ಮಹಾತ್ಮ ಗಾಂಧಿಯವರು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಮರಳಿದ 100ನೇ ವರ್ಷಾಚರಣೆ
- ಶಿವಣ್ಣ ಜಿ.ಕೆ. ಕಲಾವಿದರು, ಶಿಕ್ಷಣವಾರ್ತೆ
1869 ಅಕ್ಟೋಬರ್ 2 ರಂದು ಗುಜರಾತಿನ ವ್ಯಾಪಾರಿ ಕುಟುಂಬವೊಂದರಲ್ಲಿ ಜನಿಸಿದ ಗಾಂಧೀಜಿ ಲಂಡನ್ನಲ್ಲಿ ಕಾನೂನು ವಿದ್ಯಾಭ್ಯಾಸ ಮುಗಿಸಿದರು. ದಕ್ಷಿಣ ಆಫ್ರಿಕಾದಲ್ಲಿ ನಾಗರಿಕ ಸೌಲಭ್ಯಗಳಿಗಾಗಿ ಅಹಿಂಸಾತ್ಮಕ ಹೋರಾಟ ಆರಂಭಿಸಿದ್ದಲ್ಲದೇ ಕರಿಯರ ಮೇಲೆ ನಡೆಯುತ್ತಿದ್ದ ದಬ್ಬಾಳಿಕೆ ವಿರುದ್ಧ ನ್ಯಾಯಕ್ಕಾಗಿ ಹೋರಾಡಿದರು. ಅದೇ ಸಮಯಕ್ಕೆ ಭಾರತದಲ್ಲಿ ಬ್ರಿಟಿಷರ ವಿರುದ್ಧ ಸ್ವರಾಜ್ಯ ಚಳುವಳಿ ಆರಂಭವಾಗಿತ್ತು. ಇದರ ನೇತೃತ್ವ ವಹಿಸಲು ಗಾಂಧೀಜಿಯವರಿಗೆ ಕರೆಹೋಯಿತು.
ಗಾಂಧೀಜಿಯವರ ರಾಜಕೀಯ ಗುರು ಎನಿಸಿಕೊಂಡಿದ್ದ ಗೋಪಾಲಕೃಷ್ಣ ಗೋಖಲೆಯವರು 1896ರಲ್ಲಿ ಗಾಂಧೀಜಿಯವರನ್ನು ಭೇಟಿ ಮಾಡಿದ್ದರು. 1901ರಲ್ಲಿ ಕಲ್ಕತ್ತಾ ಕಾಂಗ್ರೆಸ್ ಅಧಿವೇಶನದಲ್ಲಿ 1 ತಿಂಗಳು ಇಬ್ಬರೂ ಒಟ್ಟಿಗೆ ಇದ್ದರು. ಇದೇ ಸಮಯದಲ್ಲಿ ಗೋಖಲೆಯವರು ಗಾಂಧೀಜಿಯವರನ್ನು ಭಾರತಕ್ಕೆ ವಾಪಸು ಬರುವಂತೆ ಸೂಚಿಸಿದರು, ಅಲ್ಲದೇ ಗಾಂಧೀಜಿಯವರಿಗೆ ಭಾರತದಲ್ಲಿ ಜೂನಿಯರ್ಷಿಪ್ ಕೊಡಿಸಲು ಹಲವಾರು ಪ್ರಸಿದ್ಧ ಲಾಯರ್ಗಳಿಗೆ ಪತ್ರ ಬರೆದು ವಿನಂತಿಸಿದರು. ಆದರೆ ಆ ಸಮಯದಲ್ಲಿ ದಕ್ಷಿಣ ಆಫ್ರಿಕಾದ ಕರಿಯರ ಸಮಸ್ಯೆಗಳು ಗಾಂಧೀಜಿಯವರನ್ನು ಭಾರತಕ್ಕೆ ಬರದಂತೆ ತಡೆದವು.
