Saturday 15 May 2021

ಅಂತರ್ಜಾಲ: ವರ ಮತ್ತು ಶಾಪ



 ಅಂತರ್ಜಾಲ: ವರ ಮತ್ತು ಶಾಪ
 - ವಸುಂಧರಾ ಭೂಪತಿ,

ಇದು ಕಂಪ್ಯೂಟರ್ ಮತ್ತು ಇಂಟನರ್ೆಟ್ ಯುಗ. ಇದರಿಂದ ಜ್ಞಾನ ಮತ್ತು ಮಾಹಿತಿ ಅಗಾಧ ಸ್ಫೋಟವೇ ಆಗುತ್ತಿದೆ. ಹಿಂದೆಂದಿಗಿಂತಲೂ ಹೆಚ್ಚು ಬೇಗ ಪ್ರಪಂಚದ ಯಾವುದೇ ಭಾಗದಲ್ಲಿರುವವರನ್ನು ಕ್ಷಣಮಾತ್ರದಲ್ಲಿಯೇ ಇಂಟರ್ನೆಟ್ ಮೂಲಕ ಸಂಪರ್ಕಿಸಬಹುದು. ಇದು ಕಂಪ್ಯೂಟರ್ ಮತ್ತು ಅಂತರ್ಜಾಲವನ್ನು ಶಿಕ್ಷಣ, ಜ್ಞಾನ, ಸಂಪರ್ಕ, ಇ-ವಾಣಿಜ್ಯ ಮುಂತಾದ ಉಪಯುಕ್ತ ವಿಷಯಗಳಿಗೆ ಬಳಸುವ ತನಕ ಇವೆರಡೂ ವರಗಳೇ. ಇದಕ್ಕೆ ಬದಲಾಗಿ ಆಶ್ಲೀಲ ಚಿತ್ರ ವೀಕ್ಷಣೆ ಮತ್ತು ಸೈಬರ್ ಅಪರಾಧದಲ್ಲಿ ತೊಡಗಿಕೊಳ್ಳುವುದು ಶಾಪ. ಅಂತರ್ಜಾಲದ ಮೂಲಕ ಅಪರಿಚಿತರೊಂದಿಗೆ ಚ್ಯಾಟ್ ಮಾಡಿ ಸ್ನೇಹ ಮಾಡಿ ಸಂಬಂಧ ಬೆಳೆಸುವ ಅಪಾಯಗಳೂ ಉಂಟು.

ಕಂಪ್ಯೂಟರ್ನಲ್ಲಿ ಗೇಮ್ಸ್ ಅಡುವ ಚಟ ಮತ್ತು ಇಂಟನರ್ೆಟ್ ವೀಕ್ಷಣೆ ಹೆಚ್ಚಾದಷ್ಟು ಅವು ವ್ಯಸನವಾಗುವ ಸಂಭವವೇ ಹೆಚ್ಚು. ಇದರಿಂದ ಮಕ್ಕಳು ಸಮಯದ ಸದುಪಯೋಗ ಪಡೆದುಕೊಳ್ಳುವುದು ಸಾಧ್ಯವಿಲ್ಲ. ಸಮಯವಿದೆ ಎಂದರೆ ಕಂಪ್ಯೂಟರ್ ಮುಂದೆ ಕೂರುತ್ತಾರೆ. ಇದೇ ಚಾಳಿಯಾಗಿ ಅವರು ಕಂಪ್ಯೂಟರ್ನಿಂದ ದೂರವಿರುವುದು ಅಸಾಧ್ಯ ಎನ್ನಿಸಬಹುದು. ಅಪ್ಪ, ಅಮ್ಮನಿಗೆ ಯಾಕಾದರೂ ತಾವು ಕಂಪ್ಯೂಟರ್ ಕೊಂಡು ಅಂತರ್ಜಾಲ ಸಂಪರ್ಕ ಪಡೆದುಕೊಂಡೆವು ಎಂದು ಅನ್ನಿಸುವುದು ಸಹಜ. ಇಂತಹುದೇ ಮತ್ತೊಂದು ಚಾಳಿ ಎಂದರೆ ಮೊಬೈಲ್ ಫೋನ್. ಅಪ್ಪ, ಅಮ್ಮನ ಮೊಬೈಲ್ ಫೋನಿನಲ್ಲಿ ಆಟವಾಡುವುದು ಮಕ್ಕಳಿಗೆ ಬಹಳ ಇಷ್ಟ. ಸಮಯ ಸಿಕ್ಕಾಗಲೆಲ್ಲಾ ಅಪ್ಪನ ಮೊಬೈಲ್ನಲ್ಲಿ ಆಟವಾಡುವುದೇ ಅವರ ಕೆಲಸ. ಇತ್ತೀಚೆಗಂತೂ ಮೊಬೈಲ್ ಫೋನಿನಲ್ಲಿಯೇ ಅಂತರ್ಜಾಲದ ಸಂಪರ್ಕ ಸಿಗುತ್ತದೆ. ಅದರಲ್ಲಿಯೇ ಅವರು ಆಟವಾಡುತ್ತಾರೆ. ಮೊದಮೊದಲಿಗೆ ಮಕ್ಕಳು ಆಡಿಕೊಳ್ಳಲಿ ಬಿಡಿ ಎಂದು ಸಲುಗೆಯಿಂದ ಕೊಡಬಹುದು. ಆದರೆ ಇದನ್ನೇ ಮಕ್ಕಳು ಉಪಯೋಗಿಸಿಕೊಂಡು ಸಮಯ ಸಿಕ್ಕಾಗಲೆಲ್ಲಾ ಅದನ್ನು ತೆಗೆದುಕೊಂಡು ಆಡುವುದಕ್ಕೆ ಹೆಚ್ಚು ಉತ್ತೇಜನ ನೀಡಬಾರದು. ಇದೆಲ್ಲಾ ಒಳ್ಳೆಯದಲ್ಲ ಎಂದು ಅವರಿಗೆ ತಿಳಿಹೇಳಬೇಕು.

