರಿಕೆಯನ್ನು ಕಲಿಸಬಾರದು. ಶಾಸ್ತ್ರೀಯವಾಗಿ ಕಲಿಸಬೇಕು. ಕೆಲಸಗಾರರಿಗೆ ನೂಲುವ ಶಿಕ್ಷಣ ಕೊಡುವಲೆಲ್ಲ ಈ ಪದ್ಧತಿಯನ್ನೇ ಅನುಸರಿಸುತ್ತಿದ್ದಾರೆ. ಈ ಪ್ರಕಾರ ನಾನೇ ಮೆಟ್ಟು ಹೊಲಿಯುವುದನ್ನೂ, ನೂಲುವುದನ್ನೂ ಕಲಿಸಿದ್ದೇನೆ. ಒಳ್ಳೆಯ ಫಲ ಬಂದಿದೆ.

ನೂಲುವುದು ಬಣ್ಣ ಹಾಕುವುದು, ನೇಯುವುದು, ಚಾಪೆ ಬುಟ್ಟಿ ಹೆಣೆಯುವುದು, ಗಡಿಗೆ ಮಾಡುವುದು, ಚಪ್ಪಲಿ ಹೊಲಿಯುವುದು, ಮರಗೆಲಸ, ಹಿತ್ತಾಳೆ ತಾಮ್ರದ ಕೆಲಸ, ಕಾಗದ ಮಾಡುವುದು, ಬೆಲ್ಲ ಮಾಡುವುದು, ಎಣ್ಣೆ ಗಾಣವಾಡುವುದು, ಜೇನು ಸಾಕಣಿ ಮುಂತಾದವುಗಳನ್ನು ಕಲಿಸಿದರೆ ಉತ್ಪನ್ನವಾದ ಪದಾರ್ಥಗಳನ್ನು ಮಾರುವ ಸಮಸ್ಯೆಯೂ ಹೆಚ್ಚಾಗಿ ಇರದು. ಈ ಪ್ರಾರಂಭದ ಶಿಕ್ಷಣಕ್ಕಾಗಿ ಸರಕಾರ ಹಣವನ್ನು ಒದಗಿಸಬೇಕು.

ಉನ್ನತ ಶಿಕ್ಷಣ (ಕಾಲೇಜು) ವೆಚ್ಚವನ್ನು ತಾನೇ ನಿರ್ವಹಿಸಬೇಕೆಂದು ಹೇಳಿದ ಗಾಂಧೀಜಿ: ಕಾಲೇಜು ಉನ್ನತ ಶಿಕ್ಷಣ ಪ್ರಸಾರದ ವಿಚಾರದಲ್ಲಿ ಸರಕಾರದ ಅವಲಂಬಿಯಾಗದೇ ತನ್ನ ವೆಚ್ಚವನ್ನು ತಾನೇ ನಿರ್ವಹಿಸಬೇಕು. ತನ್ನ ಹೊಲದಿಂದ ತಾನು ನಿರ್ವಹಿಸಲಾರದ ವ್ಯವಸಾಯ ಕಾಲೇಜು ವ್ಯರ್ಥ. ಅದರ ಹೆಸರಿಗೇ ಕಳಂಕ! ಎಲ್ಲ ವೃತ್ತಿ ಶಿಕ್ಷಣ ಶಾಲಾ ಕಾಲೇಜುಗಳೂ ಯಂತ್ರ ವಿಜ್ಞಾನ ಶಾಲೆಗಳೂ ಅಷ್ಟೇ ತಮ್ಮ ವೆಚ್ಚವನ್ನು ತಾವೇ ಗಳಿಸಬೇಕು ಎಂದು ಗಾಂಧೀಜಿ ಶೈಕ್ಷಣಿಕ ಪುರೋಭಿವೃದ್ಧಿ ಚಿಂತನೆ ನಡೆಸಿದ್ದಾರೆ.