1910 ರಲ್ಲಿ ನ್ಯಾಟಲ್ ಕರಾರಿನ ಲೇಬರ್ ಮಸೂದೆ ಪ್ರಸ್ತಾಪಿಸಿದರು. ಈ ಮಸೂದೆ ಗುಲಾಮಗಿರಿಯ ವಿರೋಧಿಯಾಗಿದ್ದು ಇದು ಗಾಂಧೀಜಿಯವರ ಹೋರಾಟಕ್ಕೆ ಬಲ ನೀಡಿದ್ದಲ್ಲದೆ, ದಕ್ಷಿಣ ಆಫ್ರಿಕಾದ ಕರಿಯರ ನಾಗರಿಕ ಹಕ್ಕುಗಳ ಹೋರಾಟಕ್ಕೆ ಬಲ ಬಂದಿತು. ಈ ಹೋರಾಟಕ್ಕೆ ಗೋಖಲೆಯವರು ಭಾರತದಿಂದ ನಿಧಿ ಸಂಗ್ರಹಿಸಿ, 1912ರಲ್ಲಿ ಆಫ್ರಿಕಾದ ಮುಖಂಡರಾದ ಜನರಲ್ ಸ್ಮುಟ್ಸ್, ಬೋಟಾ ಮುಂತಾದವರಿಗೆ ಸ್ವತಃ ಅವರೇ ಹೋಗಿ ತಲುಪಿಸಿದರು.
ಗಾಂಧೀಜಿಯವರು ಇದರಿಂದ ತುಂಬಾ ಪ್ರಭಾವಿತರಾಗಿ ಗೋಖಲೆಯವರು ಈ ಕೆಲಸ ಮಾಡದಿದ್ದರೆ ದಕ್ಷಿಣ ಆಫ್ರಿಕಾದ ಈ ಸಮಸ್ಯೆ ಎಂದೂ ಬಗೆ ಹರಿಯುತ್ತಿರಲಿಲ್ಲ ಎಂದಿದ್ದಾರೆ. ಗಾಂಧೀಜಿಯವರು ಸ್ವತಃ ಜಾ಼ನ್ ಜಬೇರ್ಗೆ (ಈಗ ತಾಂಜಾನಿಯಾದ ಗಡಿರೇಖೆಯಲ್ಲಿದೆ.) ತೆರಳಿ ಗೋಖಲೆಯವರನ್ನು ಭೇಟಿ ಮಾಡಿ ಅಭಿನಂದಿಸಿದರು. ಈ ಭೇಟಿಯ ಸಂದರ್ಭದಲ್ಲಿ ಗೋಖಲೆಯವರು ಗಾಂಧೀಜಿಯವರನ್ನು ಭಾರತಕ್ಕೆ ವಾಪಸ್ ಮರಳಲೇಬೇಕೆಂದು ಒತ್ತಾಯ ಮಾಡಿದರು. ಭಾರತದಿಂದ ದೂರವಿದ್ದರೆ ನಿಮಗೆ ನಿಮ್ಮ ದೇಶದ ಬಾಂಧ್ಯವ ಕಡಿದು ಹೋಗುತ್ತದೆಯಲ್ಲದೆ ಅಲ್ಲಿನ ಆಗು-ಹೋಗುಗಳ ಬಗ್ಗೆ ಅರಿವು ಇರುವುದಿಲ್ಲ ಮತ್ತು ಇಂತಹದ್ದೇ ಸಮಸ್ಯೆಗಳನ್ನು ಭಾರತೀಯರು ಅನುಭವಿಸುತ್ತಿದ್ದಾರೆ. ಹಾಗಾಗಿ ನೀವು ದಯವಿಟ್ಟು ಭಾರತಕ್ಕೆ ಮರಳಬೇಕೆಂದು ಒತ್ತಾಯಿಸಿದರು. ಇದೇ ಸಮಯಕ್ಕೆ ಗಾಂಧೀಜಿಯವರು ದಕ್ಷಿಣ ಆಫ್ರಿಕಾದಲ್ಲಿ ಸತ್ಯಾಗ್ರಹ ಪುಸ್ತಕ ಬರೆದರು. ಅದರಲ್ಲಿ ಗಾಂಧೀಜಿ, ಗೋಖಲೆಯವರು ನನ್ನಲ್ಲಿ ಸತ್ಯಸಂಧತೆ, ದೇಶಭಕ್ತಿಯನ್ನು ನವಿರಾಗಿ ಮೂಡಿಸಿದ್ದಲ್ಲದೆ ನನ್ನನ್ನು ಸ್ವಾತಂತ್ರ್ಯ ಹೋರಾಟಕ್ಕೆ ಸಿದ್ಧಗೊಳಿಸಿದರು ಎಂದಿದ್ದಾರೆ.