ಆದ್ದರಿಂದ ತಂದೆತಾಯಿ ಕಂಪ್ಯೂಟರ್ ಮತ್ತು ಅಂತರ್ಜಾಲ ಬಳಸಿ ಮಕ್ಕಳು ತೊಡಗುವ ಚಟುವಟಿಕೆಗಳ ಮೇಲೆ ಒಂದು ಕಣ್ಣಿಟ್ಟಿರಬೇಕು. ತಜ್ಞರ ಪ್ರಕಾರ ಯಾರೇ ಆದರೂ ಕಂಪ್ಯೂಟರ್ ತೆರೆಯ ಮುಂದೆ ಒಮ್ಮೆಗೆ 45 ನಿಮಿಷಗಳಿಗಿಂತ ಹೆಚ್ಚು ಕಾಲ ಕುಳಿತಿರಬಾರದು. ಇದು ಕಂಪ್ಯೂಟರ್ ಬಳಸಿ ಕೆಲಸ ಮಾಡುವವರಿಗೂ ಅನ್ವಯಿಸುತ್ತದೆ. ಕಂಪ್ಯೂಟರ್ನಿಂದ ಹೊರಬರುವ ಬೆಳಕಿನ ಕಿರಣಗಳು ನೇರವಾಗಿ ಕಣ್ಣಿಗೆ ತಾಗಿ ಅಪಾಯವನ್ನುಂಟುಮಾಡುತ್ತವೆ. ಕಂಪ್ಯೂಟರ್ನ ಅನವಶ್ಯಕ ಬಳಕೆ ಸಮಯವನ್ನು ಕೊಲ್ಲುತ್ತದೆ. ಅದೇ ಸಮಯವನ್ನು ಮಕ್ಕಳು ಇತರ ಉಪಯೋಗಿ ಕಾರ್ಯಗಳು - ಅಂದರೆ ಓದುವುದು, ಬರೆಯುವುದು, ಹೊರಗೆ ಸ್ನೇಹಿತರೊಂದಿಗೆ ಆಟ, ಅಪ್ಪ, ಅಮ್ಮನಿಗೆ ಮನೆಯ ಕೆಲಸಗಳಲ್ಲಿ ಸಹಾಯ ಮಾಡುವುದು, ತಮ್ಮ ಕೊಠಡಿಯನ್ನು ಸ್ವಚ್ಛವಾಗಿಟ್ಟುಕೊಳ್ಳುವುದು - ಹೀಗೆ ನಾನಾ ಕಾರ್ಯಗಳಿಗೆ ಬಳಸಿಕೊಳ್ಳುವುದು. ಮನೆಯಲ್ಲಿ ಅಂತರ್ಜಾಲದ ಸಂಪರ್ಕ ಪಡೆದಿದ್ದರೆ ಮಕ್ಕಳು ಆಕ್ಷೇಪಾರ್ಹ ಜಾಲತಾಣಗಳನ್ನು ವೀಕ್ಷಿಸದಂತೆ ಫಿಲ್ಟರ್ಗಳನ್ನು ಹಾಕಿಸಿಕೊಳ್ಳುವುದು ಒಳಿತು. ಪ್ರೌಢಶಾಲೆಯಲ್ಲಿ ಓದುತ್ತಿರುವ ಮಕ್ಕಳನ್ನು ಅಪ್ಪ, ಅಮ್ಮ ಅವರ ಕೆಲಸಗಳನ್ನು ಸ್ವತಂತ್ರವಾಗಿ ಮಾಡಿಕೊಳ್ಳಲು ಹೇಳಿಕೊಡಬೇಕು. ವಯಸ್ಕ ಜೀವನಕ್ಕೆ ಅವರನ್ನು ಆಗಿನಿಂದಲೇ ತಯಾರು ಮಾಡಬೇಕು. ಹೊರಜಗತ್ತಿನಲ್ಲಿ ಹೇಗೆ ಉತ್ತಮವಾಗಿ ನಡೆದುಕೊಳ್ಳಬೇಕು ಎಂಬುದನ್ನು ತಿಳಿಸಬೇಕು. ಅವರ ಬಗ್ಗೆ ಕಾಳಜಿ ವಹಿಸಿ ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವುದು ತಮ್ಮ ಕರ್ತವ್ಯ ಎಂದು ಅಪ್ಪ, ಅಮ್ಮ ಅರಿತು ನಡೆದುಕೊಳ್ಳಬೇಕು.  

ದುಶ್ಚಟಗಳು ಮತ್ತು ಅಪರಾಧಿ ವರ್ತನೆ :
ಹದಿಹರೆಯಕ್ಕೆ ಬಂದ ಪ್ರತಿಯೊಬ್ಬರು ತಮ್ಮದೇ ಆದ ವ್ಯಕ್ತಿತ್ವವನ್ನು ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಾರೆ. ಅ ವ್ಯಕ್ತಿತ್ವ ತಮ್ಮ ಅಪ್ಪ, ಅಮ್ಮನ ವ್ಯಕ್ತಿತ್ವಕ್ಕಿಂತ ಭಿನ್ನವಾಗಿರಬೇಕೆಂದು ಬಯಸುವುದು ಸಹಜ. ಕೆಲವೊಮ್ಮೆ ತಮ್ಮ ವ್ಯಕ್ತಿತ್ವವೇ ಭಿನ್ನ ಎಂದು ತೋರಿಸಿಕೊಳ್ಳುವ ಭರದಲ್ಲಿ ಅವರು ಅಪರಾಧಿ ವರ್ತನೆಯನ್ನು ತೋರುವುದು ಉಂಟು. ಸ್ನೇಹಿತರ ಗುಂಪಿನಲ್ಲಿ ಕೆಲವರು ಯಾವುದೇ ನೀತಿನಿಯಮಗಳನ್ನು ಪಾಲಿಸದೇ ತಮಗಿಷ್ಟ ಬಂದಹಾಗೆ ನಡೆದುಕೊಳ್ಳುವುದು ಉಂಟು. ಆಗ ಇತರರು ಅವರಿಂದ ಕಲಿತು ಹಾಗೆಯೇ ಆಡಬಹುದು. ಆಗ ಅವರಿಗೆ ಸಮಾಜದ ರೀತಿನೀತಿಗಳಿಗಿಂತ ಗುಂಪಿನ ನಿಯಮಗಳನ್ನು ಪಾಲಿಸುವುದೇ ಮುಖ್ಯವಾಗುತ್ತದೆ. ಇಂತಹ ಸಮಯದಲ್ಲಿಯೇ ಕೆಟ್ಟ ಸಹವಾಸ ಮತ್ತು ದುಶ್ಚಟಗಳು ಆರಂಭವಾಗುವುದು. ಮಕ್ಕಳು ಸ್ನೇಹಿತರಲ್ಲಿ ಕೆಲವರು ಸಿಗರೇಟ್ ಸೇದಿದರು, ಮದ್ಯ ಮತ್ತು ಮಾದಕವಸ್ತುಗಳನ್ನು ಸೇವಿಸಿದರು ಎಂದು ತಾವೂ ಅವುಗಳನ್ನು ಸೇವಿಸಬಹುದು. ತಾವೂ ಆ ಗುಂಪಿನಲ್ಲಿ ಎಲ್ಲರಂತೆ ಎಂದು ತೋರಿಸಿಕೊಳ್ಳಲು ಹೀಗೆ ಮಾಡಬಹುದು ಅಥವಾ ಹಾಗೆ ತಾವು ಇರದಿದ್ದರೆ ಸ್ನೇಹಿತರನ್ನು ಕಳೆದುಕೊಳ್ಳಬಹುದು ಎಂದು ಆತಂಕಪಟ್ಟು ಅವರು ನಡೆದುಕೊಳ್ಳುವ ಹಾಗೆಯೇ ನಡೆದುಕೊಳ್ಳಬಹುದು. ಹೀಗೆಯೇ ಅವರಲ್ಲಿ ದುಶ್ಚಟಗಳು ಆರಂಭವಾಗುತ್ತವೆ.