ಹಳ್ಳಿಗಳಲ್ಲಿ ಶೌಚಾಲಯವಿಲ್ಲದ್ದರ ಬಗ್ಗೆ ಕೊರಗಿದ ಗಾಂಧೀಜಿ : ನಮ್ಮ ಹಳ್ಳಿಯ ಜೀವನದಲ್ಲಿ ಶೌಚಾಲಯಗಳದ್ದೇ ಬಹುದೊಡ್ಡ ಅಭಾವ. ಓಣಿ, ಓಣಿ, ಬಯಲು, ಕೆರೀ-ಯೇರಿ ಎಲ್ಲವೂ ಶೌಚ ಸ್ಥಳಗಳೇ ಆಗಿವೆ. ಜನರು ಓಡಾಡುವ ಸ್ಥಳ ಎಂಬುದನ್ನೂ ಲಕ್ಷಿಸದೇ ಹಳ್ಳಿಯ ಜನ ಎಲ್ಲೆಂದರಲ್ಲಿ ವಿವೇಕವಿಲ್ಲದೆ ಶೌಚ ಮಾಡುತ್ತಾರೆ. ಕುಡಿಯುವ ನೀರನ್ನೂ ಹೊಲಸು ಮಾಡುತ್ತಾರೆ. ಆದರೆ ಈ ತಪ್ಪೆಲ್ಲವೂ ಗ್ರಾಮಸ್ಥರದೇ ಅಲ್ಲ. ಹಳ್ಳಿಗಳಲ್ಲಿ ಮೂತ್ರಿಗಳೂ ಇಲ್ಲ. ಶೌಚಕೂಪಗಳೂ ಇಲ್ಲ, ಮನೆಗಳೆಲ್ಲ ಚಿಕ್ಕವಾಗಿ ಇಂತಹ ಸೌಕರ್ಯಗಳಿಗೆ ಸ್ಥಳವಿಲ್ಲದಂತೆ ಒತ್ತಾಗಿರುತ್ತವೆ. ಆದುದರಿಂದ ಸಾಮೂಹಿಕವಾದ ಮೂತ್ರಿಗಳನ್ನು ಶೌಚಕೂಪಗಳನ್ನೂ ಸ್ನಾನ ಗೃಹಗಳನ್ನೂ ಕಟ್ಟುವುದು, ಸರಿಯಾಗಿ ನೋಡಿಕೊಳ್ಳುವುದು ಅತ್ಯಗತ್ಯ. ಊರಿನ ಕಸ, ಮಲಮೂತ್ರ ಎಲ್ಲವನ್ನೂ ಗೊಬ್ಬರ ಮಾಡುವ ಒಂದು ವ್ಯವಸ್ಥೆಯ ಯೋಜನೆ ಬೇಕು. ನೈರ್ಮಲ್ಯ ದೃಷ್ಟಿಯಿಂದಲೂ ಗ್ರಾಮದ ಆರ್ಥಿಕ ವ್ಯವಸ್ಥೆಯ ದೃಷ್ಟಿಯಿಂದಲೂ ಇಂತಹ ಕ್ರಮ ಅತ್ಯಗತ್ಯ ಎಂದು ಗಾಂಧೀಜಿ ಹೇಳುತ್ತಾರೆ.

ಗಾಂಧೀಜಿ ಮಾನವ ಕಲ್ಯಾಣದ ಶಾಶ್ವತ ಚಿಂತಕ : ಮಹಾತ್ಮ ಗಾಂಧೀಜಿ ಮಾನವ ಕಲ್ಯಾಣದ ಶಾಶ್ವತ ಹಿತಚಿಂತನವನ್ನು ಬಯಸುವ ಅಪರೂಪದ ಮಾನವತಾವಾದಿಯಾಗಿದ್ದಾರೆ. ಸಮಸ್ತ ಮಾನವ, ಪಶುಪಕ್ಷಿಗಳೆಲ್ಲವೂ ಸಂತೃಪ್ತ ಜೀವನ ನಡೆಸಬೇಕೆಂಬ ತುಡಿತವನ್ನು ಸದಾ ಹೊಂದಿದ್ದರು. ಆತ್ಮಕಲ್ಯಾಣದ ಕನಸುಗಾರನಾದ ಗಾಂಧೀಜಿ ಒಳ್ಳೆಯದನ್ನೇ ಸದಾ ಚಿಂತಿಸಿದರು! ಹೀಗಾಗಿ ಗಾಂಧೀಜಿಯ ವೈಚಾರಿಕತೆಗೆ ಸರ್ವಕಾಲಕ್ಕೂ ಬೆಲೆ ಇದೆ!! ಮಾನವ ಉದ್ಧಾರವೇ ಲೋಕೋದ್ಧಾರಎಂದು ಗಾಂಧೀಜಿ ಸದಾ ಧ್ಯಾನಿಸಿದರು !!! ವ್ಯಸನಮುಕ್ತ ಸಮಾಜ ನಮ್ಮದಾಗಬೇಕೆಂಬ ಸದಾಕಾಲ ಹಪಾಹಪಿಯಲ್ಲಿ ಜೀವ ತೇದರು. ಇಂತಹ ಗಾಂಧೀಜಿ ನಮ್ಮವರೆಂಬುದೇ ನಮ್ಮ ಹಿರಿಮೆಯಾಗಿದೆ! ಗಾಂಧೀಜಿಯ ಲೋಕೋತ್ತರ ಸಾರ್ಥಕ ಆಸೆಗಳೆಲ್ಲವೂ ಈಡೇರಲೆಂದು ನಾವೆಲ್ಲರೂ ಬಯಸೋಣ !!