27.02.1914ರಂದು ಗಾಂಧೀಜಿಯವರು ಗೋಖಲೆಯವರಿಗೆ ಬರೆದ ಪತ್ರ ಹೀಗಿದೆ: ನಾನು ಏಪ್ರಿಲ್ನಲ್ಲಿ ದಕ್ಷಿಣ ಆಫ್ರಿಕಾ ಬಿಡುತ್ತಿದ್ದೇನೆ. ನಾನು ನನ್ನ ಬದುಕನ್ನು ನಿಮ್ಮ ಕೈಯಲ್ಲಿರಿಸಿದ್ದೇನೆ. ನಾನು ನಿಮ್ಮ ಪಾದದ ಬಳಿ ಕುಳಿತು ಅಗತ್ಯ ವಿಷಯಗಳನ್ನು ಕಲಿಯಬೇಕೆಂದಿದ್ದೇನೆ. ನನ್ನ ಬದುಕೆಂದರೆ ನಿಮ್ಮ ಆರೈಕೆಯಲ್ಲಿ ನಿಮ್ಮ ಸಮ್ಮುಖದಲ್ಲಿ ನಿಜವಾದ ಶಿಸ್ತುಬದ್ಧತೆಯನ್ನು ಕಲಿಯುವುದಾಗಿದೆ ಎಂದಿದ್ದಾರೆ.
09.01.1915ರಂದು ಗಾಂಧೀಜಿ ಸಕುಟುಂಬ ಸಮೇತ ಮುಂಬೈಗೆ ಬಂದಿಳಿದರು. ಇವರನ್ನು ಸ್ವಾಗತಿಸಲು ಅಪಾರ ಜನ ಸೇರಿದ್ದರು. ಸ್ವತಃ ಗೋಖಲೆಯವರು ಗಾಂಧೀಜಿಯವರನ್ನು ಸ್ವಾಗತಿಸಲು ಪೂನಾದಿಂದ ಬಂದಿದ್ದರು. ಗಾಂಧೀಜಿಯವರು ಮುಂಬೈಗೆ ಬಂದಿಳಿದಾಗ ಅವರನ್ನು ಸ್ವಾಗತಿಸಲಾಯಿತಲ್ಲದೇ ಅವರಿಗೆ ಜಹಾಂಗೀರ್ ಲಿಟಲ್ನಲ್ಲಿ ಔತಣಕೂಟ ಏರ್ಪಡಿಸಲಾಯಿತು. ಈ ಕಾರ್ಯಕ್ರಮದಲ್ಲಿ ಗೋಪಾಲಕೃಷ್ಣ ಗೋಖಲೆ, ಬಾಲಗಂಗಾಧರ್ ತಿಲಕ್, ಮಹ್ಮದ್ ಅಲಿ ಜಿನ್ನಾ, ಕಸ್ತೂರ್ಬಾ ಗಾಂಧಿ ಮುಂತಾದವರು ಪಾಲ್ಗೊಂಡಿದ್ದರು.
ಗೋಪಾಲಕೃಷ್ಣ ಗೋಖಲೆಯವರಿಗೆ ಗಾಂಧೀಜಿಯವರು ಸರ್ವೇಂಟ್ಸ್ ಆಫ್ ಇಂಡಿಯಾ ಸೊಸೈಟಿ ಸೇರಬೇಕೆಂಬ ಇಚ್ಛೆಯಿತ್ತು. ಆದರೆ ಗಾಂಧೀಜಿ ತಮ್ಮದೇ ಆದ ಸಾಬರಮತಿ ಆಶ್ರಮ ಸ್ಥಾಪಿಸಲು ಯೋಚಿಸಿದರು. ಅದರ ವೆಚ್ಚವನ್ನು ಸ್ವತಃ ಗೋಖಲೆಯವರೇ ಭರಿಸಿದರು. ಅಲ್ಲದೇ ದೇಶದ ಪರಿಸ್ಥಿತಿಯನ್ನು ಅರಿಯಲು ಭಾರತದ ಸುತ್ತಾಟಕ್ಕಾಗಿ ಹಣ ನೀಡಿದರು. ದುರದೃಷ್ಟವಶಾತ್ 19-02-1915 ರಂದು ಗೋಖಲೆಯವರು ನಿಧನರಾದರು. 2015 ಗೋಖಲೆಯವರ 100 ನೇ ಪುಣ್ಯಾಚರಣೆ ವರ್ಷವಾಗಿ ಬಂದದ್ದು ವಿಶೇಷವೆನಿಸಿದೆ.