ಹದಿವಯಸ್ಸಿನ ಮಕ್ಕಳು ಇನ್ನು ವಯಸ್ಕರಾಗಿರುವುದಿಲ್ಲ. ಅವರ ವರ್ತನೆ ಮತ್ತು ದುಶ್ಚಟಗಳ ಪರಿಣಾಮಗಳನ್ನು ಸರಿಯಾಗಿ ತಿಳಿದುಕೊಂಡಿರುವುದಿಲ್ಲ. ಇನ್ನೂ ಅಪ್ರಾಪ್ತ ವಯಸ್ಸಿನಾಗಿರುವುದರಿಂದ ಎಲ್ಲಾ ವಿಷಯಗಳನ್ನು ಅರ್ಥಮಾಡಿಕೊಳ್ಳುವ ಸಾಮಥ್ಯ ಅಷ್ಟಾಗಿ ಬೆಳೆದಿರುವುದಿಲ್ಲ. ಅವರು ಕಾನೂನಿಗೆ ವಿರುದ್ಧವಾಗಿ ವರ್ತನೆ ತೋರಿದರೆ ಬಾಲಾಪರಾಧಿಗಳು ಎನ್ನಿಸಿಕೊಳ್ಳುತ್ತಾರೆ. ಇಂತಹ ವರ್ತನೆ ಎಂದಿಗೂ ಯಾರಿಗೂ ಒಳ್ಳೆಯದಲ್ಲ. ಮಕ್ಕಳು ಅನೇಕ ಕಾರಣಗಳಿಗೆ ಅಪರಾಧಗಳನ್ನು ಮಾಡಬಹುದು. ಸ್ನೇಹಿತರ ಗುಂಪಿನಲ್ಲಿ ಎಲ್ಲರೂ ಮಾಡುವ ತಾವು ಮಾಡದಿದ್ದರೆ ತಮ್ಮನ್ನು ಬೇರೆ ಎಂದು ಕಾಣುತ್ತಾರೆ, ಗುಂಪಿನಿಂದ ಹೊರಹಾಕುತ್ತಾರೆ ಎಂಬ ಕಾರಣಕ್ಕಾಗಿ ಮಾಡಬಹುದು ಅಥವಾ ಸ್ನೇಹಿತರ ಒತ್ತಡಗಳಿಗೆ ಒಳಗಾಗಿ ಅಥವಾ ರೇಗಿಸುತ್ತಾರೆ ಅಥವಾ ತಾವೇನು ಮಾಡಬಲ್ಲೆವು ಎಂದು ತೋರಿಸಲು ಅಪರಾಧವೆಸಗಬಹುದು.

ಹಿಂದೆಲ್ಲಾ ಬಾಲಾಪರಾಧಿಗಳು ಕೇವಲ ಮಹಾನಗರಗಳಲ್ಲಿ ಮತ್ತು ಬಡತನ ಹೆಚ್ಚಾಗಿರುವ ಸ್ಥಳಗಳಲ್ಲಿ ಮಾತ್ರ ಕಂಡುಬರುತ್ತಾರೆ ಎಂದು ನಂಬಲಾಗಿತ್ತು. ಆದರೆ ಇಂದು ಪರಿಸ್ಥಿತಿ ಬದಲಾಗಿದೆ. ಮಧ್ಯಮ ಮತ್ತು ಶ್ರೀಮಂತ ಕುಟುಂಬಗಳಲ್ಲಿ ಬಾಲಾಪರಾಧಗಳು ಕಂಡುಬರುತ್ತಿವೆ. ಈ ಬಗ್ಗೆ ಮಾಧ್ಯಮಗಳಲ್ಲಿ ದಿನನಿತ್ಯ ವರದಿಗಳು ಬರುತ್ತಿರುವುದನ್ನು ಕಾಣಬಹುದು. ಅತಿಯಾದ ಐಷಾರಾಮಿ ಸೌಲಭ್ಯಗಳು, ಸುಖ ಮತ್ತು ತಾವು ಹೀರೋ ಎಂದು ತೋರಿಸಿಕೊಳ್ಳಲು ಹದಿಹರೆಯದ ಮಕ್ಕಳು ಅಪರಾಧಿ ವರ್ತನೆಯನ್ನು ತೋರಿಸುವುದು ಹೆಚ್ಚಾಗಿದೆ. ಸ್ನೇಹಿತರ ಗುಂಪಿನಲ್ಲಿ ಯಾರಾದರೂ ತಮ್ಮ ಬಳಿ ದುಬಾರಿ ಮೊಬೈಲ್ ಫೋನ್ ಅಥವಾ ಇನ್ಯಾವುದೇ ಬೆಲೆಬಾಳುವ ವಸ್ತು ಇದೆ ಎಂದು ಇತರರ ಮುಂದೆ ಪ್ರದರ್ಶನ ಮಾಡಿದರೆ ಅವರಿಗೆ ಅಂತಹ ವಸ್ತುಗಳು ತಮಗೆ ಬೇಕು ಎನ್ನಿಸುವುದು ಸಹಜ. ಇದಕ್ಕಾಗಿ ಸ್ನೇಹಿತರಿಂದ ಆ ವಸ್ತುಗಳನ್ನು ಅಥವಾ ಮನೆಯಲ್ಲಿ ಅವುಗಳನ್ನು ಕೊಳ್ಳಲು ಹಣವನ್ನು ಕದಿಯಬಹುದು. ಅಂಗಡಿಗಳಲ್ಲಿ ಮಾರಾಟಕ್ಕಿಟ್ಟಿರುವ ವಸ್ತುಗಳನ್ನು ಕದಿಯಬಹುದು. ಪಿಕ್ಪಾಕೆಟ್ ಮಾಡಬಹುದು.