ಕನರ್ಾಟಕಕ್ಕೆ ಗಾಂಧೀಯವರ ಪ್ರಥಮ ಭೇಟಿ
1915ರ ಜನವರಿ 19ರಂದು ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಹಿಂದಿರುಗಿದ ಗಾಂಧೀಜಿ, ಕಸ್ತೂರಿ ಬಾ ಅವರೊಡನೆ ದಕ್ಷಿಣ ಭಾರತದಲ್ಲಿ ಪ್ರವಾಸ ಮಾಡುತ್ತಾ 1915ರ ಏಪ್ರಿಲ್ ಮೂರನೇ ವಾರ ಮದರಾಸ್ (ಇಂದಿನ ಚೆನ್ನೈ)ಗೆ ಆಗಮಿಸಿ ಬೀಡು ಬಿಟ್ಟಿದ್ದರು. ಆಗ ಗಾಂಧಿಯವರನ್ನು ಬೆಂಗಳೂರಿಗೆ ಕರೆಯಿಸಿ ಮೈಸೂರು ದೇಶಸೇವಾ ಸಂಘವನ್ನು ಅವರಿಂದಲೇ ಉದ್ಘಾಟಿಸಬೇಕೆಂದು ಡಿ.ವಿ.ಗುಂಡಪ್ಪನವರ ಹಂಬಲವಾಗಿತ್ತು. ಆ ವೇಳೆಗಾಗಲೇ ಮೈಸೂರು ಸಂಸ್ಥಾನದಲ್ಲಿ ಕನ್ನಡನಾಡು, ನುಡಿಯ ಸಲುವಾಗಿ ದುಡಿದು ಹೆಸರು ಗಳಿಸಿದ್ದ ಡಿ.ವಿ.ಜಿ.ಯವರು ಮದರಾಸ್ನಲ್ಲಿದ್ದ ಗಾಂಧಿಯವರನ್ನು ಸಂಪರ್ಕಿಸಿ ಈ ಸಂಸ್ಥೆಯ ಉದ್ಘಾಟನೆಗೆ ಆಹ್ವಾನಿಸಿದರು. ದಕ್ಷಿಣ ಆಫ್ರಿಕಾದಲ್ಲಿ 1913-14ರಲ್ಲಿ ಗಾಂಧಿ ನೇತೃತ್ವದಲ್ಲಿ ನಡೆಯುತ್ತಿದ್ದ ಸತ್ಯಾಗ್ರಹಕ್ಕೆ ಡಿ.ವಿ.ಜಿ.ಯವರು 1800/- ರೂ.ಗಳನ್ನು ಸಂಗ್ರಹಿಸಿ ಮದರಾಸ್ನ ಜಿ.ಎ.ನಟೇಶನ್ ಮುಖಾಂತರ ಕಳುಹಿಸಿಕೊಟ್ಟಿದ್ದರು. ಇದೆಲ್ಲ ಗಾಂಧಿಯವರಿಗೆ ನೆನಪಿನಲ್ಲಿತ್ತು. ಆದ್ದರಿಂದ ಡಿ.ವಿ.ಜಿ.ಯವರ ಆಹ್ವಾನವನ್ನು ಗೌರವದಿಂದ ಮನ್ನಿಸಿದ ಗಾಂಧೀಜಿ ಬೆಂಗಳೂರಿಗೆ ಬರಲು ಒಪ್ಪಿಕೊಂಡರು. ಆ ವೇಳೆಗೆ ಗಾಂಧಿಯವರ ಖ್ಯಾತಿ ಭಾರತದಲ್ಲೆಲ್ಲಾ ಹಬ್ಬಿತ್ತು.
ಡಿ.ವಿ.ಜಿ.ಯವರು ಗಾಂಧಿಯವರ ಸ್ವಾಗತಕ್ಕಾಗಿ ತಳಿರು-ತೋರಣ ಹಾಗೂ ಬಾಳೆಯ ಕಂಬಗಳಿಂದ ರಸ್ತೆಯನ್ನು ಸಿಂಗರಿಸಿ, ನಾದಸ್ವರ ವಾದನವನ್ನೂ ಏರ್ಪಾಟು ಮಾಡಿದ್ದರು. ಗೋಖಲೆಯವರು ನಿಧನ ಹೊಂದಿದ್ದರಿಂದ ಗುರುಕಾಣಿಕೆಯಾಗಿ ಒಂದು ವರ್ಷ ಚಪ್ಪಲಿ ಧರಿಸದೆ ಬರಿಗಾಲಲ್ಲೇ ಪ್ರವಾಸ ಮಾಡಲು ನಿರ್ಧರಿಸಿದ್ದ ಕಾರಣ ಬರಿಗಾಲಿನಲ್ಲೇ 1915ರ ಮೇ ಎಂಟರಂದು ಶನಿವಾರ ಬೆಳಿಗ್ಗೆ ಮದರಾಸಿನಿಂದ ಆಗಮಿಸಿದ್ದ ಗಾಂಧಿ ದಂಪತಿಗಳನ್ನು ಪುರಪ್ರಮುಖರು ನಗರದ ರೈಲುನಿಲ್ದಾಣದಲ್ಲಿ ಸ್ವಾಗತಿಸಿದರು. ಗುಜರಾತಿ ಉಡುಗೆ-ತೊಡುಗೆಯೊಂದಿಗೆ ಆಗಮಿಸಿದ್ದ ಗಾಂಧಿಯವರನ್ನು ಬೆಂಗಳೂರಿನ ಜನತೆ ಕಂಡಿದ್ದು ಅದೇ ಮೊದಲು, ಯಾವಾಗಲೂ ಮೂರನೇ ತರಗತಿಯಲ್ಲೇ ರೈಲು ಪ್ರಯಾಣ ಮಾಡುತ್ತಿದ್ದ ಗಾಂಧೀಜಿ ಅಂದು ಮಾತ್ರ ಜೊತೆಯಲ್ಲಿ ಆಗಮಿಸಿದ್ದ ಮದರಾಸ್ನ ಜಿ.ಎ.ನಟೇಶನ್ ಅವರ ದೇಹಾಲಸ್ಯದ ಸಲುವಾಗಿ ಮೊದಲನೇ ದರ್ಜೆಯಲ್ಲಿ ಆಗಮಿಸಿದ್ದರು.
ರೈಲು ನಿಲ್ದಾಣದಲ್ಲಿ ಸಿದ್ಧವಿದ್ದ ಸಾರೋಟು ಗಾಡಿಯಲ್ಲೇ ಗಾಂಧಿಯವರನ್ನು ಕುಳ್ಳಿರಿಸಿ ವಿದ್ಯಾರ್ಥಿಗಳೇ ಅದನ್ನು ಎಳೆದುಕೊಂಡು ಮೆರವಣಿಗೆಯಲ್ಲಿ ಕರೆದೊಯ್ಯಬೇಕೆಂದು ಉತ್ಸಾಹದಿಂದಿದ್ದರು. ಆದರೆ ಅದಕ್ಕೆ ಒಪ್ಪದೇ ಗಾಂಧೀಜಿ ಅರ್ಧ ಮೈಲಿ ದೂರದ ಬಿಡಾರಕ್ಕೆ ನಡೆದುಕೊಂಡೇ ಹೊರಟರು. ಮೆರವಣಿಗೆಯ ಉದ್ದಕ್ಕೂ ಜಯಘೋಷ ಮುಗಿಲು ಮುಟ್ಟಿತ್ತು. ಜಿಲ್ಲಾ ನ್ಯಾಯಾಧೀಶರಾಗಿದ್ದ ಬಿ.ಎಸ್.