ಉದಾಹರಣೆಗೆ ಒಂದು ಸ್ನೇಹಿತರ ಗುಂಪು ಎಲ್ಲರ ಬಳಿಯಲ್ಲೂ ಆಡಿದಾಸ್ ಷೂಸ್ ಇರದಿದ್ದರೆ ಹೀರೋ ಆಗಿರಲು ಸಾಧ್ಯವಿಲ್ಲ ಎಂದು ಅಂದುಕೊಳ್ಳಬಹುದು. ಆಡಿದಾಸ್ ಷೂಗಳು ದುಬಾರಿ. ಮಕ್ಕಳು ಅಪ್ಪ, ಅಮ್ಮನನ್ನು ಆ ಷೂಗಳೇ ಬೇಕೆಂದು ಹಠ ಹಿಡಿದು ಕೇಳಬಹುದು. ಅಪ್ಪ, ಅಮ್ಮ ಅಷ್ಟು ದುಬಾರಿ ಷೂಗಳು ಬೇಡ ಬೇರೆ ಷೂಗಳನ್ನು ಕೊಡಿಸುತ್ತೇವೆಂದು ಹೇಳಿದಾಗ ಮಕ್ಕಳು ಅವುಗಳನ್ನು ಕೊಳ್ಳಲು ಯಾವುದಾದರೂ ಮಾರ್ಗದಲ್ಲಿ ಹಣ ಪಡೆಯಲು ಪ್ರಯತ್ನಿಸಬಹುದು. ತಾವು ಆಡಿದಾಸ್ ಷೂಗಳನ್ನು ಖರೀದಿಸಿ ಹಾಕಿಕೊಂಡು ಗುಂಪಿನಲ್ಲಿ ಸೇರಿಕೊಳ್ಳಬೇಕೆಂಬ ತುಡಿತ ಅವರನ್ನು ಹಣ ಕದಿಯಲು ಪ್ರೇರೇಪಿಸಬಹುದು.

ಮಹಾನಗರಗಳಲ್ಲಿ ವರದಿಯಾಗುವ ಸಣ್ಣಪುಟ್ಟ ಅಪರಾಧಗಳಲ್ಲಿ ಪೋಲಿಸರ ಅಂಕಿಅಂಶಗಳ ಪ್ರಕಾರ ಶೇಕಡಾ 70ರಷ್ಟು ಪ್ರಕರಣಗಳಲ್ಲಿ ಹದಿಹರೆಯದವರು ಮತ್ತು ಯುವಜನರೇ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ಇವರೆಲ್ಲಾ ಮಧ್ಯಮ ಮತ್ತು ಶ್ರೀಮಂತ ಕುಟುಂಬಗಳಿಗೆ ಸೇರಿದವರು. ಪುನರ್ವಸತಿ ಕೇಂದ್ರಗಳಲ್ಲಿ ಇರುವ ಹದಿಹರೆಯದ ಯುವಕರು ಆಧುನಿಕ ಬದುಕಿನ ಐಷಾರಾಮಿ ಸೌಲಭ್ಯಗಳನ್ನು ಪಡೆಯಲು ಹೋಗಿ ದಾರಿ ತಪ್ಪಿದವರೇ ಆಗಿದ್ದಾರೆ.

ಮಕ್ಕಳಲ್ಲಿ ಅಪರಾಧಿ ವರ್ತನೆಯು ಸಾಮಾನ್ಯವಾಗಿ ಕೆಳಕಂಡ ರೂಪಗಳಲ್ಲಿ ಕಂಡುಬರುತ್ತದೆ:
* ಧೂಮಪಾನ * ಮದ್ಯಪಾನ ಮತ್ತು ಮದ್ಯಪಾನ ಮಾಡಿ ವಾಹನ ಓಡಿಸುವುದು * ಮಾದಕ ವ್ಯಸನ * ಲೈಂಗಿಕ ಚಟುವಟಿಕೆ, ಅತಿಯಾದ ಲೈಂಗಿಕತೆ, ಅಸುರಕ್ಷಿತ ಲೈಂಗಿಕತೆ ಮತ್ತು ಬೇಡದ ಗರ್ಭಧಾರಣೆ * ಕೆಟ್ಟ, ನಿಂದನೀಯ ವರ್ತನೆಗಳು  * ಅಸಹನೆ * ಕೋಪದ ಸ್ವಭಾವ * ಇತರರಿಗೆ, ಹಿರಿಯರಿಗೆ ಮತ್ತು ಸಮಾಜದ ಬಗ್ಗೆ ಅಗೌರವ * ಕಾನೂನು ಮತ್ತು ನಿಯಮಗಳನ್ನು ಮುರಿಯುವುದು.

ಧೂಮಪಾನ : ಸಾಮಾನ್ಯವಾಗಿ ಹದಿಹರೆಯದವರಲ್ಲಿ ಕಂಡುಬರುವ ಸಮಸ್ಯೆ ಧೂಮಪಾನ. ಸಿಗರೇಟ್ ಸೇದುವುದರಿಂದ ತಾವು ದೊಡ್ಡವರು ಹೀರೋ ಮತ್ತು ಮ್ಯಾಶೋ ಎಂದು ಬಿಂಬಿಸಿಕೊಳ್ಳಬಹುದು ಎಂಬುದು ಅವರ ಭಾವನೆ. ಹಲವಾರು ಸಂದರ್ಭಗಳಲ್ಲಿ ಇದು ಸ್ನೇಹಿತರ ಸಹವಾಸ ಅಥವಾ ಒತ್ತಾಯದಿಂದ ಆರಂಭವಾಗುತ್ತದೆ. ಇರಲಿ, ಒಂದು ದಮ್ ಎಳೆದು ನೋಡೋ, ನಿನಗೆ ಗೊತ್ತಾಗತ್ತೆ ಸಿಗರೇಟಿನ ಮಜಾ ಏನು ಎಂದು, ಎಂಬ ಸ್ನೇಹಿತರ ಒತ್ತಡಕ್ಕೆ ಸಿಲುಕಿ ಹದಿಹರೆಯದಲ್ಲಿ ಹುಡುಗರು ಸಿಗರೇಟಿನ ಚಟಕ್ಕೆ ಬೀಳುತ್ತಾರೆ. ಮನೆಯಲ್ಲಿ ಕೊಡುವ ಪಾಕೆಟ್ಮನಿ ಅಥವಾ ಸುಳ್ಳು ಹೇಳಿ ಹಣ ತೆಗೆದುಕೊಂಡು ಧೂಮಪಾನ ಮತ್ತು ಮದ್ಯಪಾನ ಮಾಡುತ್ತಿರುವುದೂ ಇಂದು ಕಂಡುಬಂದಿದೆ. ಹುಡುಗಿಯರೂ ಈ ಇಂತಹ ಚಟಗಳಿಗೆ ಬಿದ್ದಿರುವುದು ಆತಂಕಕಾರಿ ಬೆಳವಣಿಗೆ.