ಕೃಷ್ಣಸ್ವಾಮಿ ಅಯ್ಯಂಗಾರ್, ಆನಂದರಾವ್ ಸರ್ಕಲ್ ಬಳಿ ಆ ವೇಳೆಗೆ ನೂತನವಾಗಿ ನಿಮರ್ಿಸಿದ್ದ ತಮ್ಮ ಮನೆಯಲ್ಲಿ ಗಾಂಧಿಯವರ ವಾಸ್ತವ್ಯಕ್ಕಾಗಿ ಅಣಿಗೊಳಿಸಿದ್ದರು. ಗಾಂಧೀಜಿ ಮತ್ತು ಕಸ್ತೂರಿ ಬಾ ಅವರೇ ಆ ಮನೆಯ ಮೊದಲ ನಿವಾಸಿಗಳು. ನಗರದ ಮೊಟ್ಟಮೊದಲ ಸಾರ್ವಜನಿಕ ಕಾರ್ಯಕ್ರಮವನ್ನು ಡಿ.ವಿ.ಗುಂಡಪ್ಪನವರ ಮೈಸೂರು ಸೋಷಿಯಲ್ ಲೀಗ್ ಕ್ಲಬ್ ಏರ್ಪಡಿಸಿತ್ತು. ಸ್ಥಳ ಆಗಿನ ಸರ್ಕಾರಿ ಪ್ರೌಢಶಾಲಾ ಸಭಾಭವನ (ಈಗಿನ ಕಲಾ ಕಾಲೇಜು), ಸುಮಾರು 10 ಗಂಟೆಗೆ ಗೋಖಲೆಯವರ ಭಾವಚಿತ್ರ ಅನಾವರಣ ಕಾರ್ಯಕ್ರಮ ಪ್ರಾರಂಭವಾಯಿತು. ಹಡರ್ೇಕರ್ ಮಂಜಪ್ಪನವರು, ಮಾಜಿ ದಿವಾನ್ ಟಿ.ಆನಂದರಾವ್, ವೆಂಕಟಕೃಷ್ಣಯ್ಯ, ಮೈಸೂರು ಸರ್ಕಾರದ ಅಧಿಕಾರಿಗಳು, ಸ್ಥಳೀಯ ಶ್ರೀಮಂತರು, ವಕೀಲರು, ವಿದ್ಯಾರ್ಥಿಗಳೂ ಸೇರಿದಂತೆ ಶ್ರೀಸಾಮಾನ್ಯರು ಮುಂತಾದವರು ಭಾರಿ ಸಂಖ್ಯೆಯಲ್ಲಿ ಕೂಡಿದ್ದರು. ತುಂಬಿದ್ದ ಸಭೆಯಲ್ಲಿ ರವೀಂದ್ರನಾಥ ಠಾಕೂರರ ಗೀತಾಂಜಲಿಯಿಂದ ಆಯ್ದ ಕೆಲವು ಇಂಗ್ಲಿಷ್ ಕವನಗಳನ್ನು ಬಳ್ಳಾರಿ ಟಿ.ರಾಘವ ಅವರು ಪ್ರಾರ್ಥನಾ ರೂಪದಲ್ಲಿ ಹಾಡುವುದರೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಗಾಂಧಿ ದಂಪತಿಗೆ ಇಂಗ್ಲೀಷ್ನಲ್ಲಿ ಬಿನ್ನವತ್ತಳೆ ಅಪರ್ಿಸಲಾಯಿತು. ಬಿನ್ನವತ್ತಳೆಯ ಇಂಗ್ಲೀಷ್ ಅನುವಾದವನ್ನು ಕೆ.ಎಸ್.ಕೃಷ್ಣಯ್ಯರ್ ಅವರೂ ಕನ್ನಡ ಅನುವಾದ ಡಿ.ವಿ.ಜಿ.ಯವರೂ ಓದಿದರು. ಗೋಖಲೆಯವರ ಭಾವಚಿತ್ರವನ್ನು ಅನಾವರಣಗೊಳಿಸಿದ ಗಾಂಧೀಜಿ ಇಂಗ್ಲೀಷ್ನಲ್ಲಿ ಭಾಷಣ ಮಾಡಿದರು. ಆ ಭಾಷಣದ ಸಾರಾಂಶವನ್ನು ವೆಂಕಟಕೃಷ್ಣಯ್ಯನವರು ಕನ್ನಡದಲ್ಲಿ ತಿಳಿಸಿ ಹೀಗೆ ಹೇಳಿದರು.
ನನ್ನ ಪ್ರಿಯ ದೇಶಬಾಂಧವರೇ, ಗೋಖಲೆಯವರ ಈ ಭಾವಚಿತ್ರವನ್ನು ಅನಾವರಣ ಮಾಡಲು ನನ್ನನ್ನು ಇಲ್ಲಿಗೆ ಬರಮಾಡಿದ್ದೀರಿ. ಈ ಶುಭಕಾರ್ಯ ಮಾಡುವ ಮುನ್ನ ಎರಡು ಮಾತು ಹೇಳಬಯಸುತ್ತೇನೆ. ಗೀತಾಂಜಲಿಯ ಗೀತೆಯ ಭಾವ ಬಹಳ ಸುಂದರವಾಗಿದೆ. ಯಾರ ಬಟ್ಟೆ ಹರಿದಿದೆಯೋ, ಕೊಳೆಯಾಗಿದೆಯೋ ಅವರ ಜೊತೆಯಲ್ಲಿ ಭಗವಂತ ಇರುವನೆಂದು ಗೀತೆ ಹೇಳುತ್ತದೆ. ನನ್ನ ವಸ್ತ್ರ ಹರಿದೂ ಇಲ್ಲ; ಕೊಳೆಯೂ ಆಗಿಲ್ಲ. ದೇವರು ನಮ್ಮೊಳಗೆ ಬಂದು ನೆಲಸಬೇಕಾಗಿದ್ದರೆ ಗೀತೆ ಹೇಳುವ ಮಾತಿನಂತೆ ನಡೆದುಕೊಳ್ಳಬೇಕು. ಆಗ ಮಾತ್ರ ನಾವು ಇಂದು ಅನಾವರಣ ಮಾಡಿದ ಭಾವಚಿತ್ರಕ್ಕೆ ಆ ಮಹಾಪುರುಷನಿಗೆ ಸರಿಯಾದ ಗೌರವ ಸಲ್ಲಿಸಿದಂತಾಗುತ್ತದೆ.
ನನ್ನ ರಾಜಕೀಯ ಗುರುಗಳು ಗೋಖಲೆಯವರೆಂದು 1896ರಲ್ಲಿಯೇ ಘೋಷಿಸಿದ್ದೆ. ರಾಜಕೀಯಕ್ಕೂ, ರಾಜಕೀಯ ಸಂಸ್ಥೆಗಳಿಗೂ ಧಾರ್ಮಿಕ ಸ್ವರೂಪ ಕೊಡಬೇಕು. ಇದು ಪ್ರತಿ ಭಾರತೀಯನ ಕರ್ತವ್ಯ. ನನ್ನ ಜೀವನ ಪರಿಶುದ್ಧವಾಗಬೇಕು. ಅದಕ್ಕೆ ಧಾರ್ಮಿಕ ರೂಪ ಬರಬೇಕು. ಈ ಸಾಧನೆಯೇ ನನ್ನ ಜೀವನದ ಗುರಿ. ನನ್ನ ದೇಶವನ್ನು ನಾನು ಪ್ರೀತಿಸಬೇಕು, ನನ್ನ ದೇಶಕ್ಕೆ ನನ್ನ ಸೇವೆ ಸಲ್ಲಬೇಕು. ನನ್ನ ದೇಶಕ್ಕೆ ನನ್ನಿಂದ ಗೌರವ ಬರಬೇಕು ಇತ್ಯಾದಿ.
ಈ ಕಾರ್ಯಕ್ರಮವೇ ನಂತರದಲ್ಲಿ ಬೆಂಗಳೂರು ನಗರದಲ್ಲಿ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಪ್ರಾರಂಭವಾಗಲು ಡಿ.ವಿ.ಜಿ.ಯವರಿಗೆ ಪ್ರೇರಣೆ ನೀಡಿತು (ಈಗಲೂ ಗಾಂಧೀಜಿ ಅಂದು ಅನಾವರಣಗೊಳಿಸಿದ ಗೋಖಲೆಯವರ ಭಾವಚಿತ್ರ ನರಸಿಂಹರಾಜ ಕಾಲೋನಿಯಲ್ಲಿರುವ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿದೆ). ಈ ಕಾರ್ಯಕ್ರಮ ನಡೆದ ಸರ್ಕಾರಿ ಕಲಾ ಕಾಲೇಜಿನ ಸಭಾಂಗಣಕ್ಕೆ ಬಾಪೂಜಿ ಸಭಾಂಗಣ ಎಂದು ಆಗ ಇಟ್ಟ ಹೆಸರು ಈಗಲೂ ಹಾಗೆಯೇ ಉಳಿದಿದೆ.