ಮನೆಯಲ್ಲಿ ಅಪ್ಪ, ಅಮ್ಮ ಇಬ್ಬರೂ ಧೂಮಪಾನಿಗಳಾಗಿದ್ದರೆ ಮಕ್ಕಳು ಧೂಮಪಾನವನ್ನು ರೂಢಿಸಿಕೊಳ್ಳುವ ಸಂಭವ ಹೆಚ್ಚು. ಇಂತಹ ಸಂದರ್ಭಗಳಲ್ಲಿ ಅವರು ಧೂಮಪಾನವನ್ನು ಕೆಟ್ಟದು ಎಂದು ಪರಿಗಣಿಸುವುದಿಲ್ಲ. ಅಪ್ಪ, ಅಮ್ಮ ಧೂಮಪಾನ ಮಾಡುತ್ತಿರುವುದರಿಂದ ಮಕ್ಕಳು ಇದನ್ನು ಹಗುರವಾಗಿ ತೆಗೆದುಕೊಳ್ಳುತ್ತಾರೆ. ಆಗ ಅಪ್ಪ, ಅಮ್ಮನಿಗೆ ಧೂಮಪಾನ ಕೆಟ್ಟದು ಎಂದು ತಿಳಿಹೇಳಲು ಕಷ್ಟವಾಗುತ್ತದೆ. ಧೂಮಪಾನದಿಂದ ಮಕ್ಕಳನ್ನು ದೂರವಿಡಲು ಬಯಸಿದರೆ ಮೊದಲು ಅಪ್ಪ, ಅಮ್ಮ ಧೂಮಪಾನವನ್ನು ತ್ಯಜಿಸಬೇಕು. ಅದೇ ಅವರಿಗೆ ಉದಾಹರಣೆಯಾಗಬೇಕು. ಕೆಟ್ಟ ಚಟಗಳಿಗಿಂತ ಚೆನ್ನಾಗಿ ಓದಿ ಸಾಧನೆ ಮಾಡುವುದು ಮುಖ್ಯ ಎಂದು ಹೇಳಬೇಕು.

ಮಕ್ಕಳು ಹಲವಾರು ಬಾರಿ ಎಚ್ಚರಿಕೆ ನೀಡಿದರೂ ಧೂಮಪಾನವನ್ನು ಬಿಡದಿದ್ದರೆ ಆಗ ವೃತ್ತಿಪರರ ಸಹಾಯವನ್ನು ಪಡೆಯಬೇಕು. ಅವರಿಗೆ ಶಾಲೆಯಲ್ಲಾಗಲೀ, ಮನೋವೈದ್ಯರಿಂದಾಗಲೀ ಅಥವಾ ಮನ:ಶಾಸ್ತ್ರಜ್ಞರಿಂದಾಗಲೀ ಆಪ್ತಸಲಹೆ ಕೊಡಿಸಬೇಕು. ಅವರು ಅಪ್ಪ, ಅಮ್ಮನಿಗಿಂತ ಪರಿಣಾಮಕಾರಿಯಾಗಿ ಮಕ್ಕಳನ್ನು ವಿಚಾರಿಸಿ ಸಲಹೆ ನೀಡುತ್ತಾರೆ. ಆಗ ಮಕ್ಕಳು ಧೂಮಪಾನವನ್ನು ಬಿಡಲು ಸಹಾಯವಾಗುತ್ತದೆ.

ಧೂಮಪಾನದಲ್ಲಿ ತೊಡಗುವುದು ಸುಲಭ. ಆದರೆ ಅದನ್ನು ಬಿಡುವುದು ಕಷ್ಟ. ಇದಕ್ಕೆ ಸಾಕಷ್ಟು ಮಾನಸಿಕ ದೃಢತೆ ಮತ್ತು ಇಚ್ಛಾಶಕ್ತಿಗಳು ಬೇಕು. ಎಲ್ಲಕ್ಕಿಂತ ಮುಖ್ಯವಾಗಿ ಸಮಯ ಬೇಕು. ಕುಟುಂಬ ಮತ್ತು ಸ್ನೇಹಿತರು ಧೂಮಪಾನವನ್ನು ಬಿಡಲು ಮಕ್ಕಳಿಗೆ ಸಹಕರಿಸಬೇಕು. ಆದ್ದರಿಂದ ಮಕ್ಕಳು ಧೂಮಪಾನದ ಚಟಕ್ಕೆ ಬೀಳದಂತೆ ಮೊದಲೇ ಎಚ್ಚರಿಕೆಯನ್ನು ವಹಿಸಬೇಕು.