ಅಂದು ಸಂಜೆ ಲಾಲ್ಬಾಗ್ನ ಗಾಜಿನ ಮನೆಯಲ್ಲಿ ಬಹಿರಂಗ ಸಭೆ ನಡೆಯಿತು. ಆಗ ಪುರಸಭೆಯಲ್ಲಿ ಅಧ್ಯಕ್ಷರಾಗಿದ್ದ ಕೆ.ಪಿ.ಪುಟ್ಟಣ್ಣ ಚೆಟ್ಟರು ಇಂಗ್ಲೀಷ್ನಲ್ಲಿ ಮಾನಪತ್ರ ಅರ್ಪಿಸಿದರು. ತೆಲುಗು, ಉರ್ದು ಭಾಷೆಗಳಲ್ಲಿ ಕವನ ಓದಲಾಯಿತು. ಸಮ್ಮಾನ ಪತ್ರಕ್ಕೆ ಗಾಂಧೀಜಿ ಉತ್ತರ ಕೊಡುತ್ತಾ ನಾನು ಸಾರ್ವಜನಿಕ ಸೇವಕ. ಬೆಳಿಗ್ಗೆ ನನ್ನನ್ನು ಸಾರೋಟಿನಲ್ಲಿ ಕುಳ್ಳಿರಿಸಿ, ವಿದ್ಯಾರ್ಥಿಗಳು ತಾವೇ ಎಳೆದು ಮೆರವಣಿಗೆ ಮಾಡಬಯಸಿದರು. ನಾನು ಒಪ್ಪಲಿಲ್ಲ. ಇಂಥ ಮೆರವಣಿಗೆಗಳಿಂದ ಸಾರ್ವಜನಿಕ ಸೇವೆಗೆ ಈ ಬಗೆಯ ಗೌರವ ದೊರಕುವುದೆಂಬ ಭಾವನೆಯಿಂದ ಜನ ಸೇವಾರಂಗಕ್ಕೆ ಇಳಿಯುವ ಅಪಾಯವುಂಟು. ಇದರಿಂದ ಕಾರ್ಯಕರ್ತರು ಕೆಟ್ಟುಹೋಗುತ್ತಾರೆ. ಅವರ ಸೇವೆಗೆ ಸೇವಾತೃಪ್ತಿಯೇ ಪ್ರತಿಫಲ ಎಂಬುದನ್ನು ಮರೆಯಬಾರದು. ಈ ಬಗೆಯ ದೇಶಭಕ್ತಿಯೇ ಬೆಲೆ ಬಾಳುವಂತಹದು. ಎಂದು ಮುಂತಾಗಿ ತಿಳಿಸಿದರು. ಕೊನೆಯಲ್ಲಿ ಷಣ್ಮುಗಂ ಅವರು ವಂದನಾರ್ಪಣೆ ಮಾಡಿದರು. ನಂತರ ಎಲ್ಲರೂ ಬಿಡಾರಕ್ಕೆ ತೆರಳಿದರು.
ಸಂಜೆ ಏಳು ಗಂಟೆಗೆ ಗಾಂಧಿಯವರನ್ನು ಕಾಣಲು ಮೈಸೂರಿನಿಂದ ದಿವಾನ್ ವಿಶ್ವೇಶ್ವರಯ್ಯನವರು ಆಗಮಿಸಿದ್ದರು. ಮಾತುಕತೆಯಾದ ನಂತರ ಗಾಂಧಿಯವರಿಗೆ ಮೊದಲನೇ ತರಗತಿಯ ರೈಲು ಟಿಕೇಟು ಕೊಡಿಸಿದ್ದರೂ ಗಾಂಧೀಜಿ ಅದಕ್ಕೆ ಒಪ್ಪದೇ ಮೂರನೇ ದರ್ಜೆಯ ಬೋಗಿಯಲ್ಲೇ ಮುಂಬಯಿಗೆ ತೆರಳಿದರು.ಒಟ್ಟಿನಲ್ಲಿ ಗಾಂಧೀಜಿ ಬೆಂಗಳೂರಿಗೆ ಕೊಟ್ಟ ಈ ಮೊದಲ ಭೇಟಿ ತುಂಬ ಯಶಸ್ವಿಯಾಯಿತು. ಗಾಂಧಿಯವರ ಭೇಟಿಯ ಪ್ರಭಾವದಿಂದ ಕರ್ಆಟಕದ ಜನರಲ್ಲಿ ರಾಷ್ಟ್ರೀಯತೆ ಉದ್ದೀಪನಗೊಂಡಿತಲ್ಲದೇ ರಾಜಕೀಯ ಜಾಗೃತಿಯುಂಟಾಯಿತು.