ಮದ್ಯಪಾನ:  ಮದ್ಯಪಾನ ಇಂದು ಸಮಾಜದಲ್ಲಿ ವ್ಯಾಪಕವಾಗಿ ಹರಡಿದೆ. ಮದ್ಯಪಾನ ಮಾಡದವರು ಎಲ್ಲರಂತಲ್ಲ ಅವರು ಹಳೆಯಕಾಲದವರು ಮತ್ತು ಸಂಕುಚಿತ ಮನೋಭಾವದವರು ಎಂದು ಅನೇಕರು ಪರಿಗಣಿಸುತ್ತಾರೆ. ಕೆಲವೊಮ್ಮೆ ಮದ್ಯಪಾನ ಮಾಡುವ ಸಂದರ್ಭಗಳು ಬಂದಾಗ ಹುಡುಗರಿಗೆ ಅದು ರುಚಿಸದಿದ್ದರೂ ಸ್ನೇಹಿತರೆದುರು ಬೇಡ ಎಂದು ಹೇಳಲು ಮುಜುಗರವಾಗುತ್ತದೆ. ಧೈರ್ಯ ಇರುವುದಿಲ್ಲ. ಸ್ನೇಹಿತರೊಂದಿಗೆ ಮನೆಯ ಪರಿಸರವೂ ಈ ಋಣಾತ್ಮಕ ಹವ್ಯಾಸವನ್ನು ರೂಢಿಸಿಕೊಳ್ಳಲು ಪಾತ್ರ ವಹಿಸುತ್ತದೆ. ಅಪ್ಪ, ಅಮ್ಮನಿಗೆ ಅಥವಾ ಸಂಬಂಧಿಕರಿಗೆ ಮದ್ಯಪಾನದ ಹವ್ಯಾಸವಿದ್ದರೆ ಮಕ್ಕಳು ಅದನ್ನು ಕಲಿಯುತ್ತಾರೆ. ಮದ್ಯಪಾನದ ಅಭ್ಯಾಸವೇ ಇರದ ಕುಟುಂಬಗಳ ಮಕ್ಕಳು ಕುಡಿಯುವ ಸಂದರ್ಭ ಬಂದಾಗ ಎರಡೆರಡು ಬಾರಿ ಯೋಚಿಸುತ್ತಾರೆ. ಇಂತಹ ವಿಷಯಗಳಲ್ಲಿ ಅಪ್ಪ, ಅಮ್ಮ ಮಕ್ಕಳನ್ನು ಸಾಕಷ್ಟು ಪ್ರಭಾವಿಸುತ್ತಾರೆ. ಅಪ್ಪ, ಅಮ್ಮನಿಗೆ ಇಂತಹ ಹವ್ಯಾಸಗಳು ಇಲ್ಲದಿದ್ದರೆ ಮಕ್ಕಳು ಇದನ್ನು ರೂಢಿಸಿಕೊಳ್ಳುವುದಿಲ್ಲ. ಮನೆಯವರು ಇದನ್ನು ಒಪ್ಪುವುದಿಲ್ಲ ಎಂದು ಅವರಿಗೆ ಚೆನ್ನಾಗಿ ಗೊತ್ತಿರುತ್ತದೆ. ಒಂದೊಮ್ಮೆ ಮದ್ಯಪಾನ ಮಾಡುವ ಸಂದರ್ಭ ಬಂದಾಗ ಹೆಚ್ಚು ಪೆಗ್ ಕುಡಿಯಲು ಒಪ್ಪುವುದಿಲ್ಲ. ಇದೆಲ್ಲಾ ಅಪ್ಪ, ಅಮ್ಮನಿಗೆ ಗೊತ್ತಾದರೆ ಕೋಪಮಾಡಿಕೊಳ್ಳುತ್ತಾರೆ ಎಂಬ ಯೋಚನೆ ಮನಸ್ಸಿನಲ್ಲಿ ಸುಳಿಯುತ್ತಿರುತ್ತದೆ.

ಮದ್ಯಪಾನ ಮಾಡಿ ವಾಹನ ಓಡಿಸುವುದು ಆಧುನಿಕ ಸಮಾಜದಲ್ಲಿ ದಿನೇ ದಿನೇ ಹೆಚ್ಚಾಗುತ್ತಿದೆ. ಅನೇಕ ಕುಟುಂಬಗಳು ಇಂದು ಕಾರುಗಳನ್ನು ಖರೀದಿಸಿವೆ. ರಾತ್ರಿ ತಡಹೊತ್ತಿನ ತನಕ ಪಾಟರ್ಿ ಮಾಡುವುದು ಇಂದು ಮಹಾನಗರಗಳಲ್ಲಿ ಸಾಮಾನ್ಯ ಸಂಗತಿಯಾಗಿದೆ. ಹದಿಹರೆಯದವರು ಇಂತಹ ಪಾರ್ಟಿಗಳಲ್ಲಿ ಭಾಗವಹಿಸಿ ಮದ್ಯಪಾನ ಮಾಡಿ ಕಾರುಗಳನ್ನು ಓಡಿಸುತ್ತಾರೆ. ಪಾರ್ಟಿಗಳಲ್ಲಿ ಕುಡಿದು ಬೈಕ್ಗಳಲ್ಲಿ ಮನೆಗೆ ವಾಪಸಾಗುವುದು ಉಂಟು. ಜೊತೆಗೆ ಇಂದು ಆಲ್ಕೋಹಾಲ್ ಬಹಳ ಸುಲಭವಾಗಿ ದೊರಕುತ್ತದೆ. ಕುಡಿದು ಹಾಳಾಗಲು ಅವಕಾಶಗಳು ಹೆಚ್ಚಿವೆ. ಹೋಲಿ, ದೀಪಾವಳಿ, ಕ್ರಿಸ್ಮಸ್ ಮತ್ತು ಹೊಸ ವರ್ಷದ ಸಂದರ್ಭಗಳಲ್ಲಿ ಕುಡಿದ ಮತ್ತಿನಲ್ಲಿ ವಾಹನಗಳನ್ನು ಓಡಿಸುವುದು ಸಾಮಾನ್ಯವಾಗಿಬಿಟ್ಟಿದೆ. ಮತ್ತಿನಲ್ಲಿ ಯುವತಿರೊಂದಿಗೆ ಅಸಭ್ಯ ವರ್ತನೆ, ಅಪಘಾತ ಮತ್ತು ಮಾನಭಂಗದಂತಹ ಗಂಭೀರ ಅಪರಾಧ ಚಟುವಟಿಕೆಗಳಲ್ಲಿ ಭಾಗಿಯಾಗುವುದು ಉಂಟು. ಕುಡಿದ ಮತ್ತಿನಲ್ಲಿ ವಾಹನ ಓಡಿಸುವುದು ಇತರ ವಾಹನ ಚಾಲಕರಿಗೆ, ಪಾದಚಾರಿಗಳಿಗೆ ಮತ್ತು ಎಲ್ಲಕ್ಕಿಂತ ಮುಖ್ಯವಾಗಿ ಸ್ವತ: ಕುಡಿದವರಿಗೆ ಅಪಾಯಕಾರಿ.

ತಂದೆತಾಯಿ ಮಕ್ಕಳಿಗೆ ಇಂತಹ ದುರಭ್ಯಾಸಗಳಿಂದ ದೂರ ಇರಲು ಹೇಳಬೇಕು. ಅದರ ದುಷ್ಟರಿಣಾಮಗಳನ್ನು ಅವರು ತಿಳಿದುಕೊಳ್ಳುವಂತೆ ಮಾಡಬೇಕು. ಒಮ್ಮೆ ತಪ್ಪು ಮಾಡಿದರೂ ಮತ್ತೊಮ್ಮೆ ತಪ್ಪು ಮಾಡಬಾರದು ಎಂದು ತಿಳಿಹೇಳಬೇಕು. ಮದ್ಯಪಾನ ಮೊದಮೊದಲು ಹಗುರ ಅಭ್ಯಾಸವೆಂದು ಆರಂಭಿಸದರೂ ಅದು ಕ್ರಮೇಣ ಗಂಭೀರ ದುರಭ್ಯಾಸವಾಗುತ್ತದೆ. ಇದರ ಬಗ್ಗೆ ಎಚ್ಚರಿಕೆಯನ್ನು ವಹಿಸಬೇಕು. ಅತಿಯಾದ ಮದ್ಯಪಾನ ಲಿವರ್ ಕ್ಯಾನ್ಸರ್ ಸೇರಿದಂತೆ ಅನೇಕ ರೋಗಗಳಿಗೆ ಕಾರಣವಾಗುತ್ತದೆ ಎಂದು ಅರ್ಥಮಾಡಿಸಬೇಕು. ಯಾರೂ ಇನ್ನೊಬ್ಬರನ್ನು ಮದ್ಯಪಾನ ಮಾಡುವಂತೆ ಒತ್ತಾಯ ಮಾಡಬಾರದು. ಕುಡಿಯುವುದನ್ನು ಯಾವಾಗ ಬೇಕಾದರೂ ಬಿಡಬಹುದು ಎಂದು ಅಂದುಕೊಳ್ಳುವುದು ಬಹಳ ತಪ್ಪು. ಒಮ್ಮೆ ಕುಡಿತದ ಚಟಕ್ಕೆ ಬಿದ್ದರೆ ಅದರಿಂದ ಹೊರಬರುವುದು ಕಷ್ಟ. ಧೂಮಪಾನದಂತೆಯೇ ಇದನ್ನು ಬಿಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ.

ಮಾದಕ ವ್ಯಸನ :
ಮಾದಕ ವ್ಯಸನ ಅತ್ಯಂತ ಕೆಟ್ಟ ಅಭ್ಯಾಸ. ಇದರಿಂದ ಜೀವನ ಅಸಹನೀಯವಾಗುತ್ತದೆ. ಪ್ರಜ್ಞೆ, ಆತ್ಮಾಭಿಮಾನ, ಆತ್ಮಗೌರವ ಮತ್ತು ನಿರ್ಣಯ ತೆಗೆದುಕೊಳ್ಳುವ ಸಾಮಥ್ರ್ಯಗಳು ನಾಶವಾಗುತ್ತವೆ. ಕಿರಿವಯಸ್ಸಿನಲ್ಲಿ ಮಾದಕವಸ್ತು ಸೇವನೆಗೆ ತುತ್ತಾಗುವ ಸಂಭವಗಳು ಹೆಚ್ಚು. ಸಾಮಾನ್ಯವಾಗಿ ಹದಿಹರೆಯದ ಮಕ್ಕಳನ್ನು ಮಾದಕವಸ್ತು ಸೇವನೆಗೆ ಪ್ರೇರೇಪಿಸುವವರು ಸ್ನೇಹಿತರೇ. ಇದನ್ನು ಸೇವಿಸುವುದರಿಂದ ಏನೋ ಒಂಥರಾ ಕಿಕ್ ಸಿಗುತ್ತದೆ ಎಂದು ಹೇಳುತ್ತಾರೆ. ಮಾದಕವಸ್ತು ಸೇವನೆ ಖುಷಿನೀಡುವ ಚಟುವಟಿಕೆಯಾಗಿ ಆರಂಭವಾಗುತ್ತದೆ. ಕ್ರಮೇಣ ಚಟವಾಗಿ ಬೆಳೆಯುತ್ತದೆ. ಪಾಟರ್ಿ ಮಾಡುವಾಗ ಸ್ನೇಹಿತರ ಜೊತೆ ಮಾದಕವಸ್ತುವಿನ ಒಂದು ಪಫ್ ತೆಗೆದುಕೊಂಡ ನಂತರ ಅವರೊಡನೆ ಗುಂಪಿನಲ್ಲಿ ನಂತರ ಏಕಾಂತದಲ್ಲಿ ವ್ಯಸನವಾಗಿಬಿಡುತ್ತದೆ. ಒಂದು ಈ ವ್ಯಸನಕ್ಕೆ ಬಲಿಯಾದರೆ ದೂರಾಗುವುದು ಕಷ್ಟ.

ಮಕ್ಕಳು ದುವ್ರ್ಯಸನಗಳಿಗೆ ಬಲಿಯಾಗಬಹುದೆಂದು ಅಪ್ಪ, ಅಮ್ಮ ಮೊದಲೇ ತಿಳಿದುಕೊಂಡು ಅವರ ಮತ್ತು ಅವರ ಸ್ನೇಹಿತರ ಬಗ್ಗೆ ಎಚ್ಚರಿಕೆ ವಹಿಸಬೇಕು. ಮಕ್ಕಳ ಸಾಮಾನ್ಯ ನಡವಳಿಕೆಯಲ್ಲಿ ಬದಲಾವಣೆ ಏನಾದರೂ ಕಂಡುಬಂದರೆ ಅದರತ್ತ ಗಮನ ವಹಿಸಬೇಕು. ಮಾದಕ ವ್ಯಸನವನ್ನು ಆರಂಭದಲ್ಲಿ ಗುರುತಿಸುವುದು ಕಷ್ಟ. ಆರಂಭದಲ್ಲಿ ಮಾದಕ ವ್ಯಸನದಿಂದ ಮತ್ತು, ಹಸಿವಾಗದಿರುವಿಕೆ, ತೂಕ ಕಳೆದುಕೊಳ್ಳುವುದು ಮತ್ತು ಮೋಸದ ನಡವಳಿಕೆಗಳು ಕಂಡುಬರುತ್ತದೆ. ಇವೆಲ್ಲಾ ಮಕ್ಕಳಲ್ಲಿ ಕಂಡುಬಂದರೆ ಅಪ್ಪ, ಅಮ್ಮ ಸಾಮಾನ್ಯ ಬದಲಾವಣೆಗಳೆಂದು ಸುಮ್ಮನಾಗುತ್ತಾರೆ. ಆದರೆ ಇವೇ ಮುಂದುವರೆದರೆ ಕಾಳಜಿಯನ್ನು ವಹಿಸಬೇಕು. ಮನೆಯಲ್ಲಿ ಹಣವಿಡುತ್ತಿದ್ದರೆ ಅದನ್ನು ಆಗಾಗ ಪರೀಕ್ಷಿಸಬೇಕು. ಮಾದಕವಸ್ತುಗಳು ದುಬಾರಿ. ಅದನ್ನು ಕೊಳ್ಳಲು ಹಣವನ್ನು ಮಕ್ಕಳು ಕದಿಯುವ ಸಂಭವವಿರುತ್ತದೆ. ಅಪ್ಪ ಕೊಡುವ ಪಾಕೆಟ್ಮನಿ ಮಾದಕವಸ್ತು ಕೊಳ್ಳಲು ಸಾಧ್ಯವಾಗದಿರಬಹುದು. ಆಗ ಅವರು ಮನೆಯಲ್ಲಿರುವ ಹಣವನ್ನು ಕದಿಯಬಹುದು. ಹಣ ಕಾಣೆಯಾದರೆ ಮಕ್ಕಳನ್ನೂ ವಿಚಾರಿಸಬೇಕು.

ಮಕ್ಕಳು ಮಾದಕವ್ಯಸನಕ್ಕೆ ಬಲಿಯಾಗಿದ್ದಾರೆ ಎಂದು ತಿಳಿದಾಗ ಅಪ್ಪ, ಅಮ್ಮನಿಗೇ ಸಹಜವಾಗಿಯೇ ಆಘಾತವಾಗುತ್ತದೆ. ಈ ವ್ಯಸನದಿಂದ ಮಕ್ಕಳು ಗೊಂದಲಕ್ಕೆ ಒಳಗಾಗುತ್ತಾರೆ, ಹೆದರುತ್ತಾರೆ, ಖಿನ್ನತೆಗೀಡಾಗುತ್ತಾರೆ, ಪ್ರಜ್ಞೆ ತಪ್ಪುತ್ತಾರೆ ಮತ್ತು ಅವರ ಮಾನಸಿಕ ಅರೋಗ್ಯದಲ್ಲಿ ಏರುಪೇರಾಗುತ್ತದೆ. ಇದನ್ನು ನಿರ್ಲಕ್ಷಿಸುವಂತಿಲ್ಲ. ತಕ್ಷಣ ಆದ್ಯತೆಯ ಮೇರೆಗೆ ಪರಿಗಣಿಸಿ ಮಕ್ಕಳಿಗೆ ಸೂಕ್ತ ಚಿಕಿತ್ಸೆಯನ್ನು ಕೊಡಿಸಬೇಕು. ಮಾದಕ ವ್ಯಸನದಿಂದ ಹೊರಬರಲು ಮಕ್ಕಳಿಗೆ ಆಪ್ತಸಲಹೆಯ ಅವಶ್ಯಕತೆ ಎಂದು ಅಪ್ಪ, ಅಮ್ಮ ಮೊದಲಿಗೆ ಅರಿಯಬೇಕು. ತಾವೂ ಈ ಬಗ್ಗೆ ಸಲಹೆಯನ್ನು ಪಡೆಯಬೇಕು. ಇಂದು ಮಾದಕ ವ್ಯಸನದಿಂದ ಯುವಜನರನ್ನು ಹೊರತರಲು ಅನೇಕ ಸರ್ಕಾರೇತರ ಸಂಘಸಂಸ್ಥೆಗಳು ಸಲಹಾಸೇವೆಗಳನ್ನು ನೀಡುತ್ತಿವೆ. ಅನೇಕ ಪುನರ್ವಸತಿ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಮನೋವೈದ್ಯರು ಮತ್ತು ಆಪ್ತ ಸಲಹಾಕಾರರು ವ್ಯಸನಪೀಡಿತರಿಗೆ ಮತ್ತು ಅವರ ತಂದೆತಾಯಿಗಳಿಗೆ ಸಹಾಯ ನೀಡಲು ಸಿದ್ಧರಾಗಿರುತ್ತಾರೆ.

ಮಾದಕ ವ್ಯಸನದಿಂದ ಹೊರಬರಲು ಮಕ್ಕಳಿಗೆ ಅಪ್ಪ, ಅಮ್ಮನ ಬೇಷರತ್ ಬೆಂಬಲ ಬೇಕು. ಅವರ ಪ್ರೀತಿ, ವಿಶ್ವಾಸ ಮತ್ತು ನಂಬಿಕೆ ಬೇಕು. ಅಪ್ಪ, ಅಮ್ಮ ತಾಳ್ಮೆ ವಹಿಸಬೇಕು. ಅವರನ್ನು ಅರ್ಥಮಾಡಿಕೊಳ್ಳಬೇಕು. ಮಾದಕವಸ್ತುಗಳ ಸೇವನೆಯನ್ನು ಬಿಡಲು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ. ವ್ಯಸನಪೀಡಿತರು ಉಗ್ರ ವರ್ತನೆಯನ್ನೂ ತೋರಬಹುದು ಮತ್ತು ಅವರ ಬಾಯಿ ಒಣಗಬಹುದು. ಆಗ ಮತ್ತೆ ಮಕ್ಕಳು ವ್ಯಸನಕ್ಕೀಡಾಗಬಹುದು. ಅಪ್ಪ, ಅಮ್ಮ, ಬಂಧುಗಳು ಮತ್ತು ಸಮಾಜದಲ್ಲಿ ಮುಜುಗರ ಅನುಭವಿಸಬಹುದು. ಆದರೆ ಇದನ್ನು ಅವರೂ ಎದುರಿಸಬೇಕು. ಮಕ್ಕಳಿಗೆ ಒತ್ತಾಸೆಯಾಗಿ ನಿಂತು ಅವರನ್ನು ಸರಿದಾರಿಗೆ ತರಬೇಕು. ಮಕ್ಕಳು ಮಾದಕ ವ್ಯಸನಕ್ಕೆ ಬಲಿಯಾಗಿದ್ದಾರೆ ಎಂದು ಸಣ್ಣ ಸುಳಿವು ಸಿಕ್ಕರೂ ಸಾಕು ಅವರ ಬಗ್ಗೆ ಕಾಳಜಿ ವಹಿಸಬೇಕು. ತಪ್ಪುದಾರಿಯಲ್ಲಿ ನಡೆಯದಂತೆ ನೋಡಿಕೊಳ್ಳಬೇಕು. ಶಿಕ್ಷಕರು ಈ ಬಗ್ಗೆ ವಿದ್ಯಾರ್ಥಿಗಳ ಪೋಷಕರಿಗೆ ಪೋಷಕರ ಸಭೆಗಳಲ್ಲಿ ತಿಳಿವಳಿಕೆ ನೀಡುವುದು ಅತ್ಯವಶ್ಯ.